logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಸಸ್ಪೆಂಡ್, ನೆಲಮಂಗಲದಲ್ಲಿ ಆಂಬುಲೆನ್ಸ್‌ ಅಡ್ಡಗಟ್ಟಿದ್ಧ ಮೂವರು ಕುಡುಕ ಪುಂಡರ ಬಂಧನ

ಬೆಂಗಳೂರು: ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಸಸ್ಪೆಂಡ್, ನೆಲಮಂಗಲದಲ್ಲಿ ಆಂಬುಲೆನ್ಸ್‌ ಅಡ್ಡಗಟ್ಟಿದ್ಧ ಮೂವರು ಕುಡುಕ ಪುಂಡರ ಬಂಧನ

Umesh Kumar S HT Kannada

Jun 11, 2024 09:31 AM IST

google News

ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಸಸ್ಪೆಂಡ್, ಆಂಬುಲೆನ್ಸ್‌ವೊಂದನ್ನು ಅಡ್ಡಗಟ್ಟಿದ್ಧ ಮೂವರು ಕುಡುಕ ಪುಂಡರ ಬಂಧನ

  • ಬೆಂಗಳೂರು: ಕೆಆರ್ ಮಾರ್ಕೆಟ್ ಸಮೀಪ ವ್ಯಾಪಾರಿಗಳಿಂದ, ರಿಕ್ಷಾ ಚಾಲಕರಿಂದ ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಸಸ್ಪೆಂಡ್ ಆಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ನೆಲಮಂಗಲದ ಜಾಸ್ ಟೋಲ್ ಸಮೀಪ ಆಂಬುಲೆನ್ಸ್‌ವೊಂದನ್ನು ಅಡ್ಡಗಟ್ಟಿದ್ಧ ಮೂವರು ಕುಡುಕ ಪುಂಡರ ಬಂಧನವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಸಸ್ಪೆಂಡ್, ಆಂಬುಲೆನ್ಸ್‌ವೊಂದನ್ನು ಅಡ್ಡಗಟ್ಟಿದ್ಧ ಮೂವರು ಕುಡುಕ ಪುಂಡರ ಬಂಧನ
ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಸಸ್ಪೆಂಡ್, ಆಂಬುಲೆನ್ಸ್‌ವೊಂದನ್ನು ಅಡ್ಡಗಟ್ಟಿದ್ಧ ಮೂವರು ಕುಡುಕ ಪುಂಡರ ಬಂಧನ

ಬೆಂಗಳೂರು: ಲಂಚ ಪಡೆಯುತ್ತಿದ್ದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಕೆ.ಆರ್. ಮಾರುಕಟ್ಟೆ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಸಂತಕುಮಾರ್ ಎಂಬವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಅಮಾನತು ಮಾಡಿದ್ದಾರೆ.

ಈ ಅಧಿಕಾರಿ ವಿರುದ್ದ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ ಎಂದು ಸಂಚಾರ ಪಶ್ಚಿಮ ವಿಭಾಗದ ಅನಿತಾ ಅವರು ತಿಳಿಸಿದ್ದಾರೆ.

ಕೆ.ಆರ್.ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ವಸಂತಕುಮಾರ್ ಲಂಚ ಪಡೆಯುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿತ್ತು. ವ್ಯಾಪಾರಿಗಳಿಂದ ದಾಖಲಾತಿಗಳನ್ನು ಕೇಳುತ್ತಿದ್ದರು. ದಾಖಲೆಗಳನ್ನು ಕೊಡದಿದ್ದರೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂಬ ಆರೋಪವೂ ದಾಖಲಾಗಿತ್ತು. ಇವರು ಲಂಚ ಪಡೆಯುತ್ತಿದ್ದ ವಿಡಿಯೊವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು. ಈ ದಾಖಲೆಯನ್ನು ಪರಿಶೀಲಿಸಲಾಗಿದೆ. ಈ ಎಲ್ಲ ಕಾರಣಗಳಿಗಾಗಿ ಹೆಡ್ ಕಾನ್‌ಸ್ಟೆಬಲ್ ವಸಂತಕುಮಾರ್ ಆವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಂಬುಲೆನ್ಸ್‌ವೊಂದನ್ನು ಅಡ್ಡಗಟ್ಟಿದ್ಧ ಮೂವರು ಕುಡುಕ ಪುಂಡರ ಬಂಧನ

ನೆಲಮಂಗಲ ಬಳಿ ಇರುವ ಜಾಸ್‌ಟೋಲ್ ಬಳಿ ಆಂಬುಲೆನ್ಸ್‌ವೊಂದನ್ನು ಅಡ್ಡಗಟ್ಟಿ ವಿನಾಕಾರಣ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳನ್ನು ನೆಲಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಚೇನಹಳ್ಳಿಯ ಯುವರಾಜ್ ಸಿಂಗ್, ಮಂಜುನಾಥ್, ಲತೀಶ್ ಬಂಧಿತ ಆರೋಪಿಗಳು. ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತುಮಕೂರಿನ ಆಸ್ಪತ್ರೆಯೊಂದರಿಂದ ಬೆಂಗಳೂರಿನ ವಾಣಿವಿಲಾಸ ಆಸ್ಪತೆಗೆ ಐದು ತಿಂಗಳ ಮಗುವನ್ನು ತುರ್ತು ಚಿಕಿತ್ಸೆಗೆ ಆಮ್ಲಜನಕದ ನೆರವಿನೊಂದಿಗೆ ಕರೆತರಲಾಗುತ್ತಿತ್ತು. ಬೇಗನೆ ಆಸ್ಪತ್ರೆ ತಲುಪಲು ಹೆದ್ದಾರಿಯಲ್ಲಿ ಆಂಬುಲೆನ್ಸ್ ವೇಗವಾಗಿ ಬರುತ್ತಿತ್ತು. ಅದೇ ಮಾರ್ಗದಲ್ಲಿ ಕಾರೊಂದು ಬರುತ್ತಿತ್ತು. ಮಾರ್ಗ ಮಧ್ಯದಲ್ಲಿ ಕಾರನ್ನು ಹಿಂದಿಕ್ಕಿ ಆಂಬುಲೆನ್ಸ್ ಮುಂದಕ್ಕೆ ಸಾಗಿತ್ತು. ಇದರಿಂದ ಕೋಪಗೊಂಡ ಕಾರಿನಲ್ಲಿದ್ದ ಆರೋಪಿಗಳು ಆರು ಕಿ.ಮೀ ದೂರದಿಂದ ಆಂಬುಲೆನ್ಸ್ ಅನ್ನು ಹಿಂಬಾಲಿಸಿಕೊಂಡು ಬಂದು ಜಾಸ್‌ಟೋಲ್ ಬಳಿ ಆಂಬುಲೆನ್ಸ್ ಅಡ್ಡಗಟ್ಟಿ ಜಗಳಕ್ಕೆ ಇಳಿದಿದ್ದಾರೆ. ನಮ್ಮ ಕಾರನ್ನೇ ಓವರ್ ಟೇಕ್ ಮಾಡುತ್ತಿಯಾ ಎಂದು ನಿಂದಿಸಿದ್ದಾರೆ. ಚಾಲಕನ ಮೇಲೆ ಹಲ್ಲೆ ನಡೆಸಿ ಆಂಬುಲೆನ್ಸ್ ಕೀ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಎಂದು ಮೂಲಗಳು ಹೇಳಿವೆ. ಆಂಬುಲೆನ್ಸ್ ನಲ್ಲಿದ್ದ ಮಗುವಿನ ಪೋಷಕರು ಬೇಡಿಕೊಂಡು ಮನವಿ ಮಾಡಿದರೂ ಈ ಯುವಕರ ಗುಂಪು ಮುಂದೆ ಹೋಗಲು ಬಿಡಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನೆಲಮಂಗಲ ಪೊಲೀಸರ ಕಾರ್ಯಾಚರಣೆ

ಟೋಲ್‌ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ನೆಲಮಂಗಲ ಠಾಣೆ ಪೊಲೀಸರು, ಮೊದಲು ಆಂಬುಲೆನ್ಸ್ ಅನ್ನು ಆಸ್ಪತ್ರೆ ಕಳುಹಿಸಿ ನಂತರ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಯುವಕರು ಮದ್ಯದ ಅಮಲಿನಲ್ಲಿದ್ದರು ತಿಳಿದು ಬಂದಿದೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದೆ. ಕಂಡಕಂಡಲ್ಲಿ ಪುಂಡರ ಅಟ್ಟಹಾಸ, ಸುಲಿಗೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ರಸ್ತೆಗಳಲ್ಲಿ ಹಗಲಿನಲ್ಲೇ ಕುಡಿದ ಮತ್ತಿನಲ್ಲಿ ವಾಹನ ಓಡಿಸಿದರೂ ಪೊಲೀಸರು ಅಡ್ಡಗಟ್ಟುವುದಿಲ್ಲ. ಆಂಬುಲೆನ್ಸ್ ತಡೆಗಟ್ಟಿ ಚಾಲಕನಿಗೆ ಥಳಿಸಿ ಪುಂಡರು ಅಟ್ಟಹಾಸ ಮೆರೆಯುತ್ತಿರುವುದು ಅರಾಜಕತೆ ಹೇಗೆ ತಾಂಡವವಾಡುತ್ತಿದೆ ಎಂಬುದನ್ನು ತೋರಿಸುತ್ತಿದೆ. ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿಕೆ ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ಬಿಜೆಪಿ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.

(ವರದಿ- ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ