logo
ಕನ್ನಡ ಸುದ್ದಿ  /  ಕರ್ನಾಟಕ  /  ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕನಿಷ್ಠ 3 ಅಂಡರ್‌ಪಾಸ್ ನಿರ್ಮಾಣ; ಎನ್‌ಎಚ್‌ಎಐ ಪ್ರಸ್ತಾವನೆ

ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕನಿಷ್ಠ 3 ಅಂಡರ್‌ಪಾಸ್ ನಿರ್ಮಾಣ; ಎನ್‌ಎಚ್‌ಎಐ ಪ್ರಸ್ತಾವನೆ

Umesh Kumar S HT Kannada

Nov 17, 2024 12:44 PM IST

google News

ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕನಿಷ್ಠ 3 ಅಂಡರ್‌ಪಾಸ್ ನಿರ್ಮಾಣಕ್ಕೆ ಎನ್‌ಎಚ್‌ಎಐ ಪ್ರಸ್ತಾವನೆ ಮುಂದಿಟ್ಟಿದೆ. (ಸಾಂಕೇತಿಕ ಚಿತ್ರ)

  • ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಸಂಚಾರದಟ್ಟಣೆ ಹೊಸದಲ್ಲ. ಆದರೆ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಈಗ ಎನ್‌ಎಚ್‌ಎಐ ಪ್ರಸ್ತಾವನೆ ಮುಂದಿಟ್ಟಿದ್ದು, ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕನಿಷ್ಠ 3 ಅಂಡರ್‌ಪಾಸ್ ನಿರ್ಮಾಣ ಮಾಡುವ ಚಿಂತನೆಯಲ್ಲಿದೆ. ವಿವರ ವರದಿ ಇಲ್ಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕನಿಷ್ಠ 3 ಅಂಡರ್‌ಪಾಸ್ ನಿರ್ಮಾಣಕ್ಕೆ ಎನ್‌ಎಚ್‌ಎಐ ಪ್ರಸ್ತಾವನೆ ಮುಂದಿಟ್ಟಿದೆ. (ಸಾಂಕೇತಿಕ ಚಿತ್ರ)
ಕೆಂಪೇಗೌಡ ವಿಮಾನ ನಿಲ್ದಾಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕನಿಷ್ಠ 3 ಅಂಡರ್‌ಪಾಸ್ ನಿರ್ಮಾಣಕ್ಕೆ ಎನ್‌ಎಚ್‌ಎಐ ಪ್ರಸ್ತಾವನೆ ಮುಂದಿಟ್ಟಿದೆ. (ಸಾಂಕೇತಿಕ ಚಿತ್ರ) (HT News)

ಬೆಂಗಳೂರು: ಸಂಚಾರ ದಟ್ಟಣೆಗೆ ಕುಖ್ಯಾತಿ ಹೊಂದಿರುವ ನಗರಗಳ ಪೈಕಿ ನಮ್ಮ ಬೆಂಗಳೂರು ಕೂಡ ಒಂದು. ಇದರ ನಿವಾರಣೆಗೆ ನಿತ್ಯವೂ ಚಿಂತನೆಗಳು ನಡೆಯುತ್ತಿದೆ. ಹೊಸ ಬೆಳವಣಿಗೆಯೊಂದರಂತೆ, ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಪರಿಹರಿಸಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೊಡಿಗೇಹಳ್ಳಿ, ಬ್ಯಾಟರಾಯನಪುರ, ಜಕ್ಕೂರು ಮತ್ತು ಅಲ್ಲಾಳಸಂದ್ರದಂತಹ ಪ್ರಮುಖ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆಸಿದೆ. ಈ ಉಪಕ್ರಮಗಳು ಟ್ರಾಫಿಕ್ ಸಿಗ್ನಲ್‌ಗಳನ್ನು ತೊಡೆದುಹಾಕಲು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹೋಗುವ ರಸ್ತೆಯಲ್ಲಿ ಪ್ರಯಾಣವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗಮನಸೆಳೆಯುತ್ತಿವೆ ಬೆಂಗಳೂರು ಸಂಚಾರ - ಸವಾಲುಗಳು

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್‌ ಲಿಮಿಟೆಡ್‌ ಈಗ ಬ್ಲೂ ಲೈನ್ ಮೆಟ್ರೋ ಕಾಮಗಾರಿ ಕೈಗೆತ್ತಿಕೊಂಡಿದ್ದು ಸರ್ವಿಸ್ ರಸ್ತೆಗಳಲ್ಲಿ ಸಂಚಾರ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಅಂಡರ್‌ಪಾಸ್‌ ಕಾಮಗಾರಿ ಸಾಕಾರಗೊಳಿಸುವುದಕ್ಕೆ ಇರುವ ಸವಾಲುಗಳನ್ನು ಎತ್ತಿ ತೋರಿಸಿದರು. “ರಾಷ್ಟ್ರೀಯ ಹೆದ್ದಾರಿಯ ಎಲಿವೇಟೆಡ್ ಕಾರಿಡಾರ್‌ನ ಕೆಳಗೆ, ಅನೇಕ ಜಂಕ್ಷನ್‌ಗಳಿವೆ. ಅಂಡರ್‌ಪಾಸ್‌ಗಳನ್ನು ನಿರ್ಮಿಸುವುದು ಸಂಚಾರ ಸುಗಮಗೊಳಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಭೂಮಿಯ ಲಭ್ಯತೆ ಮತ್ತು ಎಲಿವೇಟೆಡ್ ಕಾರಿಡಾರ್‌ಗಾಗಿ ನಿರ್ಮಿಸಲಾದ ದೈತ್ಯ ಪಿಲ್ಲರ್‌ಗಳ ಉಪಸ್ಥಿತಿಯು ಸವಾಲುಗಳು” ಎಂದು ಕೆಬಿ ಜಯಕುಮಾರ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಂಡರ್‌ಪಾಸ್ ಎಲ್ಲೆಲ್ಲಿ

ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಪ್ರಸ್ತಾವಿತ ಅಂಡರ್‌ಪಾಸ್‌ಗಳ ವಿವರ ಹೀಗಿದೆ -

1) ಐಎಎಫ್‌ ಯಲಹಂಕ ಸ್ಟೇಷನ್‌ ಅಂಡರ್‌ಪಾಸ್‌: ಕಟ್ ಮತ್ತು ಕವರ್ ವಿಧಾನವನ್ನು ಬಳಸಿಕೊಂಡು 750 ಮೀಟರ್ ಅಂಡರ್‌ಪಾಸ್ ಅನ್ನು ಯೋಜಿಸಲಾಗಿದೆ. ಇದು ವಿಮಾನ ನಿಲ್ದಾಣಕ್ಕೆ ಹೋಗುವ ವಾಹನ ಚಾಲಕರಿಗೆ ಪ್ರಯೋಜನಕಾರಿಯಾಗಿದೆ.

2) ಸದಾಹಳ್ಳಿ ಅಂಡರ್‌ಪಾಸ್‌: ಟೋಲ್ ಗೇಟ್ ಬಳಿ ಇರುವ ಅಡಚಣೆಗಳನ್ನು ಕಡಿಮೆ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದರ ಪ್ರಸ್ತಾವನೆಯನ್ನು ಮುಂದಿರಿಸಿದೆ.

3) ಸರ್ವಿಸ್ ರಸ್ತೆ ಪುನಶ್ಚೇತನ: ಯಲಹಂಕ ಪ್ರಯಾಣಿಕರ ಉತ್ತಮ ಸಂಚಾರ ಅನುಕೂಲಕ್ಕಾಗಿ ಅಲ್ಲಾಳಸಂದ್ರ ಮತ್ತು ಜಕ್ಕೂರು ಜಂಕ್ಷನ್ ನಡುವೆ ಮೆಟ್ರೋ ಕಾಮಗಾರಿಯಿಂದ ಪ್ರಭಾವಿತವಾಗಿರುವ ಸರ್ವಿಸ್ ರಸ್ತೆಗಳನ್ನು ಪುನಃಸ್ಥಾಪಿಸುವ ಪ್ರಸ್ತಾವನೆಯೂ ಇದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆಬ್ಬಾಳದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಯೋಜಿಸಿದೆ. ಜೊತೆಗೆ ಹೊಸ ಬಸ್ ಬೇಗಳು ಮತ್ತು ಲಭ್ಯವಿರುವ ಭೂಮಿಯಲ್ಲಿ ಸಾರ್ವಜನಿಕ ಸೌಲಭ್ಯಗಳನ್ನು ಒದಗಿಸುವ ಚಿಂತನೆಯಲ್ಲಿದೆ. ಎಸ್ಟೀಮ್ ಮಾಲ್‌ನಂತಹ ಸ್ಥಳಗಳ ಸಮೀಪವಿರುವ ಸರ್ವೀಸ್‌ ರಸ್ತೆಗಳ ಬಹುನಿರೀಕ್ಷಿತ ಮರುಸ್ಥಾಪನೆಯು ಪೀಕ್-ಅವರ್ ಟ್ರಾಫಿಕ್ ತೊಂದರೆಗಳನ್ನು ತಗ್ಗಿಸುವ ನಿರೀಕ್ಷೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡರ ನಿರ್ದೇಶನಕ್ಕೆ ಪ್ರತಿಕ್ರಿಯಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು, ಯಲಹಂಕದ ಕೆಫೆ ಕಾಫಿ ಡೇ ಬಳಿಯ ಹೆದ್ದಾರಿಯಂತಹ ಅಪಘಾತ ಪೀಡಿತ ಪ್ರದೇಶಗಳ ಸಮಸ್ಯೆಯನ್ನೂ ಬಗೆಹರಿಸುತ್ತದೆ. ಪ್ರಸ್ತಾವಿತ ಯೋಜನೆಗಳು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಈ ನಿರ್ಣಾಯಕ ಮಾರ್ಗದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಸುರಕ್ಷತೆಯನ್ನು ಸುಧಾರಿಸಲು ಮತ್ತು ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ ಎಂದು ವರದಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ