KSRTC News: ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್‌ಗೆ ಸುಬ್ರಹ್ಮಣ್ಯ ಗುಂಡ್ಯ ಹೆದ್ದಾರಿಯಲ್ಲಿ ತಿವಿದ ಕಾಡಾನೆ, ರಾತ್ರಿ ಪ್ರಯಾಣಕ್ಕೆ ಆತಂಕ
Jun 02, 2023 10:03 AM IST
KSRTC News: ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್‌ಗೆ ಸುಬ್ರಹ್ಮಣ್ಯ ಗುಂಡ್ಯ ಹೆದ್ದಾರಿಯಲ್ಲಿ ತಿವಿದ ಕಾಡಾನೆ, ರಾತ್ರಿ ಪ್ರಯಾಣಕ್ಕೆ ಆತಂಕ
- KSRTC Karnataka: ಕರಾವಳಿಯ ಪಶ್ಚಿಮ ಘಟ್ಟದ ತಪ್ಪಲಲ್ಲಿ ಆಗಾಗ ಕಾಡಾನೆಗಳು ಪ್ರತ್ಯಕ್ಷವಾಗಿ ಜನರಿಗೆ ಬೆದರಿಕೆ ಉಂಟು ಮಾಡುವ ಪ್ರಕರಣಗಳು ನಡೆಯುತ್ತಿರುವ ಬೆನ್ನಲ್ಲೇ ನಿನ್ನೆ ರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಗೆ ಆನೆ ತಿವಿದ ಘಟನೆ ಗುಂಡ್ಯ ಸಮೀಪ ನಡೆದಿದೆ.
ಮಂಗಳೂರು: ಕೆಲ ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಾಡಾನೆಗಳು ರಸ್ತೆ, ಜನವಸತಿ ಪ್ರದೇಶಗಳಲ್ಲಿ ಕಾಣಿಸುವ ಪ್ರಕರಣಗಳು ಕಂಡುಬರುತ್ತಿದ್ದು, ಆಘಾತಕಾರಿ ಘಟನೆಯೊಂದರಲ್ಲಿ ಗುರುವಾರ ರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಸ್ಲೀಪರ್ ಬಸ್ಸೊಂದಕ್ಕೆ ಕಾಡಾನೆ ತಿವಿದ ಘಟನೆ ನಡೆದಿದೆ.
ಘಟನೆಯಿಂದ ಬಸ್‌ಗೆ ಹಾನಿಯುಂಟಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಸುಬ್ರಹ್ಮಣ್ಯ - ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಗೆ ಅಡ್ಡಲಾಗಿ ಕಾಡಾನೆ ನಿಂತಿತ್ತು. ಚಾಲಕ ಕಾಡಾನೆಯನ್ನು ಕಂಡು ತಪ್ಪಿಸಲು ಯತ್ನಮಾಡಿದರು. ಆದರೂ ಆದರೂ ದಾಳಿ ಮಾಡಿದ ಕಾಡಾನೆ ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಬಸ್ಸಿಗೆ ಹಾನಿಯಾಗಿದೆ ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಭಾನುವಾರವೂ ಕಾಡಾನೆ ದಾಳಿಯಾಗಿತ್ತು
ಕಳೆದ ಭಾನುವಾರ ನಡೆದ ಘಟನೆಯೊಂದರಲ್ಲಿ ಕಡಬ ಸಮೀಪ ಇಚಿಲಂಪಾಡಿ ಎಂಬಲ್ಲಿ ಕೆಲಸಕ್ಕೆ ಹೋಗುತ್ತಿದ್ದ ವ್ಯಕ್ತಿ ಕಾಡಾನೆ ದಾಳಿ ಮಾಡಲು ಯತ್ನಿಸಿದ ಪರಿಣಾಮ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಇಚ್ಲಂಪಾಡಿಯ ನಡುಮನೆ ಕ್ರಾಸ್ ಬಳಿ ಭಾನುವಾರ ಮಧ್ಯಾಹ್ನ ಘಟನೆ ಸಂಭವಿಸಿದೆ. ಗಾಯಗೊಂಡ ನಡುಮನೆ ನಿವಾಸಿ ವಿಜುಕುಮಾರ್‌ರನ್ನು ಕಡಬ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಚ್ಲಂಪ್ಪಾಡಿಯ ನಡುಮನೆ ಕಾಸ್ ಬಳಿ ಭಾನುವಾರ ಬೆಳಗ್ಗಿನಿಂದಲೇ ಆನೆ ಹಾಗೂ ಮರಿಯಾನೆ ಸಂಚರಿಸುತ್ತಿತ್ತು. ವಿಜು ಕುಮಾರ್ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು, ಮನೆಯೊಂದಕ್ಕೆ ಕೆಲಸಕ್ಕಾಗಿ ತಮ್ಮ ಕಚೇರಿಯಿಂದ ಊಟ ಮುಗಿಸಿ ಒಳ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಆನೆ ಪ್ರತ್ಯಕ್ಷವಾಗಿದ್ದು, ದಾಳಿ ಮಾಡಲು ಬಂದಿದೆ ಎನ್ನಲಾಗಿದೆ. ಈ ಸಂದರ್ಭ ಕೆಳಕ್ಕೆ ಬಿದ್ದು, ಸೊಂಟದ ಭಾಗಕ್ಕೆ ಗಂಭೀರ ಗಾಯವಾಗಿತ್ತು.
ನಾಡಿಗೆ ಬರುತ್ತಿವೆ ಕಾಡಾನೆ
ಕೆಲ ಸಮಯಗಳಿಂದ ಕಾಡಾನೆಗಳು ನಾಡಿಗೆ ಬರುತ್ತಿವೆ. ಹಿಂದೆ ಆನೆಗಳು ಸಂಚರಿಸುತ್ತಿದ್ದ ಜಾಗದಲ್ಲಿ ಈಗ ರಸ್ತೆ, ಜನವಸತಿಗಳು ಇದ್ದ ಕಾರಣ, ಜನರು ಕಾಡು ಕಡಿದರೂ, ಆನೆ ತನ್ನ ಸಂಚಾರದ ದಾರಿ ಮರೆತಿಲ್ಲ. ಹೀಗಾಗಿ ಹಾಡಹಗಲೇ ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಪ್ರತ್ಯಕ್ಷಗೊಳ್ಳುವ ಕಾಡಾನೆಗಳು ಭೀತಿ ಉಂಟು ಮಾಡುತ್ತಿವೆ. ಈ ಕುರಿತು ಸ್ಥಳೀಯರು ಹೇಳುವ ಪ್ರಕಾರ, ಶಾಲೆಗಳು ಆರಂಭಗೊಳ್ಳುವ ಹೊತ್ತಿನಲ್ಲಿ ಮಕ್ಕಳ ಸಂಚಾರಕ್ಕೂ ಆನೆಭೀತಿ ಎದುರಾಗಿದೆ. ಇಂದು ಪ್ರತ್ಯಕ್ಷಗೊಂಡ ಕಾಡಾನೆ ಧರ್ಮಸ್ಥಳ ಸುಬ್ರಹ್ಮಣ್ಯ ರಸ್ತೆಯ ಬಳಿಯಾಗಿದ್ದು, ಈ ಭಾಗದಲ್ಲಿ ರಜಾದಿನಗಳಾದ ಹಿನ್ನೆಲೆಯಲ್ಲಿ ಸಾಕಷ್ಟು ವಾಹನಗಳು ಎರಡೂ ಪುಣ್ಯಕ್ಷೇತ್ರಗಳ ಮಧ್ಯೆ ಸಂಚರಿಸುತ್ತಿವೆ. ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳು, ಕೃಷಿಕರು ಕಾಡಾನೆ ಕಾಟದಿಂದ ಆತಂಕಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಚಾರ್ಮಾಡಿ ಘಾಟಿಯಲ್ಲೂ ಕಾಡಾನೆ ಕಂಡುಬಂದಿತ್ತು.
ಫೆಬ್ರವರಿಯಲ್ಲಿ ಇಬ್ಬರ ಬಲಿಪಡೆದಿತ್ತು
ಕಡಬ ತಾಲೂಕಿನ ರೆಂಜಿಲಾಡಿ ಎಂಬಲ್ಲಿ ಇದೇ ವರ್ಷ ಫೆಬ್ರವರಿ 20ರಂದು ಕಾಡಾನೆ ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದರು. 21 ವರ್ಷದ ರಂಜಿತಾ ಹಾಗೂ 55 ವರ್ಷ ರಮೇಶ್ ರೈ ಮೃತಪಟ್ಟವರು. ರಂಜಿತಾ ಅವರು ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿಯಾಗಿದ್ದು, ಅವರು ಬೆಳಿಗ್ಗೆ ಸೊಸೈಟಿಗೆ ಕಾಡು ದಾರಿಯಲ್ಲಿ ಹೋಗುತ್ತಿದ್ದ ವೇಳೆ ನೈಲದಲ್ಲಿ ಆನೆ ದಾಳಿ ನಡೆಸಿತ್ತು. ಆನೆಯನ್ನು ಕಂಡು ರಂಜಿತಾ ಅವರು ಜೋರಾಗಿ ಕೂಗಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ರಮೇಶ್ ಅವರ ಮೇಲೂ ಆನೆ ದಾಳಿ ನಡೆಸಿತ್ತು. ತರುವಾಯ ನಡೆದ ಬೆಳವಣಿಗೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ರಮೇಶ್ ರೈ ಅವರ ಮೃತದೇಹವನ್ನು ಸ್ಥಳಾಂತರಿಸಲು ಅಡ್ಡಿಪಡಿಸಿದ್ದರು. ಬಳಿಕ ದಾಳಿಕೋರ ಕಾಡಾನೆಯನ್ನು ಹಿಡಿದಿದೆ ಎಂದು ಅರಣ್ಯ ಇಲಾಖೆ ಹೇಳಿಕೊಂಡಿತಾದರೂ ಅದೇ ಕಾಡಾನೆಯಲ್ಲ ಎಂದು ಸ್ಥಳೀಯರು ವಾದಿಸಿದ್ದರು.