logo
ಕನ್ನಡ ಸುದ್ದಿ  /  ಕರ್ನಾಟಕ  /  Dharwad Mysuru Train: ಧಾರವಾಡ ಮೈಸೂರು ಎಕ್ಸ್‌ಪ್ರೆಸ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ: ಅ.1ರಿಂದ ಜಾರಿ, ಪ್ರಯಾಣಿಕರು ನಿರಾಳ

Dharwad Mysuru train: ಧಾರವಾಡ ಮೈಸೂರು ಎಕ್ಸ್‌ಪ್ರೆಸ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ: ಅ.1ರಿಂದ ಜಾರಿ, ಪ್ರಯಾಣಿಕರು ನಿರಾಳ

Umesha Bhatta P H HT Kannada

Sep 07, 2023 10:34 AM IST

google News

ಧಾರವಾಡ ಮೈಸೂರು ಎಕ್ಸೆಪ್ರೆಸ್‌ ರೈಲು ಸಮಯವನ್ನು ಮೊದಲಿನಿಂತಯೇ ಬದಲಾಯಿಸಲಾಗಿದ್ದು. ಅಕ್ಟೋಬರ್‌ 1ರಿಂದ ಜಾರಿಯಾಗಲಿದೆ.

    • Dharwad Mysuru train time ಧಾರವಾಡ ಮೈಸೂರು ಎಕ್ಸ್‌ಪ್ರೆಸ್‌ ರೈಲು ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಧಾರವಾಡದಿಂದ ಬೇಗ ಹೊರಟು ಮೈಸೂರನ್ನೂ ಬೇಗ ತಲುಪಬಹುದು.
ಧಾರವಾಡ ಮೈಸೂರು ಎಕ್ಸೆಪ್ರೆಸ್‌ ರೈಲು ಸಮಯವನ್ನು ಮೊದಲಿನಿಂತಯೇ ಬದಲಾಯಿಸಲಾಗಿದ್ದು. ಅಕ್ಟೋಬರ್‌ 1ರಿಂದ ಜಾರಿಯಾಗಲಿದೆ.
ಧಾರವಾಡ ಮೈಸೂರು ಎಕ್ಸೆಪ್ರೆಸ್‌ ರೈಲು ಸಮಯವನ್ನು ಮೊದಲಿನಿಂತಯೇ ಬದಲಾಯಿಸಲಾಗಿದ್ದು. ಅಕ್ಟೋಬರ್‌ 1ರಿಂದ ಜಾರಿಯಾಗಲಿದೆ.

ಹುಬ್ಬಳ್ಳಿ: ಧಾರವಾಡ ಮತ್ತು ಮೈಸೂರು ನಡುವೆ ಸಂಚರಿಸುವ ರೈಲು ಪ್ರಯಾಣಿಕರಿಗೆ ಇಲ್ಲಿದೆ ಸಂತಸದ ಸುದ್ದಿ. ಧಾರವಾಡ- ಮೈಸೂರುಎಕ್ಸ್‌ಪ್ರೆಸ್‌ ರೈಲು( ರೈಲು ಸಂಖ್ಯೆ 17302) ಸಮಯದಲ್ಲಿ ಆಗಿದ್ದ ವ್ಯತ್ಯಯದಿಂದ ನಿತ್ಯ ನೂರಾರು ಪ್ರಯಾಣಿಕರು ರೋಸಿ ಹೋಗಿದ್ದರು. ಆರು ತಿಂಗಳಿನಿಂದ ಆಗಿದ್ದ ಗೊಂದಲಕ್ಕೆ ಭಾರತೀಯ ರೈಲ್ವೆ ನೈರುತ್ಯ ರೈಲ್ವೆ ವಿಭಾಗಕ್ಕೆ ತೆರೆ ಎಳೆದಿದೆ.

ಮೊದಲು ಇದ್ದಂತೆಯೇ ಪ್ರತಿ ದಿನ ರಾತ್ರಿ ರಾತ್ರಿ 8.45ಕ್ಕೆ ಧಾರವಾಡದಿಂದ ರೈಲು ಸಂಚಾರ ಆರಂಭಿಸಲಿದೆ. ಹುಬ್ಬಳ್ಳಿಯಿಂದ ರಾತ್ರಿ 9.20 ಕ್ಕೆ ನಿರ್ಗಮಿಸಲಿದೆ. ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಕಡೂರು, ಅರಸಿಕೆರೆ, ಹಾಸನದ ನಿಲ್ದಾಣಗಳಿಂದ ಹೊರಡುವ ಸಮಯದಲ್ಲೂ ಬದಲಾವಣೆಯಾಗಿದೆ. ಆದರೆ ಮೊದಲೆಲ್ಲಾ ಬೆಳಿಗ್ಗೆ 7 ಕ್ಕೆ ಮೈಸೂರು ನಿಲ್ದಾಣ ತಲುಪುತ್ತಿದ್ದ ರೈಲು ಇನ್ನು ಮುಂದೆ ಬೆಳಿಗ್ಗೆ 5.55ಕ್ಕೆ ಬರಲಿದೆ. ಅಕ್ಟೋಬರ್‌ 1ರಿಂದಲೇ ಹೊಸ ಪ್ರಯಾಣ ವೇಳಾಪಟ್ಟಿ ಶುರುವಾಗಲಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ. ಆದರೆ ಮೈಸೂರಿನಿಂದ ಧಾರವಾಡಕ್ಕೆ ಹೋಗುವ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಸಮಯ ಬದಲಿನಿಂದ ಗೊಂದಲ

ಮೊದಲು ರಾತ್ರಿ 8.40ಕ್ಕೆ ಧಾರವಾಡದಿಂದ ಈ ರೈಲು ಹೊರಡುತ್ತಿತ್ತು. ಹುಬ್ಬಳ್ಳಿಯಲ್ಲಿ ಕೆಲ ಹೊತ್ತು ನಿಲ್ಲಿಸಿ ರಾತ್ರಿ 9.25ಕ್ಕೆ ಅಲ್ಲಿಂದ ಪ್ರಯಾಣ ಆರಂಭಿಸುತ್ತಿತ್ತು. ಇದರಿಂದ ಹುಬ್ಬಳ್ಳಿ ಧಾರವಾಡ ಮಾತ್ರವಲ್ಲದೇ, ಉತ್ತರ ಕನ್ನಡ, ಗದಗ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಯವರಿಗೆ ಸಹಾಯಕವಾಗುತ್ತಿತ್ತು. ಆರು ತಿಂಗಳ ಹಿಂದೆ ಈ ಸಮಯವನ್ನು ಏಕಾಏಕಿ ಬದಲಾಯಿಸಲಾಯಿತು. ಧಾರವಾಡದಿಂದಲೇ ರಾತ್ರಿ 10.30ಕ್ಕೆ ಪ್ರಯಾಣ ಆರಂಭಿಸತೊಡಗಿತು. ಹುಬ್ಬಳ್ಳಿಯಲ್ಲಿ ರಾತ್ರಿ 11 ಆದರೂ ರೈಲು ಹೊರಡುತ್ತಿರಲಿಲ್ಲ. ಹರಿಹರ, ದಾವಣಗೆರೆ ಬರುವ ಹೊತ್ತಿಗೆ ಮಧ್ಯರಾತ್ರಿ ದಾಟಿ ಹೋಗಿರುತ್ತಿತ್ತು. ಪ್ರಯಾಣಿಕರು ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ ನಿಲ್ದಾಣಗಳಲ್ಲಿ ಕನಿಷ್ಠ ಮೂರು ಗಂಟೆಯಾದರೂ ಸುಮ್ಮನೇ ಕಾಯುವ ಸನ್ನಿವೇಶ ಎದುರಾಗಿತ್ತು.

ಹೊಸ ಸಮಯದಿಂದಾಗಿ ಮಧ್ಯರಾತ್ರಿ ಸಮಯ ಗಮನಿಸದೇ ಹಿಂದಿನ ದಿನಕ್ಕೆ ಮುಂಗಡ ಬುಕ್ಕಿಂಗ್‌ ಮಾಡಿಸಿಕೊಂಡು ಬಂದರೆ ಆ ದಿನದ ರೈಲು ಸಂಚಾರ ಮುಗಿದು ಮರುದಿನದ ಸಮಯ ಬಂದಿರುತ್ತಿತ್ತು. ಎಷ್ಟೋ ಪ್ರಯಾಣಿಕರು ಗೊಂದಲಕ್ಕೆ ಒಳಗಾಗಿ ಮುಂಗಡ ಟಿಕೆಟ್‌ಗೂ ಹಣ ಕೊಟ್ಟು, ಆನಂತರ ಪ್ರಯಾಣ ಮುಂದುವರೆಸಲು ದಂಡದೊಂದಿಗೆ ಹಣ ತೆತ್ತು ಹೋದ ಉದಾಹರಣೆಗಳೂ ಇವೆ. ಇದು ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ ಭಾಗದಿಂದ ಹೊರಡುತ್ತಿದ್ದ ಪ್ರಯಾಣಿಕರಿಗೆ ಆಗಿದ್ದ ತೊಂದರೆ.

ನಿರಂತರ ದೂರು

ಈ ಕುರಿತು ರೈಲ್ವೆ ಇಲಾಖೆಗೆ ನಿರಂತರ ದೂರುಗಳು ಹೋಗಿದ್ದವು. ಹಲವು ಪ್ರಯಾಣಿಕರು ಪತ್ರವನ್ನು ಬರೆದು ಧಾರವಾಡ- ಮೈಸೂರು ಸಮಯವನ್ನು ಮೊದಲಿನಂತೆಯೇ ನಿಗದಿಪಡಿಸಿ. ಸಮಯದ ಬದಲಾವಣೆಯಿಂದ ರೈಲ್ವೆ ನಿಲ್ದಾಣಕ್ಕೆ ಬರುವುದು ಕಷ್ಟ. ಆನಂತರ ಮೂರು ಗಂಟೆ ಕಾದು ಮಧ್ಯರಾತ್ರಿ ಮಲಗುವುದು ಹಿಂಸೆಯೇ ಸರಿ. ಅಲ್ಲದೇ ಬುಕ್ಕಿಂಗ್‌ ದಿನಾಂಕದ ಗೊಂದಲದಿಂದ ಅನಗತ್ಯವಾಗಿ ಪ್ರಯಾಣಿಕರು ದಂಡ ತೆರುವ ಹೊರೆಯನ್ನು ರೈಲ್ವೆ ಇಲಾಖೆಯೇ ಮಾಡುತ್ತಿದೆ. ಹಿರಿಯರು, ಮಕ್ಕಳಿಗೆ ಇನ್ನಿಲ್ಲದ ಕಷ್ಟವಾಗಿದೆ ಎನ್ನು ದೂರು ನೀಡಿದ್ದರು. ಮೈಸೂರಿಗೆ ಬೆಳಿಗ್ಗೆ 7ರ ಬದಲು ಎರಡರಿಂದ ಮೂರು ಗಂಟೆ ತಡವಾಗಿ ಬಂದ ಉದಾಹರಣೆಗಳೂ ಇವೆ.

ಸಾಮಾಜಿಕ ಮಾಧ್ಯಮಗಳ ಮೂಲಕವೂ ನಿತ್ಯ ಹಲವರು ದೂರು ಬರೆಯುತ್ತಲೇ ಇದ್ದರು. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ ಎನ್ನುವ ಉತ್ತರವಷ್ಟೇ ಬರುತ್ತಿತ್ತು. ಆದರೆ ಬದಲಾವಣೆಯಾಗಿರಲಿಲ್ಲ.

ಹಳೆಯ ರೈಲು

ಮೈಸೂರು-ಧಾರವಾಡ ಹಾಗೂ ಧಾರವಾಡ- ಮೈಸೂರು ರೈಲು ಸುಮಾರು ಹದಿನೈದು ವರ್ಷದಿಂದ ಜನರ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ. ಸಾಂಸ್ಕೃತಿಕ ರಾಜಧಾನಿಗಳ ಜತೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಮಲೆನಾಡು ಭಾಗಕ್ಕೂ ಸಂಪರ್ಕ ಸೇತುವೆಯಾಗಿತ್ತು. ಮೈಸೂರಿಗೆ ಬಂದವರು ಕೇರಳಕ್ಕೂ ಇಲ್ಲಿಂದಲೇ ಹೋಗಲು ಈ ರೈಲು ಸಂಪರ್ಕದಂತಿದೆ. ತಮಿಳುನಾಡು ಭಾಗದ ಊಟಿ, ಕೊಯಮತ್ತೂರಿಗೆ ಹೋಗುವವರೂ ಬಳಸಿಕೊಳ್ಳುತ್ತಾರೆ. ಹುಬ್ಬಳ್ಳಿ ಇಲ್ಲವೇ ಧಾರವಾಡಕ್ಕೆ ಹೋದವರಿಗಂತೂ ಈ ರೈಲು ಮಹಾರಾಷ್ಟ್ರ ಕಡೆ ಹೋಗುವವರಿಗೂ ನೆರವಾಗುತ್ತಿದೆ. ಅಲ್ಲದೇ ಉತ್ತರದ ಹತ್ತಕ್ಕೂ ಹೆಚ್ಚು ಜಿಲ್ಲೆಗಳನ್ನು ಈ ರೈಲು ಬಳಸಿಯೇ ಸಂಪರ್ಕಿಸುತ್ತಾರೆ. ಒಂದೆರೆಡು ಬಾರಿ ಈ ರೈಲು ಸಂಚಾರದ ಪ್ರಯಾಣ ಬದಲಿಸಿದರೂ ತಲುಪುವ ಸಮಯದಲ್ಲಿ ವ್ಯತ್ಯಾಸವಾಗಿರಲಿಲ್ಲ.

ಸಮಯ ಬದಲಾವಣೆಯಿಂದ ಪ್ರಯಾಣಿಕರಿಗೆ ಗೊಂದಲ ಆಗಿದ್ದು ನಿಜ. ಕೆಲವು ರೈಲುಗಳ ಹೊಂದಾಣಿಕೆ ಕಾರಣಕ್ಕೆ ಈ ಬದಲಾವಣೆ ಮಾಡಲಾಗಿತ್ತು. ಪ್ರಯಾಣಿಕರಿಂದ ದೂರು ಬಂದ ಕಾರಣಕ್ಕೆ ಸಮಯವನ್ನು ಮೊದಲಿನಿಂದಲೇ ನಿಗದಿಪಡಿಸಲಾಗಿದೆ ಎನ್ನುವುದು ರೈಲ್ವೆ ಅಧಿಕಾರಿಯೊಬ್ಬರ ವಿವರಣೆ.

ಹೊಸ ವೇಳಾಪಟ್ಟಿ ಹೀಗಿದೆ

ಹೊಸ ವೇಳಾ ಪಟ್ಟಿ ಪ್ರಕಾರ ಧಾರವಾಡವನ್ನು ರಾತ್ರಿ 8.45ಕ್ಕೆ ಬಿಡಲಿದೆ. ಹುಬ್ಬಳ್ಳಿ ನಿಲ್ದಾಣಕ್ಕೆ ರಾತ್ರಿ 9.10ಕ್ಕೆ ಆಗಮಿಸಿ ಇಲ್ಲಿಂದ 9.20 ಹೊರಡಲಿದೆ. ಬಳಿಕ ಯಲವಿಗಿಗೆ 09.59ಕ್ಕೆ ಆಗಮಿಸಿ ಒಂದು ನಿಮಿಷದ ನಿಲುಗಡೆ ಬಳಿಕ ರಾತ್ರಿ 10ಕ್ಕೆ ಹೊರಡಲಿದೆ. ಹಾವೇರಿಗೆ 10.28 ಬಂದು ಅಲ್ಲಿಂದ ರಾತ್ರಿ10.30ಕ್ಕೆ ತೆರಳಲಿದೆ. ಬ್ಯಾಡಗಿಗೆ ರಾತ್ರಿ 10.46 ಕ್ಕೆ ಆಗಮಿಸಿ ಅಲ್ಲಿಂದ 10.47ಕ್ಕೆ ನಿರ್ಗಮಿಸಲಿದೆ. ರಾಣೆಬೆನ್ನೂರು ನಿಲ್ದಾಣಕ್ಕೆ ರಾತ್ರಿ 11.05ಕ್ಕೆ ಆಗಮಿಸಿ ಅಲ್ಲಿಂದ 11.07 ಕ್ಕೆ ಹೊರಡಲಿದೆ. ಬಳಿಕ ಹರಿಹರ ನಿಲ್ದಾಣಕ್ಕೆ 11.25ಕ್ಕೆ ಬಂದು ಅಲ್ಲಿಂದ 11.27ಕ್ಕೆ ಹೊರಡಲಿದೆ. ದಾವಣಗೆರೆಗೆ ರಾತ್ರಿ 11.43ಕ್ಕೆ ಬಂದು 11.45 ಕ್ಕೆ ತೆರಳಲಿದೆ. ನಂತರ ಚಿಕ್ಕಜಾಜೂರಿಗೆ ರಾತ್ರಿ 12.20ಕ್ಕೆ ಆಗಮಿಸಿ 12.21ಕ್ಕೆ ಹೊರಡಲಿದೆ. ಬೀರೂರು ನಿಲ್ದಾಣಕ್ಕೆ ರಾತ್ರಿ 12.58ಕ್ಕೆ ಆಗಮಿಸಿ ರಾತ್ರಿ 1ಕ್ಕೆ ಹೊರಡಲಿದೆ. ಕಡೂರು ನಿಲ್ದಾನದಿಂದ ರಾತ್ರಿ 1.09ಕ್ಕೆ ಬಂದು 1.11ಕ್ಕೆ ಹೊರಡಲಿದೆ. ಅರಸೀಕೆರೆಗೆ ರಾತ್ರಿ 2ಕ್ಕೆ ಆಗಮಿಸಿ ಅಲ್ಲಿಂದ 2.10ಕ್ಕೆ ನಿರ್ಗಮಿಸಲಿದೆ. ಹಾಸನಕ್ಕೆ ಬೆಳಗಿನ ಜಾವ 3ಕ್ಕೆ ಬಂದು 3.02ಕ್ಕೆ ತೆರಳಿದೆ. ಹೊಳೆ ನರಸೀಪುರ ಬೆಳಗಿನ ಜಾವ 3.37ಕ್ಕೆ ಬಂದು 3.38ಕ್ಕೆ ಹೊರಡಲಿದೆ. ಕೃಷ್ಣರಾಜನಗರ ನಿಲ್ದಾಣಕ್ಕೆ ಬೆಳಿಗ್ಗೆ 4.28ಕ್ಕೆ ಬಂದು ಅಲ್ಲಿಂದ 4.29ಕ್ಕೆ ಹೊರಡಲಿದೆ. ಮೈಸೂರು ನಿಲ್ದಾಣವನ್ನು 5.55ಕ್ಕೆ ತಲುಪಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ