logo
ಕನ್ನಡ ಸುದ್ದಿ  /  ಕರ್ನಾಟಕ  /  ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟಿಸಿದ ಪೊಲೀಸ್ ಇಲಾಖೆ: 20 ನಿಯಮಗಳನ್ನೂ ಪಾಲಿಸುವುದು ಕಡ್ಡಾಯ, ಇಲ್ಲದಿದ್ದರೆ ಕ್ರಮ

ಗೌರಿ-ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟಿಸಿದ ಪೊಲೀಸ್ ಇಲಾಖೆ: 20 ನಿಯಮಗಳನ್ನೂ ಪಾಲಿಸುವುದು ಕಡ್ಡಾಯ, ಇಲ್ಲದಿದ್ದರೆ ಕ್ರಮ

Prasanna Kumar P N HT Kannada

Aug 31, 2024 02:57 PM IST

google News

ಗಣೇಶ ಮೂರ್ತಿ

    • Ganesh Chaturthi Guidelines: ಬೆಂಗಳೂರಿನಲ್ಲಿ ನೀವು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದೀರಾ? ಹಾಗಿದ್ದರೆ ಪೊಲೀಸ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ, ತಪ್ಪಿದರೆ ಕ್ರಮ.
ಗಣೇಶ ಮೂರ್ತಿ
ಗಣೇಶ ಮೂರ್ತಿ

ಬೆಂಗಳೂರು: ಸೆಪ್ಟೆಂಬರ್ 6 ಮತ್ತು 7ರಂದು ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿನಾಯಕನ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಸಂಬಂಧಿಸಿ ಪೊಲೀಸ್‌ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮೂರ್ತಿ ಪ್ರತಿಷ್ಠಾಪಿಸುವ ಮತ್ತು ಮೆರವಣಿಗೆ ಮಾಡುವ ವೇಳೆ ಏನೆಲ್ಲಾ ಕ್ರಮ ಅನುಕರಿಸಬೇಕು ಎನ್ನುವುದರ ಕುರಿತು ಇಲಾಖೆ ವಿವರ ನೀಡಿದೆ. ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಕರಿಸಬೇಕು. ಕೋಮು ಸೌಹಾರ್ದದಿಂದ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದೆ.

ಪೊಲೀಸ್ ಇಲಾಖೆಯಿಂದ ಗಣೇಶ ಹಬ್ಬದ ಮಾರ್ಗಸೂಚಿಗಳು

1. ಸಾರ್ವಜನಿಕ ಸ್ಥಾನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೂ ಮುನ್ನ ತಮ್ಮ ಸುಪರ್ದಿಗೆ ಬರುವ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ಸಾರ್ವಜನಿಕರು ಹಾಗೂ ಸಂಚಾರಕ್ಕೆ ಸಮಸ್ಯೆ ಉಂಟಾಗದಂತೆ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಜನಸಂದಣಿ, ಸಂಚಾರ ದಟ್ಟಣೆ ಉಂಟಾಗುವ ರಸ್ತೆಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ.

2. ಗಣೇಶ ವಿಗ್ರಹ ಪ್ರತಿಷ್ಠಾಪನೆ ಮತ್ತು ಇತರೆ ಕಾರ್ಯಕ್ರಮಗಳ ಆಯೋಜನೆಗೆ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ವಂತಿಗೆ ಅಥವಾ ಚಂದಾ ಸಂಗ್ರಹಿಸಿದರೆ ಕ್ರಮಕೈಗೊಳ್ಳಲಾಗುವುದು.

3. ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಚಪ್ಪರ/ಶಾಮಿಯಾನ ಬಂದೋಬಸ್ತಾಗಿ ನಿರ್ಮಿಸಬೇಕು. ಅದಕ್ಕಾಗಿ ಬಿಬಿಎಂಪಿ ಪಡೆಯಿಂದ ಪರವಾನಗಿ ಪಡೆಯಬೇಕು.

4. ವಿವಾದಿತ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು. ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆಯಬೇಕು. ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ ನಂತರವೇ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು.

5. ಹೈಕೋರ್ಟ್ ಆದೇಶದಂತೆ ಫ್ಲೆಕ್ಸ್ ಮತ್ತು ಬೋರ್ಡ್​​ಗಳನ್ನು ಅಳವಡಿಸುವಂತಿಲ್ಲ. ಇದಕ್ಕೆ ಸಂಬಂಧಿಸಿ ಬಿಬಿಎಂಪಿ ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

6. ಗಣೇಶ ವಿಗ್ರಹಗಳ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ.

7. ಗಣೇಶ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಆಯೋಜಕರ ಪರವಾಗಿ ಇಬ್ಬರು ಜವಾಬ್ದಾರಿಯುತ ಸದಸ್ಯರು, ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಪೊಲೀಸ್ ಠಾಣೆಗೂ ಮಾಹಿತಿ ನೀಡಬೇಕು.

8. ಗಣೇಶ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ. ಅಲ್ಲದೆ, ಸ್ಥಳದಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳು ಇರಬೇಕು. ಅಲ್ಲದೆ, ಅಗ್ನಿಶಾಮಕ ದಳದ ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಬೇಕು.

9. ಗಣೇಶ ಪ್ರತಿಷ್ಠಾಪನಾ ಸ್ಥಳ ಮತ್ತು ಸುತ್ತಮುತ್ತಲೂ ಯಾವುದೇ ಅಡುಗೆ ಸೌದೆ, ಉರುವಲು, ಸೀಮೆ ಎಣ್ಣೆ ಸಾಧನಗಳು ಇಡಬಾರದು. ಅಲ್ಲದೆ, ಸ್ಥಳದಲ್ಲಿ ಅಡುಗೆ ಮಾಡುವಂತಿಲ್ಲ.

10. ವಿದ್ಯುತ್ ಅಲಂಕಾರಕ್ಕೆ ಸಂಬಂಧಿಸಿ ಬೆಸ್ಕಾಂನಿಂದ ಅನುಮತಿ ಪಡೆಯಬೇಕು. ಅಗ್ನಿಶಾಮಕ ದಳ ಮತ್ತು ಸಂಚಾರಿ ಪೊಲೀಸರಿಂದ ಎನ್​ಒಸಿ ಪಡೆಯಬೇಕು. ಸ್ಥಳದಲ್ಲಿ 24 ಗಂಟೆಯೂ ಬೆಳಕು ಇರಬೇಕು.

11. ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಜನಸಂದಣಿ ಉಂಟಾಗದಂತೆ ಬ್ಯಾರಿಕೇಡ್​ಗಳನ್ನು ಅಳವಡಿಸಬೇಕು. ಎಂಟ್ರಿ ಮತ್ತು ಎಕ್ಸಿಟ್ ಗೇಟ್​ಗಳನ್ನು ಸರಿಯಾಗಿ ಅಳವಡಿಸಿರಬೇಕು.

12. ಗಣೇಶ ಪ್ರತಿಷ್ಠಾಪನಾ ಸ್ಥಳ ಮತ್ತು ವಿಸರ್ಜನೆ ವೇಳೆ ಏನೇ ಅಪರಾಧ ನಡೆದರೂ ಆಯೋಜಕರೇ ಜವಾಬ್ದಾರರು.

13. ಗಣೇಶ ಪ್ರತಿಷ್ಠಾಪಿಸಿದ ಸ್ಥಳ, ಮನರಂಜನಾ ಕಾರ್ಯಕ್ರಮ ಮತ್ತು ವಿಸರ್ಜನಾ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳನ್ನು ಚುಡಾಯಿಸುವುದು ಮತ್ತು ಕೀಟಲೆ ಮಾಡದಂತೆ ಆಯೋಜನೆ ಜವಾಬ್ದಾರಿ ನೋಡಿಕೊಳ್ಳಬೇಕು.

14. ಹಿರಿಯ ನಾಗರಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ಧ್ವನಿವರ್ಧಕ ಅಳವಡಿಸಬೇಕು. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೂ ಬಳಸಬೇಕು. ಅದಕ್ಕಾಗಿ ಸ್ಥಳೀಯ ಪೊಲೀಸರಿಂದ ಅನುಮತಿ ಪಡೆಯಬೇಕು. ಡಿಜೆ ಅಳವಡಿಸಲು ಅವಕಾಶ ಇಲ್ಲ.

15. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಂಡಳಿಯ ಸಂಘಟಕರು, ಅಧ್ಯಕ್ಷಕರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಹೆಸರು, ವಿಳಾಸ, ಮೊಬೈಲ್ ನಂಬರ್ ಅನ್ನು ಸಂಬಂಧಪಟ್ಟ ಠಾಣೆಗೆ ಒದಗಿಸಬೇಕು.

ಗಣೇಶ ವಿಸರ್ಜನೆಗೆ ಮಾರ್ಗಸೂಚಿಗಳು

1. ವಿಸರ್ಜನಾ ಮೆರವಣಿಯ ಸಮಯದಲ್ಲಿ ಸ್ವಯಂ ಸೇವಕರನ್ನು ಗುರುತಿಸಲು ಅವರಿಗೆ ಗುರುತಿನ ಚೀಟಿ, ಬ್ಯಾಡ್ಜ್, ಟೀ-ಶರ್ಟ್ ಅಥವಾ ಕ್ಯಾಪ್​ಗಳನ್ನು ಆಯೋಜಕರು ವಿತರಿಸಬೇಕು. ಶಾಂತ ರೀತಿಯಲ್ಲಿ ಮೆರವಣಿಗೆ ನಡೆಸಬೇಕು.

2. ಪ್ರತಿಷ್ಠಾಪನಾ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸುವುದಿದ್ದರೆ, ಅದಕ್ಕೂ ಮೊದಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

3. ಮೆರವಣಿಗೆಯೂ ಸೂಕ್ಷ್ಮ ಸ್ಥಳ, ಅತಿ ಸೂಕ್ಷ್ಮ ಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಮುಂಭಾಗ ಸಾಗುವಾಗ ಸಿಡಿಮದ್ದು ಪಟಾಕಿಗಳನ್ನು ಸಿಡಿಸಬಾರದು. ಹಾಗೂ ಕರ್ಪೂರಗಳನ್ನು ಹಚ್ಚಬಾರದು.

4. ಗಣೇಶ ವಿಸರ್ಜನೆ ಮೆರವಣಿಗೆ ಸಂಬಂಧ ಯಾವುದೇ ಕಾರಣಕ್ಕೂ ಮಾರ್ಗ ಬದಲಾಯಿಸಬಾರದು. ಬದಲಾಯಿಸಿದರೆ ಆಯೋಜಕರೇ ನೇರ ಹೊಣೆ, ಆಗ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.

5. ಗಣೇಶ ವಿಸರ್ಜನೆ ಬಂಧ ರಾತ್ರಿ 10 ಗಂಟೆಯೊಳಗೆ ಮುಗಿಯಬೇಕು. ಮೆರವಣಿಗೆ ವೇಳೆ ಎಲೆಕ್ಟ್ರಿಕ್ ವೈರ್​ಗಳು ಮತ್ತು ಮರದ ಕೊಂಬೆಗಳ ಬಗ್ಗೆ ಗಮನ ಹರಿಸಿ. ವಿಸರ್ಜನಾ ಮೆರವಣಿಗೆ ಯಶಸ್ವಿಯಾಗಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯವರಿಂದ (ಅರಣ್ಯ ಮತ್ತು ಕೆಇಬಿ) ಪಡೆಯಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ