Chitradurga News: ಕೋಟೆನಾಡು ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ನಾಥೂರಾಮ್ ಗೋಡ್ಸೆ ಭಾವಚಿತ್ರ ಪ್ರದರ್ಶನ
Oct 09, 2023 11:03 AM IST
ಕೋಟೆನಾಡು ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ನಾಥೂರಾಮ್ ಗೋಡ್ಸೆ ಭಾವಚಿತ್ರ ಪ್ರದರ್ಶನ
- ಚಿತ್ರದುರ್ಗದಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕರ್ನಾಟಕದಾದ್ಯಂತ ಜನಸಾಗರವೇ ಹರಿದುಬಂದಿತ್ತು.
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ನಡೆದ ಹಿಂದೂ ಮಹಾಗಣಪತಿ ಬೃಹತ್ ವಿಸರ್ಜನಾ ಶೋಭಾಯಾತ್ರೆ ಮೆರವಣಿಗೆಯಲ್ಲಿ ನಾಥೂರಾಮ್ ಗೋಡ್ಸೆ ಚಿತ್ರ ಪ್ರದರ್ಶನ ಮಾಡಿರುವುದು ಈಗ ವಿವಾದದ ರೂಪ ಪಟೆದುಕೊಂಡಿದೆ.
ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಇಂದು ಕರ್ನಾಟಕದಾದ್ಯಂತ ಜನಸಾಗರವೇ ಹರಿದುಬಂದಿತ್ತು. ಶೋಭಾಯಾತ್ರೆಯ ವೇಳೆ ಯುವ ಸಮೂಹ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿತ್ತು. ಆದರೆ, ಮೆರವಣಿಗೆಯಲ್ಲಿ ಕೆಲವರು ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಚಿತ್ರ ಪ್ರದರ್ಶಿಸಿದರೆ, ಮತ್ತೆ ಕೆಲವರು ಜೊತೆಗೆ ಕೋಮು ಘರ್ಷಣೆಯಲ್ಲಿ ಹತ್ಯೆಯಾದ ಶರತ್ ಮಡಿವಾಳ್ ಶಿವಮೊಗ್ಗದ ಮೃತ ಹರ್ಷನ ಭಾವಚಿತ್ರ ಪ್ರದರ್ಶಿಸಿದರು. ಆದರೆ ಇನ್ನೂ ಕೆಲವರು ನಾಥೂರಾಮ್ ಗೋಡ್ಸೆ ಭಾವಚಿತ್ರ ತೋರಿರುವುದು ಈಗ ವಿವಾದಕ್ಕೀಡುಮಾಡಿದೆ.
ಚಳ್ಳಕೆರೆ ಗೇಟ್ ಸಮೀಪದ ಜೈನಧಾಮದಿಂದ ಹೊರಟ ಮೆರವಣಿಗೆ ಬಿ.ಡಿ.ರಸ್ತೆ, ಮದಕರಿ ನಾಯಕ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತದ ಮೂಲಕ ಚಂದ್ರವಳ್ಳಿ ಸಮೀಪದ ಬಾವಿಯಲ್ಲಿ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ.
ಹಿಂದೂ ಮಹಾಗಣಪತಿ 21 ದಿನಗಳ ಕಾಲ ಪೂಜೆ ಕೈಂಕರ್ಯಗಳನ್ನು ಮಾಡಲಾಗಿತ್ತು. ಇಂದು ಕೊನೆದಿನ ಹಿಂದೂಮಹಾಗಣಪತಿ ಬೃಹತ್ ಶೋಭಾಯಾತ್ರೆ ಮೆರವಣಿಗೆ ನಡೆಯಿತು. ಶೋಭಾಯಾತ್ರೆ ವೇಳೆ ಸಾವಿರಾರು ಹಿಂದು ಕಾರ್ಯಕರ್ತರು ಭಾಗಿಯಾದರು. ಮೆರವಣಿಗೆಯಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಶಾಸಕ ಕೆ.ಸಿ.ವೀರೇಂದ್ರ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿದ್ದರು.
ಶೋಭಾಯಾತ್ರೆಯಲ್ಲಿ ಗಾಂಧೀಜಿ ಹಂತಕ ನಾಥುರಾಮ್ ಗೂಡ್ಸೆ ಚಿತ್ರ ಪ್ರದರ್ಶನ ಮಾಡಿರುವುದರಿಂದ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪರವಿರೋಧದ ಚರ್ಚೆಗಳು ಶುರುವಾಗಿವೆ.