ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಬಿಜೆಪಿ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರರು, ಚಾರ್ಜ್ಶೀಟ್ನಲ್ಲಿ ಬಹಿರಂಗ
Sep 09, 2024 07:26 PM IST
ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ, ದೋಷಾರೋಪ ಪಟ್ಟಿ ಸಲ್ಲಿಸಿದ ಎನ್‌ಐಎ
- Rameshwaram Cafe Blast: ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಉಗ್ರರು ಬಿಜೆಪಿ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದರಂತೆ. (ವರದಿ-ಎಚ್.ಮಾರುತಿ)
ಬೆಂಗಳೂರು: ನಗರದ ಬ್ರೂಕ್ ಫೀಲ್ಡ್ನಲ್ಲಿರುವ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಾಲ್ವರು ಆರೋಪಿಗಳ ವಿರುದ್ಧ ಸೆಪ್ಟೆಂಬರ್ 9ರ ಸೋಮವಾರ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಆರೋಪಿಗಳಾದ ಮುಸಾವೀರ್ ಹುಸೇನ್ ಶಾಜೀಬ್, ಅಬ್ದುಲ್ ಮಥೀನ್ ಅಹಮದ್ ತಾಹಾ, ಮಾಜ್ ಮುನೀರ್ ಅಹ್ಮದ್, ಮುಝಮ್ಮಿಲ್ ಷರೀಫ್ ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿ ಆರೋಪಪಟ್ಟಿ ಸಲ್ಲಿಸಲಾಗಿದೆ.
ಮಾರ್ಚ್ 1ರಂದು ಮುಸಾವೀರ್ ಹುಸೇನ್ ಶಾಜೀಬ್ ಸುಧಾರಿತ ಸ್ಫೋಟಕ ವಸ್ತುವಿದ್ದ ಬ್ಯಾಗ್ ಅನ್ನು ಈ ಹೋಟೆಲ್ನಲ್ಲಿರಿಸಿ ಸ್ಫೋಟಿಸಿದ್ದ. ಸ್ಫೋಟಕ್ಕೂ ಮುನ್ನ ಈತ ಅಲ್ಲಿಯೇ ತಿಂಡಿ ತಿಂದು ತೆರಳಿದ್ದ. ಈ ಬಾಂಬ್ ಸ್ಪೋಟದಿಂದ ಹೋಟೆಲ್ನಲ್ಲಿದ್ದ 10 ಮಂದಿ ಗಾಯಗೊಂಡಿದ್ದರು. ಸ್ಫೋಟ ನಡೆದ ಎರಡು ದಿನಗಳ ನಂತರ ಮಾರ್ಚ್ 3 ರಂದು ತನಿಖೆಗೆ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು.
29 ಸ್ಥಳಗಳಲ್ಲಿ ಹುಡುಕಾಟ
ಆರೋಪಿಗಳ ಪತ್ತೆಗಾಗಿ ಎನ್‌ಐಎ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಐದಾರು ರಾಜ್ಯಗಳ ಸುಮಾರು 29 ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು. ಸ್ಫೋಟಗೊಂಡ 42 ದಿನಗಳ ನಂತರ ಏಪ್ರಿಲ್ 12ರಂದು ಎನ್‌ಐಎ ಇಬ್ಬರು ಪ್ರಮುಖ ಆರೋಪಿಗಳು ಮತ್ತು ಈ ಸಂಚಿನ ರೂವಾರಿಗಳಾದ ಅಬ್ದುಲ್ ಮಥೀನ್ ಅಹಮದ್ ತಾಹಾ ಮತ್ತು ಮುಸೀರ್ ಹುಸೇನ್ ಶಾಜೀಬ್ ಎಂಬುವರನ್ನು ಬಂಧಿಸಿತ್ತು.
ಮಿಸ್ ಆಗಿದ್ದರೆ ಬಾಂಗ್ಲಾದೇಶಕ್ಕೆ ಪಲಾಯನ
ಇವರು ವಿವಿಧ ಧರ್ಮೀಯರ ಹೆಸರಿನಲ್ಲಿ ವಿವಿಧ ರಾಜ್ಯಗಳ ಹೋಟೆಲ್ಗಳಲ್ಲಿ ತಲೆ ಮರೆಸಿಕೊಳ್ಳುತ್ತಿದ್ದರು. ಒಂದು ವೇಳೆ ಇವರ ಬಂಧನ ತಡವಾಗಿದ್ದರೆ ಬಾಂಗ್ಲಾದೇಶಕ್ಕೆ ಪಲಾಯನ ಮಾಡುವ ಉದ್ದೇಶ ಹೊಂದಿದ್ದರು ಎಂದು ಎನ್‌ಐಎ ತಿಳಿಸಿತ್ತು. ಇವರಿಬ್ಬರ ಜೊತೆಗೆ ಮಾಜ್ ಮುನೀರ್ ಅಹಮದ್ ಮತ್ತು ಮುಜಾಮಿಲ್ ಶರೀಫ್ ಅವರನ್ನೂ ಬಂಧಿಸಲಾಗಿದೆ. ಷರೀಪ್ ಎಂಬಾತ ಚಿಕ್ಕಮಗಳೂರಿನ ಜಿಲ್ಲೆಯ ನಿವಾಸಿಯಾಗಿದ್ದಾನೆ. ಎನ್ನುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಈ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎನ್‌ಐಎ 5 ಮಂದಿ ಶಂಕಿತರನ್ನು ಬಂಧಿಸಿದೆ. ಅಬ್ದುಲ್ ಮಥೀನ್ ಅಹಮದ್ ತಾಹಾ ಮತ್ತು ಮುಸೀರ್ ಹುಸೇನ್ ಶಾಜೀಬ್ ಇಬ್ಬರೂ 2020ರಿಂದ ತಲೆ ಮರೆಸಿಕೊಂಡಿದ್ದರು. ಇವರಿಬ್ಬರೂ ರಾಜ್ಯದ ಶಿವಮೊಗ್ಗ ಜಿಲ್ಲೆಯ ನಿವಾಸಿಗಳು ಎನ್ನುವುದು ಮತ್ತೊಂದು ವಿಶೇಷ.
ಐಸಿಸ್ ಸೇರ್ಪಡೆಗೆ ಇವರೇ ಕಾರಣ
ಐಸಿಸ್ ಉಗ್ರ ಸಂಘಟನೆಯ ಸದಸ್ಯರಾದ ಇವರು ಸಿರಿಯಾ ದೇಶದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಎನ್‌ಐಎ ತಿಳಿಸಿದೆ. ಇವರು ಅನೇಕ ಮುಸ್ಲಿಂ ಯುವಕರು ಉಗ್ರ ಸಂಘಟನೆ ಸೇರಲು ಪ್ರೇರೇಪಿಸುತ್ತಿದ್ದರು. ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಷರೀಫ್ ಐಸಿಸ್ ಸೇರ್ಪಡೆಯಾಗಲು ಇವರೇ ಕಾರಣರಾಗಿದ್ದರು.
ತಾಹಾ ಮತ್ತು ಶಾಜೀಬ್ ಇಬ್ಬರೂ ಡಾರ್ಕ್ ವೆಬ್ನಿಂದ ಡೌನ್ ಲೋಡ್ ಮಾಡಿಕೊಂಡ ದಾಖಲೆಗಳ ಮೂಲಕ ಭಾರತದ ಸಿಮ್ ಕಾರ್ಡ್, ಬ್ಯಾಂಕ್ ಅಕೌಂಟ್ ಮತ್ತು ಬಾಂಗ್ಲಾದೇಶದ ಗುರುತಿನ ಚೀಟಿಗಳನ್ನೂ ಹೊಂದಿದ್ದರು. ಇವರಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣದ ಸಹಾಯ ಲಭ್ಯವಾಗುತ್ತಿತ್ತು.
ಬಿಜೆಪಿ ಕಚೇರಿ ಸ್ಫೋಟ ಯತ್ನ ವಿಫಲ
ಈ ಹಣದ ಮೂಲಕ ಬೆಂಗಳೂರಿನಲ್ಲಿ ಹಿಂಸ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಡೆದ ಇದೇ ವರ್ಷದ ಜನವರಿ 22 ರಂದು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯನ್ನು ಸ್ಫೋಟಿಸಲು ನಡೆಸಿದ ಯತ್ನ ವಿಫಲವಾಗಿತ್ತು. ಆ ನಂತರವೇ ರಾಮೇಶ್ವರಂ ಕೆಫೆ ಸ್ಫೋಟಿಸಿದ್ದರು ಎಂದು ಎನ್‌ಐಎ ತಿಳಿಸಿದೆ.