ಕರ್ನಾಟಕ ಬಜೆಟ್ 2024: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಜಾರಿ ಶತಸಿದ್ಧವೆಂದ ಸಿದ್ದರಾಮಯ್ಯ, ಕನ್ನಡ ಬಳಸದಿದ್ದರೆ ಏನಾಗುತ್ತದೆ, ನಿಯಮಗಳೇನು
Feb 16, 2024 01:39 PM IST
ಕರ್ನಾಟಕ ಬಜೆಟ್ 2024: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಜಾರಿ ಶತಸಿದ್ಧವೆಂದ ಸಿದ್ದರಾಮಯ್ಯ
- Kannada nameplates Karnataka: ಕರ್ನಾಟಕ ಬಜೆಟ್ 2024ರಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಅಳವಡಿಸುವ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಎಲ್ಲಾ ಕಛೇರಿಗಳು, ಅಂಗಡಿ-ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ನಿಯಮಗಳೇನು? ಕನ್ನಡ ಬಳಸದೆ ಇದ್ದರೆ ಏನಾಗುತ್ತದೆ ಎಂದು ತಿಳಿಯೋಣ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ್ದ ಕರ್ನಾಟಕ ಬಜೆಟ್ 2024ರಲ್ಲಿ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯದ ಕುರಿತು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಎಲ್ಲಾ ಕಛೇರಿಗಳು, ಅಂಗಡಿ-ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಅಳವಡಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಡಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಕನ್ನಡ ನಾಮಫಲಕ, ಫೆಬ್ರವರಿ 28 ಕೊನೆ ದಿನ
ಕನ್ನಡ ನಾಮಫಲಕ ಅಳವಡಿಸುವ ಕುರಿತು ಸಿದ್ದರಾಮಯ್ಯ ಈ ಹಿಂದೆಯೇ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ನೀಡಿದ್ದರು. "ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು, ಹೊರರಾಜ್ಯದಿಂದ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡವರನ್ನು ನಾವು "ಕನ್ನಡಿಗ"ರೇ ಎಂದು ಭಾವಿಸಿದ್ದೇವೆ. ಕನ್ನಡ ನೆಲದಲ್ಲಿ ಕನ್ನಡಕ್ಕೇ ಮೊದಲ ಪ್ರಾಶಸ್ತ್ಯ, ಅನ್ನ ಕೊಡುವ ಈ ನೆಲದ ನಿಯಮ ಪಾಲನೆ ಮಾಡಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ ಕೂಡ. ಕನ್ನಡವನ್ನು ಉಳಿಸಿ, ಕನ್ನಡತನವನ್ನು ಬೆಳೆಸುವ ಸಲುವಾಗಿ ಬೆಂಗಳೂರಿನ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60 ಕನ್ನಡ ಅಕ್ಷರಗಳ ಬಳಕೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಫೆಬ್ರವರಿ 28 ಕಡೆಯ ದಿನವಾಗಿದ್ದು, ನಿಯಮ ಪಾಲನೆ ಮಾಡಿ "ಹೆಮ್ಮೆಯ ಕನ್ನಡಿಗ"ರಾಗಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಕನ್ನಡ ನಾಮಫಲಕ ಅಳವಡಿಸದಿದ್ದರೆ ಏನಾಗುತ್ತದೆ?
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಬೇಕೆಂದು ರಾಜ್ಯ ಸರಕಾರ ಈಗಾಗಲೇ ಎಚ್ಚರಿಸಿದೆ. ಬೆಂಗಳೂರಿನಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಅಳವಡಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಹೇಳದಿದರು. "ಎಲ್ಲಾ ಕಛೇರಿಗಳು, ಅಂಗಡಿ-ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳು ನಾಮಫಲಕಗಳಲ್ಲಿ ಕನ್ನಡವನ್ನು ಬಳಸಬೇಕು. ಈ ರೀತಿ ಬಳಸದೆ ಇರುವ ಸಂಸ್ಥೆಗಳನ್ನು ಕಾನೂನಿನ ಪ್ರಕಾರ ಅಮಾನತಿನಲ್ಲಿಟ್ಟು ಲೈಸನ್ಸ್ ರದ್ದುಪಡಿಸಲಾಗುವುದು. ಸರಕಾರದ ಆದೇಶ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಸುತ್ತೋಲೆಯನ್ನು ಅನುಷ್ಠಾನಗೊಳಿಸದೆ, ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಅಧಿಕಾರಿಗಳ ಮೇಲೂ ಕ್ರಮಕೈಗೊಳ್ಳಲಾಗುವುದು" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಪ್ರಾದೇಶಿಕ ಭಾಷೆಗಳಿಗೆ ಅಕಾಡೆಮಿ
ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಕರ್ನಾಟಕದ ಪ್ರಾದೇಶಿಕ ಭಾಷೆಗಳಾಗಿದ್ದು, ಅವುಗಳ ಅಭಿವೃದ್ಧಿಗಾಗಿ ಅಕಾಡೆಮಿಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಪ್ರೋತ್ಸಾಹಿಸಲಾಗುವುದು. ಅಳಿವಿನಂಚಿನಲ್ಲಿರುವ ಜಾನಪದ ಕಲಾಪ್ರಕಾರಗಳಾದ ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ, ಕರಗ ಮುಂತಾದವುಗಳ ಪುನರುಜ್ಜೀನಕ್ಕಾಗಿ ತರಬೇತಿ ಮತ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಡಿಭಾಗದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಭಾಷೆ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.