logo
ಕನ್ನಡ ಸುದ್ದಿ  /  ಕರ್ನಾಟಕ  /  Bs Yediyurappa: ಸಿಐಡಿ ಮುಂದೆ ಹಾಜರಾಗಿ ಲೈಂಗಿಕ ಕಿರುಕುಳ ಆರೋಪ ಅಲ್ಲಗಳೆದ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ

BS Yediyurappa: ಸಿಐಡಿ ಮುಂದೆ ಹಾಜರಾಗಿ ಲೈಂಗಿಕ ಕಿರುಕುಳ ಆರೋಪ ಅಲ್ಲಗಳೆದ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ

HT Kannada Desk HT Kannada

Jun 18, 2024 07:48 AM IST

google News

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

    • ಯಡಿಯೂರಪ್ಪ ಅವರು ತಮ್ಮ ಮೇಲಿನ ಲೈಂಗಿಕ ಆರೋಪಗಳನ್ನು ಅಲ್ಲಗಳೆದಿದ್ದಾರೆ ಎಂದು ಮೂಲಗಳು ಹೇಳಿವೆ. (ವರದಿ: ಮಾರುತಿ ಎಚ್‌.)
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ವಿಚಾರಣೆಗೆ ಹಾಜರಾಗಿದ್ದು ಅವರ ಹೇಳಿಕೆಯನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಸೋಮವಾರ 11 ಗಂಟೆಗೆ ಆಗಮಿಸಿದರು. ಮಧ್ಯಾಹ್ನ 2 ಗಂಟೆಯವರೆಗೂ ಅವರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಯಿತು. ಪ್ರಕರಣದ ತನಿಖಾಧಿಕಾರಿಯಾಗಿರುವ ಡಿವೈಎಸ್‌ಪಿ ಪುನೀತ್‌ ಅವರು ಯಡಿಯೂರಪ್ಪ ಅವರ ವಿಚಾರಣೆ ನಡೆಸಿದರು.

ಆರಂಭದಲ್ಲಿ ತನಿಖಾಧಿಕಾರಿಗಳು ಯಡಿಯೂರಪ್ಪ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ನಂತರ ಅವರ ಹೇಳಿಕೆಯನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಯಡಿಯೂರಪ್ಪ ಅವರು ತಮ್ಮ ಮೇಲಿನ ಲೈಂಗಿಕ ಆರೋಪಗಳನ್ನು ಅಲ್ಲಗಳೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಅವರು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಜೊತೆಗೆ ಈ ಪ್ರಕರಣವನ್ನು ರದ್ದುಗೊಳಿಸುವಂತೆಯೂ ಅವರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ ಅವರನ್ನು ಬಂಧಿಸದಂತೆ ತಡೆಯಾಜ್ಞೆ ನೀಡಿ ಜೂನ್‌ 17 ರ ಸೋಮವಾರ ವಿಚಾರಣೆಗೆ ಹಾಜರಾಗುಂತೆ ಸೂಚಿಸಿತ್ತು. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು ಈ ಅರ್ಜಿಯ ವಿಚಾರಣೆ ನಡೆಸಿದ್ದರು. ಮುಂದಿನ 15 ದಿನಗಳ ಕಾಲ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸೂಚನೆ ನೀಡಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿ ಇರಿಸಿದ್ದರು.

ಯಡಿಯೂರಪ್ಪ ಅವರು ಜೂನ್‌ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಫೆ 2 ರಂದು ಸಂತ್ರಸ್ತ ಮಹಿಳೆ ಮತ್ತು ಅವರ ಮಗಳು ನ್ಯಾಯ ಒದಗಿಸುವಂತೆ ಯಡಿಯೂರಪ್ಪ ಅವರನ್ನು ಡಾಲರ್ಸ್‌ ಕಾಲೀನಿ ನಿವಾಸದಲ್ಲಿ ಭೇಟಿ ಮಾಡಿದ್ದರು. ಆಗ ಯಡಿಯೂರಪ್ಪ ಅವರು ಸಹಾಯ ಮಾಡುವ ನೆಪದಲ್ಲಿ ಮಗಳನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಈ ಮಹಿಳೆ ಮಾರ್ಚ್‌ 3 ರಂದು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾರ್ಚ್‌ 14 ರಂದು ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ-2021) ದಾಖಲಾಗಿತ್ತು. ನಂತರ ಸಂತ್ರಸ್ತ ಮಹಿಳೆಯು ಎಸಿಎಂಎಂ ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದರು.

ಮಾರ್ಚ್‌ 14 ರಂದು ಸರ್ಕಾರವು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಏಪ್ರಿಲ್‌ 12 ರಂದು ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ ನೀಡಿತ್ತು. ಆದರೆ 12 ರಂದು ಹಾಜರಾಗುವುದಾಗಿ ಯಡಿಯೂರಪ್ಪ ತಿಳಿಸಿದ್ದರು. ದೂರುದಾರ ಮಹಿಳೆ ಮೇ 26 ರಂದು ಮೃತಪಟ್ಟಿದ್ದರು. ಅವರ ಸಹೋದರ ಜೂನ್‌ 10 ರಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತ್ವರಿತ ವಿಚಾರಣೆಗೆ ಆಗ್ರಹಪಡಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ