Drought News: 6 ವರ್ಷಗಳ ಬಳಿಕ ಮತ್ತೆ ಕರಾವಳಿ ಜಿಲ್ಲೆಗಳ 13 ತಾಲೂಕುಗಳು ಬರಪೀಡಿತ
Sep 15, 2023 09:21 PM IST
ಆರು ವರ್ಷಗಳ ಬಳಿಕ ಕರಾವಳಿ ಜಿಲ್ಲೆಗಳ 13 ತಾಲೂಕು ಬರಪೀಡಿತವಾಗಿವೆ. (ಸಾಂಕೇತಿಕ ಚಿತ್ರ)
ಕರ್ನಾಟಕದ ಬಹುತೇಕ ತಾಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ, ರಾಜ್ಯ ಸರ್ಕಾರ ಬರ ಪರಿಸ್ಥಿತಿ ಇರುವ ತಾಲೂಕುಗಳ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಕರಾವಳಿಯ ಕೆಲವು ತಾಲೂಕುಗಳೂ ಇವೆ. ಆರು ವರ್ಷಗಳ ಬಳಿಕ ಕರಾವಳಿ ಜಿಲ್ಲೆಗಳ 13 ತಾಲೂಕು ಬರಪೀಡಿತವಾಗಿವೆ. ಈ ಕುರಿತ ವಿಶೇಷ ವರದಿ ನೀಡಿದ್ದಾರೆ ಹರೀಶ್ ಮಾಂಬಾಡಿ.
ಮಂಗಳೂರು/ಉಡುಪಿ/ಕಾರವಾರ: ಆರು ವರ್ಷಗಳ ಬಳಿಕ ಕರಾವಳಿಯ ತಾಲೂಕುಗಳು ಬರಪೀಡಿತ ಎಂಬ ಪಟ್ಟಿಗೆ ಸೇರಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಸೇರಿದಂತೆ 2, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ 9, ಉಡುಪಿ ಜಿಲ್ಲೆಯ 2 ತಾಲೂಕುಗಳು ಸೇರಿ ಒಟ್ಟು 13 ತಾಲೂಕುಗಳು ಬರಪೀಡಿತ ತಾಲೂಕುಗಳ ಪಟ್ಟಿಗೆ ದಾಖಲಾಗಿವೆ. ಇವುಗಳಲ್ಲಿ ತೀವ್ರ ಬರಪೀಡಿತ ಎಂದು ಕರಾವಳಿಯ 5 ತಾಲೂಕುಗಳು ಹಾಗೂ ಸಾಧಾರಣ ಬರಪೀಡಿತ 8 ತಾಲೂಕುಗಳು ಸೇರಿವೆ.
ತೀವ್ರ ಬರಪೀಡಿತ ಎಂದು ಘೋಷಣೆಯಾದ ರಾಜ್ಯದ 161 ತಾಲೂಕುಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ 4 ಮತ್ತು ಉಡುಪಿ ಜಿಲ್ಲೆಯ ಒಂದು ತಾಲೂಕು ಸೇರಿ ಒಟ್ಟು 5 ತಾಲೂಕುಗಳು ಸೇರಿವೆ. ರಾಜ್ಯದ ಸಾಧಾರಣ ಬರಪೀಡಿತ 34 ತಾಲೂಕುಗಳ ಪೈಕಿ, ದಕ್ಷಿಣ ಕನ್ನಡ ಜಿಲ್ಲೆಯ 2, ಉತ್ತರ ಕನ್ನಡ ಜಿಲ್ಲೆಯ 5 ಮತ್ತು ಉಡುಪಿಯ 1 ತಾಲೂಕು ಸೇರಿವೆ.
ತೀವ್ರ ಬರಪೀಡಿತ ತಾಲೂಕುಗಳು
- ಉತ್ತರ ಕನ್ನಡ ಜಿಲ್ಲೆ-ಹಳಿಯಾಳ, ಮುಂಡಗೋಡ, ಶಿರಸಿ, ಯಲ್ಲಾಪುರ. (ಒಟ್ಟು 4 ತಾಲೂಕುಗಳು).
- ಉಡುಪಿ ಜಿಲ್ಲೆ-ಕಾರ್ಕಳ (ಒಟ್ಟು 1 ತಾಲೂಕು).
- ದಕ್ಷಿಣ ಕನ್ನಡ ಜಿಲ್ಲೆ: 0.
ಸಾಧಾರಣ ಬರಪೀಡಿತ ತಾಲೂಕುಗಳು
- ದಕ್ಷಿಣ ಕನ್ನಡ ಜಿಲ್ಲೆ: ಮಂಗಳೂರು, ಮೂಡುಬಿದಿರೆ. (2 ತಾಲೂಕುಗಳು)
- ಉಡುಪಿ ಜಿಲ್ಲೆ: ಬ್ರಹ್ಮಾವರ. (1 ತಾಲೂಕು)
- ಉತ್ತರ ಕನ್ನಡ ಜಿಲ್ಲೆ: ಅಂಕೋಲ, ಭಟ್ಕಳ, ಕಾರವಾರ, ಕುಮಟಾ, ಜೋಯಿಡಾ (5 ತಾಲೂಕುಗಳು).
6 ವರ್ಷಗಳ ಹಿಂದೆ ಬರ ಪರಿಸ್ಥಿತಿ
ಆರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕುಡಿಯುವ ನೀರು, ಕೃಷಿ ಸಹಿತ ನಿರ್ಮಾಣ ಚಟುವಟಿಕೆಗಳಿಗೂ ಭಾರಿ ಅಡ್ಡಿಯಾಗಿತ್ತು. ಈ ಸಂದರ್ಭ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳು ಸೇರಿದ್ದವು.
ಇದೀಗ ಕರಾವಳಿಯಲ್ಲಿ ಜೂನ್ 1ರಿಂದ ಸೆ.14ರವರೆಗೆ ಶೇ.24ರಷ್ಟು ಮಳೆ ಕೊರತೆ ಇದ್ದು, ರೆಡ್ ಝೋನ್ ನಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.29, ಉಡುಪಿಯಲ್ಲಿ ಶೇ.26 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.20ರಷ್ಟು ಮಳೆ ಕಡಿಮೆ ಇದೆ.
ಮತ್ತೆ ಮಳೆಯಾಗುತ್ತಿದೆ
ಬರಪೀಡಿತ ಘೋಷಣೆಯಾದ ಸಂದರ್ಭ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿತ್ತು. ಚೌತಿ ಹಬ್ಬದ ಸನಿಹದ ಹೊತ್ತಿನಲ್ಲಿ ಕರಾವಳಿಯ ಹಲವೆಡೆ ಉತ್ತಮ ಮಳೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯ ವೈಶಿಷ್ಟ್ಯ ಹೇಗಿದೆಯೆಂದರೆ, ಮಳೆ ಬಂದಾಗ ಹಳ್ಳ, ಕೊಳ್ಳಗಳು, ನದಿ ತುಂಬುತ್ತದೆ, ಬಿಸಿಲು ಬಂದಾಗ ಹಿಂದೆಂದಿಗಿಂತಲೂ ಹೆಚ್ಚು ಆವಿಯಾಗುತ್ತದೆ. ಅಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಿಯಲ್ಲಿ ನೀರು ಇಂಗುವ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಹಿರಿಯರು ಅಭಿಪ್ರಾಯಪಡುತ್ತಿದ್ದಾರೆ.
ಜಲಾಂದೋಲನ ಜಾಗೃತಿ ಅಗತ್ಯ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಳ ಮಳೆ ಇದೆ, ನೀರಿಗೆ ಕೊರತೆ ಇಲ್ಲ, ನನ್ನ ಮನೆಯಲ್ಲಿ ನೀರು ಬೇಕಾದಷ್ಟಿದೆ, ಇನ್ನೊಬ್ಬನ ಚಿಂತೆ ನನಗ್ಯಾಕೆ ಎಂಬ ಭಾವನೆಯನ್ನು ಬಿಟ್ಟುಬಿಡಬೇಕು. ಏಕೆಂದರೆ, ಮುಂದಿನ ದಿನಗಳಲ್ಲಿ ನೀರಿಗೆ ತತ್ವಾರ ಆಗುವುದಂತೂ ಗ್ಯಾರಂಟಿ. ಈ ಕಾರಣದಿಂದ ಸರಕಾರಗಳೂ ಜಲಾಂದೋಲನಕ್ಕೆ ಪ್ರೋತ್ಸಾಹ ನೀಡಬೇಕು. ಹಳ್ಳಿ ಹಳ್ಳಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ಕುರಿತು ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ಕಾರ್ಯಕ್ರಮಗಳು ಆಗಬೇಕು. ಇಂಥ ಜಲಜಾಗೃತಿ ಮೂಡಿಸಬೇಕಾದ ಸರಕಾರಿ ಇಲಾಖೆಗಳ ಕಚೇರಿ ಕಟ್ಟಡಗಳಲ್ಲೇ ಮಳೆನೀರು ಸಂಗ್ರಹದ ವ್ಯವಸ್ಥೆ ಇಲ್ಲ, ಇನ್ನು ಇವರು ಹೇಳುವುದಾದರೂ ಯಾರಿಗೆ ಎಂದು ಪರಿಸರ ತಜ್ಞರು ಬೇಸರ ವ್ಯಕ್ತಪಡಿಸಿದರು.
ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು