Gruhalakshmi Scheme: ಗೃಹಲಕ್ಷ್ಮಿ ಯೋಜನೆ ನೋಂದಣಿ ಜುಲೈ 19 ರಿಂದ ಆರಂಭ: ನೋಂದಣಿಗೆ ಹೀಗಿದೆ ಮಾರ್ಗಗಳು
Jul 15, 2023 01:30 PM IST
ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಗೃಹಲಕ್ಷ್ಮಿ ಯೋಜನೆ ವಿವರ ನೀಡಿದರು.
- Gruhalakshmi Scheme ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿಗೆ(Gruhalakshmi Scheme) ಜುಲೈ 19 ರಂದು ಚಾಲನೆ ಸಿಗಲಿದೆ. ಯೋಜನೆ ಲಾಭ ಎಷ್ಟು ಜನರಿಗೆ ಸಿಗಲಿದೆ. ನೋಂದಣಿ ಪ್ರಕ್ರಿಯೆ ಹೇಗಿರಲಿದೆ ಎನ್ನುವುದನ್ನು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿವರಿಸಿದ್ಧಾರೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಒಂದೆರಡು ದಿನದಿಂದಲೇ ನೋಂದಣಿ ಶುರುವಾಗಲಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳು ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಗೃಹಲಕ್ಷ್ಮಿ ಯೋಜನೆಯ ವಿವರಗಳನ್ನು ನೀಡಿದರು.
ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗುವವರು ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ. ಪಾವತಿದಾರರಾಗಿರತಕ್ಕದ್ದಲ್ಲ ಎಂಬ ಷರತ್ತನ್ನು ವಿಧಿಸಲಾಗಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯನ್ನು ಜುಲೈ 16 ರ ಸೋಮವಾರದಿಂದ ಆರಂಭಿಸುವ ಕುರಿತು ಈಗಾಗಲೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿತ್ತು. ಆದರೆ ಜುಲೈ 19 ರಿಂದ ನೋಂದಣಿ ಆರಂಭವಾಗಲಿದೆ. ಅಂದು ಅಧಿಕೃತ ಕಾರ್ಯಕ್ರಮ ನಡೆಸಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎನ್ನುವ ಮಾಹಿತಿ ನೀಡಿದರು.
ಒಟ್ಟು 1.20 ಕೋಟಿ ಗೃಹಿಣಿಯರು ಈ ಯೋಜನೆಯಡಿ ಫಲಾನುಭವಿಗಳಾಗಲು ಅರ್ಹರಿದ್ದಾರೆ. ಆದರೆ ನೋಂದಣಿ ನಂತರ ಇದರ ಸ್ಪಷ್ಟ ಚಿತ್ರಣ ಸಿಗಲಿದೆ. ಆಗಸ್ಟ್ ತಿಂಗಳಿನಿಂದಲೇ ಅವರ ಖಾತೆಗೆ ಹಣ ಜಮಾವಣೆಯಾಗಲಿದೆ ಎಂದು ವಿವರಿಸಿದರು.
ಫಲಾನುಭವಿಯು ಎರಡು ರೀತಿಯಲ್ಲಿ ನೋಂದಣಿ ಮಾಡಿಸಬಹುದು.
ಮೊದಲನೆಯದ್ದು ರೇಷನ್ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ, ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರವನ್ನು ತಿಳಿಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಗ್ರಾಮದ ಸಮೀಪವಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶವಿದೆ. ನಗರ ಪ್ರದೇಶದಲ್ಲಿ ಸಮೀಪದ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ಮಾಡಿಸಲು ಅವಕಾಶ ನೀಡಲಾಗುವುದು ಎಂದರು.
ಇದರೊಟ್ಟಿಗೆ ಪರ್ಯಾಯವಾಗಿ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಕ ಪ್ರಜಾಪ್ರತಿನಿಧಿ ತಮ್ಮ ಮನೆಗೆ ಭೇಟಿ ನೀಡಿದಾಗ ಅವರಿಂದಲೂ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.
ಈ ದೂರವಾಣಿ ಬಳಸಿಕೊಳ್ಳಿ
ಪ್ರತಿ ಫಲಾನುಭವಿ ನೊಂದಣಿಗೆ ನಿಗದಿಪಡಿಸಿರುವ ದಿನಾಂಕ,. ಸಮಯ ಮತ್ತು ಸ್ಥಳವನ್ನು1902 ಕರೆ ಮಾಡಿ ತಿಳಿಸಿಕೊಳ್ಳಬಹುದು. ಇಲ್ಲದೇ ಇದ್ದರೆ 8147500500 ಗೆ ಎಸ್‌ಎಂಎಸ್ ಅಥವಾ ವಾಟ್ಸ್ ಆಪ್ ಮೂಲಕ ಸಂದೇಶ ಕಳುಹಿಸಿ ವಿವರ ಪಡೆದುಕೊಳ್ಳಬಹುದು. ಒಂದು ವೇಳೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರದಲ್ಲಿ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಅದೇ ಸೇವಾ ಕೇಂದ್ರಗಳಿಗೆ ಮುಂದಿನ ದಿನಗಳಲ್ಲಿ ಹೋಗಿ ಸಂಜೆ 5ರಿಂದ 7ರವರೆಗೆ ಹೋಗಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗುವುದು
ಯೋಜನೆಯಡಿ ನೋಂದಾಯಿಸಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಬುಕ್ ಮಾಹಿತಿ ನೀಡಬೇಕು. ಆಧಾರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಬೇಕಾಗಿದ್ದಲ್ಲೆ ಆ ಬ್ಯಾಂಕ್ ಖಾತೆಯ ಪಾಸ್ ಬುಕ್ ನೀಡಬೇಕು.
ನಿಗದಿತ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಾಗ ಮಂಜೂರಾತಿ ಪತ್ರವನ್ನು ನೀಡಲಾಗುವುದು. ಪ್ರಜಾಪ್ರತಿನಿಧೀ ಮೂಲಕ ನೋಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ತದನಂತರ ಮನೆಗೆ ತಲುಪಲಿದೆ ಎಂದು ಸಚಿವರು ವಿವರಿಸಿದರು.
ಎಸ್‌ಎಂಎಸ್ ಮೂಲಕ ಮಾಹಿತಿ
ಪ್ರಜಾಪ್ರತಿನಿಧಿ ಮೂಲಕ ಅಥವಾ ಒನ್ ಸೇವೆಯ ಮೂಲಕವೂ ನೋಂದಣಿ ಮಾಡಿಸಿಕೊಂಡಿದ್ದಲ್ಲಿ ಅರ್ಜಿದಾರರು ನೀಡುವ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಮಂಜೂರಾತಿ ಸಂದೇಶ ರವಾನೆಯಾಗಲಿದೆ. ಒಂದು ವೇಳ ಫಲಾನುಭವಿ ಯಾವುದಾದರೂ ಒಂದು ಕಡೆ ನೊಂದಾಯಿಸಿಕೊಂಡಿದ್ದರೆ ಮತ್ತೊಮ್ಮೆ ನೋಂದಾಯಿಸಲು ಅವಕಾಶ ಇರುವುದಿಲ್ಲ. ಬದಲಿಗೆ ನೋಂದಾಯಿಸಲು ಪ್ರಯತ್ನಿಸಿದ ಮಾಹಿತಿ ಮೊಬೈಲ್‌ಗೆ ಬರಲಿದೆ.
ಈಗಾಗಲೇ ಆಧಾರ್ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಪ್ರತಿ ತಿಂಗಳು 2ಸಾವಿರ ರೂ. ನೇರ ಖಾತೆಗೆ ತಲುಪಲಿದೆ. ಪರ್ಯಾಯ ಖಾತೆ ನೀಡಿದರೆ ಆರ್‌ಟಿಜಿಎಸ್ ಮೂಲಕ 2ಸಾವಿರ ರೂ ಜಮೆ ಮಾಡಲಾಗುವುದು.
ನೋಂದಣಿ ಸಂಪೂರ್ಣ ಉಚಿತ
ಈ ಯೋಜನೆಯಡಿ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ. ನೋಂದಣಿ ಪ್ರಕ್ರಿಯೆ ಸಂಪೂರ್ಣ ಉಚಿತ. ಈ ಯೋಜನೆಯಡಿ ನೋಂದಣಿಗೆ ಅಂತಿಮ ದಿನಾಂಕ ಅಥವಾ ನಿಗದಿಪಡಿಸಿಲ್ಲ. ಒಂದು ವೇಳೆ ಈಗಲೇ ನೋಂದಣಿ ಮಾಡಿಸಿಕೊಳ್ಳಲು ಆಗದೇ ಇದ್ದರೆ ಮುಂದೆ ಯಾವುದೇ ದಿನಾಂಕ ಅಥವಾ ಸಮಯದಲ್ಲಿ ನೋಂದಣಿ ಮಾಡ್ಸಿಕೊಳ್ಳಬಹುದಾಗಿದೆ ಎಂದರು.
ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ, ಕಾರ್ಯದರ್ಶಿ ಎಂ.ಎಸ್.ಅರ್ಚನಾ ಹಾಜರಿದ್ದರು.
ವಿಭಾಗ