ಬೆಂಗಳೂರು ರಸ್ತೆ ಗುಂಡಿ ರೇಟಿಂಗ್ ಕೊಡೋದಕ್ಕೆ, ವಿಮರ್ಶೆ ಬರೆಯೋದಕ್ಕೆ ಆಪ್ ಮಾಡಿದ್ರೆ ಹೆಂಗೆ?; ಉದ್ಯಮಿಯ ಐಡಿಯಾಕ್ಕೆ ಸಿಕ್ತು ವ್ಯಾಪಕ ಬೆಂಬಲ
Oct 23, 2024 10:49 AM IST
ಬೆಂಗಳೂರು ರಸ್ತೆ ಗುಂಡಿ ರೇಟಿಂಗ್ ಕೊಡೋದಕ್ಕೆ, ವಿಮರ್ಶೆ ಬರೆಯೋದಕ್ಕೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವ ವಿಚಾರ ಎಕ್ಸ್ ತಾಣದಲ್ಲಿ ಚರ್ಚೆಗೆ ಒಳಗಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ ಹೊಸದಲ್ಲ. ಈಗ ಇದಕ್ಕೆ ರೇಟಿಂಗ್ ಕೊಡೋದಕ್ಕೆ ವಿಮರ್ಶೆ ಬರೋದಕ್ಕೆ ಹೊಸ ಆಪ್ ಮಾಡಿದ್ರೆ ಹೇಗಿರುತ್ತದೆ ಎಂಬ ಆಲೋಚನೆಯನ್ನು ಹಂಚಿಕೊಂಡ ಉದ್ಯಮಿಯ ಟ್ವೀಟ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ವೈರಲ್ ಪೋಸ್ಟ್ ಮತ್ತು ಬೆಂಗಳೂರು ರಸ್ತೆ ಗುಂಡಿ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ರಸ್ತೆ ಗುಂಡಿ ಸಮಸ್ಯೆ ಬೆಂಗಳೂರು ನಗರಕ್ಕೆ ಹೊಸದಲ್ಲ. ಅನೇಕ ವರ್ಷಗಳಿಂದ ಇದೇ ಸಮಸ್ಯೆ ಎದುರಿಸುತ್ತಲೇ ಬೆಂಗಳೂರಿಗರು ನಗರ ಸವಾರಿ ಮಾಡುತ್ತಲೇ ಇದ್ದಾರೆ. ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಕಾರಣ ರಸ್ತೆ ಗುಂಡಿಗಳ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರು ಮೂಲದ ಉದ್ಯಮಿಯೊಬ್ಬರು ನಗರದ ಗುಂಡಿಗಳ ಸಮಸ್ಯೆಯನ್ನು ನಿಭಾಯಿಸಲು ವಿನೂತನ ಪರಿಹಾರ ಕಂಡುಕೊಳ್ಳುವ ಚಿಂತನೆಯನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಸ್ತೆಗಳ ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಸ್ತೆ ಗುಂಡಿಗಳಿಗೆ ರೇಟಿಂಗ್ ಮಾಡೋದಕ್ಕೆ ಮತ್ತು ವಿಮರ್ಶೆ ಬರೆಯೋದಕ್ಕೆ ಅವಕಾಶ ನೀಡುವ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವ ಚಿಂತನೆಯನ್ನು ಅವರು ಪ್ರಸ್ತಾಪಿಸಿದ್ದರು. ಅವರ ಈ ಆಲೋಚನೆ ಎಕ್ಸ್ ತಾಣದಲ್ಲಿ ಸಂಚಲನ ಮೂಡಿಸಿದ್ದು, ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
7 ಸ್ಟಾರ್ ರಸ್ತೆಗುಂಡಿ ನೋಡಿದಾಗ ಹುಟ್ಟಿದ ಚಿಂತನೆ
ಬೆಂಗಳೂರು ಮೂಲದ ಉದ್ಯಮಿ ಶಿವ ನಾರಾಯಣನ್ ಎಂಬುವವರು ಈ ಚಿಂತನೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ನಾವು ಬೆಂಗಳೂರಿನ ರಸ್ತೆ ಗುಂಡಿಗಳಿಗೆ ರೇಟಿಂಗ್ ಕೊಡಲು ಮತ್ತು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ನಾನು ಇತ್ತೀಚೆಗೆ 7-ಸ್ಟಾರ್ ರಸ್ತೆಗುಂಡಿಯನ್ನು ನೋಡಿದೆ. ಅದಕ್ಕೆ ಅರ್ಹವಾದ ಮನ್ನಣೆ ಸಿಕ್ಕಿಲ್ಲ ಎಂದು ಬೇಸರವಾಯಿತು” ಎಂದು ಬರೆದುಕೊಂಡಿದ್ಧಾರೆ.
ಶಿವ ನಾರಾಯಣ್ ಅವರ ಈ ಟ್ವೀಟ್ ಬಹುಬೇಗ ಎಲ್ಲರ ಗಮನಸೆಳೆಯಿತು. ಬೆಂಗಳೂರಿನ ರಸ್ತೆಗಳ ಸ್ಥಿತಿಗತಿ ಕುರಿತಂತೆ ಚರ್ಚೆ ಶುರುವಾಯಿತು. ಅವರ ಟ್ವೀಟ್ 3,900 ಲೈಕ್ಸ್ ಪಡೆದುಕೊಂಡಿದೆ ಮತ್ತು 280ಕ್ಕೂ ಹೆಚ್ಚು ರೀಟ್ವೀಟ್ ಆಗಿದೆ. ಈ ಟ್ವೀಟ್ ಒಂದೂವರೆ ಲಕ್ಷ ಜನರನ್ನು ತಲುಪಿದೆ.
ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ ಹೀಗಿತ್ತು
"ನೀವು ಒಂದು ಗುಂಡಿಯನ್ನು ರೇಟ್ ಮಾಡಿ ಮತ್ತು ಅದನ್ನು ಸರ್ಕಾರಿ ಏಜೆನ್ಸಿಗೆ ಸಲ್ಲಿಸುವ ಹೊತ್ತಿಗೆ, 3-ಸ್ಟಾರ್ ರಸ್ತೆಗುಂಡಿಗಳು 5 ರೇಟಿಂಗ್ ಅನ್ನು ಗಳಿಸುತ್ತದೆ" ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ನಾರಾಯಣನ್ ಅವರ 7 ಸ್ಟಾರ್ ರಸ್ತೆ ಗುಂಡಿಯನ್ನು ಹೊರ ವರ್ತುಲ ರಸ್ತೆಯ ಸರ್ವಿಸ್ ರಸ್ತೆಯಲ್ಲಿನ ದೊಡ್ಡ ಗುಂಡಿಗೆ ಹೋಲಿಸಿ ಹಾಸ್ಯಪ್ರಜ್ಞೆ ತೋರಿದ ಬಳಕೆದಾರರೊಬ್ಬರು, ಬೆಂಗಳೂರು ಶೈಲಿಯಲ್ಲಿ ಈ ರಸ್ತೆಗುಂಡಿಗೆ ಮರದ ಗೆಲ್ಲು ಸಿಕ್ಕಿಸಿ ವಾಹನ ಸವಾರರನ್ನು ಎಚ್ಚರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಅನೇಕರು ಈ ಆಲೋಚನೆಯನ್ನು ಸಾಕಾರಗೊಳಿಸುವ ಬಗ್ಗೆ ಉತ್ಸಾಹ ತೋರಿಸಿದರು. ಇದು ರಾಷ್ಟ್ರಮಟ್ಟದಲ್ಲಿ ಬಂದರೆ ಒಳ್ಳೆಯದು ಎಂಬ ಆಲೋಚನೆಗಳನ್ನೂ ಹಂಚಿಕೊಂಡರು.
"ಇದು ವಾಸ್ತವವಾಗಿ ಅದ್ಭುತ ಕಲ್ಪನೆ. ದಯೆಯಿಂದಿರಿ! ಇದನ್ನು ರಾಷ್ಟ್ರವ್ಯಾಪಿಯಾಗಿ ಅಳೆಯಿರಿ! ಎಂದು ಬಳಕೆದಾರರೊಬ್ಬರು ಒಂದು ಪ್ರದೇಶಕ್ಕೆ ಸೀಮಿತಗೊಳಿಸದೇ ಅದರ ವ್ಯಾಪ್ತಿ ವಿಸ್ತರಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದರು.
ಬೆಂಗಳೂರಿನ ಸರ್ಜಾರಪುರ ರಸ್ತೆಯಲ್ಲಿ ಇತ್ತೀಚೆಗೆ 56 ವರ್ಷದ ಮಹಿಳೆ ರಸ್ತೆ ಗುಂಡಿ ಕಾರಣಕ್ಕೆ ಅಪಘಾತ ಸಂಭವಿಸಿ ಮೃತಪಟ್ಟಿದ್ದರು. ಕೆಲವು ತಿಂಗಳ ಹಿಂದೆ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ರಸ್ತೆ ಗುಂಡಿ ಮುಚ್ಚಲು 15 ದಿನಗಳ ಗಡುವು ವಿಧಿಸಿದ್ದರು. ಬಿಬಿಎಂಪಿ ಅಧಿಕಾರಿಗಳು ನಗರದಲ್ಲಿ 2,795 ರಸ್ತೆ ಗುಂಡಿಗಳನ್ನು ಗುರುತಿಸಿದ್ದರು. ಇದನ್ನು ಮುಚ್ಚಲು 660 ಕೋಟಿ ರೂಪಾಯಿ ವೆಚ್ಚ ಇದೆ ಎಂದೂ ಹೇಳಿದ್ದರು. ಆದಾಗ್ಯೂ ಈಗ ಮಳೆ ಬಂದ ಬೆನ್ನಿಗೆ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಬಿಬಿಎಂಪಿ ಸಿಬ್ಬಂದಿ ಶುರುಮಾಡಿದ್ದಾರೆ. ಅದರೂ ಅದು ಹೆಚ್ಚು ಪ್ರಯೋಜನ ಉಂಟುಮಾಡಿಲ್ಲ.