logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಫ್ರೀ ಮೊಬೈಲ್‌ ಸಿಕ್ತು ಅಂತ ಸಿಮ್ ಹಾಕಿ 72 ಲಕ್ಷ ರೂ ಕಳಕೊಂಡರು 56 ವರ್ಷದ ವ್ಯಕ್ತಿ, ಸಂತ್ರಸ್ತ ಖಾಸಗಿ ಸಂಸ್ಥೆಯ ಮುಖ್ಯಸ್ಥ

ಬೆಂಗಳೂರು: ಫ್ರೀ ಮೊಬೈಲ್‌ ಸಿಕ್ತು ಅಂತ ಸಿಮ್ ಹಾಕಿ 72 ಲಕ್ಷ ರೂ ಕಳಕೊಂಡರು 56 ವರ್ಷದ ವ್ಯಕ್ತಿ, ಸಂತ್ರಸ್ತ ಖಾಸಗಿ ಸಂಸ್ಥೆಯ ಮುಖ್ಯಸ್ಥ

Umesh Kumar S HT Kannada

May 01, 2024 07:21 AM IST

google News

ಬೆಂಗಳೂರು ಸೈಬರ್ ವಂಚನೆ; ಫ್ರೀ ಮೊಬೈಲ್‌ ಸಿಕ್ತು ಅಂತ ಸಿಮ್ ಹಾಕಿ 56 ವರ್ಷದ ವ್ಯಕ್ತಿ 72 ಲಕ್ಷ ರೂ ಕಳಕೊಂಡಿದ್ದು, ದೂರು ದಾಖಲಾಗಿದೆ. (ಸಾಂಕೇತಿಕ ಚಿತ್ರ)

  • ಬೆಂಗಳೂರಿನಲ್ಲಿ ಫ್ರೀ ಮೊಬೈಲ್‌ ಸಿಕ್ತು ಅಂತ ಸಿಮ್ ಹಾಕಿ 56 ವರ್ಷದ ವ್ಯಕ್ತಿ 72 ಲಕ್ಷ ರೂ ಕಳಕೊಂಡರು. ಸಂತ್ರಸ್ತ ಖಾಸಗಿ ಸಂಸ್ಥೆಯ ಮುಖ್ಯಸ್ಥರಾಗಿದ್ದು, ಲೈಫ್‌ ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ಆಫರ್ ಮೂಲಕ ಸೈಬರ್ ವಂಚಕರ ಬಲೆಗೆ ಬಿದಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ವ್ಯಾಪಾರಿಯೊಬ್ಬರು 1 ಕೋಟಿ ರೂ. ಬಹುಮಾನದ ಆಸೆಗೆ 52 ಲಕ್ಷ ರೂ ಕಳೆದುಕೊಂಡಿದ್ದಾರೆ.

ಬೆಂಗಳೂರು ಸೈಬರ್ ವಂಚನೆ; ಫ್ರೀ ಮೊಬೈಲ್‌ ಸಿಕ್ತು ಅಂತ ಸಿಮ್ ಹಾಕಿ 56 ವರ್ಷದ ವ್ಯಕ್ತಿ 72 ಲಕ್ಷ ರೂ ಕಳಕೊಂಡಿದ್ದು, ದೂರು ದಾಖಲಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಸೈಬರ್ ವಂಚನೆ; ಫ್ರೀ ಮೊಬೈಲ್‌ ಸಿಕ್ತು ಅಂತ ಸಿಮ್ ಹಾಕಿ 56 ವರ್ಷದ ವ್ಯಕ್ತಿ 72 ಲಕ್ಷ ರೂ ಕಳಕೊಂಡಿದ್ದು, ದೂರು ದಾಖಲಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಅಪರಿಚಿತರು ಬ್ಯಾಂಕ್ ಹೆಸರಲ್ಲಿ ಉಡುಗೊರೆಯಾಗಿ ಕಳುಹಿಸಿದ ಫ್ರೀ ಮೊಬೈಲ್ ಫೋನ್ ಪಡ್ಕೊಂಡ ಖಾಸಗಿ ಸಂಸ್ಥೆಯ ಮುಖ್ಯಸ್ಥರಾಗಿರುವ 56 ವರ್ಷದ ವ್ಯಕ್ತಿಯೊಬ್ಬರು 72 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ದಕ್ಷಿಣ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಕ್ರೆಡಿಟ್ ಕಾರ್ಡ್ ಕೊಡುವುದಾಗಿ ವ್ಯಕ್ತಿಯನ್ನು ನಂಬಿಸಿದ ವಂಚಕರು ತಮ್ಮನ್ನು ತಾವು ಪ್ರಮುಖ ಖಾಸಗಿ ಬ್ಯಾಂಕ್ ಒಂದರ ಪ್ರತಿನಿಧಿಗಳು ಎಂದು ಬಿಂಬಿಸಿಕೊಂಡಿದ್ದರು. ಆಫರ್ ಅನ್ನು ಸ್ವೀಕರಿಸಿದ್ದಕ್ಕಾಗಿ ಫ್ರೀ ಮೊಬೈಲ್ ಫೋನ್ ಕಳುಹಿಸುವುದಾಗಿ ಹೇಳಿದ್ದರು. ಇದರಂತೆ, ಮೊಬೈಲ್ ಕೈ ಸೇರಿದಾಗ, ತಮ್ಮ ಹಳೆಯ ಫೋನ್‌ನಲ್ಲಿದ್ದ ಸಿಮ್ ಕಾರ್ಡ್ ಅನ್ನು ಹೊಸ ಮೊಬೈಲ್‌ಗೆ ಹಾಕಿದ್ದರು. ಇಷ್ಟಾದ ಬಳಿಕ ಅವರ ಬ್ಯಾಂಕ್ ಖಾತೆಗಳಿಂದ 72 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ದ ಹಿಂದೂ ವರದಿ ಮಾಡಿದೆ.

ವಂಚನೆಗೆ ಒಳಗಾದ ವ್ಯಕ್ತಿಯನ್ನು ದಕ್ಷಿಣ ಬೆಂಗಳೂರಿನ ಬಿಕಾಸಿಪುರದ ನಿವಾಸಿ ಬಸವರಾಜು ಜಿ.ಇ. (56) ಎಂದು ಗುರುತಿಸಲಾಗಿದೆ. ಸೈಬರ್ ವಂಚಕರ ಬಲೆಗೆ ಬಸವರಾಜು ಅವರು ಬಿದ್ದದ್ದು ಹೇಗೆ, ಸೈಬರ್ ವಂಚಕರು ವಂಚನಾ ಕೃತ್ಯಕ್ಕೆ ಅನುಸರಿಸಿದ ವಿಧಾನ ಈಗ ಗಮನಸೆಳೆದಿದೆ.

ಸೈಬರ್ ವಂಚನೆ ಹೇಗಾಯಿತು- ಏನಿದು ಪ್ರಕರಣ?

ಬಸವಾರಾಜು ಅವರು ಸೈಬರ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ಪ್ರಮುಖ ಖಾಸಗಿ ಬ್ಯಾಂಕ್‌ನ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಫೋನ್ ಕರೆಯನ್ನು ಬಸವರಾಜು ಸ್ವೀಕರಿಸಿದ್ದಾರೆ. “ತಮ್ಮ ಬ್ಯಾಂಕ್ ವಹಿವಾಟು ಮತ್ತು ಸಿಬಿಲ್ ಸ್ಕೋರ್ ಆಧರಿಸಿ ತಮಗೆ ಫ್ರೀ ಲೈಫ್‌ ಟೈಮ್ ಕ್ರೆಡಿಟ್ ಕಾರ್ಡ್‌ ಅನ್ನು ಆಫರ್ ಮಾಡ್ತಾ ಇದ್ದೇವೆ” ಎಂದು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಫೋನ್‌ನಲ್ಲಿ ತಿಳಿಸಿದ್ದಾರೆ.

ಆರಂಭದಲ್ಲಿ ಬಸವರಾಜು ಅವರು ಆಫರ್ ಸ್ವೀಕರಿಸಿದರೂ, ಬಳಿಕ ಕರೆ ಮಾಡಿದ ವ್ಯಕ್ತಿ ವೈಯಕ್ತಿಕ ಬ್ಯಾಂಕ್ ಖಾತೆ ವಿವರ, ಒಟಿಪಿ ಕೇಳಿದಾಗ ಅನುಮಾನ ಮೂಡಿ ಆಫರ್ ತಿರಸ್ಕರಿಸಿದ್ದರು. ಆದಾಗ್ಯೂ, ಆ ಕರೆ ಮಾಡಿದ ವ್ಯಕ್ತಿ ಪುನಃ ಕರೆಮಾಡಿ ಉಡುಗೊರೆಯಾಗಿ ಮೊಬೈಲ್ ಫೋನ್‌ ಕಳುಹಿಸುತ್ತೇವೆ ಎಂದು ಬಸವರಾಜು ಅವರ ಮನವೊಲಿಸಿದ್ದಾನೆ. ಆ ಮೊಬೈಲ್ ಫೋನ್ ಬಂದ ಬಳಿಕ ಅದಕ್ಕೆ ನಿಮ್ಮ ಸಿಮ್ ಕಾರ್ಡ್ ಹಾಕಿ ಎಂದು ನಿರ್ದೇಶನ ನೀಡಿದ್ದಾನೆ. ಇದರಂತೆ, ಕೆಲವು ಗಂಟೆಗಳ ಬಳಿಕ ಬಸವರಾಜು ಅವರಿಗೆ ಹೊಚ್ಚ ಹೊಸ ಮೊಬೈಲ್ ಫೋನ್‌ ಕೊರಿಯರ್ ಮೂಲಕ ತಲುಪಿದೆ. ಕರೆ ಮಾಡಿದ ವ್ಯಕ್ತಿ ಹೇಳಿದಂತೆ ಬಸವರಾಜು ಅವರು ಹೊಸ ಫೋನ್‌ಗೆ ಸಿಮ್ ಕಾರ್ಡ್ ಇನ್‌ಸರ್ಟ್ ಮಾಡಿದ್ದಾರೆ.

ಅಷ್ಟೇ. ಕೆಲವೇ ನಿಮಿಷಗಳಲ್ಲಿ ಬಸವರಾಜು ಅವರ ಉಳಿತಾಯ ಖಾತೆಯಲ್ಲಿದ್ದ 66,10,421 ರೂಪಾಯಿ ಕಡಿತವಾಗಿದೆ. ಮತ್ತೆ ಸ್ವಲ್ಪ ಹೊತ್ತಿನಲ್ಲಿ ಕ್ರೆಡಿಟ್ ಕಾರ್ಡ್‌ನ ಖಾತೆಯಲ್ಲಿದ್ದ 5,96,044 ರೂಪಾಯಿ ಕಡಿತವಾಗಿದ್ದು, ಒಟ್ಟು 72 ಲಕ್ಷ ರೂಪಾಯಿ ಕಳೆದುಕೊಂಡರು. ಇಷ್ಟಾಗುತ್ತಲೇ ತಾವು ವಂಚನೆಗೆ ಒಳಾಗಿರುವುದು ಬಸವರಾಜು ಅವರಿಗೆ ಮನವರಿಕೆಯಾಗಿದೆ.

ಮಹಾಲಕ್ಷ್ಮಿಪುರಂನ 50 ವರ್ಷದ ವ್ಯಾಪಾರಿ 52.6 ಲಕ್ಷ ರೂ ಕಳಕೊಂಡ್ರು

ಪ್ರತ್ಯೇಕ ಪ್ರಕರಣದಲ್ಲಿ ಮಹಾಲಕ್ಷ್ಮಿಪುರದ 50 ವರ್ಷದ ವ್ಯಾಪಾರಿ ಸತೀಶ್ ಶೆಟ್ಟಿ ಅವರು ಸೈಬರ್ ವಂಚಕರು ತೋರಿಸಿದ 1.04 ಕೋಟಿ ರೂಪಾಯಿ ಬಹುಮಾನದ ಆಸೆಗೆ ಬಿದ್ದು 52.6 ಲಕ್ಷ ರೂಪಾಯಿ ಕಳೆದುಕೊಂಡ ಘಟನೆಯೂ ನಡೆದಿದೆ. ಈ ಘಟನೆಯು ಮಾರ್ಚ್ 11 ರಿಂದ ಏಪ್ರಿಲ್ 16 ರ ನಡುವೆ ಹಂತ ಹಂತವಾಗಿ ನಡೆಯಿತು. ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ

ಖಾಸಗಿ ಸಂಸ್ಥೆಯ ಸ್ಕ್ರ್ಯಾಚ್ ಕಾರ್ಡ್‌ನಲ್ಲಿ ನಿಮಗೆ ಬಹುಮಾನ ಬಂದಿದೆ ಎಂದು ವಂಚಕರು ಸತೀಶ್ ಶೆಟ್ಟಿ ಅವರನ್ನು ವಂಚಕರು ನಂಬಿಸಿದ್ದರು. ಆ ಬಹುಮಾನವನ್ನು ಪಡೆಯಬೇಕಾದರೆ ಟಿಡಿಎಸ್, ಜಿಎಸ್‌ಟಿ,ಸಿಜಿಎಸ್‌ಟಿ ಎಲ್ಲ ಪಾವತಿಸಬೇಕು ಎಂದು ಮೊದಲು 25 ಲಕ್ಷ ರೂಪಾಯಿ, ನಂತರ 26 ಲಕ್ಷ ರೂಪಾಯಿಯನ್ನು ಶೆಟ್ಟಿ ಅವರಿಂದ ಕಟ್ಟಿಸಿಕೊಂಡಿದ್ದಾರೆ. ಅಷ್ಟರಲ್ಲಿ ತಾವು ವಂಚನೆಗೆ ಒಳಗಾದ್ದು ಶೆಟ್ಟಿ ಅವರಿಗೆ ಮನವರಿಕೆಯಾಗಿದೆ.

ಸೈಬರ್ ವಂಚನೆಗೆ ಒಳಗಾದರೆ ಏನು ಮಾಡಬೇಕು?

ಮೊದಲ ಕೇಸ್‌ನಲ್ಲಿ ಬಸವರಾಜು ಅವರು ತಾವು ವಂಚನೆಗೆ ಒಳಗಾದ ಅರಿವಾಗುತ್ತಲೇ, ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿದರು. ಬಳಿಕ ದಕ್ಷಿಣ ವಿಭಾಗದ ಸೈಬರ್‌ ಅಪರಾಧ ಪೊಲೀಸ್ ಠಾಣೆಗೆ ಹೋಗಿ ವಿವರವಾದ ದೂರು ದಾಖಲಿಸಿದರು. ಎರಡನೇ ಕೇಸ್‌ನಲ್ಲಿ ಸತೀಶ್‌ ಶೆಟ್ಟಿ ಅವರ ವ್ಯಾಪ್ತಿಯ ಉತ್ತರ ವಿಭಾಗದ ಸೈಬರ್‌ ಅಪರಾಧ ಪೊಲೀಸ್ ಠಾಣೆಗೆ ಹೋಗಿ ವಿವರವಾದ ದೂರು ದಾಖಲಿಸಿದರು.

ಸೈಬರ್ ವಂಚಕರು ಕರೆ ಮಾಡಿದಾಗ, ಅಥವಾ ಉಚಿತ ಉಡುಗೊರೆಗಳ ಆಫರ್ ನೀಡಿದಾಗ ನಯವಾಗಿ ನಿರಾಕರಿಸಿ ಫೋನ್ ಇಟ್ಟುಬಿಡಿ. ಯಾವುದೇ ಅಪರಿಚಿತ ಸಂದೇಶ ತೆರೆದು ನೋಡಬಾರದು. ಗೊತ್ತಿಲ್ಲದೇ ಇರುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವುದು, ವಾಟ್ಸ್‌ಆಪ್ ಸಂದೇಶಗಳನ್ನು ಫಾರ್ವರ್ಡ್ ಮಾಡುವುದು, ಡೌನ್‌ಲೋಡ್ ಮಾಡುವುದು ಇತ್ಯಾದಿ ಮಾಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

ಇಂತಹ ಸನ್ನಿವೇಶದಲ್ಲಿ ವಂಚಕರ ಕರೆಯನ್ನು ಹೋಲ್ಡ್ ಮಾಡಿಕೊಂಡು ಸ್ನೇಹಿತರನ್ನು ಅಥವಾ 112 (ಪೊಲೀಸ್ ಸಹಾಯವಾಣಿ) ಕರೆ ಮಾಡಿ ಸಲಹೆ ಪಡೆಯಬೇಕು. ಈ ಜಗತ್ತಿನಲ್ಲಿ ಯಾರು ಕೂಡ ಉಚಿತವಾಗಿ ಏನನ್ನೂ ಕೊಡಲಾರರು. ಪ್ರತಿಯೊಂದು ಉಚಿತದ ಹಿಂದೆ ಜನರನ್ನು ವಂಚಿಸುವ ಯೋಜನೆ ಇದ್ದೇ ಇರುತ್ತದೆ. ಈ ಬಗ್ಗೆ ಜಾಗರೂಕರಾಗಿರಬೇಕು ಎನ್ನುತ್ತಾರೆ ಪೊಲೀಸರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ