Forest news: ಅರ್ಜುನ ಸಾವು ಪರಿಣಾಮ, ಕರ್ನಾಟಕ ಆನೆ ಯೋಜನೆ ನಿರ್ದೇಶಕಿ ಸಾಸ್ವತಿ ಮಿಶ್ರ ಎತ್ತಂಗಡಿ: ಹೊಸ ನಿರ್ದೇಶಕರ ಎದುರು ಇರುವ ಸವಾಲುಗಳೇನು
Dec 31, 2023 03:34 PM IST
ಕರ್ನಾಟಕದಲ್ಲಿ ಅರ್ಜುನ ಸಾವಿನ ಬಳಿಕ ಆನೆ ಯೋಜನೆ ನಿರ್ದೇಶಕರನ್ನು ವರ್ಗ ಮಾಡಿ ಹೊಸಬರನ್ನು ನೇಮಿಸಲಾಗಿದೆ.
- project elephant karnataka ಕರ್ನಾಟಕದಲ್ಲಿ ಆನೆ ಯೋಜನೆ ಸಕ್ರಿಯವಾಗಿಲ್ಲ ಎನ್ನುವುದನ್ನು ಇತ್ತೀಚಿನ ಕೆಲ ಕಹಿ ಘಟನೆಗಳೇ ಸಾಕ್ಷಿಯಾಗಿಸಿದವು. ಇದರ ನಡುವೆ ಆನೆ ಯೋಜನೆ ನಿರ್ದೇಶಕರಾಗಿದ್ದ ಸಾಸ್ವತಿ ಮಿಶ್ರ ಅವರನ್ನು ವರ್ಗ ಮಾಡಿ ಅವರ ಜಾಗಕ್ಕೆ ಆರ್.ಮನೋಜ್ ಅವರನ್ನು ನೇಮಿಸಲಾಗಿದೆ.
ಬೆಂಗಳೂರು: ದಸರಾದ ಸೆಲೆಬ್ರೆಟಿ ಆನೆ ಅರ್ಜುನ ಮೃತಪಟ್ಟ 26 ದಿನದ ನಂತರ ಕರ್ನಾಟಕ ಆನೆ ಯೋಜನೆ ನಿರ್ದೇಶಕರನ್ನು ಎತ್ತಂಗಡಿ ಮಾಡಲಾಗಿದೆ.
ಆನೆ ಯೋಜನೆ ನಿರ್ದೇಶಕರಾಗಿದ್ದ ಸಾಸ್ವತಿ ಮಿಶ್ರ ಅವರನ್ನು ಆನೆ ಯೋಜನೆ ನಿರ್ದೇಶಕರ ಹುದ್ದೆಯಿಂದ ಅರಣ್ಯ ವಿಚಕ್ಷಣ ದಳದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಈ ವರ್ಷವಂತೂ ಕರ್ನಾಟಕದಲ್ಲಿ ಆನೆ ಉಪಟಳ ಮಿತಿ ಮೀರಿದೆ. ಈವರೆಗೂ ಆರು ಕಡೆ ಆನೆ ಕಾರ್ಯಪಡೆಗಳನ್ನೂ ರಚಿಸಲಾಗಿದೆ. ಹೀಗಿದ್ದರೂ ಆನೆ ದಾಳಿ ಪ್ರಕರಣಗಳು ಕಡಿಮೆಯಾಗಿಲ್ಲ. ಆನೆ ಯೋಜನೆ ನಿರ್ದೇಶಕರು ಇಡೀ ಹುದ್ದೆ ನಿಭಾಯಿಸುವಲ್ಲಿ ವಿಫಲರಾದರು ಎನ್ನುವ ಮಾತುಗಳು ಇಲಾಖೆ ಮಟ್ಟದಲ್ಲಿಯೇ ಕೇಳಿ ಬಂದಿದೆ. ಈಗ ಅವರ ವರ್ಗಾವಣೆ ಮಾಡಲಾಗಿದ್ದು, ಈ ಹುದ್ದೆಗೆ ಮತ್ತೊಬ್ಬ ಹಿರಿಯ ಐಎಫ್ಎಸ್ ಅಧಿಕಾರಿ ಡಾ.ಆರ್.ಮನೋಜ್ ಅವರನ್ನು ನೇಮಿಸಲಾಗಿದೆ.
ದಕ್ಷ ಅಧಿಕಾರಿಗೆ ನಿಯಂತ್ರಣ ಸಿಗಲಿಲ್ಲ
ಆನೆ ಯೋಜನೆ ನಿರ್ದೇಶಕ ಹುದ್ದೆಯಿಂದ ವರ್ಗಗೊಂಡಿರುವ ಹಿರಿಯ ಐಎಫ್ಎಸ್ ಅಧಿಕಾರಿ ಸಾಸ್ವತಿ ಮಿಶ್ರ ಅವರು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ.
ಈ ಹಿಂದೆ ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದರು. ರಸ್ತೆ ವಿಭಜನೆಗೆ ಮರ ಕಡಿತಲೆ, ಅರಣ್ಯ ಭೂಮಿ ಒತ್ತುವರಿಯಂತಹ ಪ್ರಕರಣಗಳಲ್ಲಿ ದಿಟ್ಟ ನಿರ್ಧಾರಗಳನ್ನೇ ಕೈಗೊಂಡಿದ್ದರು. ಆನಂತರ ಎಚ್‌ಡಿಕೋಟೆ ತಾಲ್ಲೂಕಲ್ಲಿ ಆನೆಗಳು ಅನುಮಾನಸ್ಪಾದವಾಗಿ ಮೃತಪಟ್ಟಾಗಲು ಈ ಪ್ರಕರಣ ನಿಭಾಯಿಸಿದ್ದರು.
ಆನಂತರ ಬೆಂಗಳೂರಿನಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಆದರೆ ವನ್ಯಜೀವಿ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿರಲಿಲ್ಲ.
ಈಗ ಆನೆ ಸಂಘರ್ಷ ಪ್ರಕರಣ ಅಧಿಕವಾದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಅವರಿಂದ ಸಾಧ್ಯವಾಗಲಿಲ್ಲ. ಆನೆಗಳಿಂದ ಮಾನವ ಸಾವಿನ ಪ್ರಕರಣ ಹೆಚ್ಚುವ ಜತೆಗೆ, ಆನೆ ಸಾವಿನ ಪ್ರಕರಣಗಳು ಹೆಚ್ಚಿದ್ದವು. ಆರೋಗ್ಯದ ಕಾರಣದಿಂದಲೂ ಅವರು ರಜೆ ಮೇಲೆ ತೆರಳಿದ್ದರಿಂದ ಈ ಹುದ್ದೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗಲಿಲ್ಲ ಎನ್ನಲಾಗುತ್ತಿದೆ.
ಅವರು ಒಳ್ಳೆಯ ಅಧಿಕಾರಿ ಎನ್ನುವುದರಲ್ಲಿ ಅನುಮಾನವೇ ಬೇಡ. ಅವರ ಒಳ್ಳೆಯತನ ಬಿಗಡಾಯಿಸಿರುವ ಆನೆ ಸಮಸ್ಯೆಗೆ ಪರಿಹಾರವಾಗಲಿಲ್ಲ. ಅವರು ಕರೆ ಸ್ವೀಕರಿಸುವುದು, ಸಂಪರ್ಕಕ್ಕೆ ಸಿಗುವುದು ಕಷ್ಟವಾಗುತ್ತಿತ್ತು.
ಅರ್ಜುನ ಆನೆ ಸಾವಿನ ಪ್ರಕರಣ ಇಡೀ ವಿಶ್ವದ ಗಮನ ಸೆಳೆಯಿತು. ಕರ್ನಾಟಕ ಅರಣ್ಯ ಇಲಾಖೆ ಹೆಸರಿಗೆ ಕಪ್ಪುಚುಕ್ಕೆ ಇಟ್ಟ ಘಟನೆಯಿದು. ಅವರನ್ನು ವರ್ಗಾಯಿಸಿರುವುದು ಸೂಕ್ತ. ಹೊಸ ನಿರ್ದೇಶಕರು ಇಡೀ ಸಮಸ್ಯೆಯನ್ನು ಭಿನ್ನವಾಗಿ ನೋಡಿ ಪರಿಹಾರಗಳನ್ನು ಕಂಡುಕೊಳ್ಳಲಿ. ಇಷ್ಟು ವರ್ಷವಾದರೂ ಪ್ರತ್ಯೇಕ ಐಡೆಂಟಿಟಿಯೇ ಇಲ್ಲದ ಅರಣ್ಯ ಯೋಜನೆಗೆ ಬಲ ತುಂಬಲಿ ಎಂದು ಹಿರಿಯ ಅರಣ್ಯಾಧಿಕಾರಿಗಳೇ ಹೇಳುತ್ತಾರೆ.
ಆನೆ ಹುದ್ದೆ ಗೊಂದಲ
ಮೂರು ದಶಕದ ಹಿಂದೆ ಆರಂಭಗೊಂಡ ಆನೆ ಯೋಜನೆಯಡಿ ಕರ್ನಾಟಕಕ್ಕೂ ಆನೆ ಯೋಜನೆಗೆ ಪ್ರತ್ಯೇಕ ಐಎಫ್‌ಎಸ್ ಅಧಿಕಾರಿಯನ್ನು ನಿಯೋಜಿಸಲಾಗುತ್ತಿದೆ. ಈ ಹಿಂದೆ ಆನೆ ಯೋಜನೆ ನಿರ್ದೇಶಕರ ಹುದ್ದೆ ಮೈಸೂರಿನಲ್ಲಿತ್ತು.
ಉದಯಕುಮಾರ್, ದಿಲೀಪ್‌ಕುಮಾರ್ ದಾಸ್ ಸಹಿತ ಹಲವು ಅಧಿಕಾರಿಗಳು ಆನೆ ಯೋಜನೆ ನಿರ್ದೇಶಕರಾಗಿದ್ದರು. ಆನಂತರ ಮನೋಜ್‌ಕುಮಾರ್ ನಿರ್ದೇಶಕರಾದ ನಂತರ ದಶಕದ ಹಿಂದೆಯೇ ಕಚೇರಿ ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಈ ಹುದ್ದೆಯಲ್ಲಿ ಜಿ.ವಿ.ರಂಗರಾವು ಕೂಡ ಇದ್ದರು. ಎರಡು ವರ್ಷದಿಂದ ಸಾಸ್ವತಿ ಮಿಶ್ರ ಅವರು ಆನೆ ಯೋಜನೆ ನಿರ್ದೇಶಕರಾಗಿದ್ದರು.
ಹಾಸನಕ್ಕೆ ಕಚೇರಿ ಸ್ಥಳಾಂತರ
ಮೈಸೂರಿನಿಂದ ಬೆಂಗಳೂರಿಗೆ ಆನೆ ಯೋಜನೆ ನಿರ್ದೇಶಕರ ಕಚೇರಿ ಸ್ಥಳಾಂತರಗೊಂಡ ನಂತರ ಇದೇ ವರ್ಷ ಬಿಜೆಪಿ ಸರ್ಕಾರ ಏಳು ಎಪಿಸಿಸಿಎಫ್ ಹುದ್ದೆಗಳೊಂದಿಗೆ ಕಚೇರಿಯನ್ನು ವಿವಿಧೆಡೆಗೆ ಸ್ಥಳಾಂತರಿಸಿತ್ತು.
ಇದರಲ್ಲಿ ಆನೆ ಯೋಜನೆ ನಿರ್ದೇಶಕರ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರಿಸುವ ಆದೇಶವಾಗಿತ್ತು. ಆನಂತರ ಆ ಆದೇಶ ಜಾರಿಯಾಗಲೇ ಇಲ್ಲ. ಇದರಿಂದ ಬೆಂಗಳೂರಿನಲ್ಲಿಯೇ ಎಪಿಸಿಸಿಎಫ್ ಹುದ್ದೆ ಉಳಿಯಿತು.
ಆನೆಗಳ ಸಮಸ್ಯೆ ಅತಿ ಹೆಚ್ಚು ಇರುವುದು ಈಗ ಹಾಸನದಲ್ಲಿಯೇ. ಇದರೊಟ್ಟಿಗೆ ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಮಸ್ಯೆ ಹೆಚ್ಚೇ ಇದೆ. ಈ ಕಾರಣದಿಂದಲೇ ಆನೆ ಯೋಜನೆ ನಿರ್ದೇಶಕ ಹುದ್ದೆ ಹಾಸನಕ್ಕೆ ಸ್ಥಳಾಂತರ ಸೂಕ್ತ ಎನ್ನುವ ಅಭಿಪ್ರಾಯ ಕೇಳಿ ಬಂದಿತ್ತು.
ಈಗಲೂ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಬೇಕಿರುವುದು ಅತಿ ಹೆಚ್ಚು ಹಾಸನದಲ್ಲಿಯೇ. ಕೊಡಗು, ಮೈಸೂರು ಭಾಗದಲ್ಲೂ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ಆಗಾಗ ನಡೆಯಲಿದೆ. ಆನೆ ಸಮಸ್ಯೆ ಇರುವ ಕಡೆಗೆ ಕಚೇರಿ ಇದ್ದರೆ ನಿರ್ವಹಣೆಯೂ ಸುಲಭವಾಗಲಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯದ ವಿಚಾರದಲ್ಲಿ ಅತಿ ಸೂಕ್ಷ್ಮವಾಗಿದ್ದಾರೆ. ಕೂಡಲೇ ಸ್ಪಂದಿಸುತ್ತಾರೆ. ಅರಣ್ಯ ಇಲಾಖೆಯ ನಿರ್ವಹಣೆ ಇನ್ನಷ್ಟು ಜನಮುಖಿಯಾಗಿಸಲು ಆನೆ ಯೋಜನೆ ಸಹಿತ ಕೆಲವು ಕಚೇರಿಗಳು ಸ್ಥಳಾಂತರಗೊಳ್ಳುವುದು ಸೂಕ್ತ ಎನ್ನುತ್ತಾರೆ ಅರಣ್ಯ ತಜ್ಞರು.
ಸಾಸ್ವತಿ ಮಿಶ್ರ ವರ್ಗಕ್ಕೆ ಕಾರಣಗಳೇನು
- ಅಧಿಕಾರಿ ಒಳ್ಳೆಯವರಾದರೂ ನಿಯಂತ್ರಣ ತೆಗೆದುಕೊಳ್ಳಲು ಆಗಲಿಲ್ಲ
- ಆನೆಗಳ ಸಮಸ್ಯೆಗೆ ನಿಗದಿತ ಪರಿಹಾರ ಸೂಚಿಸಿ ಜಾರಿಗೊಳಿಸಲು ಸಾಧ್ಯವಾಗಲಿಲ್ಲ
- ವನ್ಯಜೀವಿ ನಿರ್ವ ಹಣೆ ಕೊರತೆ ಅವರಿಗೆ ಎದುರಾಯಿತು
- ಅರ್ಜುನ ಆನೆ ಸಾವಿನ ಗಂಭೀರ ಲೋಪ ಆಯಿತು
- ಅರಣ್ಯ ಸೆರೆ ಕಾರ್ಯಾಚರಣೆಯಲ್ಲಿ ನಿಯಮ ಉಲ್ಲಂಘಿಸುವುದು ಹೆಚ್ಚಿತು
- ಇದರಿಂದಲೂ ಆನೆ ಸಾವಿನ ಪ್ರಕರಣ ಕರ್ನಾಟಕದಲ್ಲಿ ವರದಿಯಾದವು.
====