logo
ಕನ್ನಡ ಸುದ್ದಿ  /  Karnataka  /  Complete Details Of Nia Raid In Karnataka

NIA Raid in Karnataka: ರಾಜ್ಯಾದ್ಯಂತ ಎನ್‌ಐಎ ದಾಳಿ; ಎಲ್ಲಿ ಏನಾಯ್ತು? ಸಂಪೂರ್ಣ ವಿವರ ಇಲ್ಲಿದೆ

HT Kannada Desk HT Kannada

Sep 22, 2022 12:10 PM IST

ಮಂಗಳೂರಿನಲ್ಲಿ ಎನ್‌ಐಎ ದಾಳಿ

    • ದೇಶದ ಹಲವೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ(ED) ಜಂಟಿಯಾಗಿ ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ. ಭಯೋತ್ಪಾದನೆಗೆ ಧನಸಹಾಯ, ಉಗ್ರ ಚಟುವಟಿಕೆಗೆ ಬೆಂಬಲಿಸಿ ತರಬೇತಿ ಶಿಬಿರಗಳ ಆಯೋಜನೆ ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ಪ್ರೇರೇಪಿಸಿರುವ ಗುಮಾನಿ ಮೇಲೆಗೆ ವಿವಿಧ ವ್ಯಕ್ತಿಗಳ ನಿವಾಸ ಮತ್ತು ಅಧಿಕೃತ ಕಚೇರಿಗಳಲ್ಲಿ ವ್ಯಾಪಕ ಶೋಧ ನಡೆಸಲಾಗಿದೆ.
ಮಂಗಳೂರಿನಲ್ಲಿ ಎನ್‌ಐಎ ದಾಳಿ
ಮಂಗಳೂರಿನಲ್ಲಿ ಎನ್‌ಐಎ ದಾಳಿ

ಬೆಂಗಳೂರು: ರಾಜ್ಯ ಸೇರಿದಂತೆ ದೇಶಾದ್ಯಂತ ಇಂದು ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(National Investigation Agency) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಮಂಗಳೂರು, ಶಿರಸಿ, ಶಿವಮೊಗ್ಗ, ಗಂಗಾವತಿ, ಕಲಬುರಗಿ ಸೇರಿದಂತೆ ವಿವಿಧೆಡೆ ದಾಳಿ ನಡೆದಿದೆ. ಪಿಎಫ್‌ಐ(PFI) ಹಾಗೂ ಎಸ್‌ಡಿಪಿಐ(SDPI) ಸಂಘಟನೆ ಮುಖಂಡರನ್ನು ಗುರಿಯಾಗಿಸಿ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿದೆ.

ಟ್ರೆಂಡಿಂಗ್​ ಸುದ್ದಿ

Railway News: ಬೆಂಗಳೂರು ಬಿಲಾಸ್‌ಪುರಕ್ಕೆ ವಿಶೇಷ ಬೇಸಿಗೆ ರೈಲು, ಮೇ ತಿಂಗಳ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Bangalore Weather: ಬೆಂಗಳೂರಿನಲ್ಲಿ ದಾಖಲೆ ಬಿಸಿಲು, ಇತಿಹಾಸದಲ್ಲೇ ಅತಿ ಹೆಚ್ಚು 3ನೇ ಬಿಸಿ ದಿನ !

ಕರ್ನಾಟಕ ಸಿಇಟಿ ಗೊಂದಲ; ಮರುಪರೀಕ್ಷೆ ಇಲ್ಲ, ಪಠ್ಯೇತರ ಪ್ರಶ್ನೆ ಬಿಟ್ಟು ಉಳಿದವುಗಳ ಮೌಲ್ಯಮಾಪನಕ್ಕೆ ತೀರ್ಮಾನ

SSLC Results 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸದ್ಯವೇ ಪ್ರಕಟ, ದಿನಾಂಕ ನಿಗದಿಯಾಗಿಲ್ಲ ಎಂದ ಮಂಡಳಿ

ದೇಶದ ಹಲವೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ(ED) ಜಂಟಿಯಾಗಿ ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ. ಭಯೋತ್ಪಾದನೆಗೆ ಧನಸಹಾಯ, ಉಗ್ರ ಚಟುವಟಿಕೆಗೆ ಬೆಂಬಲಿಸಿ ತರಬೇತಿ ಶಿಬಿರಗಳ ಆಯೋಜನೆ ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ಪ್ರೇರೇಪಿಸಿರುವ ಗುಮಾನಿ ಮೇಲೆಗೆ ವಿವಿಧ ವ್ಯಕ್ತಿಗಳ ನಿವಾಸ ಮತ್ತು ಅಧಿಕೃತ ಕಚೇರಿಗಳಲ್ಲಿ ವ್ಯಾಪಕ ಶೋಧ ನಡೆಸಲಾಗಿದೆ. ರಾಜ್ಯದ ಹಲವೆಡೆ ಈಗಾಗಲೇ ದಾಳಿಯ ಮೊದಲ ಹಂತ ಮುಗಿದಿದ್ದು, ಹಲವರು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರಿನಲ್ಲಿ ಏನಾಯ್ತು?

ರಾಜ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ಕರಾವಳಿ ನಗರಿ ಮಂಗಳೂರಿನಲ್ಲಿ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಮುಂಜಾನೆ 3.30ರ ಸುಮಾರಿಗೆ ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್‌ಡಿಪಿಐ ಹಾಗೂ ಪಿಎಫ್ಐ ಜಿಲ್ಲಾ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 5 ಗಂಟೆಗಳ ಕಾಲ ಪರಿಶೀಲನೆ ನಡೆಸಿದರು.‌ ಸದ್ಯ ಅಧಿಕಾರಿಗಳ ಪರಿಶೀಲನೆ ಮುಕ್ತಾಯಗೊಂಡಿದ್ದು, ಮೂವರು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ. ಪಿಎಫ್ಐ ಮುಖಂಡ ಅಶ್ರಫ್ ಎ ಕೆ, ಮೊಹಿದ್ದೀನ್ ಹಳೆಯಂಗಡಿ ಮತ್ತು ನವಾಜ್ ಕಾವೂರು ಎಂಬವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ನಿವಾಸದ ಮೆಲೆ ದಾಳಿ

ನಗರದ ರಿಚ್​ಮಂಡ್ ರಸ್ತೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್, ಪಾದರಾಯನಪುರದಲ್ಲಿ ವಾಸವಾಗಿರುವ ಪಿಎಫ್​ಐ ರಾಜ್ಯ ಘಟಕದ ಅಧ್ಯಕ್ಷ ನಾಸೀರ್ ಪಾಷಾ, ಪುಲಕೇಶಿನಗರ, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ವಾಸವಾಗಿರುವ ಸಂಘಟನೆಯ ಇತರೆ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲೂ ಓಬ್ಬ ಅರೆಸ್ಟ್‌

ಇತ್ತ ಶಿವಮೊಗ್ಗದಲ್ಲಿ ಪಿಎಫ್​ಐ ರಾಜ್ಯ ವಲಯ ಅಧ್ಯಕ್ಷ ಶಾಹೀದ್ ಖಾನ್ ಎಂಬಾತನ ಮನೆ ಮೇಲೆ ದಾಳಿ ನಡೆಸಿರುವ, ಎನ್‌ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ನಗರದ ಯಲಕಪ್ಪನ ಬೀದಿಯಲ್ಲಿನ ಶಾಹೀದ್ ನಿವಾಸದ ಮೇಲೆ ಇಂದು ನಸುಕಿನ ಜಾವ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಪರಿಶೀಲನೆ ಮುಗಿಸಿರುವ ಅಧಿಕಾರಿಗಳು, ಆರೋಪಿಯನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಈತ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಯ ವಲಯ ಪಿಎಫ್​ಐ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಶಿರಸಿಯಲ್ಲೂ ಅಧಿಕಾರಿಗಳ ದಾಳಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿಪ್ಪು ನಗರದಲ್ಲಿಯೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿ ಎಸ್‌ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಎಂಬಾತನನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮೈಸೂರಿನಲ್ಲೂ ಪಿಎಫ್ಐ ಮಾಜಿ ಅಧ್ಯಕ್ಷ ವಶಕ್ಕೆ

ಮೈಸೂರಿನಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಪಿಎಫ್ಐ ಸಂಘಟನೆ ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನ ಮಹಮ್ಮದ್ ಕಲಿಮುಲ್ಲಾ ಎಂಬಾತನ ನಿವಾಸದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ. ಶಾಂತಿನಗರದ ಕಲಿಮುಲ್ಲಾ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಗಂಗಾವತಿಯಲ್ಲಿ ಪಿಎಫ್​ಐ ಮುಖಂಡ ವಶಕ್ಕೆ

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಪಿಎಫ್‌ಐ ಸಂಘಟನೆ ಮುಖಂಡ ಅಬ್ದುಲ್ ಫೈಯಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಈದ್ಗಾ ಕಾಲೋನಿಯ ಫೈಯಾಜ್ ಮನೆ ಮೇಲೆ ಇಂದು ಮೇಲೆ ಬೆಳಗಿನ ಜಾವ ಅಧಿಕಾರಿಗಳು ದಾಳಿ ನಡೆಸಿದ್ದರು.

ಪಿಎಫ್‌ಐ ಜಿಲ್ಲಾಧ್ಯಕ್ಷ ವಶಕ್ಕೆ

ಇನ್ನೊಂದೆಡೆ ಕಲಬುರಗಿಯಲ್ಲಿ ಇಬ್ಬರು PFI ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಇಂದು ಬೆಳಗ್ಗೆ ಪಿಎಫ್‌ಐ ಜಿಲ್ಲಾಧ್ಯಕ್ಷ ಎಜಾಜ್ ಅಲಿಯನ್ನು ವಶಕ್ಕೆ ಪಡೆದಿದ್ದಾರೆ. ಎನ್ಐಎ ಅಧಿಕಾರಿಗಳ ಕಾರ್ಯಾಚರಣೆಗೆ ಪಿಎಫ್ಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು