logo
ಕನ್ನಡ ಸುದ್ದಿ  /  ಕರ್ನಾಟಕ  /  Kpsc News:ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ ಸುರಳಕರ್‌ ವರ್ಗ: ಕರ್ನಾಟಕ ಸರ್ಕಾರದ ನಡೆಗೆ ಆಕ್ರೋಶ

KPSC News:ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ ಸುರಳಕರ್‌ ವರ್ಗ: ಕರ್ನಾಟಕ ಸರ್ಕಾರದ ನಡೆಗೆ ಆಕ್ರೋಶ

Umesha Bhatta P H HT Kannada

Sep 14, 2023 09:04 AM IST

google News

ಕೆಪಿಎಸ್‌ಸಿ ಕಾರ್ಯದರ್ಶಿಯಾಗಿದ್ದ ವಿಕಾಸ ಸುರಳಕರ್‌ ಅವರನ್ನು ವರ್ಗ ಮಾಡಲಾಗಿದೆ.

    • KPSC secretary transferred ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯನ್ನು ವರ್ಗ ಮಾಡಲಾಗಿದ್ದು, ತೀವ್ರ ಚರ್ಚೆಗೆ ಇದು ಗ್ರಾಸವಾಗಿದೆ.
ಕೆಪಿಎಸ್‌ಸಿ ಕಾರ್ಯದರ್ಶಿಯಾಗಿದ್ದ ವಿಕಾಸ ಸುರಳಕರ್‌ ಅವರನ್ನು ವರ್ಗ ಮಾಡಲಾಗಿದೆ.
ಕೆಪಿಎಸ್‌ಸಿ ಕಾರ್ಯದರ್ಶಿಯಾಗಿದ್ದ ವಿಕಾಸ ಸುರಳಕರ್‌ ಅವರನ್ನು ವರ್ಗ ಮಾಡಲಾಗಿದೆ.

ಬೆಂಗಳೂರು: ಒಂದು ವರ್ಷದಿಂದ ಕರ್ನಾಟಕ ಲೋಕಸೇವಾ ಆಯೋಗ( KPSC)ದ ಕಾರ್ಯದರ್ಶಿಯಾಗಿದ್ದ ಐಎಎಸ್‌ ಅಧಿಕಾರಿ ವಿಕಾಸ ಸುರಳಕರ್‌ ಅವರನ್ನು ವರ್ಗ ಮಾಡಲಾಗಿದೆ.

ಕೆಪಿಎಸ್‌ಸಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದ ವಿಕಾಸ ಸುರಳಕರ್‌ ಅವರನ್ನು ವರ್ಗ ಮಾಡುವಂತೆ ಒತ್ತಡ ಹೆಚ್ಚಾಗಿತ್ತು. ಒಂದೆರಡು ದಿನಗಳಲ್ಲಿ ವರ್ಗ ಆಗಬಹುದು ಎನ್ನುವ ಚರ್ಚೆಗಳೂ ನಡೆದಿದ್ದವು. ಇದರ ನಡುವೆ ಕರ್ನಾಟಕ ಸರ್ಕಾರ ಏಳು ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗ ಮಾಡಿದ್ದು ಇದರಲ್ಲಿ ವಿಕಾಸ್‌ ಅವರೂ ಸೇರಿದ್ದಾರೆ. ಹುದ್ದೆ ನಿರೀಕ್ಷೆಯಲ್ಲಿದ್ದ ಲತಾಕುಮಾರಿ ಅವರನ್ನು ಕೆಪಿಎಸ್‌ಸಿ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ.

ಈ ನಡುವೆ ವಿಕಾಸ ಸುರಳಕರ್‌ ಅವರ ವರ್ಗಾವಣೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತವಾಗಿದೆ. ಕೆಪಿಎಸ್‌ಸಿಯಲ್ಲಿ ಸುಧಾರಣೆ ನಂತರ ಎಲ್ಲಾ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಪ್ರಯತ್ನಿಸುತ್ತಿದ್ದ ಸುರಳಕರ್‌ ಅವರನ್ನು ಬೇಗನೇ ವರ್ಗ ಮಾಡಿದ್ದು ಸರಿಯಲ್ಲಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಧಾರಣೆಗೆ ಹಲವು ಕ್ರಮ

2012ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ವಿಕಾಸ ಸುರಳಕರ್‌ ಅವರನ್ನು ಕಳೆದ ವರ್ಷದ ಜುಲೈನಲ್ಲಿ ಕೆಪಿಎಸ್‌ಸಿ ಕಾರ್ಯದರ್ಶಿ ಹುದ್ದೆಗೆ ವರ್ಗ ಮಾಡಲಾಗಿತ್ತು. ಇಲ್ಲಿಗೆ ಬಂದ ನಂತರ ವಿಕಾಸ್‌ ಅವರು ಹಲವಾರು ಹುದ್ದೆಗಳಿಗೆ ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದ್ದರು.

ಪರೀಕ್ಷಗಳು ಮುಗಿದಿದ್ದರೂ ಫಲಿತಾಂಶ ಪ್ರಕಟಿಸದ ಆರೋಪಗಳು ಕೇಳಿ ಬಂದಿದ್ದವು. ಆನಂತರ ಕೆಲವು ಹುದ್ದೆಗಳಿಗೆ ಪರೀಕ್ಷೆಯನ್ನೇ ಮಾಡದೇ ವಿಳಂಬ ಮಾಡಲಾಗಿತ್ತು. ಅದನ್ನೂ ವ್ಯವಸ್ಥಿತವಾಗಿ ಆಯೋಜಿಸಿದ್ದರು.

ಇದರೊಟ್ಟಿಗೆ ಕೆಪಿಎಸ್‌ಸಿಯಲ್ಲಿ ಹಲವಾರು ಸುಧಾರಣೆಗೂ ಮುಂದಾಗಿದ್ದರು. ಅದರಲ್ಲೂ ಮುಖ್ಯವಾಗಿ ಹುದ್ದೆಗಳ ನೇಮಕಕ್ಕೆ ನಡೆಯುವ ಪರೀಕ್ಷೆಗಳು, ಆಯ್ಕೆ ಪ್ರಕ್ರಿಯೆನ್ನು ಪಾರದರ್ಶಕಗೊಳಿಸಲು ಪ್ರಯತ್ನಿಸಿದ್ದರು.

ಈ ವಿಚಾರವಾಗಿ ಹಾಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಹಾಗೂ ವಿಕಾಸಸುರಳಕರ್‌ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಅವರು ವಿಕಾಸ ಸುರಳಕರ್‌ ಅವರ ಕೆಲವು ನಡೆಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಇದರ ನಡುವೆಯೇ ವಿಕಾಸ್‌ ವರ್ಗಾವಣೆಯ ಮಾತುಗಳು ಕೆಪಿಎಸ್‌ಸಿ ಅಂಗಳದಲ್ಲಿ ಕೇಳಿ ಬಂದಿದ್ದವು. ಈಗ ಅವರನ್ನು ವರ್ಗ ಮಾಡಲಾಗಿದ್ದು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ( BBMP) ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರನ್ನಾಗಿ ನೇಮಿಸಲಾಗಿದೆ.

ನೆಟ್ಟಿಗರ ಆಕ್ರೋಶ

ವಿಕಾಸ್‌ ಅವರ ವರ್ಗಾವಣೆಗೆ ವಿರೋಧವೂ ವ್ಯಕ್ತವಾಗಿದೆ. ಕರ್ನಾಟಕ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳ ಒಕ್ಕೂಟವೂ ಬೇಸರ ವ್ಯಕ್ತಪಡಿಸಿದೆ. ನಮ್ಮ ಗೌರವಾನ್ವಿತ ಕೆಪಿಎಸ್ ಸಿ ಕಾರ್ಯದರ್ಶಿ ಅವರನ್ನು ಸರ್ಕಾರ ವರ್ಗ ಮಾಡಿದೆ. ಅವರು ತಮ್ಮ ಅವಧಿಯಲ್ಲಿ ಹಲವಾರು ಆಕಾಂಕ್ಷಿಗಳ ಹಿತಕ್ಕಾಗಿ ಕೆಲಸ ಮಾಡಿದ್ದಾರೆ. ಕೆಪಿಎಸ್‌ಸಿಯಲ್ಲಿ ಸಾಕಷ್ಟು ಸುಧಾರಣೆ ತರಲು ಪ್ರಯತ್ನಿಸಿದ್ದಾರೆ. ನಿಮ್ಮ ಸೇವೆಯನ್ನು ತಪ್ಪಿಸಿಕೊಳ್ಳುತ್ತೇವೆ ಎಂದು ಒಕ್ಕೂಟ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಕೂಡ ವರ್ಗಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಕೆಪಿಎಸ್‌ಸಿ ಹುದ್ದೆ ಆಕಾಂಕ್ಷಿಗಳಿಗೆ ಶಾಕ್‌ ಸುದ್ದಿ. ಸುರಳಕರ್‌ ಅವರು ಹಲವಾರು ವಿನೂತನ ಕ್ರಮಗಳನ್ನು ಅನುಸರಿಸಿ ಕೆಪಿಎಸ್ ಸಿ ಪರೀಕ್ಷೆಗಳನ್ನು ಪಾರದರ್ಶಕಗೊಳಿಸುವ ಪ್ರಯತ್ನ ಮಾಡಿದ್ದರು. ಇದು ಒಳ್ಳೆಯ ಅಧಿಕಾರಿಗಳು ಹಾಗೂ ಉತ್ತಮವಾಗಿ ಕೆಲಸ ಮಾಡುವುದನ್ನು ಈ ಸರ್ಕಾರ ಗುರುತಿಸುವ ಪರಿ ಎಂದು ಟೀಕಿಸಿದ್ದಾರೆ..

ವಿಕಾಸ್ ಸರ್ ಬಹಳ ದಕ್ಷ ಪ್ರಾಮಾಣಿಕ ಅಧಿಕಾರಿ ತಕ್ಷಣ ಇದನ್ನು ವರ್ಗಾವಣೆ ಹಿಂದೆ ಪಡದ್ರೆ ಒಳ್ಳೇದು ಎಂದು ಬಸವರಾಜ ಶಿಂತ್ರಿ ಪ್ರತಿಕ್ರಿಯಿಸಿದರೆ, ಕೆಪಿಎಸ್‌ಸಿಗೆ ಅನೇಕ ಸುಧಾರಣೆಗಳನ್ನು ತಂದಿದ್ದ ದಕ್ಷ ಅಧಿಕಾರಿಯ ವರ್ಗಾವಣೆ ಮಾಡುವುದರ ಮೂಲಕ ಸರ್ಕಾರ ಯಾವುದರ ಪರವಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ ಎಂದು ಕಿರಣ್‌ ತಿಳಿಸಿದ್ದಾರೆ.

ಭ್ರಷ್ಟಾಚಾರವನ್ನು ಸದೃಢವಾಗಿ ನಿಯಂತ್ರಿಸಿ ಬಡವರ ಮಕ್ಕಳು ಸರ್ಕಾರಿ ಹುದ್ದೆಗಳನ್ನು ಪಡೆಯುವಂತೆ ಮಾಡಿದ ವಿಕಾಸ ಸುರಳಕರ್‌ ಅವರನ್ನು ಅದೇ ಹುದ್ದೆಗೆ ಮರು ನೇಮಿಸಿ ಎಂದು ಗಣೇಶ್‌ ಮಾನೆ ಒತ್ತಾಯಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ