logo
ಕನ್ನಡ ಸುದ್ದಿ  /  ಕರ್ನಾಟಕ  /  Bescom Report: ಬೆಂಗಳೂರಿನಲ್ಲಿ 16791 ಅಪಾಯಕಾರಿ ತಾಣಗಳನ್ನು ಗುರುತಿಸಿದ ಬೆಸ್ಕಾಂ, 6396 ತಾಣಗಳ ಸುಧಾರಣೆ

BESCOM Report: ಬೆಂಗಳೂರಿನಲ್ಲಿ 16791 ಅಪಾಯಕಾರಿ ತಾಣಗಳನ್ನು ಗುರುತಿಸಿದ ಬೆಸ್ಕಾಂ, 6396 ತಾಣಗಳ ಸುಧಾರಣೆ

HT Kannada Desk HT Kannada

Dec 13, 2023 07:23 PM IST

google News

ಬೆಂಗಳೂರಿನ ವಿವಿಧೆಡೆ ಕೇಬಲ್‌ಗಳ ಅಳವಡಿಕೆಯಿಂದ ಅನಾಹುತಗಳು ಹೆಚ್ಚಿದ್ದು,. ಅವುಗಳ ತೆರವಿಗೆ ಬೆಸ್ಕಾಂ ಸೂಚಿಸಿದೆ. (ಸಾಂಕೇತಿಕ ಚಿತ್ರ)

  • ಕಾಡುಗೋಡಿಯಲ್ಲಿ 9 ತಿಂಗಳ ಮಗುವನ್ನು ಹಿಡಿದುಕೊಂಡು ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿದ್ದ 23 ವರ್ಷದ ಮಹಿಳೆ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ಬಳಿಕ ಬೆಸ್ಕಾಂ ನಡೆಸಿದ ಸಮೀಕ್ಷೆಯಲ್ಲಿ 26,022 ಅಪಾಯಕಾರಿ ತಾಣಗಳು ಪತ್ತೆಯಾಗಿವೆ. ವಿವರಕ್ಕೆ ಮುಂದೆ ಓದಿ.

ಬೆಂಗಳೂರಿನ ವಿವಿಧೆಡೆ ಕೇಬಲ್‌ಗಳ ಅಳವಡಿಕೆಯಿಂದ ಅನಾಹುತಗಳು ಹೆಚ್ಚಿದ್ದು,. ಅವುಗಳ ತೆರವಿಗೆ ಬೆಸ್ಕಾಂ ಸೂಚಿಸಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಿನ ವಿವಿಧೆಡೆ ಕೇಬಲ್‌ಗಳ ಅಳವಡಿಕೆಯಿಂದ ಅನಾಹುತಗಳು ಹೆಚ್ಚಿದ್ದು,. ಅವುಗಳ ತೆರವಿಗೆ ಬೆಸ್ಕಾಂ ಸೂಚಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಕಾಡುಗೋಡಿಯಲ್ಲಿ 9 ತಿಂಗಳ ಮಗುವನ್ನು ಹಿಡಿದುಕೊಂಡು ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿದ್ದ 23 ವರ್ಷದ ಮಹಿಳೆ ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ಬಳಿಕ ಬೆಸ್ಕಾಂ ನಡೆಸಿದ ಸಮೀಕ್ಷೆಯಲ್ಲಿ ಆಘಾತಕಾರಿ ಅಂಶಗಳು ಬಯಲಾಗಿವೆ.

ಬೆಸ್ಕಾಂ ವ್ಯಾಪ್ತಿಯಲ್ಲಿ 26,022 ಅಪಾಯಕಾರಿ ತಾಣಗಳು ಪತ್ತೆಯಾಗಿವೆ. ಈ ಪೈಕಿ ಹೆಚ್ಚಿನವು ಬೆಂಗಳೂರಿನಲ್ಲೇ ಇವೆ. ಬೆಸ್ಕಾಂ ನವೆಂಬರ್ 21ರಿಂದ 30ರ ನಡುವೆ ಈ ಸಮೀಕ್ಷೆ ನಡೆಸಿದ್ದು, ಪತ್ತೆಯಾದ ಅಪಾಯಕಾರಿ ತಾಣಗಳ ಪೈಕಿ 8198 ತಾಣಗಳ ಲೋಪ ದೋಷಗಳನ್ನು ಸರಿಪಡಿಸಿ ಸುಧಾರಿಸಲಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿದ್ದಾಗಿ ಡಿಎಚ್‌ ವರದಿ ಮಾಡಿದೆ.

ಬೆಂಗಳೂರಿನಲ್ಲಿದ್ದವು 23,187 ಅಪಾಯಕಾರಿ ತಾಣಗಳು

ಬೆಸ್ಕಾಂ ಸಮೀಕ್ಷೆ ಪ್ರಕಾರ ಬೆಂಗಳೂರಿನ ನಾಲ್ಕು ವಲಯಗಳಲ್ಲಿ ಒಟ್ಟು 23,187 ಅಪಾಯಕಾರಿ ತಾಣಗಳು ಪತ್ತೆಯಾಗಿದ್ದವು. ಈ ಪೈಕಿ 6396 ತಾಣಗಳ ಲೋಪ ದೋಷ ಸರಿಪಡಿಸಿ ಸುಧಾರಿಸಲಾಗಿದೆ. ಇನ್ನು 16791 ಅಪಾಯಕಾರಿ ತಾಣಗಳ ಲೋಪ ದೋಷ ಸರಿಪಡಿಸು ಸುಧಾರಿಸುವ ಕೆಲಸ ಬಾಕಿ ಇದೆ.

ಅಪಾಯಕಾರಿ ತಾಣಗಳ ಪೈಕಿ ಬೆಂಗಳೂರು ದಕ್ಷಿಣದಲ್ಲಿ 11,982 ತಾಣಗಳಿವೆ. ಉಳಿದಂತೆ ಬೆಂಗಳೂರು ಉತ್ತರದಲ್ಲಿ 1118, ಬೆಂಗಳೂರು ಪೂರ್ವದಲ್ಲಿ 2,206, ಬೆಂಗಳೂರು ಪಶ್ಚಿಮದಲ್ಲಿ 7,881 ತಾಣಗಳಿದ್ದವು. ಈ ಪೈಕಿ ಲೋಪ ದೋಷ ಸರಿಪಡಿಸಿದ ಬಳಿಕ ಬೆಂಗಳೂರು ದಕ್ಷಿಣದಲ್ಲಿ 10,277, ಬೆಂಗಳೂರು ಪೂರ್ವದಲ್ಲಿ 1,490, ಬೆಂಗಳೂರು ಪಶ್ಚಿಮದಲ್ಲಿ 4,572 ಮತ್ತು ಬೆಂಗಳೂರು ಉತ್ತರದಲ್ಲಿ 452 ತಾಣಗಳ ಲೋಪ ದೋಷ ಸರಿಪಡಿಸಲು ಬಾಕಿ ಇವೆ.

ಬೆಂಗಳೂರು ಹೊರತುಪಡಿಸಿದ ಬೆಸ್ಕಾಂ ವ್ಯಾಪ್ತಿಯಲ್ಲಿ ಎಷ್ಟಿವೆ ಅಪಾಯಕಾರಿ ತಾಣಗಳು

ಬೆಂಗಳೂರು ಹೊರತುಪಡಿಸಿದ ಬೆಸ್ಕಾಂ ವ್ಯಾಪ್ತಿಯ ಕೋಲಾರದಲ್ಲಿ 2,080 ಮತ್ತು ದಾವಣಗೆರೆಯಲ್ಲಿ 460 ಅಪಾಯಕಾರಿ ತಾಣಗಳು ಕಂಡುಬಂದಿವೆ.

ಬೆಂಗಳೂರು ಗ್ರಾಮಾಂತರದಲ್ಲಿ 21 ಅಪಾಯಕಾರಿ ತಾಣಗಳು ಪತ್ತೆಯಾಗಿದ್ದವು. ಇವುಗಳನ್ನು ಸರಿಪಡಿಸಲಾಗಿದೆ. ರಾಮನಗರದಲ್ಲಿ 175 ಅಪಾಯಕಾರಿ ತಾಣಗಳು ಪತ್ತೆಯಾಗಿದ್ದು, ಈ ಪೈಕಿ 99 ತಾಣಗಳನ್ನು ಸರಿಪಡಿಸಲಾಗಿದೆ. ಇದೇ ರೀತಿ, ಕೋಲಾರದಲ್ಲಿ 2080 ತಾಣಗಳ ಪೈಕಿ 1555, ತುಮಕೂರಿನಲ್ಲಿ 99ರ ಪೈಕಿ 49 ತಾಣಗಳು, ದಾವಣಗೆರೆಯಲ್ಲಿ 460 ತಾಣಗಳ ಪೈಕಿ 78 ತಾಣಗಳನ್ನು ಸರಿಪಡಿಸಲಾಗಿದೆ. ಇದಾದ ಬಳಿಕ ರಾಮನರದಲ್ಲಿ 76, ಕೋಲಾರದಲ್ಲಿ 525, ತುಮಕೂರು 50, ದಾವಣಗೆರೆಯಲ್ಲಿ 382 ಅಪಾಯಕಾರಿ ತಾಣಗಳ ಸರಿಪಡಿಸುವಿಕೆ ನಡೆಯಬೇಕು ಎಂದು ಬೆಸ್ಕಾಂ ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಅಪಾಯಕಾರಿ ತಾಣಗಳು ಎಂದರೆ…

ವಿದ್ಯುತ್ ಪೂರೈಕೆ ಸಂಬಂಧಿಸಿದ ಅಪಾಯಕಾರಿ ತಾಣಗಳು ಎಂದರೆ, ವಿದ್ಯುತ್ ಕೇಬಲ್‌ ಸಡಿಲವಾಗಿ ನೇತಾಡುವುದರಿಂದ ಹಿಡಿದು ಆ ಕೇಬಲ್‌ನ ಸ್ಕಿನ್-ಔಟ್ ತನಕ ಹಲವು ಲೋಪ ದೋಷಗಳಿರುವ ತಾಣಗಳು. ಸರಳವಾಗಿ ಹೇಳಬೇಕು ಎಂದರೆ ವಿದ್ಯುತ್ ಮೂಲಸೌಕರ್ಯದಲ್ಲಿನ ಹಲವಾರು ದೋಷಗಳು ಇದ್ದರೆ ಅಂತಹ ತಾಣಗಳನ್ನು ಅಪಾಯಕಾರಿ ತಾಣಗಳೆಂದು ಗುರುತಿಸಿದ್ದಾರೆ.

ಕೆಲವೆಡೆ ಕಂಬ ಬಾಗಿವೆ. ಇನ್ನು ಕೆಲವು ಕಡೆ ವಿದ್ಯುತ್ ತಂತಿ ತುಂಡಾಗಿ ನೇತಾಡುತ್ತಿದ್ದವು. ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಕಂಡಕ್ಟರ್ ತೆರೆದುಕೊಂಡ ಪ್ರಕರಣಗಳನ್ನೂ ಬೆಸ್ಕಾಂ ಸಮೀಕ್ಷೆ ಗುರುತಿಸಿದೆ. ಅದೇ ರೀತಿ, ಬೆಸ್ಕಾಂ ಕಂಬಗಳಿಗೆ ಅಳವಡಿಸಿರುವ ಅಕ್ರಮ ಆಪ್ಟಿಕಲ್ ಫೈಬರ್ ಕೇಬಲ್‌ಗಳ (ಒಎಫ್‌ಸಿ) ತೆರವು ಮಾಡುವ ಕೆಲಸವನ್ನೂ ಬೆಸ್ಕಾಂ ನಡೆಸಲಾರಂಭಿಸಿದೆ ಎಂದು ವರದಿ ವಿವರಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ