logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುದಾನ ಕಡಿತ; 16 ಸಾವಿರ ಕೋಟಿ ಯೋಜನೆಗೆ ದಕ್ಕಿದ್ದು 350 ಕೋಟಿ -Bengaluru Suburban Rail

ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುದಾನ ಕಡಿತ; 16 ಸಾವಿರ ಕೋಟಿ ಯೋಜನೆಗೆ ದಕ್ಕಿದ್ದು 350 ಕೋಟಿ -Bengaluru Suburban Rail

HT Kannada Desk HT Kannada

Jul 27, 2024 10:31 PM IST

google News

ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರವು ಅಗತ್ಯ ಅನುದಾನ ಒದಗಿಸಿಲ್ಲ

    • ಬೆಂಗಳೂರಿನಲ್ಲಿ ಬಿಜೆಪಿಯ ನಾಲ್ವರು ಲೋಕಸಭಾ ಸದಸ್ಯರಿದ್ದರೂ ಮಹಾನಗರಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಅವರು ಹೊಸ ಯೋಜನೆ ಅಥವಾ ಹಳೆಯ ಯೋಜನೆಗಳಿಗೆ ಅನುದಾನ ತರುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ (ವರದಿ: ಮಾರುತಿ ಎಚ್‌.)
ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರವು ಅಗತ್ಯ ಅನುದಾನ ಒದಗಿಸಿಲ್ಲ
ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರವು ಅಗತ್ಯ ಅನುದಾನ ಒದಗಿಸಿಲ್ಲ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಕೇಂದ್ರ ಬಜೆಟ್‌ ನಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ 100 ಕೋಟಿ ಅನುದಾನ ಕಡಿಮೆ ಮಾಡಲಾಗಿದೆ. ಬೆಂಗಳೂರು ಸಂಚಾರ ದಟ್ಟಣೆ ತಗ್ಗಿಸುವಲ್ಲಿ ಮಹತ್ವದ ಪಾತ್ರ ಒದಗಿಸಲಿರುವ ಉಪ ನಗರ ರೈಲು ಯೋಜನೆಗೆ ಕಳೆದ ವರ್ಷ ಮಂಡಿಸಲಾದ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 450 ಕೋಟಿ ರೂಪಾಯಿ ಮೀಸಲಿಟ್ಟಿದ್ದರು. ಈ ವರ್ಷ ಅನುದಾನದ ಮೊತ್ತದಲ್ಲಿ 100 ಕೋಟಿ ರೂಪಾಯಿಯಷ್ಟು ಕಡಿತಗೊಳಿಸಿದ್ದಾರೆ.

ಬೆಂಗಳೂರಿನ ನಾಲ್ಕೂ ಕಾರಿಡಾರ್‌ಗಳಲ್ಲಿ 148 ಕಿಮೀ ಉದ್ದದ ಜಾಲವಿರುವ ಮಾರ್ಗ ರೂಪಿಸಲು ಒಟ್ಟು ಯೋಜನಾ ವೆಚ್ಚ 15,767 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ 20ರಷ್ಟು ಕೊಡುಗೆ ನೀಡಿದರೆ ಉಳಿದ ಶೇ 60ರಷ್ಟು ಹಣವನ್ನು ಸಾಲದ ರೂಪದಲ್ಲಿ ತರಲು ನಿರ್ಧರಿಸಲಾಗಿದೆ. ಹಲವು ವರ್ಷಗಳ ಅಡಚಣೆಗಳನ್ನು ನಿವಾರಿಸಿಕೊಂಡ ನಂತರ ಕೇಂದ್ರ ಸರ್ಕಾರ ಈ ಯೋಜನೆಗೆ 2020ರಲ್ಲಿ ಅನುಮೋದನೆ ನೀಡಿತ್ತು.

ಉಪನಗರ ರೈಲು ಯೋಜನೆಯನ್ನು ಕರ್ನಾಟಕ ರೈಲ್ವೇ ಮೂಲಭೂತ ಸೌಕರ್ಯ ಅಭಿವೃದ್ಧಿ ಕಂಪನಿ (ಕೆ ರೈಡ್)‌ ಆರಂಭಿಸಿದೆ. ಬೈಯಪ್ಪನಹಳ್ಳಿ ಮತ್ತು ಚಿಕ್ಕಬಾಣಾವಾರ ನಡುವಿನ 14 ನಿಲ್ದಾಣಗಳ 25 ಕಿಮೀ ಉದ್ದದ ಈ ಮಾರ್ಗದ ಕಾಮಗಾರಿ ಆರಂಭಗೊಂಡಿದ್ದು ಮಂದಗತಿಯಲ್ಲಿ ಸಾಗುತ್ತಿದೆ. ಬೆಂಗಳೂರಿನ ದಶಕಗಳ ಕನಸಾದ ಉಪನಗರ ರೈಲು ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು ಮತ್ತು ಅನುದಾನವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಾ ಹೋಗಬೇಕಿತ್ತು. ಆದರೆ ಕಡಿಮೆ ಮಾಡುತ್ತಾ ಬಂದಿರುವುದು ವಿಪರ್ಯಾಸವೇ ಸರಿ ಎಂದು ಉಪನಗರ ರೈಲು ಯೋಜನೆಯ ಹೋರಾಟಗಾರರು ಅಭಿಪ್ರಾಯಪಡುತ್ತಾರೆ.

ಬೆಂಗಳೂರಿನಲ್ಲಿ ಬಿಜೆಪಿಯ ನಾಲ್ವರು ಲೋಕಸಭಾ ಸದಸ್ಯರಿದ್ದರೂ ಮಹಾನಗರಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಅವರು ಹೊಸ ಯೋಜನೆ ಅಥವಾ ಹಳೆಯ ಯೋಜನೆಗಳಿಗೆ ಅನುದಾನ ತರುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. 100 ಕೋಟಿ ರೂ. ಅನುದಾನವನ್ನು ಕಡಿಮೆ ಮಾಡಿರುವುದು ಏಕೆ ಎಂದು ಈ ಸಂಸದರು ಉತ್ತರ ನೀಡಬೇಕು ಎಂದು

ಕಾಂಗ್ರೆಸ್‌ ಮುಖಂಡರು ಆಗ್ರಹಿಸುತ್ತಾರೆ. ಕಾಂಗ್ರೆಸ್‌ ಆರೋಪವನ್ನು ಬೆಂಗಳೂರು ದಕ್ಷಿಣ ಸದಸ್ಯ ತೇಜಸ್ವಿ ಸೂರ್ಯ ಅಲ್ಲಗಳೆಯುತ್ತಾರೆ. ನಗರಾಭಿವೃದ್ದಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಜೆಟ್‌ ನಲ್ಲಿ ಒತ್ತು ನೀಡಿದ್ದು, ಬೆಂಗಳೂರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಪ್ರತಿಪಾದಿಸುತ್ತಾರೆ. ಬಂಡವಾಳ ವೆಚ್ಚದಲ್ಲಿ 11 ಸಾವಿರ ಕೋಟಿಗೂ ಹೆಚ್ಚು ಹಣ ಒದಗಿಸಲಾಗಿದೆ. ಬೆಂಗಳೂರು ಮೆಟ್ರೋ, ಉಪನಗರ ರೈಲು ಯೋಜನೆ ಸೇರಿದಂತೆ ನಿರ್ಣಾಯಕ ಅಭಿವೃದ್ಧಿ ಯೋಜನೆಗಳಿಗೆ ಸಹಾಯಕವಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ ಎಂದು ಹೇಳುವಂತಿಲ್ಲ ಎನ್ನುತ್ತಾರೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಈಗಾಗಲೇ 6,600 ಮರಗಳನ್ನು ಕಡಿಯಲಾಗಿದ್ದು, ಇನ್ನೂ 32,572 ಮರಗಳನ್ನು ತೆರುವುಗೊಳಿಸಬೇಕಾಗಿದೆ ಎಂದು ಕೆ ರೈಡ್‌ ತಿಳಿಸಿದೆ. ಪರಿಸರದ ಮೇಲೆ ಹಾನಿಯಾಗುತ್ತದೆ ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. 1 ಮರವನ್ನು ಕಡಿದರೆ 10 ಗಿಡಗಳನ್ನು ನೆಡುವುದಾಗಿ ಕೆ ರೈಡ್‌ ಸ್ಪಷ್ಟಪಡಿಸಿದೆಯಾದರೂ ಪರಿಸರವಾದಿಗಳು ಒಪ್ಪುತ್ತಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ