logo
ಕನ್ನಡ ಸುದ್ದಿ  /  ಕರ್ನಾಟಕ  /  ಪೋಕ್ಸೋ ಕೇಸ್‌; ಬಿಎಸ್ ಯಡಿಯೂರಪ್ಪ ಬಂಧನಕ್ಕೆ ತಡೆ, ಸೋಮವಾರ ವಿಚಾರಣೆಗೆ ಹಾಜರಾಗಲು ಸೂಚಿಸಿದ ಕೋರ್ಟ್

ಪೋಕ್ಸೋ ಕೇಸ್‌; ಬಿಎಸ್ ಯಡಿಯೂರಪ್ಪ ಬಂಧನಕ್ಕೆ ತಡೆ, ಸೋಮವಾರ ವಿಚಾರಣೆಗೆ ಹಾಜರಾಗಲು ಸೂಚಿಸಿದ ಕೋರ್ಟ್

Umesh Kumar S HT Kannada

Jun 14, 2024 06:09 PM IST

google News

ಪೋಕ್ಸೋ ಕೇಸ್‌; ಯಾವುದೇ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧನ ಸಾಧ್ಯತೆ, ಇಂದು ಜಾಮೀನು ಅರ್ಜಿ ವಿಚಾರಣೆ. (ಸಾಂಕೇತಿಕ ಚಿತ್ರ)

  • ಪೋಕ್ಸೋ ಕೇಸ್‌ನಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್‌ ತಾತ್ಕಾಲಿಕ ರಿಲೀಫ್ ಕೊಟ್ಟಿದೆ. ಬಿಎಸ್ ಯಡಿಯೂರಪ್ಪ ಬಂಧನಕ್ಕೆ ತಡೆ ವಿಧಿಸಿರುವ ಕೋರ್ಟ್‌, ಸೋಮವಾರ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಪೋಕ್ಸೋ ಕೇಸ್‌; ಯಾವುದೇ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧನ ಸಾಧ್ಯತೆ, ಇಂದು ಜಾಮೀನು ಅರ್ಜಿ ವಿಚಾರಣೆ. (ಸಾಂಕೇತಿಕ ಚಿತ್ರ)
ಪೋಕ್ಸೋ ಕೇಸ್‌; ಯಾವುದೇ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಧನ ಸಾಧ್ಯತೆ, ಇಂದು ಜಾಮೀನು ಅರ್ಜಿ ವಿಚಾರಣೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಪೋಕ್ಸೋ ಕೇಸ್‌ನಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಿಚಾರಣೆಗೆ ಎತ್ತಿಕೊಂಡಿದ್ದು, ಅವರನ್ನು ಬಂಧಿಸದಂತೆ ತಾತ್ಕಾಲಿಕ ತಡೆ ನೀಡಿದೆ. ಅಲ್ಲದೆ, ಸೋಮವಾರ (ಜೂನ್ 17) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಯಡಿಯೂರಪ್ಪ ಅವರು ವಿಚಾರಣೆ ನಡೆಸಲು ಬಂಧನದ ವಾರೆಂಟ್ ಬೇಕು ಎಂದು ಪೊಲೀಸರು ಸಲ್ಲಿಸಿದ್ದ ಅರ್ಜಿ ಮನ್ನಿಸಿ ಕೋರ್ಟ್‌ ವಾರೆಂಟ್ ಜಾರಿಗೊಳಿಸಿತ್ತು. ಈ ನಡುವೆ, ಈ ಪೋಕ್ಸೋ ಕೇಸ್ ರಾಜಕೀಯ ದ್ವೇಷದ್ದು ಎಂಬ ಪ್ರತಿಪಾದನೆಯೊಂದಿಗೆ ಸದರಿ ಕೇಸ್ ರದ್ದುಗೊಳಿಸಬೇಕು ಎಂದು ಕೋರಿ ಬಿಎಸ್ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆಯನ್ನು ಇಂದು (ಜೂನ್ 14) ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣ ಎಸ್​ ದೀಕ್ಷಿತ್​​​​​ ಅವರ ಏಕಸದಸ್ಯ ಪೀಠ, ಬಂಧನಕ್ಕೆ ಕಾರಣ ಕೇಳಿತು. ಯಾವಾಗ ಕೇಸ್ ದಾಖಲಾಗಿದ್ದು ಎಂಬ ಪ್ರಶ್ನೆಯನ್ನೂ ಕೇಳಿತ್ತು. ಇದಕ್ಕೆ, ಮಾರ್ಚ್ 14 ರಂದು ಎಫ್‌ಐಆರ್ ಆಗಿದ್ದು, ಸಿಆರ್​ಪಿಸಿ 41ಎ ಅಡಿ ಮಾ.28 ರಂದು ಪೊಲೀಸರು ನೋಟಿಸ್ ನೀಡಿದ್ದರು. ಅದರಂತೆ ಏ.12ರಂದು ಬಿಎಸ್​ವೈ ವಿಚಾರಣೆಗೆ ಹಾಜರಾಗಿದ್ದರು. 2ನೇ ನೋಟಿಸ್​ಗೆ ಅವರು ಹಾಜರಾಗಿಲ್ಲ. ಜೂ.17ರಂದು ಹಾಜರಾಗುವುದಾಗಿ ಬಿಎಸ್​ವೈ ಉತ್ತರಿಸಿರುವುದಾಗಿ ಬಿಎಸ್ ವೈ ಪರ ವಕೀಲ ಸಿ ವಿ ನಾಗೇಶ್‌ ತಿಳಿಸಿದರು.

ಯಡಿಯೂರಪ್ಪ ಅವರಿಗೆ ಬಂಧನದ ವಿನಾಯಿತಿ ನೀಡಲು ಕೋರ್ಟ್ ಪರಿಗಣಿಸಿದ ಅಂಶಗಳಿವು

1) ಬಿಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ

2) ಸಹಜವಾಗಿಯೇ ವಯೋಸಹಜ ಸಮಸ್ಯೆಗಳಿರುತ್ತವೆ

3) ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಳ್ಳುವ ಸಾಧ್ಯತೆ ಇಲ್ಲ

ಈ ಮೂರು ಅಂಶಗಳನ್ನು ಪರಿಗಣಿಸಿದ ಕೋರ್ಟ್‌, ಬಿಎಸ್ ಯಡಿಯೂರಪ್ಪ ಅವರ ಬಂಧನಕ್ಕೆ ತಡೆ ನೀಡಿದರು. ಅಲ್ಲದೆ, ತಾವೇ ತಿಳಿಸಿದ ಪ್ರಕಾರ ಜೂನ್ 17ಕ್ಕೆ ವಿಚಾರಣೆಗೆ ಹಾಜರಾಗಲು ಯಡಿಯೂರಪ್ಪ ಅವರಿಗೆ ಸೂಚಿಸಿತು.

ಯಡಿಯೂರಪ್ಪ ಬಂಧನಕ್ಕೆ ಪೊಲೀಸರು ನೀಡಿದ ಕಾರಣ

1) ಪ್ರಕರಣಕ್ಕೆ ಸಂಬಂಧಿಸಿ ಸುಟ್ಟ ಮೊಬೈಲ್ ಚಿಪ್​ನಲ್ಲಿದ್ದ ಡಾಟಾ ತೆಗೆಯಲು ಗುಜರಾತಿನ ಎಫ್‌ಎಸ್‌ಎಲ್‌ಗೆ ಕಳುಹಿಸಲಾಯಿತು. ಮೇ 13ರಂದು ಎಫ್ಎಸ್ಎಲ್ ವರದಿ ಬಂದಿದೆ.

2) ನಂತರ ಧ್ವನಿ ಪರೀಕ್ಷೆಗೆ ಬೆಂಗಳೂರು ಎಫ್ಎಸ್ಎಲ್​ಗೆ ಕಳುಹಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಬೇಕಾಗಿದೆ.

3) ಜೂನ್ 12ರಂದು ಹಾಜರಾಗುವಂತೆ ಬಿಎಸ್​ವೈಗೆ ನೋಟಿಸ್ ನೀಡಲಾಗಿತ್ತು. ಮೊಬೈಲ್‌ನಲ್ಲಿದ್ದ ವಿಡಿಯೋ, ಧ್ವನಿ ಪರೀಕ್ಷೆ ನಂತರ ನೋಟಿಸ್ ನೀಡಲಾಯಿತು. ಹಾಜರಾಗದ ಕಾರಣಕ್ಕೆ ಬಂಧನಕ್ಕೆ ವಾರಂಟ್

ಈ ನಡುವೆ, ಬಿಎಸ್‌ವೈ ಅವರ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಅಲ್ಲಿನ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಯಾಕೆ ಇನ್ನೂ ವಶಪಡಿಸಿಕೊಂಡಿಲ್ಲ. ತನಿಖೆ ಹೇಗೆ ನಡೆಸಬೇಕು ಎಂಬುದನ್ನು ತನಿಖಾಧಿಕಾರಿ ನಡೆಸಬೇಕು ಎಂದು ಪೊಲೀಸರಿಗೆ ಹೈಕೋರ್ಟ್‌ ನ್ಯಾಯಪೀಠ ಬಿಸಿಮುಟ್ಟಿಸಿದೆ.

ಏನಿದು ಪ್ರಕರಣ?: ಯಡಿಯೂರಪ್ಪ ಅವರು ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 53 ವರ್ಷದ ಮಹಿಳೆಯೊಬ್ಬರು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಮಾರ್ಚ್‌ 14 ರಂದು ದೂರು ಸಲ್ಲಿಸಿದ್ದರು. ಫೆಬ್ರವರಿ 2 ರಂದು ಈ ಘಟನೆ ನಡೆದಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಇದರಂತೆ, ಪೋಕ್ಸೋ ಪ್ರಕಾರ ಎಫ್‌ಐಆರ್ ದಾಖಲಾಗಿತ್ತು.

ಕಷ್ಟ ಹೇಳಿಕೊಂಡಾಗ ಅವರು ನನ್ನ ಮಗಳನ್ನು ಮತ್ತೊಂದು ಕೊಠಡಿಗೆ ಕರೆದೊಯ್ದರು. ಯಡಿಯೂರಪ್ಪ ಅವರು ನನ್ನ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದರು. ನನ್ನ ಮಗಳು ಭಯಭೀತಳಾಗಿ ಹೊರಬರಲು ಪ್ರಯತಿಸಿದರೂ ಕೊಠಡಿಯ ಲಾಕ್‌ ಮಾಡಿದ್ದರಿಂದ ಸಾಧ್ಯವಾಗಲಿಲ್ಲ. ನಂತರ ಯಡುಯೂರಪ್ಪ ಅವರನ್ನು ಪ್ರಶ್ನಿಸಿದಾಗ ಅತ್ಯಾಚಾರ ಆಗಿದೆಯೇ ಇಲ್ಲವೇ ಎಂದು ಪರೀಕ್ಷಿಸಲು ಹೀಗೆ ಮಾಡಿದ್ದೇನೆ. ಈ ವಿಷಯವನ್ನು ಯಾರಲ್ಲಿಯೂ ಹೇಳಬಾರದು ಎಂದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು. ಅಲ್ಲದೆ ಯಡಿಯೂರಪ್ಪ ಅವರು 2 ಲಕ್ಷ ರೂ.ನಗದು ನೀಡಿದ್ದಾರೆ ಎಂದು ಹೇಳಲಾದ ದೃಶ್ಯದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದ ಸತ್ಯಾಸತ್ಯವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ದೃಢೀಕರಿಸುತ್ತಿಲ್ಲ. ಕೇವಲ ಮಾಹಿತಿಗಾಗಿ ಇಲ್ಲಿ ಒದಗಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ