Bengaluru News: ಹೊಸ ವರ್ಷಾಚಣೆಗೆ ಇಲ್ಲ ನಿರ್ಬಂಧ, ಕೋವಿಡ್ ತಡೆ ನಿಯಮ ಪಾಲನೆಗೆ ಸರ್ಕಾರದ ಮನವಿ
Dec 26, 2023 10:31 PM IST
ಹೊಸ ವರ್ಷಾಚರಣೆ ಮಾಡುವುದಕ್ಕೆ ನಿರ್ಬಂಧ ಇಲ್ಲ. ಕೋವಿಡ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರಾತ ಕ್ರಮವನ್ನು ಸಾರ್ವಜನಿಕರೇ ಸ್ವಯಂ ಪ್ರೇರಣೆಯಿಂದ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಕೋವಿಡ್ ಸೋಂಕು ಪೀಡಿತರಾದ 7 ಜನ ಮೃತಪಟ್ಟ ಕಾರಣ, ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ. ಅದೇ ರೀತಿ, ಸದ್ಯಕ್ಕೆ ಮಾಸ್ಕ್ ಕಡ್ಡಾಯ ಮಾಡಿಲ್ಲ. ಕೋವಿಡ್ ತಡೆ ನಿಯಮವನ್ನು ಪಾಲಿಸುವಂತೆ ಸರ್ಕಾರ ಮನವಿಯನ್ನಷ್ಟೇ ಮಾಡಿದೆ. (ವರದಿ - ಎಚ್. ಮಾರುತಿ)
ಕರ್ನಾಟಕದಲ್ಲಿ ಕೋವಿಡ್ ನಿಂದ 7 ಮಂದಿ ಮೃತಪಟ್ಟಿದ್ದು, ಈ ಪೈಕಿ ಮೂವರು ಕೋವಿಡ್ ಲಸಿಕೆ ಪಡೆದು ಕೊಂಡಿದ್ದರೆ ನಾಲ್ವರು ಲಸಿಕೆ ಹಾಕಿಸಿಕೊಂಡಿರಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೋವಿಡ್ ಬಂದಲ್ಲಿ 7 ದಿನ ಹೋಂ ಐಸೊಲೇಷನ್ ಕಡ್ಡಾಯ ಎಂದ ಅವರು ಹೊಸ ವರ್ಷಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದೂ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣ ಕುರಿತು ಸಚಿವ ಸಂಪುಟ ಉಪಸಮಿತಿಯ ಮೊದಲ ಸಭೆ ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ನಡೆಯಿತು. ನಂತರ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆಗಳ ಮಾಹಿತಿ ಪಡೆದುಕೊಂಡು ಚರ್ಚೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಮೃತ ಪಟ್ಟ 7 ಮಂದಿಯ ಪೈಕಿ ಮೂವರಿಗೆ ಜೆಎನ್.1 ರೂಪಾಂತರಿ ಇತ್ತು. ಕೋವಿಡ್ ಹೊಸ ಉಪತಳಿ ಜೆಎನ್.1 ವಿಶ್ವದಾದ್ಯಂತ ಪತ್ತೆಯಾಗಿದೆ. ಜಿನೋಮ್ ಸೀಕ್ವೆನ್ಸ್ ನಲ್ಲಿ ರಾಜ್ಯದಲ್ಲಿ ಜೆ.ಎನ್ 1 ರೂಪಾಂತರಿ 34 ಪಾಸಿಟಿವ್ ಇದೆ. ಇದರಿಂದ ಭಯ ಪಡುವ ಅಗತ್ಯ ಇಲ್ಲ, ಇದು ನಿರೀಕ್ಷಿತವಾಗಿದ್ದು, ಜೆ.ಎನ್ 1 ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ. ಆದರೆ ಎಚ್ಚರಿಕೆಯಿಂದ ಇರಬೇಕು ಎಂದರು.
ಹಿಂದೆ ಆಗಿರುವ ತಪ್ಪುಗಳು ಮರುಕಳಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ 3,200 ಪರೀಕ್ಷೆ ಮಾಡಲಾಗಿದೆ. ಬುಧವಾರದಿಂದ ಐದು ಸಾವಿರಕ್ಕೆ ತಲುಪುತ್ತೇವೆ. ಸದ್ಯ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 4010 ಇದ್ದು, ರಾಜ್ಯದಲ್ಲಿ ಕೋವಿಡ್ 436 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 400 ಮಂದಿ ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ. 36 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 7 ಮಂದಿ ಐಸಿಯುನಲ್ಲಿದ್ದಾರೆ. ಹೋಂ ಐಸೋಲೇಷನ್ ನಲ್ಲಿ ಇರುವವರನ್ನು ನಿಯತವಾಗಿ ಗಮನಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವವರ ಮೇಲೂ ನಿಗಾ ವಹಿಸಲಾಗಿದೆ ಎಂದು ವಿವರಿಸಿದರು.
ಆಕ್ಸಿಜನ್‌ಗೆ ಕೊರತೆ ಇಲ್ಲ: ಆಕ್ಸಿಜನ್ ಪೂರೈಕೆಗೆ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆಕ್ಸಿಜನ್ ಘಟಕ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ನಾಲ್ಕು ಮೊಬೈಲ್ ಆಕ್ಸಿಜನ್ ಜನರೇಷನ್ ಪ್ಲ್ಯಾಂಟ್ ಖರೀದಿಗೆ ನಿರ್ಧಾರ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಕೂಡಾ ನಡೆಯುತ್ತಿದೆ. ಜಿನೋಮ್ ಸೀಕ್ವೆನ್ಸ್ ಸ್ಯಾಂಪ್ಲಿಂಗ್ ಕೆಪಾಸಿಟಿ ಹೆಚ್ಚಿಸುತ್ತವೆ ಎಂದು ಸಚಿವರು ವಿವರಿಸಿದರು.
ಹೊಸ ವರ್ಷಕ್ಕೆ ನಿರ್ಬಂಧ ಇಲ್ಲ: ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಜನರೇ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ, ಶೀತ, ಗಂಟಲು ನೋವು ಬಂದರೆ ಮನೆಯಲ್ಲಿಯೇ ಉಳಿದುಕೊಳ್ಳಬೇಕು. ಈ ನಿಯಮ ಖಾಸಗಿ ವಲಯಕ್ಕೂ ಅನ್ವಯವಾಗಲಿದ್ದು, ಉದ್ಯೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ರಜೆ ನೀಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಶಾಲೆಗೆ ಕಳುಹಿಸಬೇಡಿ: ಪೋಷಕರು ಮಕ್ಕಳ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಕೋವಿಡ್ ಲಕ್ಷಣಗಳು, ಜ್ವರ, ಕೆಮ್ಮು ಮಕ್ಕಳಲ್ಲಿ ಕಂಡು ಬಂದರೆ ಶಾಲೆಗೆ ಕಳುಹಿಸದೇ ಇರುವುದು ಉತ್ತಮ. ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ. ಶುಚಿತ್ವ ಕಾಪಾಡಿ, ಸ್ಯಾನಿಟೈಸರ್ ಬಳಸಿ ಎಂದು ಸಲಹೆ ನೀಡಿದರು.
ಕೊರೊನಾ ಲಸಿಕೆ ನೀಡುವ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಮಾಸ್ಕ ಧರಿಸಿದ್ದರೆ ಒಳ್ಳೆಯದು. ಆದರೆ, ಮಾಸ್ಕ್ ಕಡ್ಡಾಯ ಮಾಡಿಲ್ಲ. ಕೊರೋನಾ ಮಾರ್ಗಸೂಚಿಯಲ್ಲಿ ಮಾರ್ಪಾಡು ಮಾಡುವ ಸಾಧ್ಯತೆ ಇದ್ದರೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಸರ್ಕಾರ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಮೂವರು ಸಚಿವರನ್ನೊಳಗೊಂಡ ಸಂಪುಟ ಉಪಸಮಿತಿ ರಚಿಸಿದೆ. ಸಚಿವರಾದ ಎಚ್. ಸಿ.ಮಹದೇವಪ್ಪ, ಶರಣ ಪ್ರಕಾಶ್ ಪಾಟೀಲ್ ಹಾಗೂ ಡಾ.ಎಂ. ಸಿ ಸುಧಾಕರ್ ಅವರನ್ನು ಉಪಸಮಿತಿ ಸದಸ್ಯರಾಗಿದ್ದಾರೆ.
ಸಮಿತಿಯು ಕೊವಿಡ್ ಸೇರಿ ಸಾಂಕ್ರಾಮಿಕ ರೋಗಗಳ ಕುರಿತು ಪರಾಮರ್ಶಿಸಲಿದೆ. ಔಷಧಿ ಖರೀದಿ, ಮಾಸ್ಕ್ ಕಡ್ಡಾಯ ಸೇರಿದಂತೆ ಎಲ್ಲಾ ವಿಷಯವನ್ನು ಈ ಸಮಿತಿ ನಿರ್ಧರಿಸಲಿದೆ.