logo
ಕನ್ನಡ ಸುದ್ದಿ  /  ಕರ್ನಾಟಕ  /  ಚನ್ನಪಟ್ಟಣ ಉಪ ಚುನಾವಣೆ; ಗೊಂದಲದಲ್ಲಿ ಕುಮಾರಸ್ವಾಮಿ, ನಿಖಿಲ್‌ ಅಥವಾ ಜಯಮುತ್ತು ಯಾರು ಹಿತವರು ಈ ಇಬ್ಬರೊಳಗೆ?

ಚನ್ನಪಟ್ಟಣ ಉಪ ಚುನಾವಣೆ; ಗೊಂದಲದಲ್ಲಿ ಕುಮಾರಸ್ವಾಮಿ, ನಿಖಿಲ್‌ ಅಥವಾ ಜಯಮುತ್ತು ಯಾರು ಹಿತವರು ಈ ಇಬ್ಬರೊಳಗೆ?

Prasanna Kumar P N HT Kannada

Oct 24, 2024 05:30 AM IST

google News

ನಿಖಿಲ್ ಕುಮಾರಸ್ವಾಮಿ, ಹೆಚ್​ಡಿ ಕುಮಾರಸ್ವಾಮಿ, ಜಯಮುತ್ತು

    •  Karnataka ByElection: ಸಿಪಿ ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ತೊರೆದು ಟಿಕೆಟ್ ಗಿಟ್ಟಿಸಿಕೊಂಡಿದ್ದು, ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಗೊಂದಲಕ್ಕೆ ಒಳಗಾಗಿದ್ದಾರೆ. ಚನ್ನಪಟ್ಟಣ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕೆಂಬ ಒತ್ತಡ ಹೆಚ್ಚಾಗಿದೆ. (ವರದಿ-ಎಚ್.ಮಾರುತಿ)
ನಿಖಿಲ್ ಕುಮಾರಸ್ವಾಮಿ, ಹೆಚ್​ಡಿ ಕುಮಾರಸ್ವಾಮಿ, ಜಯಮುತ್ತು
ನಿಖಿಲ್ ಕುಮಾರಸ್ವಾಮಿ, ಹೆಚ್​ಡಿ ಕುಮಾರಸ್ವಾಮಿ, ಜಯಮುತ್ತು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಸಚಿವ ಸಿಪಿ ಯೋಗೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗುವುದು ಖಚಿತವಾಗುತ್ತಿದ್ದಂತೆ, ಜೆಡಿಎಸ್‌ ಮುಖಂಡ, ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಅಕ್ಷರಶಃ ಗೊಂದಲದಲ್ಲಿ ಮುಳುಗಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರು ನಿಖಿಲ್‌ ಅವರನ್ನು ಕಣಕ್ಕಿಳಿಸುವಂತೆ ಒತ್ತಡ ಹೇರುತ್ತಿದ್ದರೆ ಇಡೀ ಕುಟುಂಬದ ಸದಸ್ಯರು ಜಯಮುತ್ತು ಅವರನ್ನು ಅಭ್ಯರ್ಥಿ ಮಾಡುವಂತೆ ಸಲಹೆ ನೀಡಿದ್ದಾರೆ.

ಬುಧವಾರ ಅತ್ತ ಯೋಗೇಶ್ವರ್‌ ಕೈ ಹಿಡಿಯುತ್ತಿದ್ದಂತೆ ಇತ್ತ ಜೆಪಿ ಭವನದಲ್ಲಿ ಕುಮಾರಸ್ವಾಮಿ ದಿನವಿಡೀ ಸರಣಿ ಸಭೆಗಳನ್ನು ನಡೆಸಿದರು. ಆದರೂ ಈ ಸಭೆಗಳು ಅಷ್ಟಾಗಿ ಪ್ರಯೋಜನಕ್ಕೆ ಬಂದ ಹಾಗೆ ಕಾಣಿಸುತ್ತಿಲ್ಲ. ಏಕೆಂದರೆ ಕುಮಾರಸ್ವಾಮಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗದೆ ದ್ವಂದ್ವದಲ್ಲೇ ಮುಳುಗಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಇದಕ್ಕೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರು ಕುಮಾರಸ್ವಾಮಿ ಮತ್ತು ನಿಖಿಲ್‌ ಅವರನ್ನು ಕರೆಯಿಸಿಕೊಂಡು ಮಾತುಕತೆ ನಡೆಸಿದ್ದಾರೆ.

ನಿಖಿಲ್​ಗೆ ಟಿಕೆಟ್ ನೀಡಲು ಹೆಚ್​​ಡಿಡಿ ಸಲಹೆ

ಅವರ ಕುಟುಂಬದ ಮೂಲಗಳ ಪ್ರಕಾರ ಚನ್ನಪಟ್ಟಣದಲ್ಲಿ ಸ್ಪರ್ಧೆ ಕಠಿಣವಾಗುವ ಸಾಧ್ಯತೆಗಳಿದ್ದು ನಿಖಿಲ್​​ಗೆ ಟಿಕೆಟ್‌ ನೀಡದಂತೆ ದೇವೇಗೌಡರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಪಕ್ಷದ ಕಾರ್ಯಕರ್ತರು ಮಾತ್ರ ಯೋಗೇಶ್ವರ್‌ ಗೆ ಪ್ರಬಲ ಪೈಪೋಟಿ ನೀಡಲು ನಿಖಿಲ್‌ ಅವರನ್ನೇ ಹುರಿಯಾಳನ್ನಾಗಿ ಮಾಡಬೇಕು ಎಂದು ಆಗ್ರಹಪಡಿಸುತ್ತಿದಾರೆ. ಸತತ ಎರಡು ಚುನಾವಣೆಗಳಲ್ಲಿ ಸೋಲು ಕಂಡಿರುವ ನಿಖಿಲ್‌ ಅವರೂ ಸಹ ಜಯಮುತ್ತು ಅವರನ್ನು ಅಭ್ಯರ್ಥಿ ಮಾಡಲು ಆಸಕ್ತಿ ಹೊಂದಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ದ್ವಂದ್ವದಿಂದ ಹೊರಬಂದಿಲ್ಲ ಎನ್ನಲಾಗುತ್ತಿದೆ.

ಕುಮಾರಸ್ವಾಮಿ ಹತ್ತಾರು ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ. ಯೋಗೇಶ್ವರ್‌ ಪ್ರಬಲ ಅಭ್ಯರ್ಥಿ. ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್​​ಗೆ ಮತ್ತೊಂದು ಪ್ಲಸ್‌ ಪಾಯಿಂಟ್.‌ ಬಿಜೆಪಿ ಜತೆ ಹೊಂದಾಣಿಕೆ ಇರುವುದರಿಂದ ಜೆಡಿಎಸ್​ಗೆ ಮುಸ್ಲಿಂ ಮತಗಳು ಬರುವುದಿಲ್ಲ. ಬಿಜೆಪಿಯ ಒಂದು ಬಣ ತಮ್ಮ ವಿರುದ್ಧ ಕೆಲಸ ಮಾಡಲಿದೆ ಎನ್ನುವ ಸತ್ಯವೂ ಅವರಿಗೆ ಅರಿವಿದೆ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ. ಈ ಅಂಶಗಳನ್ನು ಕುರಿತೂ ಅವರು ಆಪ್ತರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಒಂದು ವೇಳೆ ಈ ಕ್ಷೇತ್ರವನ್ನು ಕಳೆದುಕೊಂಡರೆ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್​ ಶಾಸಕರೇ ಇಲ್ಲದ ಹಾಗಾಗುತ್ತದೆ. ಹೇಳಿಕೇಳಿ ರಾಮನಗರ ನನ್ನ ಕಾರ್ಯಕ್ಷೇತ್ರ ಎಂದು ಮಾತಿಗೊಮ್ಮೆ ಕುಮಾರಸ್ವಾಮಿ ಹೇಳುತ್ತಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೂ ಮುನ್ನ ಕುಮಾರಸ್ವಾಮಿ ಜಿಲ್ಲೆಯ ಏಕೈಕ ಶಾಸಕರಾಗಿದ್ದರು. ಈಗ ಆ ಕ್ಷೇತ್ರವನ್ನೂ ಕಳೆದುಕೊಳ್ಳುವ ಭೀತಿ ಆವರಿಸಿದೆ. ಚನ್ನಪಟ್ಟಣದಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದರೂ ಕುಮಾರಸ್ವಾಮಿಗೆ ಶಿವಕುಮಾರ್‌ ಅವರೇ ನೇರ ಎದುರಾಳಿ.

ಚನ್ನಪಟ್ಟಣ ಸೋತರೆ ಹೆಚ್​​ಡಿಕೆ ಹೊಣೆ?

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಭಾವ ಡಾ. ಮಂಜುನಾಥ್‌ ಎದುರು ಸೋಲು ಕಂಡ ಸಹೋದರ ಡಿಕೆ ಸುರೇಶ್‌ ಸೋಲಿಗೆ ಸೇಡು ತೀರಿಸಿಕೊಳ್ಳುವದೂ ಸಹ ಡಿಕೆಗೆ ಮುಖ್ಯವಾಗಿದೆ. ಅಭ್ಯರ್ಥಿ ಆಯ್ಕೆ ಕುರಿತು ಬುಧವಾರ ಸಂಜೆ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ನಡೆಯಬೇಕಿದ್ದ ಸಭೆ ಗುರುವಾರ ನಡೆಯಲಿದೆ. ಈ ಕ್ಷೇತ್ರವನ್ನು ಜೆಡಿಎಸ್​​​ಗೆ ಬಿಟ್ಟುಕೊಟ್ಟಿರುವುದರಿಂದ ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿಗೆ ಅಷ್ಟೇನೂ ಪಾತ್ರ ಇರುವುದಿಲ್ಲ. ಯೋಗೇಶ್ವರ್‌ ಕಾರಣಕ್ಕೆ ನೆಲೆ ಕಂಡುಕೊಂಡಿದ್ದ ಬಿಜೆಪಿಗೆ ಈಗ ಚನ್ನಪಟ್ಟಣದಲ್ಲಿ ಯಾವುದೇ ನೆಲೆ ಇಲ್ಲವಾಗಿದೆ. ಹಾಗಾಗಿ ತಲೆಕೆಡಸಿಕೊಳ್ಳುವಂತಹುದೇನೂ ಇಲ್ಲ. ಸೋತರೆ ಸೋಲಿನ ಹೊಣೆ ಕುಮಾರಸ್ವಾಮಿ ಅವರದ್ದೇ ಆಗಿರುತ್ತದೆ ಅಲ್ಲವೇ?

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ