Shimoga News: ವಿವಾಹವಾಗುವ ಹುಡುಗಿ ತನಗಿಂತ ದೊಡ್ಡವಳೆಂಬ ಬೇಸರ: ಮನನೊಂದ ಶಿವಮೊಗ್ಗ ಯುವಕ ಆತ್ಮಹತ್ಯೆ
Aug 13, 2023 10:00 AM IST
ಮದುವೆ ವಿಚಾರವಾಗಿ ಬೇಸರವಾಗಿ ಆತ್ಮಹತ್ಯೆ ಮಾಡಿಕೊಂಡ ಶಿವಮೊಗ್ಗ ಜಿಲ್ಲೆಯ ಮಣಿಕಂಠ
- Shimoga Crime News ತನಗಿಂತ ಮೂರು ವರ್ಷದ ಹಿರಿಯ ಯುವತಿ ಜತೆಗೆ ಮದುವೆ ಮಾಡುತ್ತಿದ್ದಾರೆ. ಮದುವೆಯನ್ನಿನು ರಾಕರಿಸಿದರೂ ಒಪ್ಪುತ್ತಿಲ್ಲ ಎಂದು ಬೇಸರಗೊಂಡು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಯುವಕ ಮೃತಪಟ್ಟಿದ್ದಾನೆ. ಏನಿದು ಪ್ರಕರಣ.. ಇಲ್ಲಿದೆ ವರದಿ.
ಶಿವಮೊಗ್ಗ: ತಾನು ವಿವಾಹವಾಗುವ ಯುವತಿ ತನಗಿಂತ ದೊಡ್ಡವಳು ಎನ್ನುವ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕು ಆಯನೂರು ಸಮೀಪದ ಕೋಟೆ ಗ್ರಾಮದಲ್ಲಿ ನಡೆದಿದೆ.
ಸ್ವಾಮಿನಾಥ (32) ಎಂಬ ಯುವಕ ಮೃತಪಟ್ಟಿದ್ದಾನೆ. ಈಗ್ಗೆ ಎರಡು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಹುಡುಗಿ ಈತನಿಗಿಂತ ಮೂರು ವರ್ಷ ದೊಡ್ಡವಳು ಎನ್ನಲಾಗುತ್ತಿದ್ದು, ಇದೇ ವಿಚಾರವಾಗಿ ಬೇಸರಗೊಂಡಿದ್ದ ಈತ ಮದುವೆ ಬೇಡವೆಂದು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.
ಕುಟುಂಬದವರು ಸಹ ಯುವಕನ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸದೇ ವಯಸ್ಸಿನಲ್ಲೇನಿಲ್ಲ. ಹೊಂದಿಕೊಂಡು ಬಾಳುವುದರಲ್ಲಿ ಸಂತೋಷವಿದೆ ಎಂದು ಬುದ್ಧಿವಾದವನ್ನೂ ಹೇಳಿದ್ದಾರೆ. ಇಂದಿನ ಕಾಲದಲ್ಲಿ ಇವೆಲ್ಲ ವಿಷಯವೇ ಅಲ್ಲವೆಂದು ತಿಳಿ ಹೇಳಿದ್ದರೂ ಕೂಡ ಯುವಕ ಅದನ್ನು ಒಪ್ಪಿಕೊಂಡಿಲ್ಲ ಇದು ಹುಡುಗಿ ಮನೆಯವರಿಗೆ ತಿಳಿದು ಸ್ವಾಮಿನಾಥನ ಮನೆಗೆ ಬಂದು ಗಲಾಟೆ ಮಾಡಿ ಮದುವೆ ಆಗುವಂತೆ ಒತ್ತಡ ಹಾಕಿದ್ದರು ಎನ್ನಲಾಗಿದೆ.
ಇದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕಳೆನಾಶಕ ಸೇವಿಸಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ.
ವಿವಾಹವಾಗಿ ಇನ್ನೂ ಬಾಳಿ ಬದುಕಬೇಕಾಗಿದ್ದ ಯುವಕ ಕೇವಲ ಮದುವೆಯಾಗುವ ಯುವತಿ ತನಗಿಂತ ಹಿರಿಯಳು ಎಂಬ ಕಾರಣಕ್ಕಾಗಿ ಆತ್ಮಹತ್ಯೆ ಯಂತಹ ನಿರ್ಧಾರ ಮಾಡಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.