Mangaluru Crime: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; ಕೋರ್ಟಿಗೆ ಹಾಜರಾಗದಿದ್ದರೆ ಆರೋಪಿಗಳ ಆಸ್ತಿ ಮುಟ್ಟುಗೋಲು
Jun 29, 2023 06:00 AM IST
ಬಿಜೆಪಿ ನಾಯಕ ದಿವಂಗತ ಪ್ರವೀಣ್ ನೆಟ್ಟಾರು (ಎಡಚಿತ್ರ). ಸುಳ್ಯ ಪಟ್ಟಣದಲ್ಲಿ ಎನ್‌ಐಎ ಪ್ರಚಾರ (ಬಲಚಿತ್ರ)
- Praveen Nettaru: ಮುಸ್ತಫಾ ಪೈಚಾರ್ ಮತ್ತು ಅಬುಬಕ್ಕರ್ ಸಿದ್ಧೀಕ್ ಅವರು ಜೂನ್ 30ರಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಬೇಕು. ತಪ್ಪಿದರೆ ಮುಂದಿನ ದಿನಮಾನಗಳಲ್ಲಿ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಲಾಗಿರುತ್ತದೆ ಎಂದು ಎನ್‌ಐಎ ಎಚ್ಚರಿಸಿದೆ.
ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ತಫಾ ಪೈಚಾರ್ ಮತ್ತು ಅಬುಬಕ್ಕರ್ ಸಿದ್ಧೀಕ್ ಅವರು ವಿಶೇಷ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಮುಂದಿನ ದಿನಗಳಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency - NIA) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ತಲೆಮರೆಸಿಕೊಂಡಿರುವ ಆರೋಪಿಗಳು ಬೆಳ್ಳಾರೆ ಗ್ರಾಮದವರಾಗಿದ್ದು, ಇವರನ್ನು ಹುಡುಕಿಕೊಟ್ಟರೆ ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ರೂಪಾಯಿ ಬಹುಮಾನವನ್ನು ಎನ್ಐಎ ವಿಶೇಷ ನ್ಯಾಯಾಲಯ ಘೋಷಣೆ ಮಾಡಿದೆ. ಮುಸ್ತಫಾ ಪೈಚಾರ್ ಮತ್ತು ಅಬುಬಕ್ಕರ್ ಸಿದ್ಧೀಕ್ ಅವರು ಜೂನ್ 30ರಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಬೇಕು. ತಪ್ಪಿದರೆ ಮುಂದಿನ ದಿನಮಾನಗಳಲ್ಲಿ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಲಾಗಿರುತ್ತದೆ ಎಂದು ಎನ್‌ಐಎ ಎಚ್ಚರಿಸಿದೆ.
ಈ ಕುರಿತು ಸುಳ್ಯದಲ್ಲಿ ಎನ್ಐಎ ಅಧಿಕಾರಿಗಳು ಆಟೊದಲ್ಲಿ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಬೇಕು. ಇಲ್ಲದಿದ್ದರೆ ಆಸ್ತಿ ಮುಟ್ಟುಗೋಲು ಸಹಿತ ಕಠಿಣ ಕ್ರಮಕ್ಕೆ ಸಜ್ಜಾಗಬೇಕು ಎಂದು ಸೂಚನೆಯನ್ನು ಬಿತ್ತರಿಸಲಾಯಿತು.
ಆರೋಪಿಗಳ ಪತ್ತೆಗಾಗಿ ಬಹುಮಾನ ಘೋಷಿಸಿರುವ ಎನ್ಐಎ ಇದೀಗ ಅಲ್ಲಲ್ಲಿ ಪೋಸ್ಟರ್ ಅಂಟಿಸುತ್ತಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮುಸ್ತಫಾ ಪೈಚಾರ್, ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್, ತುಫೇಲ್, ಮಸೂದ್ ಅಗ್ನಾಡಿ ಸೇರಿಂದತೆ ಇನ್ನಿತರ ಪ್ರಮುಖ ಆರೋಪಿಗಳಿಗಾಗಿ ಎನ್ಐಎ ತಲಾಶೆ ನಡೆಸುತ್ತಿದೆ. ಬೆಳ್ಳಾರೆ, ಸುಳ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಭಾವಚಿತ್ರವಿರುವ ನೋಟಿಸನ್ನು ಎನ್ಐಎ ಅಂಟಿಸಿದೆ.
ಚುರುಕುಗೊಂಡ ತನಿಖೆ
ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ತನಿಖೆಯನ್ನು ಮುಂದುವರಿಸಿದ್ದು, ಚೆನ್ನೈ ವಿಭಾಗದ ಇನ್ಸ್ ಪೆಕ್ಟರ್ ಷಣ್ಮುಗಂ ನೇತೃತ್ವದ ಮೂವರು ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಮನೆಗಳಿಗೆ ತೆರಳಿ ವಿಚಾರಣೆ ನಡೆಸಿತು.
ಏಕಕಾಲಕ್ಕೆ ಆರು ಕಡೆಗಳಲ್ಲಿ ದಾಳಿ ನಡೆಸಿದ ಎನ್.ಐ.ಎ. ತಂಡ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ಎನ್.ಐ.ಎ.ಗೆ ತನಿಖೆ ವಹಿಸಿತ್ತು. ತನಿಖಾಧಿಕಾರಿಗಳು ಈಗಾಗಲೇ ದಕ್ಷಿಣ ಕನ್ನಡವಷ್ಟೇ ಅಲ್ಲ, ಇತರೆಡೆಗಳಿಂದಲೂ ಹಲವು ಪಿ.ಎಫ್.ಐ. ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿತ್ತು.
ಮನೆ ಮನೆ ಶೋಧ, ದಾಖಲೆಗಳು ವಶಕ್ಕೆ
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ಎಂಬಲ್ಲಿನ ನೌಶಾದ್ ಎಂಬಾತನ ಮನೆಗೆ ತೆರಳಿದ ಅಧಿಕಾರಿಗಳು, ಅಲ್ಲಿ ತನಿಖೆ ನಡೆಸಿದರು.ಈ ಸಂದರ್ಭ ನೌಶಾದ್ ಮನೆಯಲ್ಲಿ ಇರಲಿಲ್ಲ. ಪಿ.ಎಫ್.ಐ.ನಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿದ್ದ ನೌಶಾದ್, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಸಂಪರ್ಕದಲ್ಲಿದ್ದನೇ ಎಂಬ ಕುರಿತು ತನಿಖೆಯನ್ನು ಎನ್.ಐ.ಎ.ಅಧಿಕಾರಿಗಳು ನಡೆಸಿದ್ದಾರೆ. ಈ ಸಂದರ್ಭ ನೌಶಾದ್ ಕುರಿತು ಮನೆಮಂದಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಈತ ಉಡುಪಿಯ ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಬಳಿಕ ಊರಲ್ಲೇ ಲಾರಿ, ಕಾರು ಚಾಲಕ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಸಂದರ್ಭ ಹಲವು ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸೋಮವಾರಪೇಟೆಯಲ್ಲಿ ಕನ್ಸೆಂಟ್ ಬಾಣೆ ಮತ್ತು ಕಲ್ಲಂದೂರು ಭಾಗಗಳಲ್ಲಿ ಇಬ್ಬರ ಮನೆಗೆ ಎನ್.ಐ.ಎ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವ್ಯಕ್ತಿಗಳಿಬ್ಬರೂ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮನೆಯವರ ಬಳಿ ಮಾಹಿತಿ ಪಡೆದುಕೊಂಡರು.
ಸುಳ್ಯದ ಮುಸ್ತಫಾ ಪೈಚಾರು, ಅಬುಬಕ್ಕರ್ ಸಿದ್ದೀಕ್, ಉಮ್ಮರ್ ಫಾರೂಕ್, ಮತ್ತು ಮಸೂದ್ ಅಗ್ನಾಡಿ ಸೇರಿದಂತೆ ಇತರ ಆರೋಪಿಗಳಿಗಾಗಿ ಬೆಳ್ಳಾರೆ, ಸುಳ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲೂ ಎನ್.ಐ.ಎ. ಶೋಧ ಕಾರ್ಯ ನಡೆಸಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಭಾವಚಿತ್ರಗಳು ಇರುವ ಪೋಸ್ಟರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಧಿಕಾರಿಗಳು ಅಂಟಿಸಿದ್ದಾರೆ. ಆರೋಪಿಗಳ ಮನೆಯ ಗೋಡೆ ಮೇಲೂ ಪೋಸ್ಟರ್ ಅಂಟಿಸಲಾಗಿದೆ. ಇವರ ಮೇಲೆ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಹಕಾರ ನೀಡಿದ ಆರೋಪವಿದೆ. ಬೆಂಗಳೂರಿನ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ದಾಸರಹಳ್ಳಿಯಲ್ಲಿ ತೌಫಿಲ್ ಎಂಬಾತನನ್ನು ಬಂಧಿಸಲಾಗಿತ್ತು.
ಕಳೆದ ವರ್ಷ ನಡೆದಿದ್ದ ಹತ್ಯೆ
ಕಳೆದ ವರ್ಷ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ಹೊಂದಿರುವ ಪ್ರವೀಣ್ ನೆಟ್ಟಾರು ಅವರು 2022ರ ಜುಲೈ 26ರ ರಾತ್ರಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಮೂವರು ದುಷ್ಕರ್ಮಿಗಳು ಬಂದು ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿ ಹತ್ಯೆ ಮಾಡಿದ್ದರು.
ಪ್ರಕರಣ ಸಂಬಂಧ ಈವರೆಗೆ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಬಲೆ ಬೀಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 1,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಆರೋಪಿಗಳಿಗೆ ಪಿಎಫ್‌ಐ ಜತೆ ನಂಟು ಇರುವ ಕುರಿತು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಆ ದೃಷ್ಟಿಯಲ್ಲಿ ತನಿಖೆ ಸಾಗಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು