ಬೆಂಗಳೂರು ಜಲಮಂಡಳಿ ಚೇರ್‌ಮನ್ ಡಾ ರಾಮ ಪ್ರಸಾತ್ ಮನೋಹರ್ ವಿ ಸೇರಿ ಕೆಲವು ಐಎಎಸ್ ಅಧಿಕಾರಿಗಳ ವರ್ಗಾವಣೆ, ಹೊಸ ಹೊಣೆಗಾರಿಕೆಗೆ ನಿಯೋಜನೆ
Aug 28, 2024 09:28 PM IST
ಐಎಎಸ್ ವರ್ಗಾವಣೆ
IAS Transfer and Postings; ಕರ್ನಾಟಕದ ಪ್ರಮುಖ ಐಎಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಹೊಸ ನಿಯೋಜನೆ ಆದೇಶವನ್ನು ರಾಜ್ಯ ಸರ್ಕಾರ ಇಂದು (ಆಗಸ್ಟ್ 28) ಪ್ರಕಟಿಸಿದೆ. ಇದರಂತೆ, ಬೆಂಗಳೂರು ಜಲಮಂಡಳಿ ಚೇರ್‌ಮನ್ ಡಾ ರಾಮ ಪ್ರಸಾತ್ ಮನೋಹರ್ ವಿ ಸೇರಿ ಕೆಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಆಗಿದ್ದು, ಹೊಸ ಹೊಣೆಗಾರಿಕೆಗೆ ನಿಯೋಜನೆಯಾಗಿದೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ಬೆಂಗಳೂರು ಜಲಮಂಡಳಿ ಚೇರ್‌ಮನ್ ಡಾ ರಾಮ ಪ್ರಸಾತ್ ಮನೋಹರ್ ವಿ ಸೇರಿ ಪ್ರಮುಖ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಕರ್ನಾಟಕ ಸರಕ್ಆರ, ಅವರನ್ನು ಬೇರೆ ಬೇರೆ ಇಲಾಖೆಗಳ ಹುದ್ದೆಗಳಿಗೆ ನಿಯೋಜಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ಸರಕಾರ ಇಂದು (ಆಗಸ್ಟ್ 28) ಈ ಆದೇಶ ನೀಡಿದ್ದು, ಇದರಂತೆ, ವಿವಿಧ ಬ್ಯಾಚ್‌ನ ಐಎಎಸ್ ಅಧಿಕಾರಿಗಳ ಹೊಸ ಹೊಣೆಗಾರಿಕೆಯ ವಿವರ ಹೀಗಿದೆ.
ಐಎಎಸ್ ವರ್ಗಾವಣೆ ಮತ್ತು ಹೊಸ ಹೊಣೆಗಾರಿಕೆ
1) ಹುದ್ದೆಗಾಗಿ ಕಾಯುತ್ತಿದ್ದ 2004ರ ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿ ಸತ್ಯವತಿ ಜಿ. ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಬೆಂಗಳೂರಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. ಇಲ್ಲಿದ್ದ ಐಎಎಸ್ ಅಧಿಕಾರಿ ಎನ್. ಮಂಜುನಾಥ ಪ್ರಸಾದ್ ಅವರನ್ನು ಈ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
2) ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮಿಷನರ್ 2010ರ ಬ್ಯಾಚ್‌ನ ಕರ್ನಾಟಕ ಕೆಡರ್‌ನ ಅಧಿಕಾರಿ ಶಿವಕುಮಾರ್ ಕೆಬಿ ಅವರನ್ನು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಇಲಾಖೆಯ ಕಮಿಷನರ್ ಆಗಿ ನಿಯೋಜಿಸಲಾಗಿದೆ. ಇಲ್ಲಿ ಅಧಿಕಾರಿಯಾಗಿದ್ದ ರಣದೀಪ್ ಡಿ ಅವರನ್ನು ಇಲ್ಲಿಂದ ಬಿಡುಗಡೆ ಮಾಡಲಾಗಿದೆ.
3) ಶಿವಕುಮಾರ್ ಕೆಬಿ ಅವರನ್ನು ಸದ್ಯ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮಿಷನರ್ ಆಗಿ ಕೂಡ ಹೆಚ್ಚುವರಿ ಹೊಣೆಗಾರಿಕೆ ನೀಡಿ ಉಳಿಸಿಕೊಳ್ಳಲಾಗಿದೆ.
4) ಬೆಂಗಳೂರು ಜಲ ಮಂಡಳಿಯ ಚೇರ್‌ಮನ್ ಆಗಿದ್ದ 2010ರ ಬ್ಯಾಚ್‌ನ ಕರ್ನಾಟಕ ಕೆಡರ್ ಅಧಿಕಾರಿ ಡಾ ರಾಮ್ ಪ್ರಸಾತ್ ಮನೋಹರ್ ವಿ ಅವರನ್ನು ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. ಅವರು ಮುಂದಿನ ಆದೇಶದ ತನಕ ಬೆಂಗಳೂರು ಜಲಮಂಡಳಿ ಚೇರ್‌ಮನ್ ಆಗಿಯೂ ಸೇವೆ ಸಲ್ಲಿಸಲಿದ್ದಾರೆ.
5) ಕರ್ನಾಟಕ ಕೆಡರ್‌ನ 2010ರ ಬ್ಯಾಚ್‌ನ ಐಎಎಸ್ ಅಧಿಕಾರಿ ರಮೇಶ್ ಡಿಎಸ್ ಅವರನ್ನು ಬೆಂಗಳೂರಿನ ತೋಟಗಾರಿಕೆ ಇಲಾಖೆಯ ನಿರ್ದೇಶಕರಾಗಿ ನಿಯೋಜಿಸಲಾಗಿದೆ.
6) ಕರ್ನಾಟಕ ಕೆಡರ್‌ನ 2012ರ ಬ್ಯಾಚ್‌ನ ಐಎಎಸ್ ಅಧಿಕಾರಿ ರವಿ ಕುಮಾರ್ ಎಂಆರ್ ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರಿನ ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕ ಸ್ಥಾನಕ್ಕೆ ನಿಯೋಜಿಸಲಾಗಿದೆ. ಈ ಹುದ್ದೆ ಖಾಲಿ ಇತ್ತು.
7) ಬೆಂಗಳೂರು ಬಿಎಂಟಿಸಿಯ (ಭದ್ರತೆ ಮತ್ತು ವಿಜಿಲೆನ್ಸ್ ) ನಿರ್ದೇಶಕರಾಗಿದ್ದ ಅರ್ಚನಾ ಎಂಎಸ್ (2012 ರ ಬ್ಯಾಚ್‌ನ ಕರ್ನಾಟಕ ಕೆಡರ್ ಅಧಿಕಾರಿ) ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದ್ದು, ಮುಂದಿನ ಆದೇಶದ ತನಕ ಅವರು ಬಿಬಿಎಂಪಿಯ ಪಶ್ಚಿಮ ವಲಯದ ಆಯುಕ್ತರಾಗಿ ಕೆಲಸ ಮಾಡಲಿದ್ದಾರೆ.
8) ಕರ್ನಾಟಕ ಕೆಡರ್‌ನ 2017ರ ಬ್ಯಾಚ್‌ನ ಐಎಎಸ್ ಅಧಿಕಾರಿ ನವೀನ್ ಕುಮಾರ್ ರಾಜು ಎಸ್ ಅವರನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನಿಯೋಜಿಸಿದೆ.
9) ಯಾದಗಿರಿ ಜಿಲ್ಲಾ ಪಂಚಾಯಿತಿಯ ಸಿಇಒ ಆಗಿದ್ದ ಕರ್ನಾಟಕ ಕೆಡರ್‌ನ 2018ರ ಬ್ಯಾಚ್‌ನ ಐಎಎಸ್ ಅಧಿಕಾರಿ ಗರಿಮಾ ಪನ್ವಾರ್ ಅವರನ್ನು ಬೆಂಗಳೂರಿನಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಿಜಿಟಲ್ ಹೆಲ್ತ್ (ಇ-ಹೆಲ್ತ್) ವಿಭಾಗದ ನಿರ್ದೇಶಕರಾಗಿ ನಿಯೋಜಿಸಿದೆ.