Power Tariff: ವಿದ್ಯುತ್ ದರ ಏರಿಕೆ ವಿಚಾರ ಮರುಪರಿಶೀಲನೆ; ಇಳಿಕೆ ಅಗತ್ಯವಾದರೆ ಇಳಿಸಲು ಕ್ರಮ ಎಂದ ಇಂಧನ ಸಚಿವ ಕೆ.ಜೆ.ಜಾರ್ಜ್
Jun 12, 2023 09:40 PM IST
ಇಂಧನ ಸಚಿವ ಕೆ.ಜೆ.ಜಾರ್ಜ್
Power Tariff: ವಿದ್ಯುತ್ ದರ ಏರಿಕೆ ಏಪ್ರಿಲ್‌ನಿಂದ ಅನ್ವಯವಾಗುವಂತೆ ಜಾರಿಯಾಗಿದೆ. ಹಿಂದಿನ ಸರ್ಕಾರ ಕೆಆರ್‌ಇಸಿಗೆ ನೀಡಿದ ಶಿಫಾರಸಿನ ಪ್ರಕಾರ ಇದು ಜಾರಿಯಾಗಿದೆ. ದರ ಏರಿಕೆ ಅತಿ ಎನಿಸಿದರೆ, ಮರುಪರಿಶೀಲನೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Govt) ದ ಗೃಹಜ್ಯೋತಿ (Gruha Jyoti Yojane) ಜಾರಿಯಾಗುವುದರಿಂದ ಯಾರಿಗೂ ಹೆಚ್ಚು ಹೊರೆಯಾಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ (Power Minister K J George)ಹೇಳಿದರು.
ಅವರು ಸೋಮವಾರ (ಜೂ.12) ವಿಧಾನಸೌಧದಲ್ಲಿರುವ ಕಚೇರಿಯಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ಮುಗಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ ಈ ವಿಚಾರ ತಿಳಿಸಿದರು.
ವಿದ್ಯುತ್ ದರ ಏರಿಕೆ ಮಾಡುವ ತೀರ್ಮಾನ ಕಾಂಗ್ರೆಸ್ ಸರ್ಕಾರದ್ದಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ್ದು. ಆದ್ದರಿಂದ ಈಗ ದರ ಏರಿಕೆ ಮಾಡಿರುವ ಕೆಇಆರ್‌ಸಿ ಕ್ರಮವನ್ನು ನಾವು ಜಾರಿ ಮಾಡಲೇಬೇಕಾಗುತ್ತದೆ. ದರ ಏರಿಕೆ ಹೊರೆಯಾಗಿದೆ ಎಂಬ ವರದಿಗಳನ್ನು ಗಮನಿಸಿದ್ದೇನೆ ಎಂದು ಸಚಿವರು ಹೇಳಿದರು.
ದರ ಏರಿಕೆ ಏಪ್ರಿಲ್‌ನಿಂದ ಜಾರಿಯಾಗಿರುವುದರಿಂದ ಮೇ ತಿಂಗಳ ಬಿಲ್‌ನಲ್ಲಿ ಹೆಚ್ಚು ಬಂದಿದೆ. ಜುಲೈನಿಂದ ಗೃಹಜ್ಯೋತಿ ಜಾರಿಯಾಗುವುದರಿಂದ ಯಾರಿಗೂ ಹೆಚ್ಚು ಹೊರೆಯಾಗಲಾರದು ಎಂದು ಅವರು ವಿವರಿಸಿದರು.
ವಿದ್ಯುತ್ ದರ ಏರಿಕೆ ಎಷ್ಟು?
ರಾಜ್ಯದಲ್ಲಿ ವಿದ್ಯುತ್ ದರವನ್ನು 70 ಪೈಸೆಯಷ್ಟು ಏರಿಸಿರುವ ಕೆಆರ್‌ಇಸಿ, ಸ್ಲ್ಯಾಬ್‌ಗಳ ಮೇಲಿನ ದರದಲ್ಲೂ ಬದಲಾವಣೆ ಮಾಡಿದೆ. ಇದರಂತೆ, 100 ಯೂನಿಟ್ ಬಳಕೆ ನಂತರ 7 ರೂಪಾಯಿ ದರ ವಿಧಿಸುತ್ತಿದೆ. ಮೊದಲೆಲ್ಲಾ 200 ಯೂನಿಟ್ ದಾಟಿದ ಮೇಲೆ 8.20 ರೂಪಾಯಿ ದರ ವಿಧಿಸಲಾಗುತ್ತಿತ್ತು.
ಕೆಇಆರ್‌ಸಿಯ ದರ ಏರಿಕೆ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಈಗ ಚಾಲ್ತಿಗೆ ಬಂದಿರುವ ದರ ಏರಿಕೆಯಲ್ಲಿ ತಪ್ಪಾಗಿದೆ ಎಂದು ಕಂಡು ಬಂದರೆ ಕೆಇಆರ್‌ಸಿಗೆ ಪುನರ್ ಪರಿಶೀಲನೆ ಬಗ್ಗೆ ಆರ್ಜಿ ಸಲ್ಲಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸದ್ಯ ವಿದ್ಯುತ್ ಕೊರತೆ ಇಲ್ಲ
ಪವರ್ ಕಟ್ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್, ರಾಜ್ಯದ ಯಾವುದೇ ಭಾಗದಲ್ಲಿ ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗುವ ವಿಶ್ವಾಸವಿದೆ. ಆದ್ದರಿಂದ ವಿದ್ಯುತ್ ಸಮಸ್ಯೆ ಉದ್ಭವಿಸದು ಎಂಬ ಆಶಾಭಾವನೆ ತಮ್ಮದು ಎಂದು ಹೇಳಿದರು.
ವರ್ಗಾವಣೆಗೆ ಹಣ ತಗೊಂಡರೆ ದೂರು ಕೊಡಿ
ಇಂಧನ ಇಲಾಖೆಯಲ್ಲಿ ನೌಕರರ ವರ್ಗಾವಣೆಗೆ ಯಾವುದೇ ಹಣ ನೀಡುವ ಅವಶ್ಯಕತೆ ಇಲ್ಲ. ನನ್ನ ಹೆಸರಾಗಲಿ, ಅಧಿಕಾರಿಗಳ ಹೆಸರು ಹೇಳಿಕೊಂಡು ಯಾರಾದರೂ ಹಣ ಕೇಳಿದರೆ ಕೂಡಲೇ ಆ ವಿಚಾರವನ್ನು ತಮ್ಮ ಗಮನಕ್ಕೆ ತನ್ನಿ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು.