ಬಿಎಂಟಿಸಿ ಕಂಡಕ್ಟರ್ 5 ರೂ ಚೇಂಜ್ ಕೊಟ್ಟಿಲ್ಲ; ವೈರಲ್ ಆಯಿತು ಟ್ವೀಟ್, ಯುಪಿಐ ಪರಿಹಾರ ಯಾಕಲ್ಲ ಎಂಬ ಪ್ರಶ್ನೆ
Apr 17, 2024 09:25 AM IST
ಬಿಎಂಟಿಸಿ ಕಂಡಕ್ಟರ್ 5 ರೂ ಚೇಂಜ್ ಕೊಟ್ಟಿಲ್ಲ ಎಂಬ ಟ್ವೀಟ್ ವೈರಲ್ ಆಯಿತು. ಬಿಎಂಟಿಸಿ ಬಸ್ (ಎಡಚಿತ್ರ), ಬಸ್ ಟಿಕೆಟ್ (ಬಲ ಚಿತ್ರ)
ಬೆಂಗಳೂರು ಮಹಾನಗರದಲ್ಲಿ ಬಿಎಂಟಿಸಿ ಬಸ್ ಪ್ರಯಾಣ ಎಂಬುದು ಜನಸಾಮಾನ್ಯರ ಪಾಲಿಗೆ ದೊಡ್ಡ ಅನುಭವಗಳ ಆಗರ. ನಿತ್ಯವೂ ಹತ್ತಾರು ಅನುಭವಗಳು. ಕಂಡಕ್ಟರ್‌ಗಳು ಚಿಲ್ಲರೆ ಕೊಡದೇ ಇರುವುದೂ ಅವುಗಳಲ್ಲಿ ಒಂದು. ಇದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂತು. ಬಿಎಂಟಿಸಿ ಕಂಡಕ್ಟರ್ 5 ರೂ ಚೇಂಜ್ ಕೊಟ್ಟಿಲ್ಲ ಎಂಬ ಟ್ವೀಟ್ ವೈರಲ್ ಆಯಿತು.
ಬೆಂಗಳೂರು: ಬಸ್ ಪ್ರಯಾಣದಲ್ಲಿ ಚಿಲ್ಲರೆ ಕೈಯಲ್ಲಿಟ್ಟುಕೊಳ್ಳಬೇಕಾದ್ದು ಮುಖ್ಯ. ಬಾಕಿ ಚಿಲ್ಲರೆ ಚೀಟಿ ಹಿಂದೆ ಬರೆದುಕೊಡುವ ನಿರ್ವಾಹಕರಿಂದ ಅದನ್ನು ಪಡೆಯುವುದನ್ನು ಮರೆಯುವುದು ಒಂದುಕಡೆಯಾದರೆ, ಅಂತಹ ನಿರ್ವಾಹಕರು ಚಿಲ್ಲರೆ ಕೊಡಲು ಮರೆಯುವುದು ಇನ್ನೊಂದುಕಡೆ. ಬಹುತೇಕ ಇದು ಬಸ್ ಪ್ರಯಾಣದ ನಿತ್ಯ ಅನುಭವ. ಒಬ್ಬರಲ್ಲದಿದ್ದರೆ ಒಬ್ಬರಿಗೆ ಈ ಅನುಭವ ಆಗಿಯೇ ಆಗುತ್ತದೆ.
ಬೆಂಗಳೂರು ಅಂದರೆ ಕೇಳಬೇಕಾ. ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್‌ಗಳಲ್ಲಿ ಈ ರೀತಿ ಅನುಭವ ಅನೇಕ ಪ್ರಯಾಣಿಕರಿಗೆ ಆಗಿಯೇ ಆಗಿರುತ್ತದೆ. ಕಂಡಕ್ಟರ್ ಜೊತೆಗೆ ಜಗಳವೂ ನಡೆದಿರುತ್ತದೆ. ನಡೆಯುತ್ತಿರುತ್ತದೆ. ಆದರೆ ಇಲ್ಲೊಬ್ಬರು ತಮ್ಮ ಅನುಭವವನ್ನು ಎಕ್ಸ್ ನಲ್ಲಿ ಶೇರ್ ಮಾಡಿದ್ದು, ಬಿಎಂಟಿಸಿಯನ್ನು ಟ್ಯಾಗ್ ಮಾಡಿ “ನಾನು ಪ್ರತಿ ಸಲವೂ ಈ ರೀತಿ ದುಡ್ಡು ಕಳೆದುಕೊಳ್ಳಬೇಕಾ?” ಎಂದು ಪ್ರಶ್ನಿಸಿದ್ದಾರೆ.
ಹದಿನೈದು ರೂಪಾಯಿ ಟಿಕೆಟ್‌ಗೆ 20 ರೂಪಾಯಿ ಕೊಟ್ಟಾಗ, ಚಿಲ್ಲರೆ ಇಲ್ಲ ಎಂದು ಐದು ರೂಪಾಯಿ ಕಳೆದುಕೊಂಡ ಪ್ರಸಂಗವನ್ನು ಅವರು ಬಿಎಂಟಿಸಿ ಜೊತೆಗೆ ಹಂಚಿಕೊಂಡಿದ್ದಾರೆ.
ಚಿಲ್ಲರೆ ಇಲ್ಲ ಎಂದು ಪ್ರತಿ ಸಲವೂ ದುಡ್ಡು ಕಳೆದು ಕೊಳ್ಳಬೇಕಾ- ಬಿಎಂಟಿಸಿಗೆ ಪ್ರಯಾಣಿಕರ ಪ್ರಶ್ನೆ
ನಿತಿನ್ ಕೃಷ್ಣ ಎಂಬುವವರು ತಮ್ಮ ಅನುಭವವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ಚಿಲ್ಲರೆ ಬಾಕಿ 5 ರೂಪಾಯಿ ಬರಬೇಕಾಗಿತ್ತು. ಒಂದು ರೂಪಾಯಿಯನ್ನೂ ಕಂಡಕ್ಟರ್ ವಾಪಸ್ ಕೊಟ್ಟಿಲ್ಲ. ಇದಕ್ಕೆ ಏನಾದರೂ ಪರಿಹಾರ ಇದೆಯಾ” ಎನ್ನುತ್ತ ಬಸ್ ಟಿಕೆಟ್‌ನ ಚಿತ್ರವನ್ನೂ ಶೇರ್ ಮಾಡಿದ್ದಾರೆ.
ತಮ್ಮ ಟ್ವೀಟ್ ಮುಂದುವರಿಸಿದ ನಿತಿನ್ ಕೃಷ್ಣ ಅವರು ಬಿಎಂಟಿಸಿಯನ್ನು ಉದ್ದೇಶಿಸಿ, “ಒಂದು ಟ್ರಿಪ್ ಶುರುವಾಗುವ ಮೊದಲೇ ಕಂಡಕ್ಟರ್ ಬಳಿ ಸಾಕಷ್ಟು ಚಿಲ್ಲರೆ ಇರುವುದನ್ನು ಖಾತರಿಪಡಿಸಬೇಕು. ಇಲ್ಲದೇ ಇದ್ದರೆ ಅದನ್ನು ಬಿಎಂಟಿಸಿ ಪೂರೈಸಬೇಕು. ಅದಿಲ್ಲದೇ ಹೋದರೆ ಆನ್‌ಲೈನ್ ಪಾವತಿಯಂತಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಈ ರೀತಿ ಪ್ರತಿ ಸಲವೂ ನನ್ನ ಹಣವನ್ನು ಕಳೆದುಕೊಳ್ಳಬೇಕಾ? ಕಂಡಕ್ಟರ್ ಈ ಮೂಲಕ ಹಣ ಗಳಿಸಬೇಕಾ?” ಎಂದು ಪ್ರಶ್ನಿಸಿದ್ದಾರೆ.
ಅವರ ಈ ಪೋಸ್ಟ್ ಅನೇಕರ ಗಮನಸೆಳೆದಿದ್ದು, ಬಿಎಂಟಿಸಿ ಸಾಮಾನ್ಯ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ದೂರು ದಾಖಲಾಗಿದ್ದು, ಡಾಕೆಟ್ ಸಂಖ್ಯೆ ಬಿಎಂಟಿಸಿ 2024003258 ಎಂದು ಉತ್ತರಿಸಿದೆ.
ನಿತಿನ್ ಕೃಷ್ಣಾ ಅವರ ಬಿಎಂಟಿಸಿ ಟಿಕೆಟ್ ಕುರಿತ ಟ್ವೀಟ್ ಹೀಗಿದೆ
ನಿತಿನ್ ಕೃಷ್ಣ ಅವರು ಏಪ್ರಿಲ್ 14ರಂದು ಪೋಸ್ಟ್ ಮಾಡಿದ್ದು ಅದು ವೈರಲ್ ಆಗಿದೆ. 72,000 ಕ್ಕೂ ಹೆಚ್ಚು ವೀಕ್ಷಣೆ 300 ಲೈಕ್‌ಗಳನ್ನು ಸಂಗ್ರಹಿಸಿದೆ. ಈ ಪೋಸ್ಟ್‌ಗೆ ವಿವಿಧ ಕಾಮೆಂಟ್‌ಗಳು ವ್ಯಕ್ತವಾಗಿವೆ.
ಬಿಎಂಟಿಸಿ ಚಿಲ್ಲರೆ ಸಮಸ್ಯೆಗೆ ಎಕ್ಸ್ ಬಳಕೆದಾರರ ಪರಿಹಾರ
"ಸಾರ್ವಜನಿಕ ಸಾರಿಗೆಯಲ್ಲಿ ತೊಂದರೆ-ಮುಕ್ತ ಪ್ರಯಾಣದ ಅನುಭವಕ್ಕಾಗಿ ನಿಖರ ಬದಲಾವಣೆಗೆ ಒಗ್ಗುವುದು ಒಂದೇ ಪರಿಹಾರವಾಗಿದೆ. ಇದರಿಂದ ಆಯಾ ಬಸ್ ಕಂಡಕ್ಟರ್ ಮತ್ತು ಸಾರ್ವಜನಿಕರಿಗೆ ಅನಾನುಕೂಲವೂ ಆಗುವುದಿಲ್ಲ! ನೀವು ಬಸ್ ಹತ್ತುವ ಮೊದಲು ಬಸ್ ದರವನ್ನು ತಿಳಿಯಲು ನೀವು Namma BMTC ಅಥವಾ Tummoc ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು” ಎಂದು ಒಬ್ಬ ಎಕ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
“ನನ್ನಲ್ಲಿ ಇದ್ದ ಚಿಲ್ಲರೆಯನ್ನು ಹಿಂದಿನ ಬಸ್‌ನ ಕಂಡಕ್ಟರ್‌ಗೆ ನೀಡಿದ್ದೇನೆ. ನಾನು ಎಷ್ಟು ಚಿಲ್ಲರೆ ಕೊಂಡೊಯ್ಯಬಹುದು? ಈ ಕಂಡಕ್ಟರ್‌ಗಳು 1 ಅಥವಾ 2 ರೂಪಾಯಿಯನ್ನೂ ಇಟ್ಟುಕೊಳ್ಳದೇ ಇಡೀ ದಿನ ಏನು ಮಾಡ್ತಾರೆ?" ಎಂದು ನಿತಿನ್ ಮರುಪ್ರಶ್ನಿಸಿದ್ದಾರೆ.
ನಾನು ಇತ್ತೀಚೆಗೆ ರಿಂಗ್ ರೋಡ್‌ನಲ್ಲಿ ಅನೇಕ ಸಲ ಹೋಗಿದ್ದೇನೆ. ಆ ರಸ್ತೆಯ ಬಸ್‌ಗಳಲ್ಲಿ ಯುಪಿಯ ಪಾವತಿಗೆ ಅವಕಾಶ ಇತ್ತು. ನೀವು ಯುಪಿಐ ಪಾವತಿ ಕೇಳಿದ್ದೀರಾ ಅಂತ ಗೊತ್ತಿಲ್ಲ. ನಿಮ್ಮ ಸಮಸ್ಯೆಗೆ ಯುಪಿಐ ಕಾಯಂ ಪರಿಹಾರ ಎಂದು ಮತ್ತೊಬ್ಬರು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಪಾವತಿಸಿ, ಸೋಷಿಯಲ್ ಮೀಡಿಯಾದಲ್ಲಿ ಕೂಗುವುದನ್ನು ನಿಲ್ಲಿಸಿ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ಸಾರ್ವಜನಿಕ ಸಾರಿಗೆಗಳಲ್ಲಿ ಇದು ನಿತ್ಯದ ಜಾಯಮಾನ. ನೀವು ಚಿಲ್ಲರೆ ಕೊಡಿ ಎಂದು ಬೊಬ್ಬಿರಿದು ಕೇಳದ ಹೊರತು ಅವರು ಚಿಲ್ಲರೆ ಕೊಡರು. ಅದು ತಪ್ಪೇನೂ ಅಲ್ಲ ಬಿಡಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಎಸಿ ಇಲ್ಲದ ಬಸ್‌ಗಳಲ್ಲಿ ಕೂಡ ಯುಪಿಐ ಪಾವತಿ ಶುರುಮಾಡಲು ಬಿಎಂಟಿಸಿಗೆ ಅಡ್ಡಿಯಾಗಿರುವುದೇನು, ಪ್ರಯಾಣಿಕರಷ್ಟೇ ಅಲ್ಲ, ಕಂಡಕ್ಟರ್‌ಗಳೂ ತೊಂದರೆಗೆ ಒಳಗಾಗಿದ್ದಾರೆ. ಇದು ಬಿಎಂಟಿಸಿ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯ ಫಲ ಎಂದು ಐದನೆಯವರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.