MLA Munirathna: ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ; ಬಿಜೆಪಿ ಶಾಸಕ ಮುನಿರತ್ನ ಪೊಲೀಸರ ವಶಕ್ಕೆ
Sep 14, 2024 07:23 PM IST
ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ; ಬಿಜೆಪಿ ಶಾಸಕ ಮುನಿರತ್ನ ಪೊಲೀಸರ ವಶಕ್ಕೆ
- MLA Munirathna: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಅವರನ್ನು ಕೋಲಾರದ ನಂಗಲಿ ಗ್ರಾಮದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿರತ್ನ ವಿರುದ್ಧ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಕೋಲಾರದ ನಂಗಲಿ ಗ್ರಾಮದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಬಿಎಂಪಿ ಗುತ್ತಿಗೆಗಾರ ಬಳಿ 30 ಲಕ್ಷ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರ ಜೊತೆಗೆ ಜೀವ ಬೆದರಿಕೆಯನ್ನೂ ಹಾಕಿದ್ದ ಮುನಿರತ್ನ ವಿರುದ್ಧ ಗುತ್ತಿಗೆದಾರ ಚೆಲುವರಾಜು ಎಂಬವರು ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿದ್ದರು. ಈ ಬೆನ್ನಲ್ಲೇ ಕೋಲಾರದಿಂದ ಆಂಧ್ರ ಪ್ರದೇಶಕ್ಕೆ ನಾಪತ್ತೆಯಾಗುತ್ತಿದ್ದ ಮುನಿರತ್ನ ಅವರನ್ನು ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ಅವರ ಮೊಬೈಲ್ ಲೊಕೇಶನ್ ಆಧರಿಸಿ ಆಂಧ್ರಕ್ಕೆ ಹೋಗುತ್ತಿದ್ದ ಶಾಸಕನನ್ನು ವಶಕ್ಕೆ ಪಡೆಯಲಾಯಿತು.
ಘನ ತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಸಂಬಂಧಿಸಿ 30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬುವವರು ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದರು. ತ್ಯಾಜ್ಯ ನಿರ್ವಹಣೆಗೆ 10 ಆಟೋ ಟಿಪ್ಪರ್‌ಗಳನ್ನು ನೀಡಲು ಮುನಿರತ್ನ 2021ರಲ್ಲಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ, ಬಿಬಿಎಂಪಿಯಿಂದ ವಾಹನಗಳನ್ನು ಮಂಜೂರು ಮಾಡಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಚಲುವರಾಜು ಆರೋಪಿಸಿದ್ದಾರೆ. ಬೆಂಗಳೂರಿನ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಾಸಕರ ಜೊತೆಗೆ ಸರ್ಕಾರಿ ಅಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ಅಭಿಷೇಕ್ ಮತ್ತು ಶಾಸಕರ ಆಪ್ತ ಸಹಾಯಕ ವಸಂತಕುಮಾರ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕೋಲಾರ ಪೊಲೀಸರು ಬಂಧಿಸಿದ್ದು, ಇದೀಗ ಬೆಂಗಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನು? ಎಫ್ಐಆರ್ನಲ್ಲಿ ಏನಿದೆ?
ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಅವರು ಈ ಬಗ್ಗೆ ಮಾತನಾಡಿ, ನನ್ನನ್ನು ಕರೆಸಿ 30 ಲಕ್ಷ ಹಣ ಕೇಳಿದ್ದರು. ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ಜಾತಿ ನಿಂದನೆ ಮಾಡಿದ್ದರು. ಹೀಗಾಗಿ ನಾನು ಸೂಸೈಡ್ ಮಾಡಿಕೊಳ್ಳೋಕೆ ಮುಂದಾಗಿದ್ದೆ. ಆದರೆ ನನ್ನ ಕುಟುಂಬದ ಸಲುವಾಗಿ ನಾನಿನ್ನೂ ಜೀವಂತವಾಗಿದ್ದೇನೆ. ಅದು ಕೂಡ ರೇಣುಕಾಸ್ವಾಮಿಗೂ ಆಗೋ ಗತಿನೇ ನಿನಗೂ ಆಗುತ್ತದೆ. ನಿನ್ನನ್ನು ಮುಗಿಸಲು ಸಾಕಷ್ಟು ಪ್ಲಾನ್ಗಳಿವೆ ಎಂದು ಜೀವ ಬೆದರಿಕೆ ಹಾಕಿರೋದಾಗಿ ದೂರಿನಲ್ಲಿ ಚೆಲುವರಾಜು ಉಲ್ಲೇಖಿಸಿದ್ದಾರೆ. ಎಂಎಲ್ಎ ಮುನಿರತ್ನ ಆಪ್ತ ವಸಂತ್ ಕುಮಾರ್ ಕೂಡ ಗುತ್ತಿಗಾರನಿಗೆ ಬೆದರಿಕೆ ಹಾಕಿದ್ದನಂತೆ. ರೇಣುಕಾಸ್ವಾಮಿ ಅವರನ್ನು ಹತ್ಯೆಗೈದಂತೆ. ರೇಣುಕಾಸ್ವಾಮಿಯನ್ನು ಕೊಂದಿದ್ಯಾರು ಯಾರು ಗೊತ್ತಾ? ಮುನಿರತ್ನ ಅವರ ತಂಗಿ ಮಗ. ಸುಮ್ಮನೆ ಅವರು ಹೇಳಿದ್ದಂತೆ ಕೇಳೋದು ಕಲಿ ಎಂದು ಚೆಲುವರಾಜುಗೆ ವಸಂತ್ ಕುಮಾರ್ ಮುಖಾಂತರ ವಾರ್ನಿಂಗ್ ಕೊಟ್ಟಿದ್ದರಂತೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ ಆರೋಪಿಸಿದ್ದ ಚೆಲುವರಾಜ ಅವರು ಮೆ. ಗಂಗಾ ಎಂಟರ್ ಪ್ರೈಸಸ್ ಎಂಬ ಕಂಪನಿ ಹೆಸರಿನಲ್ಲಿ ಚೆಲುವರಾಜು ಗುತ್ತಿಗೆದಾರರಾಗಿದ್ದಾರೆ. ಚೆಲುವರಾಜು ಅವರು ಲಕ್ಷ್ಮೀದೇವಿ ನಗರ ವಾರ್ಡ್ನ ಡಿ ದೇವರಾಜು ಅರಸು ಟ್ರಕ್ ಟರ್ಮಿನಲ್ ಪ್ರದೇಶದಲ್ಲಿ ಕಸ ಸಂಗ್ರಹದ ಗುತ್ತಿಗೆ ಪಡೆದಿದ್ದಾರೆ. ನಾನು ಮಾಗಡಿ ತಾಲೂಕಿನವ. ಆರಂಭದಲ್ಲಿ ಪೌರ ಕಾರ್ಮಿಕನಾಗಿದ್ದೆ, ನಂತರ ಟ್ರಕ್ ಡ್ರೈವರ್ ಆದೆ. ಬಳಿಕ ಗುತ್ತಿಗೆದಾರನಾದೆ. ಒಂದಿನ ಎಂಎಲ್ಎ ಗನ್ ಮ್ಯಾನ್ ಕರೆ ಮಾಡಿದ್ದ ಕಾರಣ ವೈಯ್ಯಾಲಿಕಾವಲ್ನಲ್ಲಿರುವ ಮುನಿರತ್ನ ಅವರ ಮನೆ ಹೋಗಿದ್ದೆ. ಅಂದು ನಿನಗೆ 10 ಆಟೋ ಕೊಡಿಸ್ತೀನಿ, 20 ಲಕ್ಷ ಕೊಡು ಎಂದು ಹೇಳಿದ್ದರು. ಆಗ ಕೊಟ್ಟಿದ್ದೆ. ಆದರೆ ಆಟೋ ಮಾತ್ರ ಕೊಡಿಸಿರಲಿಲ್ಲ.
ಜೂನ್ನಲ್ಲಿ ಮತ್ತೆ ಮುನಿರತ್ನ ಕಾಲ್ ಮಾಡಿ ಮನೆ ಕಡೆ ಬಾ ಎಂದಿದ್ರು. ಆದರೆ ನಾನು ಹೋಗಿರಲಿಲ್ಲ. ಬಳಿಕ ಶಾಸಕ ಆಪ್ತ ಪತ್ರ ಬರೆದು ಸಭೆಗೆ ಕರೆದಿದ್ದರು. ಆದರೆ ಸಭೆಗೆ ಬಂದಾಗ ಬಾಯಿಗೆ ಬಂದಂತೆ ಮಾತನಾಡಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೆ, ನನ್ನ ಟೆಂಡರ್ ರದ್ದು ಮಾಡಲು ಕಮಿಷನರ್ಗೂ ಪತ್ರ ಬರೆದಿದ್ದರು. ಅವರ ಮನೆಗೆ ಹೋದಾಗಲೆಲ್ಲ ಬಾಯಿಗೆ ಬಂದಂತೆ ಬೈದಿದ್ದರಂತೆ. ತುಂಬಾ ಕಿರುಕುಳ ಕೊಟ್ಟಿದ್ದರಂತೆ. ಸೆಪ್ಟೆಂಬರ್ 9ರಂದು ಮತ್ತೆ ಕಾಲ್ ಮಾಡಿ ರೇಣುಕಾಸ್ವಾಮಿಯಂತೆಯೇ ಕೊಲೆ ಮಾಡುತ್ತೇವೆ ಎಂದು ಮುನಿರತ್ನ ಆಪ್ತ ಸಹಾಯಕ ಬೆದರಿಸಿದ್ದರಂತೆ. ಮುನಿರತ್ನ ಅವರು ಚೆಲುವರಾಜು ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ, ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ.