ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಸಿಇಟಿ ಗೊಂದಲ; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದು ಯಾರು, ಕೆಇಎ ಅಥವಾ ಪಿಯು ಇಲಾಖೆ, ತಜ್ಞರ ಸಮಿತಿ ವರದಿ ಆಶಾಕಿರಣ

ಕರ್ನಾಟಕ ಸಿಇಟಿ ಗೊಂದಲ; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದು ಯಾರು, ಕೆಇಎ ಅಥವಾ ಪಿಯು ಇಲಾಖೆ, ತಜ್ಞರ ಸಮಿತಿ ವರದಿ ಆಶಾಕಿರಣ

Umesh Kumar S HT Kannada

Apr 23, 2024 07:49 PM IST

ಕರ್ನಾಟಕ ಸಿಇಟಿ ಗೊಂದಲ; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟಕ್ಕೆ ಸಂಬಂಧಿಸಿದ ವರದಿ.(ಸಾಂದರ್ಭಿಕ ಚಿತ್ರ)

  • ಕರ್ನಾಟಕ ಸಿಇಟಿ 2024; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿದ್ದು ಯಾರು? ಕೆಇಎ ಅಥವಾ ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ? ವಿಷಯ ತಜ್ಞರ ಸಮಿತಿಯ ವರದಿಯೇ ಆಶಾಕಿರಣ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು ಪೋಷಕರು. (ವರದಿ- ಎಚ್. ಮಾರುತಿ, ಬೆಂಗಳೂರು)

ಕರ್ನಾಟಕ ಸಿಇಟಿ ಗೊಂದಲ; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟಕ್ಕೆ ಸಂಬಂಧಿಸಿದ ವರದಿ.(ಸಾಂದರ್ಭಿಕ ಚಿತ್ರ)
ಕರ್ನಾಟಕ ಸಿಇಟಿ ಗೊಂದಲ; ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟಕ್ಕೆ ಸಂಬಂಧಿಸಿದ ವರದಿ.(ಸಾಂದರ್ಭಿಕ ಚಿತ್ರ)

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುವುದು ಶಿಕ್ಷಣ ಇಲಾಖೆಗೆ ಹೊಸದೇನೂ ಅಲ್ಲ. ಆಗೊಮ್ಮೆ ಈಗೊಮ್ಮೆ ಆತಂಕ ಸೃಷ್ಟಿಸುತ್ತಲೇ ಇರುತ್ತದೆ. ಇದೀಗ ಏಪ್ರಿಲ್ 18 ಮತ್ತು 19ರಂದು ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆದಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯಕ್ಕೆ ಹೊರತಾದ ಶೇ. 25ರಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು ಎನ್ನುವುದು ಆರೋಪವಾಗಿದೆ. ಈ ಆರೋಪವನ್ನು ಪರಿಶೀಲಿಸಿ ವರದಿ ನೀಡಲು ಆಯಾ ವಿಷಯವಾರು ತಜ್ಞರನ್ನು ಒಳಗೊಂಡ ನಾಲ್ಕು ಸಮಿತಿಗಳನ್ನು ರಚಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಟ್ರೆಂಡಿಂಗ್​ ಸುದ್ದಿ

Chikkamagaluru News: ಚಿಕ್ಕಮಗಳೂರಿನಲ್ಲಿ ಭಾರೀ ಗಾತ್ರದ ಸಲಗ ವಿದ್ಯುತ್‌ ಶಾಕ್‌ ಗೆ ಬಲಿ

Bangalore News: ಅಜಾಗರೂಕತೆಯಿಂದ ಕಾರು ಚಾಲನೆ, ಬೆಂಗಳೂರಲ್ಲಿ ಬಾಲಕ ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Hassan Scandal: ತಿರುವು ಪಡೆದುಕೊಳ್ಳುತ್ತಿರುವ ಪ್ರಜ್ವಲ್‌ ರೇವಣ್ಣ ಪ್ರಕರಣ, ಜೆಡಿಎಸ್‌ ಶಾಸಕನ ವಿರುದ್ದವೇ ಆರೋಪ, ಮತ್ತಿಬ್ಬರ ಬಂಧನ

ಶಕ್ತಿ ಯೋಜನೆ ನಂತರವೂ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಏರಿಕೆ, ದೂರದ ಪ್ರಯಾಣ ಬೆಳೆಸುವ ಮಹಿಳೆಯರ ಬೇಡಿಕೆಗಳೇನು?

ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳಿಂದಾಗಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು , ಮರು ಪರೀಕ್ಷೆ ನಡೆಸಬೇಕು, ಇಲ್ಲವೇ ಕೃಪಾಂಕ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಮತ್ತು ಕಾಲೇಜು ಆಡಳಿತ ಮಂಡಳಿಗಳು ಒತ್ತಾಯಿಸಿವೆ. ತಜ್ಞರ ಸಮಿತಿಗಳಿಂದ ಒಂದು ವಾರದಲ್ಲಿ ವರದಿ ಪಡೆದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.

ಹಿಂದೆಯೂ ನಡೆದಿತ್ತು ಇಂತಹ ಪ್ರಮಾದ

ಈ ಹಿಂದೆ ಇಂತಹ ಪ್ರಮಾದಗಳು ನಡೆದೇ ಇಲ್ಲ ಎಂದು ಹೇಳುವಂತಿಲ್ಲ. 60 ಪ್ರಶ್ನೆಗಳಿಗೆ ಒಂದೋ ಎರಡೋ ಪ್ರಶ್ನೆಗಳು ನುಸುಳುತ್ತಿದ್ದವು. ಆಗೆಲ್ಲ ಗ್ರೇಸ್ ಅಂಕಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಸಿಇಟಿ ಪ್ರಶ್ನೆಪತ್ರಿಕೆಗಳಲ್ಲಿ 59 ಪ್ರಶ್ನೆಗಳು ಪಠ್ಯಕ್ರಮಕ್ಕೆ ಹೊರತಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸಿಇಟಿ ಪರೀಕ್ಷೆಯನ್ನು ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎದುರಿಸಿದ್ದಾರೆ.

ಈ ಮಧ್ಯೆ ಪಠ್ಯದ ಪ್ರಶ್ನೆಗಳನ್ನಷ್ಟೇ ಮೌಲ್ಯಮಾಪನ ಮಾಡಿ ಸಿಇಟಿ ಫಲಿತಾಂಶ ಪ್ರಕಟಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಪಠ್ಯಕ್ಕೆ ಸಂಬಂಧ ಇಲ್ಲದ ಪ್ರಶ್ನೆಗಳನ್ನು ಕೈಬಿಡಬೇಕು ಎಂದೂ ಕೆಲವರು ಒತ್ತಾಯಿಸುತ್ತಿದ್ದಾರೆ.

ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತು ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಯಾವುದೇ ಇಲಾಖೆ ತಪ್ಪಿಗೆ ಜವಾಬ್ದಾರಿ ಹೊರುತ್ತಿಲ್ಲ. ಪಠ್ಯ ಪರಿಷ್ಕರಣೆ ಮಾಡಿದ ನಂತರ ಯಾವ ಯಾವ ಪಠ್ಯಗಳನ್ನು ಕೈಬಿಡಲಾಗಿದೆ ಎಂಬ ಬಗ್ಗೆ ಕೆಇಎ ಗೆ ಮಾಹಿತಿಯೇ ಇಲ್ಲಎನ್ನುವುದು ಶಿಕ್ಷಣ ಇಲಾಖೆಯ ದುಸ್ಥಿತಿಗೆ ಕನ್ನಡಿ ಹಿಡಿದ ಹಾಗಿದೆ.

ಗ್ರೇಸ್ ಅಂಕ ನೀಡುವ ಚಿಂತನೆ

ಒಂದು ವೇಳೆ ಎಲ್ಲ ವಿದ್ಯಾರ್ಥಿಗಳಿಗೆ ಗ್ರೇಸ್‌ ಅಂಕಗಳನ್ನು ನೀಡಿದರೆ ಎಲ್ಲರಿಗೂ ಸಮಾನವಾಗಿ ಅಂಕಗಳು ದೊರೆಯುತ್ತವೆ. ಆದರೆ ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಮರು ಪರೀಕ್ಷೆ ನಡೆಸಿದರೂ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಪೋಷಕರು ಮತ್ತು ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಾರೆ.

ಮತ್ತೊಂದು ಕಡೆ ಮರು ಪರೀಕ್ಷೆ ನಡೆಸಬೇಕು ಇಲ್ಲವೇ ಪಿಯು ಅಂಕಗಳ ಆಧಾರದ ಮೇಲೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡಬೇಕು ಎಂದು ಕರ್ನಾಟಕ ಖಾಸಗಿ ಶಾಲಾ ಕಾಲೇಜುಗಳ ಪೋಷಕರ ಸಂಘ ಒತ್ತಾಯಿಸಿದೆ. ಆದರೆ ಇದರಿಂದ ಸಿಇಟಿ ಪರೀಕ್ಷೆಗೆ ಅರ್ಥವೇ ಇಲ್ಲವಾಗುತ್ತದೆ.

ಹೊಸ ಪಠ್ಯದ ಆಧಾರದಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ ಎಂದು ಪಿಯು ಮಂಡಳಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆದರೂ ವಿಷಯ ತಜ್ಞರು ಹಳೆಯ ಪಠ್ಯಕ್ರಮದ ಆಧಾರದಲ್ಲಿ ಪ್ರಶ್ನೆಗಳನ್ನು ಸಿದ್ಧಪಡಿಸುತ್ತಾರೆ ಎಂದರೆ ಯಾರನ್ನು ಸಂಶಯಿಸಬೇಕು ಎಂದು ಪೋಷಕರೊಬ್ಬರು ಪ್ರಶ್ನಿಸುತ್ತಾರೆ.

ಸಿಇಟಿ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಎದ್ದಿರುವ ಆಕ್ಷೇಪಗಳ ಪರಿಶೀಲನೆಗೆ ವಿಷಯವಾರು ತಜ್ಞರ ನಾಲ್ಕು ಸಮಿತಿಗಳನ್ನು ಉನ್ನತ ಶಿಕ್ಷಣ ಇಲಾಖೆ ನೇಮಿಸಿರುವುದು ಸರಿಯಷ್ಟೇ. ಈ ಸಮಿತಿಗಳಲ್ಲಿ ತಜ್ಞರು ಇರುವುದರಿಂದ ಪರಿಹಾರ ಸಿಗಬಹುದು ಎಂಬ ಆಶಾವಾದ ವಿದ್ಯಾರ್ಥಿಗಳು ಮತ್ತು ಪೋಷಕರದ್ದು. ಆದ್ದರಿಂದ ಸಮಿತಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯಕ್ಕೆ ಛೀಮಾರಿ ಹಾಕಿದರೂ ಚಿಂತೆ ಇಲ್ಲ, ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಸಿಇಟಿ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ನಡೆಸುವುದಕ್ಕೂ ಮುನ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ಜಂಟಿ ಸಭೆಗಳನ್ನು ನಡೆಸಬೇಕು. ಐಎಎಸ್ ಅಧಿಕಾರಿಗಳು ತಮ್ಮ ಪ್ರತಿಷ್ಠೆಯನ್ನು ಕೈಬಿಟ್ಟು ನಾವು ಕೆಲಸ ಮಾಡುವುದೇ ವಿದ್ಯಾರ್ಥಿಗಳ ಹಿತಕ್ಕಾಗಿ ಎನ್ನುವುದನ್ನು ಮನಗಾಣಬೇಕು.

(ವರದಿ- ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ