Davanagere News: ಒಂಟಿ ಮಹಿಳೆಗೆ ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪಿಯ ಬಂಧನ, 2.17 ಲಕ್ಷ ರೂಪಾಯಿ ಪೊಲೀಸ್ ವಶ
Sep 23, 2023 10:02 PM IST
ಒಂಟಿ ಮಹಿಳೆಗೆ ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪಿಯ ಬಂಧನ, 2.17 ಲಕ್ಷ ರೂಪಾಯಿ ವಶಪಡಿಸಿದ ದಾವಣಗೆರೆ ಪೊಲೀಸರು.
ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇತ್ತೀಚೆಗೆ ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಹಣ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ: ಈಚೆಗೆ ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ್ದ ಪ್ರಕರಣವೊಂದು ದಾವಣಗೆರೆ ಜನರನ್ನು ಬೆಚ್ಚಿಬೀಳಿಸಿತ್ತು. ಮಹಿಳೆಯರು ಒಂಟಿಯಾಗಿ ಮನೆಯಲ್ಲಿರುವುದಕ್ಕೂ ಆತಂಕ ಪಡುವಂತಾಗಿತ್ತು. ಆದರೆ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸ್ ಇಲಾಖೆ ಕೊನೆಗೂ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.
ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಕುಂದುವಾಡ ರಸ್ತೆಯ ಬಾಲಾಜಿ ಸರ್ಕಲ್ ಹತ್ತಿರ ವಾಸವಿರುವ ಮನೆಯೊಂದರಲ್ಲಿ ಯೋಗೀಶ್ವರಿ ಅವರು ಮಗನೊಂದಿಗೆ ಇದ್ದ ವೇಳೆ, ಮಧ್ಯಾಹ್ನದ ಹೊತ್ತಲ್ಲಿಯೇ ದುಷ್ಕರ್ಮಿಯೊಬ್ಬ ಆಕೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಹಣ ದೋಚಿಕೊಂಡು ಪರಾರಿಯಾಗಿದ್ದ.
ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಹಲ್ಲೆ ಮಾಡಿ, ಸುಲಿಗೆ ಮಾಡಿದ್ದ ಆರೋಪಿಯನ್ನು ಬಂಧಿಸಿ, ಆರೋಪಿತನಿಂದ 2,17,500 ರೂಪಾಯಿ ನಗದು ಮತ್ತು 26,000 ರೂಪಾಯಿ ಮೌಲ್ಯದ ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಆರೋಪಿತರಾದ ಮುಬಾರಕ್ ಎಂ ಅಲಿಯಾಸ್ ಬಾಬು ಅಲಿಯಾಸ್ ಸಾಹೀಲ್ (22 ವರ್ಷ) ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಇನ್ನೂ ಈ ಪ್ರಕರಣದಲ್ಲಿ ಭಾಗಿಯಾರುವವರ ಬಗ್ಗೆ ಹಾಗೂ ಆರೋಪಿ ಇನ್ನೂ ಎಲ್ಲೆಲ್ಲಿ ದರೋಡೆ ಮಾಡಿರುವನೆಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಮುಂದುವರೆಸಿದ್ದಾರೆ.
ದರೋಡೆ ಪ್ರಕರಣ ಹೀಗಾಗಿತ್ತು..
ಮಹಿಳೆ ತಮ್ಮ ಮನೆಯಲ್ಲಿದ್ದಾಗ ಮಧ್ಯಾಹ್ನ ಮಗನಿಗೆ ತಿಂಡಿಯನ್ನು ಕೊಟ್ಟು, ಮನೆಯ ಹೊರಗೆ ಒಣಗಿಸಲು ಇಟ್ಟಿದ್ದ ಕೊಬ್ಬರಿ ತುಂಡುಗಳನ್ನು ನೋಡಲು ಹೋಗಿ ವಾಪಸ್ಸು ಮನೆಯೊಳಗೆ ಬಂದಾಗ ಮನೆಯಲ್ಲಿ ಮಗನೊಂದಿಗೆ ಆರೋಪಿತ ಸ್ಟೋರ್ ರೂಮಿನಲ್ಲಿದ್ದಾನೆ. ಕೂಡಲೇ ಆತಂಕಗೊಂಡ ಮಹಿಳೆಯು ಯಾರೆಂದು ಕೇಳುತ್ತಿದ್ದಂತೆ ದುಷ್ಕರ್ಮಿ ಕಲ್ಲಿನಿಂದ ಹೊಡೆದು, 3-4 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಅನ್ನು ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದನು. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಅಧಿಕಾರಿ ಸಿಬ್ಬಂದಿಯನ್ನೊಳಗೊಂಡ ತಂಡ ಪ್ರಕರಣ ಬೇಧಿಸಿದೆ.