ಕರ್ನಾಟಕ ಬಜೆಟ್ 2024: ಸರ್ಜಾಪುರ ಟು ಹೆಬ್ಬಾಳ ನಮ್ಮ ಮೆಟ್ರೋ ಹಂತ 3 ಕರಡು ಸಿದ್ಧ, ಉಪನಗರ ರೈಲು ಯೋಜನೆಗೆ ಚುರುಕು, ಬಿಎಂಟಿಸಿಗೂ ಕೊಡುಗೆ
Feb 16, 2024 12:48 PM IST
ನಮ್ಮ ಮೆಟ್ರೋ ಹಂತ 3 ಕರಡು ಸಿದ್ಧ, ಉಪನಗರ ರೈಲು ಯೋಜನೆಗೆ ಚುರುಕು, ಬಿಎಂಟಿಸಿಗೂ ಕೊಡುಗೆ
- ಕರ್ನಾಟಕ ಬಜೆಟ್ 2024ರಲ್ಲಿ ಬೆಂಗಳೂರು ನಗರಾಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಕೊಡುಗೆಗಳನ್ನು ಘೋಷಿಸಿದ್ದಾರೆ. ಬೆಂಗಳೂರಿನ ನಮ್ಮ ಮೆಟ್ರೋ, ಉಪನಗರ ರೈಲು ಯೋಜನೆ, ಬಿಎಂಟಿಸಿಗೆ ಈ ಬಜೆಟ್‌ನಲ್ಲಿ ಏನೆಲ್ಲ ಕೊಡುಗೆ ದೊರಕಿದೆ ಎಂದು ನೋಡೋಣ.
ಬೆಂಗಳೂರು: ಕರ್ನಾಟಕ ರಾಜ್ಯ ಬಜೆಟ್ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ನಗರಾಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ. ವಿಶೇಷವಾಗಿ ನಮ್ಮ ಮೆಟ್ರೋ, ಬಿಎಂಟಿಸಿ, ಉಪನಗರ ರೈಲು ಯೋಜನೆಗಳ ಕುರಿತು ಮಾತನಾಡಿದ್ದಾರೆ.
ನಮ್ಮ ಮೆಟ್ರೋಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?
ದೇಶದ ಅತ್ಯುತ್ತಮ ಮೆಟ್ರೋ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ನಮ್ಮ ಮೆಟ್ರೋ ರೈಲು ಯೋಜನೆಯು ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿದೆ. 8 ಲಕ್ಷಕ್ಕೂ ಹೆಚ್ಚಿನ ಜನರು ಪ್ರತಿನಿತ್ಯ ಮೆಟ್ರೋ ಸೇವೆಯನ್ನು ಬಳಸುತ್ತಿದ್ದಾರೆ. ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 74 ಕಿ.ಮೀ. ಮಾರ್ಗದೊಂದಿಗೆ 2025ರ ಮಾರ್ಚ್ ವೇಳೆಗೆ ಹೆಚ್ಚುವರಿಯಾಗಿ 44 ಕಿ.ಮೀ. ಮಾರ್ಗ ಸೇರ್ಪಡೆಯಾಗಲಿದೆ. ಮೆಟ್ರೋ ಯೋಜನೆ ಹಂತ-2 ಮತ್ತು 2ಎ ಯೋಜನೆಯಡಿ ಹೊರವರ್ತುಲ ರಸ್ತೆ- ವಿಮಾನ ನಿಲ್ದಾಣ ಮಾರ್ಗವು 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ ಮೆಟ್ರೋ ಸೇವೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿ ಕಾರ್ಯಾಚರಣೆಯು ಲಾಭದಾಯಕವಾಗಿ ಪರಿಣಮಿಸಿರುವುದು ಹೆಮ್ಮೆಯ ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.
ನಮ್ಮ ಮೆಟ್ರೋ ಹಂತ 3- ಸರ್ಜಾಪುರದಿಂದ ಹೆಬ್ಬಾಳ
ನಮ್ಮ ಮೆಟ್ರೋ ಹಂತ-3 ರಡಿ ಅಂದಾಜು 15,611 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರದ ಅನುಮೋದನೆಯ ನಿರೀಕ್ಷೆಯಲ್ಲಿದೆ. ನಮ್ಮ ಮೆಟ್ರೋ ಹಂತ-3ಎ ರಡಿಯಲ್ಲಿ ಸರ್ಜಾಪುರದಿಂದ ಅಗರ, ಕೋರಮಂಗಲ ಡೈರಿ ವೃತ್ತ, ಮೇಖ್ರಿ ವೃತ್ತ ಮೂಲಕ ಹೆಬ್ಬಾಳವನ್ನು ಸಂಪರ್ಕಿಸುವ ಮಾರ್ಗ ನಿರ್ಮಾಣ ಕುರಿತು ಡಿ.ಪಿ.ಆರ್. ಕರಡು ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು ಎಂದರು.
ಉಪನಗರ ರೈಲು ಯೋಜನೆಗೆ ಚುರುಕು
ಮಂದಗತಿಯಲ್ಲಿ ಸಾಗುತ್ತಿದ್ದ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಚುರುಕುಗೊಳಿಸಿ, ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ವರೆಗಿನ ಕಾರಿಡಾರ್-2ರ ಸಿವಿಲ್ ಕಾಮಗಾರಿಗಳನ್ನು ವೇಗವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕಾರಿಡಾರ್-4 ರ ಹೀಲಲಿಗೆಯಿಂದ ರಾಜಾನುಕುಂಟೆ ವರೆಗಿನ 46.2 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ. ರೋಲಿಂಗ್ ಸ್ಟಾಕ್ ಮತ್ತು ಅದರ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಆರ್‌ಎಫ್‌ಪಿ ಆಹ್ವಾನ ಮಾಡಲಾಗಿದೆ. ಐರೋಪ್ಯ ಹೂಡಿಕೆ ಬ್ಯಾಂಕ್ ಮತ್ತು ಜರ್ಮನಿಯ KFW ಬ್ಯಾಂಕುಗಳ ಜೊತೆಗೆ ಆರ್ಥಿಕ ನೆರವಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯ ಅಗತ್ಯತೆಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಲಾಗುವುದು ಮತ್ತು ಕೇಂದ್ರ ಸರ್ಕಾರ ನೀಡುವ ಅನುದಾನಕ್ಕೆ ಎದುರಾಗಿ ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬಿಎಂಟಿಸಿಗೆ ಹೊಸ ಬಸ್‌ಗಳ ಸೇರ್ಪಡೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರತಿದಿನ ಸರಾಸರಿ 42 ಲಕ್ಷ ಜನರಿಗೆ ಸೇವೆಯನ್ನು ಒದಗಿಸುತ್ತಿದ್ದು, ದೇಶದಲ್ಲಿಯೇ ಅತ್ಯುತ್ತಮ ನಗರ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ 1,334 ಹೊಸ ಎಲೆಕ್ಟ್ರಿಕ್ ಬಸ್‌ಗಳು ಮತ್ತು 820 ಬಿಎಸ್-6 ಡೀಸೆಲ್ ಬಸ್ಸುಗಳನ್ನು ಬಿ.ಎಂ.ಟಿ.ಸಿ.ಗೆ ಸೇರ್ಪಡೆಗೊಳಿಸಲಾಗುವುದು ಎಂದರು.
ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಆಪ್
ಪ್ರಯಾಣಿಕರ ಹಿತದೃಷ್ಟಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಮಹಿಳಾ ಸುರಕ್ಷತೆಯನ್ನು ಒಳಗೊಂಡ ವೆಹಿಕಲ್ ಟ್ರ್ಯಾಕಿಂಗ್ ಹೊಂದಿರುವ ಮೊಬೈಲ್ ಆಪ್ ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಪಾನ್ ಸರ್ಕಾರದ ಸಹಯೋಗದೊಂದಿಗೆ ಬೆಂಗಳೂರು ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಏರಿಯಾ ಟ್ರಾಫಿಕ್ ಸಿಗ್ನಲ್ ಸಿಸ್ಟಮ್ ಅನ್ನು ನಗರದ ಪ್ರಮುಖ 28 ಜಂಕ್ಷನ್‌ಗಳಲ್ಲಿ ಅಳವಡಿಸುವ ಮೂಲಕ ಟ್ರಾಫಿಕ್ ಸಿಗ್ನಲ್ ನಲ್ಲಿ ವಾಹನಗಳ ಸಂದಣಿಯನ್ನು ಶೇ.30ರಷ್ಟು ಹಾಗೂ ಸರಾಸರಿ ವಿಳಂಬವನ್ನು ಶೇ.13ರಷ್ಟು ಕಡಿಮೆಗೊಳಿಸಲಾಗುವುದು ಎಂದರು.