BY Vijayendra: ಚುನಾವಣೆ ಎದುರಿಸೋದಕ್ಕೆ ನಾನು ರೆಡಿ ಎಂದ ಬಿವೈ ವಿಜಯೇಂದ್ರ; ಕುತೂಹಲ ಕೆರಳಿಸಿದೆ ಬಿಎಸ್‌ವೈ ಪುತ್ರನ ಚುನಾವಣಾ ನಡೆ
Apr 06, 2023 05:37 PM IST
ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾ.24ರಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾದ ಸಂದರ್ಭ
BY Vijayendra: ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವರುಣಾದಿಂದ ಸಿದ್ದರಾಮಯ್ಯ ವಿರುದ್ಧ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆಂಬ ವದಂತಿ ಇದೆ. ವರುಣಾ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿದ್ದು, ಅಲ್ಲಿ ಬಿ.ವೈ.ವಿಜಯೇಂದ್ರ ಗೆಲ್ಲುವುದು ಸುಲಭವಲ್ಲ. ಮಗ ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಕಾರಣ ಶಿಕಾರಿಪುರವೇ ಬೆಸ್ಟ್ ಎಂಬುದು ಬಿಎಸ್‌ವೈ ಅಭಿಮತ.
ಚುನಾವಣಾ ರಾಜಕಾರಣದಿಂದ ನಿವೃತ್ತರಾದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಚುನಾವಣಾ ಪ್ರವೇಶ ಸದ್ಯ ಕುತೂಹಲ ಕೆರಳಿಸಿರುವ ವಿಚಾರ. ಇದು ಲಿಂಗಾಯತರ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು 2019ರಲ್ಲಿ ಮುಖ್ಯಮಂತ್ರಿ ಆದಾಗಿನಿಂದ ಹೆಚ್ಚು ಚರ್ಚೆಗೆ ಒಳಪಟ್ಟ ವಿಚಾರವೂ ಹೌದು.
ಬಿ.ವೈ.ರಾಘವೇಂದ್ರ ಚುನಾವಣಾ ಸ್ಪರ್ಧೆಯ ವಿಚಾರವಾಗಿ ಗುರುವಾರ ಮಾತನಾಡಿದ್ದು, ಚುನಾವಣೆ ಎದುರಿಸುವುದಕ್ಕೆ ತಾನು ಸಿದ್ಧ ಇರುವುದಾಗಿ ಹೇಳಿದ್ದಾರೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.
ಪಕ್ಷದ ರಾಜ್ಯ ಉಪಾಧ್ಯಕ್ಷರೂ ಆಗಿರುವ ಬಿ.ವೈ.ವಿಜಯೇಂದ್ರ ಅವರು ವರುಣಾದಿಂದ ಸಿದ್ದರಾಮಯ್ಯ ವಿರುದ್ಧ ಪಕ್ಷ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂಬ ವದಂತಿ ಇದೆ. ವರುಣಾ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿದ್ದು, ಅಲ್ಲಿ ಬಿ.ವೈ.ವಿಜಯೇಂದ್ರ ಗೆಲ್ಲುವುದು ಸುಲಭವಲ್ಲ. ಮಗ ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ಕಾರಣ ಶಿಕಾರಿಪುರವೇ ಬೆಸ್ಟ್ ಎಂಬುದು ಬಿಎಸ್‌ವೈ ಅಭಿಮತ. ಹೀಗಾಗಿ ಅವರು ಶಿಕಾರಿಪುರದಲ್ಲೇ ವಿಜಯೇಂದ್ರ ಕಣಕ್ಕೆ ಇಳಿಯಲಿದ್ದಾರೆ ಎಂಬುದನ್ನು ಪದೇಪದೆ ಹೇಳುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಈಗ ವಿಜಯೇಂದ್ರ ಕೂಡ ಮಾತನಾಡಿದ್ದು, ನನ್ನ ತಂದೆ ಈಗಾಗಲೇ ನನ್ನ ಚುನಾವಣಾ ಸ್ಪರ್ಧೆ ಎಲ್ಲಿಂದ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಕಾರ್ಯಕರ್ತರು ವರುಣಾದಿಂದ ಸ್ಪರ್ಧಿಸುವಂತೆ ಬಯಸುತ್ತಿದ್ದಾರೆ. ಆದರೆ ಶಿಕಾರಿಪುರದಲ್ಲಿ ಪಕ್ಷದ ಕಾರ್ಯಕರ್ತರು ಅಲ್ಲಿಂದ ಸ್ಪರ್ಧೆ ಮಾಡುವಂತೆ ಕೇಳಿಕೊಂಡಾಗ ಅವರ ಭಾವನೆಗಳನ್ನು ಗೌರವಿಸಬೇಕಾದ್ದು ನನ್ನ ಆದ್ಯ ಕರ್ತವ್ಯವಾಗುತ್ತದೆ. ಏನೇ ಇದ್ದರೂ ಚುನಾವಣೆ ಸ್ಪರ್ಧೆಯ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮ. ಅದೇನಿದ್ದರೂ ಇನ್ನು ನಾಲ್ಕು ಅಥವಾ ಐದು ದಿನದಲ್ಲಿ ಅಂತಿಮವಾಗಲಿದೆ ಎಂದು ಹೇಳಿದ್ದಾರೆ.
ಇನ್ನು ನನ್ನ ಅಪ್ಪ ಬಿಎಸ್ ಯಡಿಯೂರಪ್ಪ ಅವರು ಒಂದು ಸಮುದಾಯಕ್ಕೆ ಸೀಮಿತರಾಗಿದ್ದವರಲ್ಲ. ಅವರ ನಾಯಕತ್ವವನ್ನು ಲಿಂಗಾಯತರಷ್ಟೇ ಅಲ್ಲ ಎಲ್ಲ ಸಮುದಾಯದವರೂ ಒಪ್ಪಿಕೊಂಡಿದ್ದಾರೆ. ಅಲ್ಪಸಂಖ್ಯಾತರು ಕೂಡ ತಮ್ಮ ಬೆಂಬಲವನ್ನು ಯಡಿಯೂರಪ್ಪ ಮತ್ತು ನನ್ನ ಸಹೋದರ ಬಿವೈ ರಾಘವೇಂದ್ರ ಅವರಿಗೆ ನೀಡಿದ್ದಾರೆ. ಅವರು ಕೂಡ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಕೊಟ್ಟಿದ್ದು, ಯಾವುದೇ ಟೆನ್ಶನ್ ಇಲ್ಲದಂತೆ ರಾಜಕಾರಣ ಮಾಡುತ್ತಿದ್ದಾರೆ. ಇದು ವರದಾನ ಎಂದು ವಿಜಯೇಂದ್ರ ಹೇಳಿದ್ದಾರೆ.
ವಿಜಯೇಂದ್ರ ಚುನಾವಣಾ ರಾಜಕಾರಣಕ್ಕೆ ಹೆಚ್ಚಿದೆ ಒತ್ತಡ
ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಬಿಎಸ್ ವೈ ಮೇಲೆ ಅವರ ಕುಟುಂಬದವರಿಂದಲೇ ಈ ಒತ್ತಡ ಹೆಚ್ಚಾಗಿತ್ತು. ಪಕ್ಷದಲ್ಲಿ ವಯಸ್ಸಿನ ಕಾರಣಕ್ಕೆ ತನ್ನನ್ನು ಬದಿಗೆ ಸರಿಸುತ್ತಿದ್ದಾರೆ ಎಂಬ ಭಾವನೆ ಬಂದ ಕೂಡಲೇ ಬಿಎಸ್‌ವೈ, ತಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದರು. ಶಿಕಾರಿಪುರದಿಂದ ಬಿವೈ ರಾಘವೇಂದ್ರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಇದಾಗಿ ಒಂದೆರಡು ದಿನಕ್ಕೆ ಬಿಎಸ್‌ವೈ ಅವರನ್ನು ದೆಹಲಿಗೆ ಕರೆಯಿಸಿಕೊಂಡ ಅಮಿತ್ ಶಾ ಮಾತುಕತೆ ನಡೆಸಿದರು.
ಅಲ್ಲಿಂದ ಬಂದ ಬಿಎಸ್‌ವೈ ಅವರ ವರಸೆ ಬದಲಾಯಿತು. ರಾಜಕೀಯ ನಿವೃತ್ತಿ ಘೋಷಣೆ ಮಾಡಿಲ್ಲ. ಚುನಾವಣೆಯಿಂದ ದೂರ ಇರುತ್ತೇನೆ. ಪಕ್ಷ ಸಂಘಟನೆ ಮಾಡುತ್ತೇನೆ. ಶೀಘ್ರವೇ ರಾಜ್ಯ ಪ್ರವಾಸ ಶುರುಮಾಡುತ್ತೇನೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಶಿಕಾರಿಪುರದಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದರು.