Water Crisis: ಬೆಂಗಳೂರಿನಲ್ಲಿ ಹೆಚ್ಚಿದ ಏರಿಯೇಟರ್ ಅಳವಡಿಕೆ, 1 ಲೀಟರ್ ಬಾಟಲ್ ನೀರಿನ ವೆಚ್ಚದಲ್ಲಿ 1000 ಲೀಟರ್ ಕಾವೇರಿ ನೀರು ಪೂರೈಕೆ
Apr 05, 2024 10:05 AM IST
ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು (PTI03_22_2024_000176A)
- ಸರಕಾರಿ ಕಚೇರಿಗಳು ಹಾಗೂ ಬೆಂಗಳೂರು ನಗರದ ಪ್ರಮುಖ ಸಂಸ್ಥೆಗಳಲ್ಲಿ ನಲ್ಲಿಗಳಿಗೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಏರಿಯೇಟರ್ ಅಳವಡಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. (ವರದಿ: ಎಚ್. ಮಾರುತಿ)
ಬೆಂಗಳೂರು: ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸರಕಾರಿ ಕಚೇರಿಗಳು ಹಾಗೂ ಬೆಂಗಳೂರು ನಗರದ ಪ್ರಮುಖ ಸಂಸ್ಥೆಗಳಲ್ಲಿ ನಲ್ಲಿಗಳಿಗೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಏರಿಯೇಟರ್ ಅಳವಡಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಮಾಲ್, ವಾಣಿಜ್ಯ ಸಂಕೀರ್ಣ, ಅಪಾರ್ಟ್‌ಮೆಂಟ್, ಸರಕಾರಿ ಕಟ್ಟಡಗಳಲ್ಲಿ, ಐಷಾರಾಮಿ ಹೋಟೇಲ್, ರೆಸ್ಟೋರೆಂಟ್ ಹಾಗೂ ಧಾರ್ಮಿಕ ಸ್ಥಳಗಳಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಚತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಪ್ಲೋ ರಿಸ್ಟ್ರಿಕ್ಟರ್/ಏರಿಯೇಟರ್ (ಓದಿ: ಏನಿದು ಏರಿಯೇಟರ್? ಇದು ಹೇಗೆ ನೀರು ಉಳಿಸುತ್ತದೆ?) ಅಳವಡಿಸುವುದನ್ನು ಕಡ್ಡಾಯಗೊಳಿಸಿ ಜಲಮಂಡಳಿ ಸುತ್ತೋಲೆ ಹೊರಡಿಸಿದೆ.
ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಪ್ರೇರಣೆಯಾಗಬೇಕು ಎಂಬ ದೃಷ್ಟಿಯಿಂದ ಮೊದಲ ಹಂತದಲ್ಲಿ ಬೆಂಗಳೂರು ಜಲಮಂಡಳಿಯ ಎಲ್ಲ ಕಚೇರಿಗಳಲ್ಲಿ ಏರಿಯೇಟರ್ ಗಳನ್ನು ಅಳವಡಿಸಲಾಗಿತ್ತು. ಈಗ ಎರಡನೇ ಹಂತದಲ್ಲಿ ಪ್ರಮುಖ ಸರಕಾರಿ ಕಚೇರಿಗಳಾದ ಬಿಡಿಎ, ಬಿಎಸ್‌ಎನ್‌ಎಲ್, ಇಂದಿರಾ ಕ್ಯಾಂಟೀನ್, ಆದಾಯ ತೆರಿಗೆ, ಬಿಬಿಎಂಪಿ ಶಾಲೆಗಳು, ಇಸ್ರೋ, ಭಿಕ್ಷುಕರ ಕಾಲೋನಿ, ಹೆಚ್ ಎ ಎಲ್, ಬೆಮೆಲ್, ಸಿಲ್ಕ್ ಬೋರ್ಡ್, ಕೇಂದ್ರೀಯ ಸದನ, ರಕ್ಷಣಾ ಇಲಾಖೆ, ವಿಶ್ವೇಶ್ವರಯ್ಯ ಟವರ್, ಐಎಎಸ್ ಅಫಿಸರ್ಸ್ ಅಸೋಸಿಯೇಷನ್, ಆರ್‌ಟಿಓ, ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ಠಾಣೆಗಳು, ಜಯದೇವ ಆಸ್ಪತ್ರೆ, ಐಟಿಐ ಇನ್ಸಿಟ್ಯೂಟ್, ಸೆಂಟ್ರಲ್ ಫಾರ್ಮಸಿ, ಬಿಬಿಎಂಪಿ, ಲೋಕಾಯುಕ್ತ ನಿವಾಸ, ಕೆಪಿಟಿಸಿಲ್, ಕೆಎಂಎಫ್, ಬೆಸ್ಕಾಂ ಮತ್ತು ಗ್ಯಾರಿಸನ್ ಇಂಜಿನಯರಿಂಗ್ ಕಟ್ಟಡಗಳಲ್ಲಿ ಜಲಮಂಡಳಿಯ ವತಿಯಿಂದಲೇ 4,000 ಏರಿಯೇಟರ್/ಫ್ಲೋ ರಿಸ್ಟ್ರಿಕ್ಟರ್ ಅಳವಡಿಸಲಾಗಿದೆ.
ಸಾರ್ವಜನಿಕರಿಗೆ ಸರಕಾರಿ ಕಚೇರಿಗಳು ಮಾದರಿಯಾಗಬೇಕು. ಹೊಸ ನಿಯಮಗಳನ್ನು ಸರ್ಕಾರ ಮತ್ತು ನೌಕರರು ಕಡ್ಡಾಯವಾಗಿ ಪಾಲಿಸಿದರೆ ಸಾರ್ವಜನಿಕರು ಸಹಜವಾಗಿ ಅಳವಡಿಸಿಕೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ ಏರಿಯೇಟರ್ ಗಳನ್ನು ಜಲಮಂಡಳಿ ಮೊದಲು ತನ್ನ ಕಚೇರಿಗಳಲ್ಲಿ ಅಳವಡಿಕೊಂಡು ನಂತರವಷ್ಟೇ ಸುತ್ತೋಲೆ ಹೊರಡಿಸಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈಗಾಗಲೇ ಇಸ್ರೋ, ಬಿಬಿಎಂಪಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಏರಿಯೇಟರ್ ಗಳನ್ನು ಅಳವಡಿಸಲಾಗಿದೆ. ಎಲ್ಲಾ ಕಚೇರಿಗಳ ನಲ್ಲಿಗಳಿಗೂ ಇದನ್ನ ಅಳವಡಿಸಲಾಗುವುದು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ಪಾರದರ್ಶಕವಾಗಿ ಗ್ರಾಹಕರಿಂದಲೇ ತಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಒಂದು ಲೀಟರ್ ಬಾಟಲ್ ದರದಲ್ಲಿ ಸಾವಿರ ಲೀಟರ್ ಕಾವೇರಿ ನೀರು
ಒಂದು ಲೀಟರ್ ಬಾಟಲ್ ನೀರು ತಗೆದುಕೊಳ್ಳಲು ಖರ್ಚು ಮಾಡುವ ದುಡ್ಡಿನಲ್ಲಿ ಬೆಂಗಳೂರು ಜಲ ಮಂಡಳಿ ಒಂದು ಸಾವಿರ ಲೀಟರ್ ನಷ್ಟು ನೀರನ್ನು ಮನೆ ಮನೆಗಳಿಗೆ ಸರಬರಾಜು ಮಾಡುತ್ತಿದೆ. ಕಡಿಮೆ ದರದಲ್ಲಿ ದೊರೆಯುವ ವಸ್ತುಗಳ ಮೇಲೆ ಯಾವಾಗಲೂ ಜನರಿಗೆ ಹೆಚ್ಚಿನ ಪ್ರೀತಿ ಇರುವುದಿಲ್ಲ. ಇದು ಕಾವೇರಿ ನೀರಿನ ವಿಷಯದಲ್ಲೂ ಸ್ಪಷ್ಟವಾಗಿ ಗೋಚರವಾಗುತ್ತಿದೆ. 1 ಲೀಟರ್ ನೀರನ್ನು ಜೋಪಾನ ಮಾಡುವ ಸಾರ್ವಜನಿಕರು ಸಿಕ್ಕ ಸಿಕ್ಕ ಕಡೆಗಳಲ್ಲಿ ಅಮೂಲ್ಯವಾದ ಕಾವೇರಿ ನೀರನ್ನ ಅನಗತ್ಯವಾಗಿ ವ್ಯರ್ಥ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವುದು ಮುಖ್ಯ. ಇದಕ್ಕಾಗಿ ಬಳಕೆದಾರರಲ್ಲಿ ಜಾಗೃತಿ ಮೂಡಿಸವುದು ಬಹಳ ಅಗತ್ಯವಾಗಿದೆ ಎಂದು ಜಲಮಂಡಳಿ ತಿಳಿಸಿದೆ.
ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಪ್ರತಿ ಹನಿ ನೀರೂ ಮುಖ್ಯ. ನಾನೊಬ್ಬ ಉಳಿಸಿದರೆ ಏನಾದೀತು ಎಂದು ಉದಾಸೀನ ಮಾಡಬೇಡಿ. ಸುಮ್ಮನೆ ಊಹಿಸಿಕೊಳ್ಳಿ, ಲಕ್ಷ, ಕೋಟಿ ಜನ ದಿನವೊಂದಕ್ಕೆ ಒಂದು ಲೀಟರ್ ನೀರು ಉಳಿಸಿದರೆ ಪವಾಡವೇ ಸೃಷ್ಟಿಯಾದೀತು.
- ವರದಿ: ಎಚ್. ಮಾರುತಿ