logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಈರುಳ್ಳಿ ದರ ಕಿಲೋಗೆ 100 ರೂಪಾಯಿಯತ್ತ ದಾಪುಗಾಲು, ಕರ್ನಾಟಕದ ಮಾರುಕಟ್ಟೆ ಚಿತ್ರಣ ಹೀಗಿದೆ

ಬೆಂಗಳೂರು: ಈರುಳ್ಳಿ ದರ ಕಿಲೋಗೆ 100 ರೂಪಾಯಿಯತ್ತ ದಾಪುಗಾಲು, ಕರ್ನಾಟಕದ ಮಾರುಕಟ್ಟೆ ಚಿತ್ರಣ ಹೀಗಿದೆ

Umesh Kumar S HT Kannada

Nov 09, 2024 10:07 AM IST

google News

ಬೆಂಗಳೂರು: ಈರುಳ್ಳಿ ದರ ಕಿಲೋಗೆ 100 ರೂಪಾಯಿಯತ್ತ ದಾಪುಗಾಲು, ಕರ್ನಾಟಕದ ಮಾರುಕಟ್ಟೆ ಚಿತ್ರಣ ಹೀಗಿದೆ

  • ಬೆಂಗಳೂರು ಈರುಳ್ಳಿ ದರ: ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಿಲೋಗೆ 100 ರೂಪಾಯಿಯತ್ತ ದಾಪುಗಾಲು ಇಟ್ಟಿದೆ. ಕರ್ನಾಟಕದ ಮಾರುಕಟ್ಟೆ ಗಮನಿಸಿದರೆ, ಈರುಳ್ಳಿ ದರ ಭಾರಿ ಏರಳಿತ ದಾಖಲಾಗಿದೆ. ಇದರ ವಿವರ ಇಲ್ಲಿದೆ.

ಬೆಂಗಳೂರು: ಈರುಳ್ಳಿ ದರ ಕಿಲೋಗೆ 100 ರೂಪಾಯಿಯತ್ತ ದಾಪುಗಾಲು, ಕರ್ನಾಟಕದ ಮಾರುಕಟ್ಟೆ ಚಿತ್ರಣ ಹೀಗಿದೆ
ಬೆಂಗಳೂರು: ಈರುಳ್ಳಿ ದರ ಕಿಲೋಗೆ 100 ರೂಪಾಯಿಯತ್ತ ದಾಪುಗಾಲು, ಕರ್ನಾಟಕದ ಮಾರುಕಟ್ಟೆ ಚಿತ್ರಣ ಹೀಗಿದೆ

ಬೆಂಗಳೂರು: ಈರುಳ್ಳಿ ಮತ್ತೆ ದುಬಾರಿಯಾಗುವ ಲಕ್ಷಣಗಳು ಗೋಚರಿಸಿವೆ. ಬೆಂಗಳೂರಿನಲ್ಲಿ ಈರುಳ್ಳಿ ದರ ಕಿಲೋಗೆ 100 ರೂಪಾಯಿ ಸಮೀಪ ಹೋಗುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಈಗಾಗಲೇ, ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸೇರಿ ಬೆಂಗಳೂರು ಮಹಾನಗರದ ಹಲವು ಮಾರುಕಟ್ಟೆಗಳಲ್ಲಿ ಹಳೆ ಈರುಳ್ಳಿ ಬೆಲೆ ಏರಿಕೆ ಆಗಿದೆ. ವಿಶೇಷವಾಗಿ ಮಹಾರಾಷ್ಟ್ರದಿಂದ ಪೂರೈಕೆಯಾಗುತ್ತಿರುವ ಉತ್ತಮ ಗುಣಮಟ್ಟದ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ದರ ವಾರಗಳ ಹಿಂದೆ ಕ್ವಿಂಟಾಲ್‌ಗೆ 5000 ರೂಪಾಯಿ ಇದ್ದದ್ದು, 7500 ರೂಪಾಯಿ ಆಸುಪಾಸು ಬಂದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಿಲೋಗೆ 80 ರೂಪಾಯಿಯಿಂದ 90 ರೂಪಾಯಿ ಇದೆ. ಇದು 100 ರೂಪಾಯಿ ತಲುಪಲು ಹೆಚ್ಚು ದಿನಗಳು ಬೇಕಾಗಲ್ಲ ಎನ್ನುತ್ತಿದ್ದಾರೆ ವ್ಯಾಪಾರಸ್ಥರು.

ಬೆಂಗಳೂರು ಈರುಳ್ಳಿ ದರ ಗಗನಮುಖಿ

ಮಹಾರಾಷ್ಟ್ರದಿಂದ ವಿಶೇಷವಾಗಿ ನಾಗಪುರದಿಂದ ಬರುವ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಕೆಲವು ವಾರಗಳ ಹಿಂದೆ ಈ ಈರುಳ್ಳಿಯ ಬೆಲೆ ಕ್ವಿಂಟಾಲ್‌ಗೆ 5000 ರೂಪಾಯಿ ಇತ್ತು. ಈಗ 7200 ರೂಪಾಯಿಯಿಂದ 7500 ರೂಪಾಯಿ ಆಗಿದೆ ಎಂದು ಉದಯವಾಣಿ ವರದಿ ವಿವರಿಸಿದೆ. ಅಕಾಲಿಕ ಮಳೆಯ ಕಾರಣ ಈರುಳ್ಳಿ ಬೆಳೆ ಹಾನಿಗೀಡಾಗಿದೆ. ಅವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಈಗ ಹಳೆ ದಾಸ್ತಾನು ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಹೋಟೆಲ್ ಉದ್ಯಮ ಹೆಚ್ಚು ದಿನ ಬಾಳಿಕೆ ಬರುವ ಈರುಳ್ಳಿಯನ್ನು ಬಯಸುತ್ತದೆ. ಹೀಗಾಗಿ ಮಹಾರಾಷ್ಟ್ರದ ಈರುಳ್ಳಿಯ ಕಡೆಗೆ ಗಮನಹರಿಸಿದೆ. ಬೆಂಗಳೂರಿಗೆ ಬೇಕಾದ ಈರುಳ್ಳಿ ಮಹಾರಾಷ್ಟ್ರದಿಂದಲೇ ಪೂರೈಕೆಯಾಗುತ್ತಿದೆ ಎಂದು ವರದಿ ವಿವರಿಸಿದೆ.

ಬೆಂಗಳೂರಿಗೆ ಚಳ್ಳಕೆರೆ ಸೇರಿ ವಿವಿಧೆಡೆಯಿಂದ ಈರುಳ್ಳಿ

ಬೆಂಗಳೂರು ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗೆ ಮಹಾರಾಷ್ಟ್ರದಿಂದ ಗುರುವಾರ (ನವೆಂಬರ್ 7) 500 ಟ್ರಕ್ ಈರುಳ್ಳಿ ಪೂರೈಕೆಯಾಗಿದೆ. ಸರಳವಾಗಿ ಹೇಳಬೇಕು ಎಂದರೆ 1,00,480 ಚೀಲ ಈರುಳ್ಳಿ ಯಶವಂತಪುರ ಎಪಿಎಂಸಿಗೆ ಪೂರೈಕೆಯಾಗಿದೆ. ಇದರಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 5000-5500 ರೂಪಾಯಿ ದರದಲ್ಲಿ ಖರೀದಿಯಾಯಿತು. ನಾಗಪುರ ಭಾಗದ ಈರುಳ್ಳಿ ಹಳೆಯ ಈರುಳ್ಳಿಯಾಗಿದ್ದು ದಾಸ್ತಾನು ಇಡಲು ಸೂಕ್ತವಾಗಿದ್ದು, ಹೋಟೆಲ್ ಉದ್ಯಮದವರ ಬೇಡಿಕೆಯನ್ನು ಪೂರೈಸುತ್ತದೆ.

ಇದೇ ರೀತಿ, ಚಳ್ಳಕೆರೆ ಸೇರಿ ರಾಜ್ಯದ ಹಲವು ಭಾಗಗಳಿಂದ ಒಟ್ಟು 485 ಟ್ರಕ್‌ಗಳಲ್ಲಿ ಈರುಳ್ಳಿ ಪೂರೈಕೆ ಆಗಿದೆ. ಇದು ಹೊಸ ಈರುಳ್ಳಿ. ಇದು ಹಸಿ ಈರುಳ್ಳಿಯಾಗಿದ್ದು, ಕೂಡಲೇ ಬಳಸಬೇಕಾದ ಸ್ಥಿತಿಯಲ್ಲಿದೆ. ಹೀಗಾಗಿ ಇದಕ್ಕೆ ಬೇಡಿಕೆ ಕಡಿಮೆ. ಈ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 5000-5,500 ರೂಪಾಯಿಗೆ ಖರೀದಿಯಾಗಿದೆ. ಸಾಮಾನ್ಯ ದರ್ಜೆಯ ಈರುಳ್ಳಿ ಕ್ವಿಂಟಲ್‌ಗೆ 2,000-3000 ರೂ.ವರೆಗೂ ಮತ್ತು ಹಾನಿಗೊಳಗಾದ ಈರುಳ್ಳಿ ಕ್ಲಿಂಟಲ್‌ಗೆ 500-1,500 ರೂ. ವರೆಗೂ ಮಾರಾಟವಾಗಿದೆ. ಬೀದಿ ಬದಿ ವ್ಯಾಪಾರಿಗಳು ಹೊಸ ಈರುಳ್ಳಿ ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಹಳೆ ಈರುಳ್ಳಿ ದಾಸ್ತಾನ ಇರಿಸಲಾಗುತ್ತಿದ್ದು, ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 75 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ವರದಿ ವಿವರಿಸಿದೆ.

ಬಾಗಲಕೋಟೆ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಳಿತ

ಬಾಗಲಕೋಟೆಯಲ್ಲಿ ಈರುಳ್ಳಿ ಬೆಲೆ ಮತ್ತೆ ಭಾರಿ ಏರಿಳಿತ ದಾಖಲಿಸಿದೆ. ಅಕ್ಟೋಬರ್‌ನಲ್ಲಿ ಕ್ವಿಂಟಾಲ್‌ 4 ಸಾವಿರ ರೂಪಾಯಿ ಗಡಿ ದಾಟಿತ್ತು. ಅಕ್ಟೋಬರ್ 10ರ ಬಳಿಕ ಸುರಿದ ಮಳೆಗೆ ಈರುಳ್ಳಿ ಹಾನಿಗೀಡಾಗಿದೆ. ಹೀಗಾಗಿ ದೀಪಾವಳಿಗೂ ಮೊದಲೇ ಈರುಳ್ಳಿ ದರ ಕ್ವಿಂಟಾಲ್‌ಗೆ 2000 ರೂಪಾಯಿ ಆಗಿತ್ತು. ನ.5 ರಂದು ಸ್ಥಳೀಯ ಹಾಗೂ ಬೆಂಗಳೂರು ಮಾರುಕಟ್ಟೆಯಲ್ಲಿ ಕನಿಷ್ಠ ಸಾವಿರದಿಂದ ಗರಿಷ್ಠ 5200 ರೂ. ತಲುಪಿತು. ಆದರೆ ನವೆಂಬರ್ 7 ರಂದು ಬಾಗಲಕೋಟೆ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 3700 ರೂಪಾಯಿ ಆಗಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ ಕನಿಷ್ಠ 600 ರಿಂದ ಗರಿಷ್ಠ 5300 ರೂ. ಬೆಲೆ ಸಿಕ್ಕಿದೆ ಎಂದು ವರದಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ