ಸತತ ಮಳೆ ಹಿನ್ನೆಲೆ ಹಾವೇರಿಯಲ್ಲಿ ಬಿತ್ತನೆ ಬೀಜಕ್ಕಾಗಿ ರೈತರ ನೂಕುನುಗ್ಗಲು; ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ
May 22, 2024 06:26 PM IST
ಸತತ ಮಳೆ ಹಿನ್ನೆಲೆ ಹಾವೇರಿಯಲ್ಲಿ ಬಿತ್ತನೆ ಬೀಜಕ್ಕಾಗಿ ರೈತರ ನೂಕುನುಗ್ಗಲು ಉಂಟಾಗಿದೆ. ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. (ಫೋಟೋ-ಫೈಲ್)
- ರಾಜ್ಯದಲ್ಲಿ ಸತತ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆ ಬೀಜ ಪಡೆಯಲು ಮುಂದಾಗಿದ್ದಾರೆ. ಹಾವೇರಿಯ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಕ್ಕಾಗಿ ರೈತರ ನೂಕುನುಗ್ಗಲು ಸಂಬಂಧ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಪೂರ್ವ ಮುಂಗಾರು ಮಳೆ (Pre Monsoon in Karnataka) ಅಬ್ಬರಿಸುತ್ತಿದೆ. ಇನ್ನೂ ಕೆಲವು ದಿನಗಳ ವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯೂ (Heavy Rain Forecasting in Karnataka) ಇದೆ. ಸತತವಾಗಿ ಮಳೆಯಾಗುತ್ತಿರುವುದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಬಿತ್ತನೆ ಕಾರ್ಯಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಅಗತ್ಯ ಬಿತ್ತನೆ ಬೀಜಗಳನ್ನು (Sowing Seeds) ಪಡೆಯುತ್ತಿದ್ದಾರೆ. ಇತ್ತ ಹಾವೇರಿಯಲ್ಲಿ (Haveri) ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಕ್ಕೆ (Raita Samparka Kendra) ಬಂದಿದ್ದ ರೈತರ ನಡುವೆ ನೂಕುನುಗ್ಗಲು ಉಂಟಾಗಿದೆ ಎಂದು ವರದಿಯಾಗಿದೆ.
ಹಾವೇರಿಲ್ಲಿ ಬಿತ್ತನ ಬೀಜ ಪಡೆಯಲು ರೈತರ ನಡುವೆ ನೂಕುನುಗ್ಗಲು ಉಂಟಾಗಿರುವ ವಿಚಾರ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಗಮನಕ್ಕೂ ಬಂದಿದ್ದು, ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯಾದ್ಯಂತ ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೀಜ ಮತ್ತು ಗೊಬ್ಬರಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬೀಜ ಮತ್ತು ಗೊಬ್ಬರಕ್ಕಾಗಿ ಹಾವೇರಿಯಲ್ಲಿ ರೈತರು ಸಾಲುಗಟ್ಟಿ ನಿಂತಿದ್ದ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳು ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಆದ್ದರಿಂದ ರೈತರು ಬೀಜ, ಗೊಬ್ಬರಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದ್ದಾರೆ. ತಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಬೀಜ, ಗೊಬ್ಬರದ ದಾಸ್ತಾನು ಕುರಿತು ಮಾಹಿತಿ ಪಡೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿಗೆ ತಿಳಿಸಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)