logo
ಕನ್ನಡ ಸುದ್ದಿ  /  ಕರ್ನಾಟಕ  /  Bs Yediyurappa: ಮುನಿಸಿಕೊಂಡ ಯಡಿಯೂರಪ್ಪ, ಹೈಕಮಾಂಡ್‌ ಮಧ್ಯಪ್ರವೇಶ, ಬಗೆಹರಿಯಿತೇ ಸಮಸ್ಯೆ?

BS Yediyurappa: ಮುನಿಸಿಕೊಂಡ ಯಡಿಯೂರಪ್ಪ, ಹೈಕಮಾಂಡ್‌ ಮಧ್ಯಪ್ರವೇಶ, ಬಗೆಹರಿಯಿತೇ ಸಮಸ್ಯೆ?

HT Kannada Desk HT Kannada

Dec 15, 2022 06:57 AM IST

google News

ಬಿಎಸ್‌ ಯಡಿಯೂರಪ್ಪ (ಸಂಗ್ರಹ ಚಿತ್ರ)

    • ಕೊಪ್ಪಳಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರನ್ನು ಆಹ್ವಾನಿಸಲಾಗಿರಲಿಲ್ಲ. ಇದು ಬಿಎಸ್‌ವೈ ಅವರ ಮುನಿಸಿಗೆ ಕಾರಣವಾಗಿತ್ತು. 
ಬಿಎಸ್‌ ಯಡಿಯೂರಪ್ಪ (ಸಂಗ್ರಹ ಚಿತ್ರ)
ಬಿಎಸ್‌ ಯಡಿಯೂರಪ್ಪ (ಸಂಗ್ರಹ ಚಿತ್ರ) (HT_PRINT)

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಮುನಿಸಿಕೊಂಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಕಾರ್ಯಕ್ರಮಕ್ಕೆ ಬಿಜೆಪಿಯು ಇವರನ್ನು ಆಹ್ವಾನಿಸಿರಲಿಲ್ಲ. ಇದರಿಂದ ಬಿಎಸ್‌ವೈ ಮೌನಕ್ಕೆ ಶರಣರಾಗಿದ್ದರು. ಕೊಪ್ಪಳ ಜಿಲ್ಲೆಯ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಈ ಮುನಿಸನ್ನು ರಾಜ್ಯ ಬಿಜೆಪಿ ನಾಯಕರು ಶಮನಗೊಳಿಸಲು ಯತ್ನಿಸಿದ್ದರು. ವಿಫಲವಾದಗ, ಹೈಕಮಾಂಡ್‌ ಮಧ್ಯ ಪ್ರವೇಶಿ ಬಿಎಸ್‌ ಯಡಿಯೂರಪ್ಪನವರ ಮುನಿಸನ್ನು ಶಮನಗೊಳಿಸಿದ್ದಾರೆ.

ಇಂದು ಕೊಪ್ಪಳಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರನ್ನು ಆಹ್ವಾನಿಸಲಾಗಿರಲಿಲ್ಲ. ಇದು ಬಿಎಸ್‌ವೈ ಅವರಿಗೆ ಕೋಪ ತಂದಿತ್ತು ಎನ್ನಲಾಗಿದೆ. "ಕೊಪ್ಪಳ ಕಾರ್ಯಕ್ರಮಕ್ಕೆ ಬಿಎಸ್‌ ಯಡಿಯೂರಪ್ಪ ಆಗಮಿಸುವುದಿಲ್ಲʼʼ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೊಡ್ಡನಗೌಡ ಹೇಳಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಮತ್ತು ಬಿಎಸ್‌ವೈ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು.

ಇದರಿಂದ, ಬಿಎಸ್‌ವೈ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿತ್ತು. ಈ ಕುರಿತು ಸೋಷಿಯಲ್‌ ಮೀಡಿಯಾಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗಿದ್ದವು. ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯ ಮುಖಂಡರು ಬಿಜೆಪಿ ರಾಜ್ಯ ನಾಯಕರ ಗಮನಕ್ಕೆ ತಂದಿದ್ದರು.

ಬಳಿಕ ಬಿಜೆಪಿ ನಾಯಕರಾದ ರವಿಕುಮಾರ್ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರು ಬಿಎಸ್‌ ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಕೊಪ್ಪಳದ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ಬಿಎಸ್‌ವೈ ಒಪ್ಪಿರಲಿಲ್ಲ. ಡಿಸೆಂಬರ್‌ ಹದಿನೈದರಂದು ಬೇರೆ ಕಾರ್ಯಕ್ರಮಗಳು ನಿಗದಿಯಾಗಿವೆ ಎಂದು ಹೇಳಿ ಕಳುಹಿಸಿದ್ದರು.

ಬಿಎಸ್‌ವೈ ಕೋಪಗೊಂಡಿದ್ದರೆ ಎನ್ನುವುದು ಸ್ಪಷ್ಟವಾಗಿತ್ತು. ಬಳಿಕ ಈ ಮಾಹಿತಿಯನ್ನು ಹೈಕಮಾಂಡ್‌ ನಾಯಕರ ಗಮನಕ್ಕೆ ತರಲಾಗಿತ್ತು. ದೆಹಲಿ ನಾಯಕರೇ ಕರೆ ಮಾಡಿ ಬಿಎಸ್‌ವೈ ಅವರಿಗೆ ಕೊಪ್ಪಳ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಕೊನೆಗೂ ಬಿಎಸ್‌ವೈ ಇಂದು ಕೊಪ್ಪಳದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದಾರೆ.

ಕೊಪ್ಪಳಕ್ಕೆ ತೆರಳುವ ಕಾರ್ಯಕ್ರಮವು ನಿನ್ನೆ ಸಂಜೆಯವರೆಗೂ ನಿಗದಿಯಾಗಿರಲಿಲ್ಲ. ದೆಹಲಿ ನಾಯಕರು ಕರೆ ಮಾಡಿದ ಕಾರಣ ಕೊನೆಕ್ಷಣದಲ್ಲಿ ಕೊಪ್ಪಳಕ್ಕೆ ಬರಲು ಒಪ್ಪಿಕೊಂಡಿದ್ದಾರೆ. ತರಾತುರಿಯಲ್ಲಿ ಹೋಗಬೇಕಿರುವುದರಿಂದ ಹೆಲಿಕಾಪ್ಟರ್‌ ಮೂಲಕ ಇಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆ ತೀವ್ರಗೊಂಡಿತ್ತು. ಆ ಸಮಯದಲ್ಲಿ ಇವರಿಗೆ ಬಿಜೆಪಿ‌ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿ ಗೌರವಿಸಲಾಯಿತು. ಈ ಮೂಲಕ ಅವರ ಅಸಮಾಧಾನ ತಣಿಸುವ ಪ್ರಯತ್ನ ನಡೆಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಬಿ.ಎಸ್. ಯಡಿಯೂರಪ್ಪನವರು ಅಷ್ಟೊಂದು ಸಕ್ರಿಯವಾಗಿ ಭಾಗಿಯಾಗುತ್ತಿಲ್ಲ. ಮತ್ತೆ ಇವರು ಮುನಿಸಿಕೊಂಡಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿತ್ತು. ಜನಸಂಕಲ್ಪ ಯಾತ್ರೆಗೆ ರಾಜ್ಯಾದ್ಯಂತ ಯಾತ್ರೆ ನಡೆಸುತ್ತೇನೆ ಎಂದಿದ್ದ ಬಿಎಸ್‌ವೈ ಇತ್ತೀಚೆಗೆ ತುಮಕೂರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಗುಜರಾತ್ ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮದಿಂದ ಹೊರಡುವಾಗಲೂ ಸಿಎಂ ಬೊಮ್ಮಾಯಿ‌ ಹಾಗೂ ಬಿ.ಎಸ್.ಯಡಿಯೂರಪ್ಪ ಬೇರೆಬೇರೆ ವಿಮಾನಗಳಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಇದು ಕೂಡ ಯಡಿಯೂರಪ್ಪ ಕೋಪಗೊಂಡಿರುವ ಸೂಚನೆಯಾಗಿತ್ತು. ಇದೀಗ ಕೊಪ್ಪಳ ಘಟನೆಯ ಮೂಲಕವೂ ಇದು ಮತ್ತೊಮ್ಮೆ ಸಾಬೀತಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ