Mangaluru News: ಶಾಂತಿ ಕದಡುವ ಯತ್ನಕ್ಕೆ ತಣ್ಣೀರು ಹಾಕಿದ ಮೂಡುಬಿದಿರೆ ಸಿಐ: ನಿರ್ಲಕ್ಷ್ಯ ವಹಿಸಿದ್ಯಾಕೆ ಎಂದು ಪಿಡಿಒಗೆ ಕ್ಲಾಸ್
Oct 07, 2023 11:11 AM IST
Mangaluru News: ಶಾಂತಿ ಕದಡುವ ಯತ್ನಕ್ಕೆ ತಣ್ಣೀರು ಹಾಕಿದ ಮೂಡುಬಿದಿರೆ ಸಿಐ: ನಿರ್ಲಕ್ಷ್ಯ ವಹಿಸಿದ್ಯಾಕೆ ಎಂದು ಪಿಡಿಒಗೆ ಕ್ಲಾಸ್
- ಮೂಡುಬಿದಿರೆಯ ಪುಚ್ಚೆ ಮೊಗರು ಎಂಬಲ್ಲಿ ಕಿಡಿಗೇಡಿಗಳ ಶಾಂತಿ ಕದಡುವ ಯತ್ನವನ್ನ ತಡೆಯುವ ಬಗ್ಗೆ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ ಕುರಿತು ಸ್ಥಳೀಯರು ಆರೋಪ ಮಾಡಿದ್ದಾರೆ.
ಮಂಗಳೂರು: ಯಾವುದೇ ಹೊತ್ತಿನಲ್ಲಿ ಕೋಮು ಚಟುವಟಿಕೆಗಳು ಉದ್ಭವಿಸುವ ಕರಾವಳಿ ಜಿಲ್ಲೆಗಳಲ್ಲಿ ಅಂಥದ್ದೇನಾದರೂ ಕಂಡರೆ, ಆರಂಭದಲ್ಲೇ ಚಿವುಟಿ ಹಾಕುವ ಕಾರ್ಯವನ್ನು ಆಡಳಿತ ಮಾಡಬೇಕು. ಇಲ್ಲದಿದ್ದರೆ, ಮುಂದಕ್ಕೆ ಸಣ್ಣ ಕಿಡಿಯೇ ದೊಡ್ಡದಾಗಿ ಕಾಡ್ಗಿಚ್ಚಿನಂತೆ ಹಬ್ಬುತ್ತದೆ.
ಇಂಥದ್ದೊಂದು ಸನ್ನಿವೇಶ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಪುಚ್ಚಮೊಗರು ಎಂಬಲ್ಲಿ ನಡೆಯಿತು. ಸೆ.30ರಂದು ನಡೆದಿದ್ದ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂಡುಬಿದಿರೆ ಇನ್ಸ್ ಪೆಕ್ಟರ್ ಸಂದೇಶ್ ಅವರು ಪಿಡಿಒಗೆ ಕ್ಲಾಸ್ ತೆಗೆದುಕೊಳ್ಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಮೆಂಟುಗಳೂ ಬಂದಿವೆ. ಪಿಡಿಒಗೆ ಎಂಥ ಒತ್ತಡ ಇತ್ತೋ ಏನೋ ಎಂದು ಒಬ್ಬರು ಹಾಕಿದರೆ, ಮತ್ತೊಬ್ಬರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಇನ್ಸ್ ಪೆಕ್ಟರ್ ಎಂದು ಪ್ರಶಂಸಿಸಿದ್ದಾರೆ. ರಾಜ್ಯದ ಅಲ್ಲಲ್ಲಿ ಕಿಡಿಗೇಡಿಗಳಿಂದ ಅಶಾಂತಿಯ ವಾತಾವರಣ ಸೃಷ್ಟಿಸಲು ವಿವಿಧ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಇದೇ ವೇಳೆ ಸರಕಾರ ಇಂತಹ ಕೃತ್ಯಗಳನ್ನು ಶತಾಯ ಗತಾಯ ಮಟ್ಟ ಹಾಕಲು ಪ್ರಯತ್ನಿಸುತ್ತಿದೆ ಅದರ ಒಂದು ಭಾಗವಾಗಿ ಪುಚ್ಚೆಮೊಗರುವಿನಲ್ಲಿ ಈ ಕೆಲಸವಾಗಿದೆ ಎಂದು ಪ್ರಶಂಸಿಸಿದ್ದಾರೆ.
ನಡೆದದ್ದೇನು?
ಮೂಡುಬಿದಿರೆಯ ಪುಚ್ಚೆ ಮೊಗರು ಎಂಬಲ್ಲಿ ಕಿಡಿಗೇಡಿಗಳ ಶಾಂತಿ ಕದಡುವ ಯತ್ನವನ್ನ ತಡೆಯುವ ಬಗ್ಗೆ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ ಕುರಿತು ಸ್ಥಳೀಯರು ಆರೋಪ ಮಾಡಿದ್ದಾರೆ. ಸೆ.30ರಂದು ಹಿಂದುಗಳ ಸಂಕೇತಗಳು ಇರುವ ಕಟ್ಟೆಯೊಂದರಲ್ಲಿ ಮುಸ್ಲಿಂ ಧರ್ಮ ಸಂಕೇತಿಸುವ ಬಣ್ಣ ಬಳಿಯಲಾಗಿತ್ತು. ಧ್ವಜವನ್ನೂ ಹಾಕಲಾಗಿತ್ತು. ಇದು ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಯಿತು. ಈ ಕುರಿತು ಸ್ಥಳೀಯಾಡಳಿತ ಗಮನಿಸಲಿಲ್ಲ ಎಂಬುದು ಸಾರ್ವಜನಿಕರ ದೂರು. ಈ ಸಂದರ್ಭ ಪರಿಸ್ಥಿತಿಯನ್ನು ಗಮನಿಸಿ ಮೂಡುಬಿದಿರೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಸ್ಥಳಕ್ಕೆ ಸಿಬ್ಬಂದಿ ಜೊತೆ ಆಗಮಿಸಿದ್ದಾರೆ. ನೇರವಾಗಿ ಪಿಡಿಒ ಅವರನ್ನು ಪ್ರಶ್ನಿಸಿದ್ದಾರೆ. ‘’ಪರ್ಮಿಶನ್ ತೆಗೊಂಡಿದ್ದಾರೇನ್ರೀ ಇದು’’ ಎಂದು ಸಂದೇಶ್ ಕೇಳಿದ್ದಾರೆ. ಅದಕ್ಕೆ ಪಿಡಿಒ ತೆಗೊಂಡಿಲ್ಲ ಎಂದು ಉತ್ತರಿಸಿದ್ದಾರೆ. ನಿಮ್ಮ ಕೆಲಸ ಏನು ಎಂದು ಗೊತ್ತಿಲ್ಲವೇ ಎಂದು ಪಿಡಿಒ ಅವರನ್ನೇ ಕೇಳಿದ್ದಾರೆ. ನಮಗೆ ಸಂಬಂಧ ಇಲ್ಲ ಎಂದು ಹೇಳುವುದು ಸರಿಯೇ ಎಂದು ಪ್ರಶ್ನಿಸಿರುವ ಸಂದೇಶ್, ನಿಮ್ಮ ಅಧಿಕಾರ ಅದನ್ನು ತೆರವುಗೊಳಿಸುವುದು, ಆದರೆ ಅದನ್ನು ಬಿಟ್ಟು ನನಗೆ ಸಂಬಂಧವೇ ಇಲ್ಲದಂತೆ ವರ್ತಿಸುವುದು ಸರಿಯೇ ಎಂದು ಕೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
(ವರದಿ: ಹರೀಶ್ ಮಾಂಬಾಡಿ)