ಡಿ.10ರಂದು ಕಾನ್‌ಸ್ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ; ಕಾನೂನು ಅಭಿರಕ್ಷಕ ಕಚೇರಿಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
Dec 04, 2023 01:27 PM IST
ಕಾನೂನು ಅಭಿರಕ್ಷಕ ಕಚೇರಿಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.
- Yadagiri News: ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿರುವ ಕಾನೂನು ಅಭಿರಕ್ಷಕ ಕಚೇರಿಯಲ್ಲಿ ವಿವಿಧ ತಾತ್ಕಾಲಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಯಾದಗಿರಿ: 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ 454 ಹುದ್ದೆಗಳ ಸಿಪಿಸಿ ಲಿಖಿತ ಪರೀಕ್ಷೆ ಡಿಸೆಂಬರ್ 10ರ ಭಾನುವಾರ ಬೆಳಿಗ್ಗೆ 11 ರಿಂದ 12.30 ಗಂಟೆಯವರೆಗೆ ಯಾದಗಿರಿ ನಗರದ ವಿವಿಧ 9 ಶಾಲಾ, ಕಾಲೇಜುಗಳಲ್ಲಿ ನಿಗದಿಪಡಿಸಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಈ ಹುದ್ದೆಗಳ ಲಿಖಿತ ಪರೀಕ್ಷೆಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಹಾಲ್ಟಿಕೆಟ್ ಲಿಂಕ್ ಅನ್ನು ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ಹಾಲ್ಟಿಕೆಟ್ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಮಾಹಿತಿ ನೀಡಿದ್ದಾರೆ.
ಕಾನೂನು ಅಭಿರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯಾದಗಿರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿರುವ ಕಾನೂನು ಅಭಿರಕ್ಷಕ ಕಚೇರಿಯಲ್ಲಿ ವಿವಿಧ ತಾತ್ಕಾಲಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಲ್ ರವೀಂದ್ರ ಹೊನೋಲೆ ತಿಳಿಸಿದ್ದಾರೆ.
ಒಂದು ಕ್ಲರ್ಕ್ ಹುದ್ದೆ
ಕಚೇರಿ ಸಹಾಯಕ (ಕ್ಲರ್ಕ್) ಒಂದು ಹುದ್ದೆ ಇದ್ದು, ಯಾವುದೇ ಪದವಿ, ಮೂಲ ಪದ ಸಂಸ್ಕರಣಾ ಕೌಶಲ್ಯ ಮತ್ತು ಕಂಪ್ಯೂಟರ್ ನಿರ್ವಹಿಸುವ ಸಾಮರ್ಥ್ಯ ಮತ್ತು ಡೇಟಾವನ್ನು ಪೋಷಿಸುವ ಕೌಶಲ್ಯ, ಉತ್ತಮ ಟೈಪಿಂಗ್ ವೇಗ ಹೊಂದಿರಬೇಕು, ಡಿಕ್ಟೇಷನ್ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ನ್ಯಾಯಾಲಯಗಳಲ್ಲಿ ಪ್ರಸ್ತುತಿಗಾಗಿ ಫೈಲ್‌ಗಳನ್ನು ಸಿದ್ಧಪಡಿಸುವುದು, ಫೈಲ್ ನಿರ್ವಹಣೆ ಮತ್ತು ಸಂಸ್ಕರಣೆಯ ಜ್ಞಾನ ಹೊಂದಿರಬೇಕು. ಕನಿಷ್ಠ ವೇತನ 19 ಸಾವಿರ ಇದೆ.
ಟೈಪಿಸ್ಟ್ ಹುದ್ದೆ
ಸ್ವಾಗತಕಾರ ಮತ್ತು ಡೇಟಾ ಎಂಟ್ರಿ ಆಪರೇಟರ್ (ಟೈಪಿಸ್ಟ್) ಹುದ್ದೆಗೆ ಯಾವುದೇ ಪದವಿ, ಅತ್ಯುತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯ, ಡೇಟಾ ಸಂಸ್ಕರಣಾ ಸಾಮರ್ಥ್ಯ, ದೂರಸಂಪರ್ಕ ವ್ಯವಸ್ಥೆ ಕೆಲಸ ಮಾಡುವ ಸಾಮರ್ಥ್ಯ (ದೂರವಾಣಿ, ಫ್ಯಾಕ್ಸ್ ಯಂತ್ರ, ಸ್ವಿಚ್ ಬೋರ್ಡ್ಗಳು ಇತ್ಯಾದಿ), ವೇಗದ ಟೈಪಿಂಗ್ ಪ್ರಾವಿಣ್ಯತೆ ಹೊಂದಿರಬೇಕು. 17,271 ರೂ ಗಳ ಕನಿಷ್ಠ ವೇತನ ನೀಡಲಾಗುವುದು.
ಜವಾನ ಹುದ್ದೆ
ಜವಾನ ಹುದ್ದೆಗೆ ಎಸ್ಎಸ್ಎಲ್ಸಿ ಪಾಸ್ ಆಗಿರಬೇಕು. 15,202 ರೂ.ಗಳ ಕನಿಷ್ಠ ವೇತನ ನೀಡಲಾಗುವುದು. ಆಸಕ್ತರು ತಮ್ಮ ವೈಯಕ್ತಿಕ ವಿವರಗಳೊಂದಿಗೆ ಸ್ವ ಅಕ್ಷರದಿಂದ ಭರ್ತಿ ಮಾಡಿದ ಅರ್ಜಿಯನ್ನು ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕಿದೆ. ಡಿಸೆಂಬರ್ 8ರ ಒಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08473-25243 ಮತ್ತು 9141193924.