logo
ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal: ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ

Hassan Sex Scandal: ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ

Umesh Kumar S HT Kannada

May 01, 2024 05:40 PM IST

google News

ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ

  • ಭಾರತದ ಗಮನಸೆಳೆದಿರುವ ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು? ಅವರು ಈಗ ಎಲ್ಲಿದ್ದಾರೆ?, ಅವರ ವಿರುದ್ಧ ಇನ್ನೇನು ಕೇಸ್‌ಗಳಿವೆ, ಆರೋಪಗಳಿವೆ? ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಅವರ ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ ಇಲ್ಲಿದೆ.

ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ
ಲೈಂಗಿಕ ಹಗರಣ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಯಾರು?, ಶಿಕ್ಷಣ, ಆಸ್ತಿ ಮತ್ತು ಇತರೆ 5 ಅಂಶಗಳ ವಿವರ

ಬೆಂಗಳೂರು: ಹಾಸನದ ಹಾಲಿ ಸಂಸದ, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ಹಗರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು, ಈ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ. ಈ ಸಲ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಈಗಾಗಲೇ ಈ ವಿವಾದದಿಂದ ಅಂತರ ಕಾಯ್ದುಕೊಂಡಿದೆ. ಈ ಪ್ರಕರಣದಲ್ಲಿ ಮೊದಲು ಎಸ್‌ಐಟಿ ತನಿಖೆ ನಡೆಯಲಿ. ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ನಡುವೆ, ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದಾರೆ ಎಂಬ ವದಂತಿ ಹರಡಿದೆ.

ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಒಳಗೊಂಡಿದ್ದಾರೆ ಎಂದು ಹೇಳಲಾದ ಸೆಕ್ಸ್ ಟೇಪ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಈ ನಡುವೆ, ಪ್ರಜ್ವಲ್‌ ರೇವಣ್ಣ ಮತ್ತು ಅವರ ತಂದೆ ಎಚ್‌ ಡಿ ರೇವಣ್ಣ ವಿರುದ್ಧ ಪೊಲೀಸ್ ದೂರು ವ್ಯಕ್ತವಾಗಿದ್ದು, ಎಫ್‌ಐಆರ್ ದಾಖಲಾಗಿದೆ. 2019 ಮತ್ತು 2022 ರ ನಡುವೆ ಪ್ರಜ್ವಲ್ ಮತ್ತು ಅವರ ತಂದೆ ಎಚ್‌ ಡಿ ರೇವಣ್ಣ ಅವರ ಮನೆ ಸಹಾಯಕರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.

ಇಬ್ಬರೂ ನಾಯಕರು ತಮ್ಮ ಮನೆಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಎಚ್.ಡಿ.ರೇವಣ್ಣ ಅವರ ಪತ್ನಿ ಇಲ್ಲದಿದ್ದಾಗಲೆಲ್ಲಾ ಮಹಿಳೆಯರನ್ನು ಸ್ಟೋರ್ ರೂಂಗೆ ಕರೆದು ಹಣ್ಣುಗಳನ್ನು ಕೊಡುತ್ತಿದ್ದರು. ಸೀರೆಯ ಪಿನ್ ಎಳೆದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು), 506 (ಕ್ರಿಮಿನಲ್ ಬೆದರಿಕೆ) ಮತ್ತು 509 (ಮಹಿಳೆಯ ಗೌರವಕ್ಕೆ ಧಕ್ಕೆ) ಸೇರಿದಂತೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕೇಸ್ ಈಗ ಎಸ್‌ಐಟಿಗೆ ಹಸ್ತಾಂತರವಾಗಿದೆ.

ಪ್ರಜ್ವಲ್ ರೇವಣ್ಣ ಯಾರು? ಅವರ ಶಿಕ್ಷಣ, ಆಸ್ತಿ ಪಾಸ್ತಿ ವಿಚಾರ ಕುರಿತ 5 ವಿಷಯಗಳು

1) ಪ್ರಜ್ವಲ್ ರೇವಣ್ಣ (33) ಹಾಸನದ ಹಾಲಿ ಸಂಸದ. ಈ ಲೋಕಸಭಾ ಚುನಾವಣೆಯಲ್ಲಿ ಅವರು ಜೆಡಿಎಸ್-ಬಿಜೆಪಿ ಟಿಕೆಟ್‌ನೊಂದಿಗೆ ಅದೇ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಮತ್ತು ಎಚ್.ಡಿ.ರೇವಣ್ಣ ಅವರ ಪುತ್ರ.

2) ಪ್ರಜ್ವಲ್‌ ರೇವಣ್ಣ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 2024 ರಲ್ಲಿ 40 ಕೋಟಿ ರೂ. ಆಸ್ತಿ ಸಂಪತ್ತು ಹೊಂದಿದ್ದಾರೆ. ಸ್ವಂತ ಕಾರು ಅಥವಾ ಯಾವುದೇ ಮನೆಯನ್ನು ಹೊಂದಿಲ್ಲ. 1.04 ಲಕ್ಷ ಮೌಲ್ಯದ ಪಿಸ್ತೂಲ್ ಮತ್ತು 2.68 ಲಕ್ಷ ಮೌಲ್ಯದ ರೈಫಲ್ ಇದೆ.

3) ಮೊದಲ ಬಾರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾದರು. ಆ ಸಂದರ್ಭದಲ್ಲಿ ರಾಜ್ಯದ ಅತ್ಯಂತ ಕಿರಿಯ ಸಂಸದರ ಪೈಕಿ ಒಬ್ಬರಾಗಿದ್ದರು. ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿಇ ಮುಗಿಸಿದ ಅವರು ಸ್ನಾತಕೋತ್ತರ ಪದವಿ ಪಡೆಯಲು ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಅವರು ಕೋರ್ಸ್ ಅನ್ನು ಅರ್ಧಕ್ಕೇ ನಿಲ್ಲಿಸಿ 2014ರಲ್ಲಿ ಭಾರತಕ್ಕೆ ಮರಳಿದರು.

4) ಇನ್ನು 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ತಪ್ಪು ಮತ್ತು ಸುಳ್ಳು ಮಾಹಿತಿ ಇರುವ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಪ್ರತಿಸ್ಪರ್ಧಿ ಕೇಸ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ 2019ರಲ್ಲಿ ಅವರ ವಿರುದ್ಧ ಸಮನ್ಸ್ ಹೊರಡಿಸಿತ್ತು. 2023ರ ಸೆಪ್ಟೆಂಬರ್‌ನಲ್ಲಿ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನವನ್ನು ಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶಕ್ಕೆ ಸಪ್ಟೆಂಬರ್ ಮಧ್ಯಭಾಗದಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.

5) ಪ್ರಜ್ವಲ್ ರೇವಣ್ಣ ವಿರುದ್ಧ ಸರ್ಕಾರಿ ಜಮೀನು ಖರೀದಿ, ಆದಾಯ ತೆರಿಗೆ ವಂಚನೆ, ಬೇನಾಮಿ ಆಸ್ತಿ ಗಳಿಕೆ ಆರೋಪಗಳಿದ್ದವು. ಹೊಳೆನರಸೀಪುರದಲ್ಲಿರುವ ಕನಿಷ್ಠ 5 ಕೋಟಿ ರೂಪಾಯಿ ಬೆಲೆ ಬಾಳುವ ಚೆನ್ನಾಂಬಿಕ ಕನ್ವೆನ್ಶನ್‌ ಸೆಂಟರ್ ಕಟ್ಟಡದ ಮೌಲ್ಯವನ್ನು ಚುನಾವಣಾ ಅಫಿಡವಿಟ್‌ನಲ್ಲಿ 14 ಲಕ್ಷ ರೂಪಾಯಿ ಎಂದು ತೋರಿಸಲಾಗಿದೆ. ಬೆಂಗಳೂರಿನ ಮಿನರ್ವ ಸರ್ಕಲ್‌ ಕರ್ನಾಟಕ ಬ್ಯಾಂಕ್ ಶಾಖೆಯ ಖಾತೆಯಲ್ಲಿ 48 ಲಕ್ಷ ರೂಪಾಯಿ ಇದ್ದರೂ, ಕೇವಲ 5 ಲಕ್ಷ ರೂಪಾಯಿ ಇದೆ ಎಂದು ಪ್ರಜ್ವಲ್ ರೇವಣ್ಣ ತೋರಿಸಿದ್ದರು ಎಂದು ವಕೀಲ ದೇವರಾಜೇ ಗೌಡ ಆರೋಪಿಸಿ ದಾವೆ ಹೂಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ