ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್ ಸೇರ್ಪಡೆಯಾದ್ರು ಸಿ ಪಿ ಯೋಗೇಶ್ವರ್, ಕುತೂಹಲ ಹೆಚ್ಚಿಸಿದ ನಾಟಕೀಯ ವಿದ್ಯಮಾನಗಳಿವು
Oct 23, 2024 11:57 AM IST
ಚನ್ನಪಟ್ಟಣ ಉಪಚುನಾವಣೆ ಕಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಸೆ ಮೇರೆಗೆ ಕಾಂಗ್ರೆಸ್ ಸೇರ್ಪಡೆಯಾದ್ರು ಸಿ ಪಿ ಯೋಗೇಶ್ವರ್. (ಚಿತ್ರ- ಸಿಎಂ ನಿವಾಸದಲ್ಲಿ ಸಿಪಿ ಯೋಗೇಶ್ವರ್)
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಯಾರಿಗೆ ಯಾರೂ ಶತ್ರುವೂ ಅಲ್ಲ, ಯಾರೂ ಮಿತ್ರರೂ ಇಲ್ಲ. ಅಧಿಕಾರವೇ ಮುಖ್ಯ. ಚನ್ನಪಟ್ಟಣ ಉಪಚುನಾವಣೆ ಕಣದ ಕುತೂಹಲ ಹೆಚ್ಚಿಸಿದ ನಾಟಕೀಯ ವಿದ್ಯಮಾನಗಳ ನಡುವೆ ಕಾಂಗ್ರೆಸ್ ಸೇರ್ಪಡೆಯಾದ್ರು ಸಿ ಪಿ ಯೋಗೇಶ್ವರ್. ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಉಳಿದಿದ್ದು, ಈ ವಿದ್ಯಮಾನದ ವಿವರ ಇಲ್ಲಿದೆ.
ಬೆಂಗಳೂರು: ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆಯ ಕಣ ಕುತೂಹಲಕಾರಿ ರಾಜಕೀಯ ವಿದ್ಯಮಾನಗಳಿಗೆ ವೇದಿಕೆಯಾಗಿದೆ. ನಾಟಕೀಯ ವಿದ್ಯಮಾನದಲ್ಲಿ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಈ ನಡುವೆ ಅವರು ಸಮಾಜವಾದಿ ಪಾರ್ಟಿಯ ಬಿಫಾರಂ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತಾದರೂ ಅವರು ಇಂದು (ಅಕ್ಟೋಬರ್ 23) ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇದಕ್ಕೂ ಮೊದಲು ಸಿ ಪಿ ಯೋಗೇಶ್ವರ್ ಅವರು ಇಂದು ಬೆಳಗ್ಗೆಯೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸದ ಬಳಿ ಕಾಣಿಸಿಕೊಂಡರು. ಬಳಿಕ ಅವರ ಜೊತೆಗೆ ಕಾರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿದರು. ಅಲ್ಲಿ ನಾಯಕರು ಮಾತುಕತೆ ನಡೆಸಿದರು.
ಮತ್ತೆ ಕಾಂಗ್ರೆಸ್ ಸೇರಿದ ಸಿಪಿ ಯೋಗೇಶ್ವರ್
ಕೆಪಿಸಿಸಿ ಕಚೇರಿಯಲ್ಲಿ ಇಂದು (ಅಕ್ಟೋಬರ್ 23) 11.30ರ ಸುಮಾರಿಗೆ ಸಿಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಯೋಗೇಶ್ವರ್ ಅವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದಂತಾಗಿದೆ. ಇದಕ್ಕೂ ಮುನ್ನ ಅವರು ಬೆಳಗ್ಗೆಯೇ ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ವಾಟ್ಸ್‌ಆಪ್ ಮೂಲಕವೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ರವಾನಿಸಿದ್ದರು.
ನಾಟಕೀಯ ವಿದ್ಯಮಾನಗಳ ಅನಾವರಣ
1) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಲವಿನಂತೆ ಯೋಗೇಶ್ವರ್ ಸೇರ್ಪಡೆಯಾಗಿದೆ. ಡಿಕೆ ಶಿವಕುಮಾರ್ ಮತ್ತು ಇತರರು ಆರಂಭದಲ್ಲಿ ಯೋಗೇಶ್ವರ್ ಸೇರ್ಪಡೆಗೆ ಒಲವು ತೋರಿಸಿರಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
2) ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುವಲ್ಲಿ ಮಹತ್ವದ ಪಾತ್ರವಹಿಸಿದ್ದ ಯೋಗೇಶ್ವರ್ ಅವರನ್ನು ನಂತರದ ರಾಜಕೀಯದಲ್ಲಿ ಬಿಜೆಪಿ ನಾಯಕರು ಮೂಲೆಗುಂಪು ಮಾಡಿದ್ದರು. ಜೆಡಿಎಸ್ ನಾಯಕರ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಸಿಪಿ ಯೋಗೇಶ್ವರ ಅವರನ್ನು ವಿಶ್ವಾಸಕ್ಕೆ ತಗೊಂಡಿರಲಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
3) ಕಾಂಗ್ರೆಸ್ ಪಕ್ಷದಿಂದಲೇ ಸಿಪಿ ಯೋಗೇಶ್ವರ್ ಅವರು ಬಿಜೆಪಿಗೆ ಹೋಗಿದ್ದರು. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ವಿರುದ್ಧ ಸಮರ ಸಾರಿದ್ದ ಅವರು ಬಿಎಸ್ ಯಡಿಯೂರಪ್ಪ ಸರ್ಕಾರ ರಚನೆಯಾಗುವುದಕ್ಕೆ ಕಾಂಗ್ರೆಸ್ ಪಕ್ಷದ ಶಾಸಕರು ಬಿಜೆಪಿ ಸೇರುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಹೀಗಾಗಿ ಅವರು ಯಡಿಯೂರಪ್ಪ ಸರ್ಕಾರದಲ್ಲಿ ಹೆಚ್ಚಿನ ಮಹತ್ವ ಹೊಣೆಗಾರಿಕೆಗಳನ್ನು ಹೊಂದಿದ್ದರು.
4) ನಂತರದ ದಿನಗಳಲ್ಲಿ ಸಿಪಿ ಯೋಗೇಶ್ವರ್ ಅವರನ್ನು ರಾಜಕೀಯವಾಗಿ ಕಡೆಗಣಿಸುವ ಕೆಲಸ ನಡೆದಿತ್ತು. ಬಿಜೆಪಿ ನಾಯಕರು ಪ್ರತಿ ಚುನಾವಣೆಯಲ್ಲೂ ಇದನ್ನು ಮುಂದುವರಿಸಿದ್ದರೂ, ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು.
5) ಇದೇ ವೇಳೆ, ಚನ್ನಪಟ್ಟಣದಲ್ಲಿ ತನ್ನದೇ ಛಾಪು ಮೂಡಿಸಿರುವ ಸಿಪಿ ಯೋಗೇಶ್ವರ್ ಅವರು ಉಪಚುನಾವಣೆಯ ಸಂದರ್ಭಕ್ಕೆ ಕಾಯುತ್ತಿದ್ದರು. ಬಿಜೆಪಿ ನಾಯಕರಲ್ಲಿ ಚುನಾವಣೆ ಸ್ಪರ್ಧೆಯ ಬಯಕೆ ವ್ಯಕ್ತಪಡಿಸಿದ್ದರು. ಜೆಡಿಎಸ್ ಕ್ಷೇತ್ರವಾಗಿದ್ದ ಕಾರಣ ಅದನ್ನು ಅವರಿಗೆ ಬಿಡಬೇಕು ಎಂಬ ನಿಲುವು ಬಂದ ಬಳಿಕ ಯೋಗೇಶ್ವರ್ ತನ್ನ ರಾಜಕೀಯ ನಿರ್ಧಾರ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಸಿ ಪಿ ಯೋಗೇಶ್ವರ್ ರಾಜಕೀಯ ನಡೆಗಳು ಹೀಗಿದ್ದವು
ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿದ್ದ ಸಿಪಿ ಯೋಗೇಶ್ವರ್ ಅವರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದರು.
ತಮ್ಮ ರಾಜೀನಾಮೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ ನಂತರ ಯೋಗೇಶ್ವರ್ ಅವರು ತಮ್ಮ ಭವಿಷ್ಯದ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಮುಂಬರುವ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದೇನೆ. ಯಾವುದೇ ಪಕ್ಷ ಸೇರ್ಪಡೆ ನಿರ್ಧಾರ ತಗೊಂಡಿಲ್ಲ. ಯಾವುದಕ್ಕೂ ನಾಳೆ ಏನಾಗುತ್ತೆ ನೋಡೋಣ ಎಂದು ಹೇಳಿದ್ದರು.
ಗುರುವಾರ (ಅಕ್ಟೋಬರ್ 24) ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಎಂಬುದು ನಾಳೆ ಅಂತಿಮವಾಗಲಿದೆ ಎಂದು ಸಿಪಿ ಯೋಗೇಶ್ವರ್ ಖಚಿತವಾಗಿ ಹೇಳಿದ್ದರು.
ಕಾಂಗ್ರೆಸ್ ತತ್ತ್ವ ಒಪ್ಪಿಕೊಂಡವರನ್ನು ಪಕ್ಷ ಸ್ವಾಗತಿಸುತ್ತದೆ ಎಂದ ಸಿಎಂ ಸಿದ್ದರಾಮಯ್ಯ
ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ''ಕಾಂಗ್ರೆಸ್ ತತ್ತ್ವಗಳನ್ನು ಯಾರು ಒಪ್ಪಿಕೊಂಡರೂ ಸ್ವಾಗತ" ಎಂದು ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಸಿಪಿ ಯೋಗೇಶ್ವರ್ ಅವರು ಚನ್ನಪಟ್ಟಣ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಸೋಮವಾರ ವಿಧಾನಪರಿಷತ್ (ಎಂಎಲ್‌ಸಿ) ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹ ಹೆಚ್ಚಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿರುವುದು ಗಮನಸೆಳೆದಿತ್ತು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರದ ಮಾಜಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರಿಗೆ ಚನ್ನಪಟ್ಟಣ ಟಿಕೆಟ್ ನೀಡಬೇಕೆಂಬ ಬೇಡಿಕೆಯ ಕುರಿತು ಕೇಳಿದ ಪ್ರಶ್ನೆಗೆ, ಅವರ ಹೆಸರೂ ಇದೆ, ಕೊನೆಯ ದಿನಾಂಕವನ್ನು ನೋಡೋಣ ಎಂದು ಮುಖ್ಯಮಂತ್ರಿ ಹೇಳಿದ್ದರು.
ಉಪಚುನಾವಣೆಗೆ ನಾಮನಿರ್ದೇಶನಗಳನ್ನು ಸಲ್ಲಿಸಲು ಅಕ್ಟೋಬರ್ 25 ಮತ್ತು ಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 30 ಆಗಿದೆ.