ರಾಪಿಡೋ ಬೈಕ್ ಕ್ಯಾಪ್ಟನ್‌ಗಳ ಮೇಲೆ ಹಲ್ಲೆ; ಆಟೋ ಚಾಲಕರ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ- ವರದಿ
Apr 25, 2024 04:37 PM IST
ಕರ್ನಾಟಕ ಹೈಕೋರ್ಟ್
ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಕ್ಯಾಪ್ಟನ್‌ಗಳ ಮೇಲೆ ಹಲ್ಲೆ ಪ್ರಕರಣಗಳಲ್ಲಿ ಸಂಬಂಧಿತ ಆಟೋ ಚಾಲಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ನ್ಯಾಯೋಚಿತವಾಗಿ ದೂರುಗಳನ್ನು ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶ ನೀಡಿದೆ.
ಬೆಂಗಳೂರು: ರಾಪಿಡೋ ಕ್ಯಾಪ್ಟನ್‌ಗಳು ಸಣ್ಣ ಮಟ್ಟಿಗೆ ಸಮಾಧಾನ ಪಡಬಹುದಾದ ಸುದ್ದಿ ಇದು. ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಕ್ಯಾಪ್ಟನ್‌ಗಳ ಮೇಲೆ ದಾಳಿ ಮಾಡಿ ಹಲ್ಲೆ ನಡೆಸುವ ಆಟೋ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ರಾಪಿಡೋ ಆಪ್ ಮೂಲಕ ಬೈಕ್, ಸ್ಕೂಟರ್‌ಗಳನ್ನು ಬುಕ್ ಮಾಡಿ ಅವರು ಸ್ಥಳಕ್ಕೆ ಬಂದ ಕೂಡಲೇ ಅವರ ಮೇಲೆ ಆಟೋ ಚಾಲಕರು ಹಲ್ಲೆ ನಡೆಸುತ್ತಿದ್ದ ಘಟನೆಗಳು ಈ ಹಿಂದೆ ಹಲವು ಬಾರಿ ವರದಿಯಾಗಿದ್ದವು. ನಗರವಾಸಿಗಳ ಗಮನಸೆಳೆದಿದ್ದವು. ಇದರಿಂದಾಗಿ ರಾಪಿಡೋ ಬೈಕ್/ ಸ್ಕೂಟರ್ ಸೇವೆಗೆ ಅಡಚಣೆ ಉಂಟಾಗಿತ್ತು. ಧೈರ್ಯವಾಗಿ ರಾಪಿಡೋ ಬೈಕ್/ ಸ್ಕೂಟರ್ ಸೇವೆ ಒದಗಿಸುವಂತೆ ಅಥವಾ ಗ್ರಾಹಕರು ಪಡೆದುಕೊಳ್ಳುವಂತೆ ಪರಿಸ್ಥಿತಿ ಇಲ್ಲ.
ಹೀಗಾಗಿ, ಬೈಕ್ ಟ್ಯಾಕ್ಸಿ ವೆಲ್‌ಫೇರ್ ಅಸೋಸಿಯೇಷನ್ ಕೆಲವು ಆಟೋರಿಕ್ಷಾ ಯೂನಿಯನ್‌ಗಳು ಮತ್ತು ಅವುಗಳ ಸದಸ್ಯರ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಅವರ ವ್ಯಾವಹಾರಿಕ ಅಕ್ರಮ, ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅಡ್ಡಿ ಉಂಟುಮಾಡುವ ವರ್ತನೆ ತಡೆದು ಪರಿಹಾರ ಒದಗಿಸುವಂತೆ ಬೈಕ್ ಟ್ಯಾಕ್ಸಿ ವೆಲ್‌ಫೇರ್ ಅಸೋಸಿಯೇಷನ್ ನ್ಯಾಯಪೀಠಕ್ಕೆ ಮನವಿ ಸಲ್ಲಿಸಿತ್ತು.
ರಾಪಿಡೋ ಕ್ಯಾಪ್ಟನ್‌ಗಳ ರಕ್ಷಣೆ; ದಾವೆ ವಿಚಾರಣೆಗೆತ್ತಿಕೊಂಡ ಹೈಕೋರ್ಟ್
ಬೆಂಗಳೂರಿನಲ್ಲಿ ರಾಪಿಡೋ ಕ್ಯಾಪ್ಟನ್‌ಗಳ ಮೇಲೆ ಪದೇಪದೆ ಹಲ್ಲೆ ಪ್ರಕರಣಗಳು ಅವರ ಸುರಕ್ಷತೆಯ ವಿಚಾರವನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ. ಆಟೋ ರಿಕ್ಷಾ ಚಾಲಕರ ಆಕ್ರಮಣಕಾರಿ ವರ್ತನೆಯ ಕಾರಣ, ಶಾರೀರಿಕ ಹಲ್ಲೆ ಮಾತ್ರವಲ್ಲದೆ, ಮಾನಸಿಕವಾಗಿಯೂ ಕುಗ್ಗುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಅಸೋಸಿಯೇಷನ್ ಪ್ರತಿಪಾದಿಸಿದೆ.
ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಬೈಕ್ ಟ್ಯಾಕ್ಸಿಗಳು ಸಂಚರಿಸುತ್ತಿವೆ ಎಂಬುದು ಆಟೋರಿಕ್ಷಾ ಚಾಲಕರ ವಾದ. ಆದರೆ, ಈ ವಿಷಯ ಇನ್ನೂ ನ್ಯಾಯಾಂಗ ಪರಿಶೀಲನೆಯಲ್ಲಿದೆ. ಇದಲ್ಲದೆ, ಬೈಕ್ ಟ್ಯಾಕ್ಸಿಗಳ ಕಡಿಮೆ-ವೆಚ್ಚದ ಮಾದರಿಯು ಹಲವಾರು ಆಟೋರಿಕ್ಷಾ ಚಾಲಕರ ಜೀವನೋಪಾಯವನ್ನು "ಧ್ವಂಸಗೊಳಿಸಿದೆ" ಎಂದು ಅವರು ವಾದಿಸುತ್ತಾರೆ. ವಾಸ್ತವವಾಗಿ, ಕೆಲವು ಆಟೋರಿಕ್ಷಾ ಚಾಲಕರು ಅಪ್ಲಿಕೇಶನ್ ಬಳಸುವುದರ ವಿರುದ್ಧ ಕ್ಯಾಪ್ಟನ್‌ಗಳಿಗೆ ಎಚ್ಚರಿಕೆ ನೀಡಲು ರಾಪಿಡೊ ರೈಡ್‌ಗಳನ್ನು ಸಹ ಬುಕ್ ಮಾಡುತ್ತಾರೆ ಎಂದು ಅಸೋಸಿಯೇಷನ್ ಹೇಳಿದೆ.
ಈ ದಾವೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ, ಬೈಕ್ ಟ್ಯಾಕ್ಸಿಗಳು ತಮ್ಮ ಸೇವೆಗಳನ್ನು ನಡೆಸದಂತೆ ಕಾನೂನುಬಾಹಿರವಾಗಿ ಅಡ್ಡಿಪಡಿಸುವ ಯಾವುದೇ ವ್ಯಕ್ತಿ ಅಥವಾ ಘಟಕದ ವಿರುದ್ಧ ತ್ವರಿತ ಮತ್ತು ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ಮಾರ್ಚ್ 28 ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹೈಕೋರ್ಟ್ ನಿರ್ದೇಶನದಿಂದ ಕೊಂಚ ರಿಲೀಫ್
ಬೈಕ್ ಟ್ಯಾಕ್ಸಿ ನಿರ್ವಾಹಕರ ಸುರಕ್ಷತೆಯನ್ನು ಖಾತ್ರಿಪಡಿಸುವುದು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಉಚ್ಚ ನ್ಯಾಯಾಲಯವು ಒತ್ತಿಹೇಳಿತು. ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನಾಂಕದವರೆಗೆ ನಿರ್ವಾಹಕರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ.
ಬೈಕ್ ಟ್ಯಾಕ್ಸಿ ಚಾಲಕರು ನೀಡುವ ದೂರುಗಳನ್ನು ಕೂಡ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ನ್ಯಾಯೋಚಿತವಾದ ವರ್ತನೆಯನ್ನು ತೋರಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ಸೂಚನೆ ನೀಡಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)