logo
ಕನ್ನಡ ಸುದ್ದಿ  /  ಕರ್ನಾಟಕ  /  ನಮ್ಮ ಮೆಟ್ರೋ ಪ್ರಯಾಣಿಕರ ಬಹು ದೊಡ್ಡ ಸಮಸ್ಯೆ ‘ಪಾರ್ಕಿಂಗ್’; ಇದಕ್ಕಿಲ್ಲವೇ ಪರಿಹಾರ, ಸವಾರರು ಏನು ಮಾಡಬಹುದು?

ನಮ್ಮ ಮೆಟ್ರೋ ಪ್ರಯಾಣಿಕರ ಬಹು ದೊಡ್ಡ ಸಮಸ್ಯೆ ‘ಪಾರ್ಕಿಂಗ್’; ಇದಕ್ಕಿಲ್ಲವೇ ಪರಿಹಾರ, ಸವಾರರು ಏನು ಮಾಡಬಹುದು?

Prasanna Kumar P N HT Kannada

Nov 13, 2024 12:00 PM IST

google News

ನಮ್ಮ ಮೆಟ್ರೋ ಪ್ರಯಾಣಿಕರ ಬಹು ದೊಡ್ಡ ಸಮಸ್ಯೆ ‘ಪಾರ್ಕಿಂಗ್’; ಇದಕ್ಕಿಲ್ಲವೇ ಪರಿಹಾರ, ಸವಾರರು ಏನು ಮಾಡಬಹುದು?

    • Namma Metro Parking: ಬೆಂಗಳೂರಿನ ಅಷ್ಟೂ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ದ್ವಿಚಕ್ರ ವಾಹನಗಳಿಗೆ ಸ್ಥಳಾವಕಾಶದ ಕೊರತೆ ಇರುವಾಗ ಕಾರುಗಳಿಗೆ ಪಾರ್ಕಿಂಗ್ ಜಾಗ ಎಲ್ಲಿದ್ದಿತು? ಪ್ರತಿದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. (ವರದಿ-ಎಚ್.ಮಾರುತಿ)
ನಮ್ಮ ಮೆಟ್ರೋ ಪ್ರಯಾಣಿಕರ ಬಹು ದೊಡ್ಡ ಸಮಸ್ಯೆ ‘ಪಾರ್ಕಿಂಗ್’; ಇದಕ್ಕಿಲ್ಲವೇ ಪರಿಹಾರ, ಸವಾರರು ಏನು ಮಾಡಬಹುದು?
ನಮ್ಮ ಮೆಟ್ರೋ ಪ್ರಯಾಣಿಕರ ಬಹು ದೊಡ್ಡ ಸಮಸ್ಯೆ ‘ಪಾರ್ಕಿಂಗ್’; ಇದಕ್ಕಿಲ್ಲವೇ ಪರಿಹಾರ, ಸವಾರರು ಏನು ಮಾಡಬಹುದು?

ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರತಿದಿನ ಲಕ್ಷಾಂತರ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಿದೆ. ಅದಕ್ಕಾಗಿ ಬಿಎಂಆರ್​​ಸಿಎಲ್​ಗೆ ಧನ್ಯವಾದ ಹೇಳಲೇಬೇಕು. ಆದರೆ ಮೆಟ್ರೋ ಪ್ರಯಾಣಿಕರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಯಾಣ ದರ ಏರಿಕೆ ಭೂತ ಒಂದು ಕಡೆ ಕಾಡುತ್ತಿದೆ. ಒಂದು ವೇಳೆ ಶೇ. 15-20 ಏರಿಕೆಯಾದರೂ ಅಸ್ತ್ರ ಮಟ್ಟಿಗೆ ಮಧ್ಯಮ ಹಾಗೂ ಬಡ ಪ್ರಯಾಣಿಕರಿಗೆ ಹೊರೆಯೇ ಸರಿ. ಮತ್ತೊಂದು ಸಮಸ್ಯೆ ಪಾರ್ಕಿಂಗ್. ಬೆಂಗಳೂರಿನ ಅಷ್ಟೂ ಮೆಟ್ರೋ ನಿಲ್ದಾಣಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ದ್ವಿಚಕ್ರ ವಾಹನಗಳಿಗೆ ಸ್ಥಳಾವಕಾಶದ ಕೊರತೆ ಇರುವಾಗ ಕಾರುಗಳಿಗೆ ಪಾರ್ಕಿಂಗ್ ಜಾಗ ಎಲ್ಲಿದ್ದಿತು? ಪ್ರತಿದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಪಾರ್ಕಿಂಗ್ ಜಾಗ ಕನಿಷ್ಠ ಪ್ರಮಾಣದಲ್ಲಿದೆ. ಕೆಲವು ನಿಲ್ದಾಣಗಳಲ್ಲಿ ಇಲ್ಲವೇ ಇಲ್ಲ ಎಂದು ಹೇಳಬಹುದು.

ಉದಾಹರಣೆಗೆ ಜಯನಗರ, ಜೆಪಿ ನಗರ, ವಿಜಯನಗರ, ಇಂದಿರಾನಗರ ಮೊದಲಾದ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕ. ಆದರೆ ಇವರ ಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಬಹುತೇಕ ಪ್ರಯಾಣಿಕರು ತಮ್ಮ ಕಾರು ದ್ವಿಚಕ್ರ ವಾಹನಗಳನ್ನು ರಸ್ತೆ, ಫುಟ್ ಪಾತ್, ಇಲ್ಲವೇ ಅಂಗಡಿ, ಹೋಟೆಲ್ ಇಲ್ಲವೇ ಬೇರೆಯವರ ಮನೆಗಳ ಮುಂದೆ ನಿಲ್ಲಿಸಿ ಹೋಗಬೇಕಾದ ಪರಿಸ್ಥಿತಿ ಇದೆ. ಕೆಲವು ನಿಲ್ದಾಣಗಳಲ್ಲಿ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಪ್ರಯಾಣಕ್ಕೆ 30 ರೂಪಾಯಿ ಕೊಟ್ಟರೆ ಪಾರ್ಕಿಂಗ್​ಗೂ 30 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಇದು ಕೂಡಾ ಹೊರೆಯೇ. ಇದರ ಬದಲು ಸ್ವಂತ ವಾಹನದಲ್ಲಿ ಹೋಗಬಹುದಲ್ಲವೇ ಎಂದು ರಾಜೇಶ್ ಪ್ರಶ್ನಿಸುತ್ತಾರೆ. ಆದರೂ ಸುರಕ್ಷಿತವಲ್ಲದ ಸ್ಥಳಗಳಲ್ಲಿ ಗಂಟೆಗಟ್ಟಲೆ ವಾಹನ ನಿಲುಗಡೆ ಮಾಡುವುದು ಕ್ಷೇಮವೂ ಅಲ್ಲ. ಏಕೆಂದರೆ ಕಳ್ಳಕಾಕರ ಭಯ ಇದ್ದೇ ಇರುತ್ತದೆ.

ಮತ್ತೊಂದು ಕಡೆ ನಿಲ್ದಾಣದ ಸುತ್ತಮುತ್ತಲಿನ ವ್ಯಾಪಾರಿಗಳು ಮತ್ತು ನಿವಾಸಿಗಳಿಗೂ ಕಷ್ಟ. ಬೆಳಗ್ಗೆ ದ್ವಿಚಕ್ರ ವಾಹನ ಅಥವಾ ಕಾರು ನಿಲ್ಲಿಸಿ ಹೋಗುತ್ತಾರೆ. ನಮ್ಮ ವ್ಯಾಪಾರಕ್ಕೆ ಅಡ್ಡಿ ಉಂಟಾಗುತ್ತದೆ. ಬರುವ ಗ್ರಾಹಕರಿಗೆ ಪಾರ್ಕಿಂಗ್ ಇಲ್ಲದಂತಾಗುತ್ತದೆ ಎಂದು ಹೇಳುತ್ತಾರೆ. ಮನೆಯ ನಿವಾಸಿಗಳದ್ದೂ ಮತ್ತೊಂದು ರೀತಿಯ ತೊಂದರೆ. ಮನೆ ಮುಂದೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ನಮ್ಮ ವಾಹನಗಳಿಗೆ ಅಡಚಣೆ ಉಂಟಾಗುತ್ತದೆ ಎನ್ನುತ್ತಾರೆ. ಪ್ರತಿಷ್ಠಿತ ಬಡಾವಣೆ ಇಂದಿರಾನಗರ ಮೊದಲಾದ ಕಡೆ ನಿವಾಸಿಗಳು ವಾಹನ ತೆರವುಗೊಳಿಸಲು ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸ್ವಲ್ಪ ದಿನದ ನಂತರ ಮತ್ತೆ ಅದೇ ಸಮಸ್ಯೆ ಇದೆ. ಎಷ್ಟು ಬಾರಿ ಪೊಲೀಸರಿಗೆ ದೂರು ನೀಡಲು ಸಾಧ್ಯ ಸರ್ ಎಂದು ಹೇಳುತ್ತಾರೆ.

700 ವಾಹನಗಳ ನಿಲುಗಡೆಗೆ ಅವಕಾಶ

ಮಾಲ್​ಗಳ ಬಳಿ ಇರುವ ಮೆಟ್ರೋ ಸ್ಟೇಷನ್​ಗಳ ಪಾರ್ಕಿಂಗ್ ಪರಿಸ್ಥಿತಿ ಮತ್ತಷ್ಟು ಡೋಲಾಯಮಾನವಾಗಿದೆ. ಹೇಳಿ ಕೇಳಿ ಮಾಲ್​ಗಳಲ್ಲಿ ಪಾರ್ಕಿಂಗ್ ಶುಲ್ಕ ದುಬಾರಿ. ಮಾಲ್​ಗಳಿಗೆ ಬರುವ ಗ್ರಾಹಕರು ಮೆಟ್ರೋ ಸ್ಟೇಷನ್​​ಗಳ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿ ಮಾಲ್ ಸುತ್ತಲು ಹೋಗುತ್ತಾರೆ. ಮೆಟ್ರೋ ಪ್ರಯಾಣಿಕರಿಗೆ ವಾಹನ ನಿಲುಗಡೆಗೆ ಸ್ಥಳವೇ ಇರುವುದಿಲ್ಲ. ಇದಕ್ಕೆ ಕೋಣನಕುಂಟೆ ಮೆಟ್ರೋ ಸ್ಟೇಷನ್ ಬಳಿ ಇರುವ ಫಾರಂ ಮಾಲ್ ಉತ್ತಮ ಉದಾಹರಣೆ. ಇಲ್ಲಿ 700 ವಾಹನಗಳ ನಿಲುಗಡೆಗೆ ಅವಕಾಶ ಇದೆ. ಮಾಲ್​ನ ನೂರಾರು ಶಾಪ್ ಮಾಲೀಕರು ಮತ್ತು ಗ್ರಾಹಕರು ಮೆಟ್ರೋ ನಿಲ್ದಾಣದಲ್ಲಿ ಪಾರ್ಕ್ ಮಾಡುತ್ತಾರೆ. ದಿನನಿತ್ಯ ಪ್ರಯಾಣಿಸುವ ಗ್ರಾಹಕರಿಗೆ ಕಿರಿಕಿರಿ ತಪ್ಪಿದ್ದಲ್ಲ.

ಸಮಸ್ಯೆ ಇಲ್ಲಿಗೆ ನಿಲ್ಲುವುದಿಲ್ಲ. ನಾಗಸಂದ್ರ ಬೈಯಪ್ಪನಹಳ್ಳಿ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸ್ಥಳ ಇದೆ. ಆದರೆ ಸೂಕ್ತ ವ್ಯವಸ್ಥೆ ಇಲ್ಲ. ಡಾಂಬರು ಅಥವಾ ಸಿಮೆಂಟ್ ಹಾಕಿಲ್ಲದ ಕಾರಣ ಸಮತಟ್ಟಾಗಿಲ್ಲ. ಮಳೆ ಬಂದರೆ ಪಾರ್ಕಿಂಗ್ ಸ್ಥಳ ಕೆಸರು ಗದ್ದೆಯಾಗುತ್ತದೆ. ವಾಹನ ನಿಲ್ಲಿಸುವುದಾದರೂ ಎಲ್ಲಿ ಎನ್ನುವುದು ಕೃಷ್ಣಮೂರ್ತಿ ಪ್ರಶ್ನೆ. ಕಬ್ಬನ್ ಪಾರ್ಕ್ ಎಂ ಜಿ ರಸ್ತೆ ನಿಲ್ದಾಣಗಳಲ್ಲಿ ನಿರ್ದಿಷ್ಟ ಸ್ಥಳವೇ ಇಲ್ಲ. ಎಲ್ಲೆಂದರಲ್ಲಿ ವಾಹನ ನಿಲ್ಲಿಸಲಾಗುತ್ತದೆ. ಒಮ್ಮೊಮ್ಮೆ ವಾಹನಗಳು ಕಳುವಾದ ಉದಾಹರಣೆಗಳೂ ಉಂಟು. ಕೆಲವು ನಿಲ್ದಾಣಗಳಲ್ಲಿ ರಾತ್ರಿ ವೇಳೆ ವಾಹನ ನಿಲುಗಡೆಗೆ ಅವಕಾಶ ಇಲ್ಲ.

ಪ್ರಯಾಣಿಕರು ಏನು ಮಾಡಬಹುದು?

ವಿಜಯನಗರ ಚಿಕ್ಕಪೇಟೆ ನಿಲ್ದಾಣಗಳಲ್ಲಿ ಪಾರ್ಕಿಂಗ್​ಗೆ ಬೇಡಿಕೆ ಹೆಚ್ಚು. ಆದರೆ ಸ್ಥಳವೇ ಇಲ್ಲ. ಸಮಸ್ಯೆಯ ಅರಿವು ಇದೆ. ಗರಿಷ್ಠ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದೇವೆ. ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಕೆಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹೊರ ವಲಯದ ನಿಲ್ದಾಣಗಳಲ್ಲಿ ಪಾರ್ಕಿಂಗ್ ಮೊದಲಾದ ಸೌಕರ್ಯಗಳನ್ನು ಒದಗಿಸಬಹುದು. ಆದರೆ ಹೃದಯ ಭಾಗದಲ್ಲಿರುವ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಕಷ್ಟ. ಪ್ರಯಾಣಿಕರೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಮಾರ್ಗ ಎನ್ನಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ