logo
ಕನ್ನಡ ಸುದ್ದಿ  /  ಕರ್ನಾಟಕ  /  Eshwara Khandre: ರಾಜ್ಯದ ಹಸಿರೀಕರಣಕ್ಕೆ ಪ್ರಸಕ್ತ ವರ್ಷ 5 ಕೋಟಿ ಸಸಿ ನೆಡುವ ಗುರಿ; ಅರಣ್ಯ ಸಚಿವ ಈಶ್ವರ ಖಂಡ್ರೆ

Eshwara Khandre: ರಾಜ್ಯದ ಹಸಿರೀಕರಣಕ್ಕೆ ಪ್ರಸಕ್ತ ವರ್ಷ 5 ಕೋಟಿ ಸಸಿ ನೆಡುವ ಗುರಿ; ಅರಣ್ಯ ಸಚಿವ ಈಶ್ವರ ಖಂಡ್ರೆ

HT Kannada Desk HT Kannada

Jun 18, 2023 09:35 PM IST

google News

ಪ್ರಗತಿ ಪರಿಶೀಲನೆ ಸಭೆ

    • Karnataka Forest Minister Eshwara Khandre: ಮಳೆಗಾಲ ಆರಂಭವಾದ ತಕ್ಷಣ ಸಸಿಗಳನ್ನು ನಡೆಸಲು ಮತ್ತು ರೈತರಿಗೂ ಸಸಿಗಳನ್ನು ವಿತರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಈಶ್ವರ ಬಿ.ಖಂಡ್ರೆ ಮಾಹಿತಿ ನೀಡಿದರು.
ಪ್ರಗತಿ ಪರಿಶೀಲನೆ ಸಭೆ
ಪ್ರಗತಿ ಪರಿಶೀಲನೆ ಸಭೆ

ದಾವಣಗೆರೆ: ರಾಜ್ಯದಲ್ಲಿ ಶೇ.12ರಷ್ಟು ಅರಣ್ಯ ಪ್ರದೇಶದ ಕೊರತೆ ಇರುವುದರಿಂದ ಸರಿದೂಗಿಸಲು ಪ್ರಸಕ್ತ ವರ್ಷದಲ್ಲಿ 5 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ (Forest Minister Eshwara Khandre) ಹೇಳಿದರು.

ದಾವಣಗೆರೆಯ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಜೂನ್ 16 ರಂದು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾನದಂಡದಂತೆ ಶೇ.33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ಶೇ.21 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು, ರಾಜ್ಯದಲ್ಲಿ ಶೇ.12 ರಷ್ಟು ಅರಣ್ಯ ಪ್ರದೇಶದ ಕೊರತೆ ಇದೆ. ಆದ್ದರಿಂದ, ಗುರಿಯನ್ನು ಮುಟ್ಟಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಮಳೆಗಾಲ ಆರಂಭವಾದ ತಕ್ಷಣ ಸಸಿಗಳನ್ನು ನಡೆಸಲು ಮತ್ತು ರೈತರಿಗೂ ಸಸಿಗಳನ್ನು ವಿತರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನಿಯಮಬದ್ದ ಗಣಿಗಾರಿಕೆ

ಯಾವುದೇ ಗಣಿಗಾರಿಕೆಯನ್ನು ಕಾನೂನುಬಾಹಿರವಾಗಿ ಮಾಡಲು ಅವಕಾಶ ಇಲ್ಲ, ಆದರೆ ನಿಯಮಬದ್ದವಾದ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನಿಯಮಬಾಹಿರವಾಗಿ ಗಣಿಗಾರಿಕೆ ಮಾಡಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಲ್ಲಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದರು.

ಅರಣ್ಯ ಅಂಚಿನಲ್ಲಿರುವ ಜನವಸತಿ ತೆರವಿಲ್ಲ

ಕಳೆದ ನಲವತ್ತು, ಐವತ್ತು ವರ್ಷಗಳಿಂದ ಅರಣ್ಯ ಅಂಚಿನಲ್ಲಿ ವಾಸಿಸುತ್ತಿರುವ ಜನವಸತಿ ಪ್ರದೇಶವನ್ನು ಒಕ್ಕಲೆಬ್ಬಿಸುವುದಿಲ್ಲ. ಮತ್ತು ಪಾರಂಪಾರಿಕವಾಗಿ ಉಳುಮೆ ಮಾಡುವವರನ್ನು ಒಕ್ಕಲೆಬ್ಬಿಸುವುದಿಲ್ಲ. ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ಕಳುಹಿಸಲಾಗುತ್ತದೆ ಎಂದ ಅವರು, ಗಣಿಗಾರಿಕೆ ಮತ್ತು ವಿಂಡ್ ಮಿಲ್‌ಗೆ ಅನುಮತಿ ಪಡೆದು ಒತ್ತುವರಿ ಮಾಡಿದಲ್ಲಿ ಅಂತಹ ಪ್ರದೇಶದ ತೆರವಿಗೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಯಾವುದೇ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದಲ್ಲಿ ಅದನ್ನು ಜಿ.ಪಿ.ಎಸ್ ಮತ್ತು ಸ್ಯಾಟಲೈಟ್ ಮೂಲಕ ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಅರಣ್ಯ ಇಲಾಖೆ ಬಳ್ಳಾರಿ ವೃತ್ತದ ನೋಡಲ್ ಅಧಿಕಾರಿ ಪ್ರಭಾಷ್ ಚಂದ್ರ ರೇ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ದಾವಣಗೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಐದು ಜಿಲ್ಲೆಗಳ ಅರಣ್ಯ ಸಂರಕ್ಷಣಾಧಿಕಾರಿಗಳು, ಪರಿಸರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಡು ಪ್ರಾಣಿಗಳಿಂದ ರಕ್ಷಣೆಗೆ ಕ್ರಮ

ವನ್ಯಜೀವಿ ಸಂರಕ್ಷಣೆ ಮಾಡುವುದು ಇಲಾಖೆಯ ಹೊಣೆಗಾರಿಕೆಯಾಗಿದ್ದು, ಇದೇ ವೇಳೆ ಕಾಡುಪ್ರಾಣಿಗಳಿಂದ ಜನರಿಗಾಗುವ ತೊಂದರೆಗಳನ್ನು ತಪ್ಪಿಸಲು ಅಗತ್ಯವಿರುವ ಕಡೆ ರೇಲ್ ಬ್ಯಾರಿಕೇಡ್ ಅಥವಾ ಸೋಲಾರ್ ತಂತಿಬೇಲಿಯ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ ವರ್ಷ ೫೨ ಜನರು ಆನೆ ತುಳಿತದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದು ಇತ್ತಿಚೇಗೆ ಚಾಮರಾಜನಗರದಲ್ಲಿ ಆನೆ ತುಳಿತದಿಂದ ಪ್ರಾಣ ಕಳೆದುಕೊಂಡ ಮೃತರ ಕುಟುಂಬಕ್ಕೆ ೧೫ ಲಕ್ಷ ರೂ., ಪರಿಹಾರದ ಚೆಕ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಆನೆಗಳಿಂದಾಗುವ ಸಮಸ್ಯೆಗಳ ಬಗ್ಗೆಯೂ ಗಮನಿಸಲಾಗಿದೆ ಎಂದು ಖಂಡ್ರೆ ತಿಳಿಸಿದರು.

ಅರಣ್ಯ ಹೆಚ್ಚಿಸಲು ಕ್ರಮ

ಬಳ್ಳಾರಿ ವೃತ್ತದ ವ್ಯಾಪ್ತಿಯಲ್ಲಿ ಪ್ರತಿ ವರ್ಷ ೫ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೆಚ್ಚಿಸಲು ಉದ್ದೇಶಿಸಿದ್ದು ಪ್ರತಿ ವರ್ಷ ಇದಕ್ಕಾಗಿ ೧೦೦ ಕೋಟಿವರೆಗೆ ಖರ್ಚು ಮಾಡುತ್ತಿದ್ದು ಉದ್ಯೋಗ ಖಾತರಿಯಡಿಯು ೫೨ ಕೋಟಿ ಅರಣ್ಯೀಕರಣಕ್ಕೆ ಖರ್ಚು ಮಾಡಲಾಗಿದೆ. ಕೆಎಂಇಆರ‍್ಸಿ ಯಡಿ ಸುಮಾರು ೪೮೦ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿದ್ದು ಗಣಿಬಾದಿತ ಜಿಲ್ಲೆಗಳಲ್ಲಿ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ವರದಿ: ಅದಿತಿ, ದಾವಣಗೆರೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ