logo
ಕನ್ನಡ ಸುದ್ದಿ  /  ಕರ್ನಾಟಕ  /  Opinion: ವಿದ್ಯುತ್ ಬೆಲೆ ಏರಿಕೆ ಹಿಂದಿದೆ ಹಲವು ಲೆಕ್ಕಾಚಾರ, ಇದು ಕೇವಲ 35 ಪೈಸೆಯ ವಿಷಯ ಅಷ್ಟೇ ಅಲ್ಲ; ಜನರ ಮನದಲ್ಲಿವೆ ಹಲವು ಪ್ರಶ್ನೆಗಳು

Opinion: ವಿದ್ಯುತ್ ಬೆಲೆ ಏರಿಕೆ ಹಿಂದಿದೆ ಹಲವು ಲೆಕ್ಕಾಚಾರ, ಇದು ಕೇವಲ 35 ಪೈಸೆಯ ವಿಷಯ ಅಷ್ಟೇ ಅಲ್ಲ; ಜನರ ಮನದಲ್ಲಿವೆ ಹಲವು ಪ್ರಶ್ನೆಗಳು

HT Kannada Desk HT Kannada

Jun 24, 2023 08:00 AM IST

google News

ವಿದ್ಯುತ್ ಬೆಲೆ ಏರಿಕೆ (ಪ್ರಾತಿನಿಧಿಕ ಚಿತ್ರ)

    • Electricity Tariff: ಕರ್ನಾಟಕದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಗ್ಯಾರೆಂಟಿ ಭರವಸೆಗಳು ಸದ್ದು ಮಾಡುತ್ತಲೇ ಇವೆ. 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುವ 'ಗೃಹ ಜ್ಯೋತಿ' ಯೋಜನೆಯ ಜೊತೆಜೊತೆಗೆ ಸುದ್ದಿಯಾಗಿದ್ದು ವಿದ್ಯುತ್ ಬೆಲೆ ಏರಿಕೆ ವಿಚಾರ. ಈ ಪ್ರಮುಖ ವಿದ್ಯಮಾನವನ್ನು ವಿಶ್ಲೇಷಿಸಿದ್ದಾರೆ ಹಿರಿಯ ಪತ್ರಕರ್ತ ಎಚ್.ಮಾರುತಿ.
ವಿದ್ಯುತ್ ಬೆಲೆ ಏರಿಕೆ (ಪ್ರಾತಿನಿಧಿಕ ಚಿತ್ರ)
ವಿದ್ಯುತ್ ಬೆಲೆ ಏರಿಕೆ (ಪ್ರಾತಿನಿಧಿಕ ಚಿತ್ರ)

ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ದರವನ್ನು ಏಪ್ರಿಲ್ ಒಂದರಿಂದ ಪೂರ್ವಾನ್ವಯವಾಗುವಂತೆ ಏರಿಕೆ ಮಾಡಿತ್ತು. ಈ ವಿದ್ಯಮಾನವನ್ನು ಗಮನದಲ್ಲಿ ಇರಿಸಿಕೊಂಡೇ ಯೋಚಿಸೋಣ. ಈ ಬೆಳವಣಿಗೆಯಿಂದ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ತೂಕಡಿಸುತ್ತಿದ್ದ ಸೋಮಾರಿಗೆ ಹಾಸಿಗೆ ಹಾಸಿ ಕೊಟ್ಟಂತೆ ಆಗಿದೆ. ಈ ಸರ್ಕಾರ ವಿದ್ಯುತ್ ಬೆಲೆ ಏರಿಕೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಹಿಂದಿನ ಸರ್ಕಾರದ ಬಹುತೇಕ ನಿರ್ಧಾರಗಳಿಗೆ ಕೊಕ್ಕೆ ಹಾಕಿದೆ. ಆದರೆ ವಿದ್ಯುತ್ ಬೆಲೆ ಏರಿಕೆಯನ್ನು ಮಾತ್ರ ಹಿಂಪಡೆಯುತ್ತಿಲ್ಲ.

ವಿದ್ಯುತ್ ಬೆಲೆ ಹೆಚ್ಚಿಸಬಾರದು ಎಂದು ನಾನು ವಾದಿಸುತ್ತಿಲ್ಲ. ಬೆಲೆ ಏರಿಕೆ ಮಾಡಬಾರದು ಎಂದೇನೂ ಇಲ್ಲ. ಮಾಡಲಿ ಅದಕ್ಕೊಂದು ರೀತಿ ನೀತಿ ಬೇಡವೇ ಎನ್ನುವುದೇ ಪ್ರಶ್ನೆ. ನಾನು ಗಮನಿಸಿರುವ ನಾಲ್ಕು ಪ್ರಮುಖ ಲೋಪಗಳು ಇವು, ನನಗೆ ಇವು ಅನ್ಯಾಯಗಳು ಎನಿಸುತ್ತವೆ.

1. ಇದುವರೆಗೂ ಸೋಲಾರ್ ಅಳವಡಿಸಿಕೊಂಡವರಿಗೆ ಬಿಲ್ ನಲ್ಲಿ 35 ರೂಪಾಯಿ ರಿಯಾಯಿತಿ ಇತ್ತು. ಈಗ ಸೋಲಾರ್ ರಿಯಾಯಿತಿ ಇಲ್ಲ. ಇದು ಮೊದಲ ಅನ್ಯಾಯ.

2. ಹೊಸ ದರದ ಪ್ರಕಾರ ಬಿಲ್‌ಗೆ ಎರಡು ಸ್ಲ್ಯಾಬ್ ಮಾತ್ರ ನಿಗದಿ ಮಾಡಲಾಗಿದೆ. ಅಂದರೆ ಮೊದಲ 100 ಯೂನಿಟ್ ಬಳಕೆಗೆ ಪ್ರತಿ ಯೂನಿಟ್‌ಗೆ 4.75 ರೂಪಾಯಿ. ನೂರು ಯೂನಿಟ್ ಮೀರಿದ ನಂತರ ಎಲ್ಲ ಯೂನಿಟ್‌ಗಳಿಗೂ 7 ರೂಪಾಯಿ. ಅಂದರೆ 100 ಯೂನಿಟ್ ಆದರೆ ಮಾತ್ರ 4.75 ರೂಪಾಯಿ. ಆದರೆ ನೀವು 101 ಯೂನಿಟ್ ಬಳಸಿದ್ದರೆ ಎಲ್ಲ 101 ಯೂನಿಟ್‌ಗೂ 7 ರೂಪಾಯಿ ಬಿಲ್ ಕಟ್ಟಬೇಕಾಗುತ್ತದೆ. ಒಂದು ಯೂನಿಟ್ ಹೆಚ್ಚು ಬಳಕೆ ಮಾಡಿದ ತಪ್ಪಿಗೆ 225 ರೂಪಾಯಿ ಹೆಚ್ಚುವರಿಯಾಗಿ ಕಟ್ಟಬೇಕು.

ಈ ಮೊದಲು ಮೂರು ಶ್ರೇಣಿ ದರಗಳಲ್ಲಿ ಸಂಗ್ರಹಿಸಲಾಗುತ್ತಿತ್ತು. ಮೊದಲ 50 ಯೂನಿಟ್ ಬಳಕೆಗೆ 4.15 ರೂ, ನಂತರದ 50 ಯೂನಿಟ್‌ಗೆ 5.6 ರೂ ಹಾಗೂ 100 ಯೂನಿಟ್ ಮೀರಿದರೆ, 7.15 ರೂ ಸಂಗ್ರಹಿಸಲಾಗುತ್ತಿತ್ತು. ಈಗಿನ ಎರಡು ಸ್ಲ್ಯಾಬ್ ಪ್ರಕಾರ ಗ್ರಾಹಕರ ಜೇಬಿಗೆ ಹಗಲಲ್ಲೇ ಕತ್ತರಿ ಹಾಕಲು ಹೊರಟಿದೆ. ಇದು ಎರಡನೇ ಅನ್ಯಾಯ.

3. ನಿಗದಿತ ಶುಲ್ಕ ದರ ಹೆಚ್ಚಳದ ಪರಿಷ್ಕರಣೆ ಆದೇಶದಲ್ಲಿ ನಿಗದಿತ ಶುಲ್ಕದಲ್ಲಿ 1 ರಿಂದ 50 ಕಿ.ವ್ಯಾ ವಿದ್ಯುತ್ ಮಂಜೂರಾತಿ ಲೋಡ್‌ಗೆ 110 ರೂ ಮತ್ತು 50 ಕೆ.ವಿ.ಗೆ ಮೇಲ್ಪಟ್ಟ ವಿದ್ಯುತ್ ಮಂಜೂರಾತಿ ಲೋಡ್‌ಗೆ 210 ರೂ ಬರಲಿದೆ. 3 ಕೆ.ವಿ.ಗೆ 320 ರೂ ಇದ್ದ ಶುಲ್ಕವನ್ನು ಈಗ 330 ಕ್ಕೆ ಹೆಚ್ಚಿಸಲಾಗಿದೆ. ಇದು ಮೂರನೇ ಅನ್ಯಾಯ.

4. ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಏರಿಕೆ ಮಾಡಲಾಗಿದ್ದು, ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 59 ಪೈಸೆ ಯಷ್ಟು ವಿಧಿಸಲು ಕೆಇಆರ್‌ಸಿ ಅನುಮತಿ ನೀಡಿದೆ. ಈ ಮೊತ್ತವನ್ನು ಜೂನ್‌ ತಿಂಗಳಲ್ಲಿ ಬೆಸ್ಕಾಂ ಗ್ರಾಹಕರಿಂದ ಸಂಗ್ರಹಿಸಲಿದೆ. ಇದು ನಾಲ್ಕನೇ ಅನ್ಯಾಯ.

ಬೆಂಗಳೂರಿಗರು ಎಷ್ಟು ತೆರಬೇಕು?

ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಯೂನಿಟ್‌ ಬಳಸುತ್ತಿದ್ದವರು ಇದುವರೆಗೆ 523 ರೂಪಾಯಿ ಬಿಲ್ ಪಾವತಿ ಮಾಡಬೇಕಿತ್ತು. ಇನ್ನು ಮುಂದೆ 545 ರೂಪಾಯಿ ಪಾವತಿಸಬೇಕಾಗುತ್ತದೆ. 100 ಯೂನಿಟ್‌ ಬಳಸುವವರು 990 ರಿಂದ 1015 ರೂಪಾಯಿ ಬಿಲ್ ಕಟ್ಟಬೇಕಾಗುತ್ತದೆ.

ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಗಳಲ್ಲಿ 50 ಯೂನಿಟ್‌ಗಳಿಗೆ ರೂ 18 ಮತ್ತು 100 ಯೂನಿಟ್‌ಗಳಿಗೆ ರೂ 20 ಹೆಚ್ಚಳವಾಗಲಿದೆ. 100ಕ್ಕಿಂತ ಹೆಚ್ಚು ಯೂನಿಟ್‌ ಬಳಸುವವರು 65 ರೂಪಾಯಿ ಹೆಚ್ಚು ಪಾವತಿಸಬೇಕಾಗುತ್ತದೆ.

ನಷ್ಟಕ್ಕೆ ಗ್ರಾಹಕ ಹೊಣೆಯೇ?

ಇಂಧನ ಇಲಾಖೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂಪಾಯಿ 2159.48 ಕೋಟಿ ನಷ್ಟ ಎಂದು ಹೇಳಲಾಗುತ್ತಿದೆ. ಇಂಧನ ಇಲಾಖೆ ವಿದ್ಯುತ್ ವಿತರಣೆ, ಸರಬರಾಜು ಮತ್ತು ಕಳುವನ್ನು ತಡೆಗಟ್ಟಿದರೆ ಗ್ರಾಹಕರ ಮೇಲಿನ ಹೊರೆಯನ್ನು ಇಳಿಸಬಹುದು. ಈ ಕೆಲಸ ಮಾಡುವುದಾಗಿ ಹಲವು ದಶಕಗಳಿಂದ ಇಂಧನ ಇಲಾಖೆ ಸಚಿವರು ಹೇಳುತ್ತಿದ್ದಾರೆ. ಆದರೆ ಇಂಥ ಪ್ರಯತ್ನಗಳು ಆಗಿದ್ದು ಮಾತ್ರ ಗಮನಕ್ಕೆ ಬಂದಿಲ್ಲ.

ಎರಡು ಮೂರು ತಿಂಗಳ ಕರೆಂಟ್ ಬಿಲ್ ಗಳನ್ನು ನಿಮ್ಮ ಮುಂದೆ ಹರಡಿಕೊಳ್ಳಿ. ಕೂಲಂಕಷವಾಗಿ ಪರಿಶೀಲನೆ ಮಾಡುತ್ತಾ ಹೋಗಿ, ಆಗ ಸರ್ಕಾರ ನಿಮ್ಮನ್ನು ಹೇಗೆ ಯಾಮಾರಿಸಿದೆ ಎನ್ನುವುದು ಮನದಟ್ಟಾಗುತ್ತದೆ. ಯಾವ ಪಕ್ಷ, ಯಾವ ಸರ್ಕಾರವನ್ನು ತೆಗಳುವುದು ಎಂದು ನಿಮಗೆ ಗೊಂದಲವಾಗಬಹುದು. ನಿಜ ಹೇಳಬೇಕು ಎಂದರೆ, ಹತ್ತಾರು ವರ್ಷಗಳಿಂದ ವಿಧಾನಸೌಧದಲ್ಲಿ ಓಡಾಡಿರುವ ನನಗೂ ಅದು ತಿಳಿಯುತ್ತಿಲ್ಲ.

- ಎಚ್.ಮಾರುತಿ, ಪತ್ರಕರ್ತ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ