logo
ಕನ್ನಡ ಸುದ್ದಿ  /  ಕರ್ನಾಟಕ  /  Guru Raghavendra Sahakara Bank Scam: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣ; ವಂಚನೆ ಎಸಗಿದವರು ಯಾರು? ಪತ್ತೆ ಕಷ್ಟ ಎಂದ ಸಚಿವರು

Guru Raghavendra sahakara bank scam: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣ; ವಂಚನೆ ಎಸಗಿದವರು ಯಾರು? ಪತ್ತೆ ಕಷ್ಟ ಎಂದ ಸಚಿವರು

HT Kannada Desk HT Kannada

Feb 14, 2023 06:31 PM IST

google News

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

  • Guru Raghavendra sahakara bank scam: ಸತತ ಮೂರು ವರ್ಷ ಸಹಕಾರ ಇಲಾಖೆ, ಸಿಒಡಿ ಮತ್ತು ಜಾರಿ ನಿರ್ದೇಶನಾಲಯವು ಈ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣದ ತನಿಖೆ ನಡೆಸಿವೆ. ಆದರೆ, ವಂಚನೆ ಎಸಗಿದವರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು. 

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌
ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಎಲ್ಲ ರೀತಿಯ ತಯಾರಿ ನಡೆದಿದೆ. ಗೃಹ ಇಲಾಖೆ ಈ ಕುರಿತು ಸೂಕ್ತ ನಿರ್ಧಾರವನ್ನು ಶೀಘ್ರವೇ ತೆಗೆದುಕೊಳ್ಳಲಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ವಿಧಾನ ಪರಿಷತ್‌ಗೆ ಮಂಗಳವಾರ ತಿಳಿಸಿದರು.

ಅವರು ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಯು.ಬಿ.ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸುತ್ತ ಈ ವಿಚಾರ ತಿಳಿಸಿದರು.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದವರ ಆಸ್ತಿ ಜಪ್ತಿ ಮಾಡುವುದಕ್ಕೆ ಸಾಧ್ಯವಿಲ್ಲ. ಸಾಲ ಪಡೆದವರು ಕೊಟ್ಟ ಆಸ್ತಿ ದಾಖಲೆಗಳು ಬೇರೆಯವರದ್ದು. ಸಾಲ ವಸೂಲಿಗೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು, ಅದು ಸಾಧ್ಯವಾಗದ ಮಾತು. ಇದುವರೆಗೂ ಸುಳ್ಳು ಹೇಳಿ ಕಾಲಹರಣ ಮಾಡಲಾಗಿದೆ. ಈ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಎಂಎಲ್‌ಸಿ ಯು.ಬಿ.ವೆಂಕಟೇಶ್‌ ವಿಧಾನ ಪರಿಷತ್‌ನಲ್ಲಿ ಆಗ್ರಹಿಸಿದರು.

ಇದಕ್ಕೆ ಉತ್ತರ ಕೊಟ್ಟ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಈ ಹಗರಣವನ್ನು ಸಿಒಡಿ, ಸಹಕಾರ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳು ನಡೆಸಿವೆ. ಇದುವರೆಗೆ 1,290 ಕೋಟಿ ರೂಪಾಯಿ ವಂಚನೆ ಬೆಳಕಿಗೆ ಬಂದಿದೆ. ಸಿಒಡಿ ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಈ ಹಂತದಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಿದರೆ ವಿಳಂಬವಾದೀತು ಎಂಬ ಕಾರಣಕ್ಕೆ ಹಾಗೆ ಮಾಡಿರಲಿಲ್ಲ.

ಸಿಒಡಿ ಮತ್ತು ಸಹಕಾರ ಇಲಾಖೆಯ ತನಿಖೆ ಮೂರು ವರ್ಷ ನಡೆದಿದೆ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಆಗಿರುವ ಎಲ್ಲ ಅವ್ಯವಹಾರ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಸರ್ಕಾರ ಇದನ್ನು ಪರಿಶೀಲಿಸುತ್ತಿದೆ. ಮುಂದಿನ ಹಂತದಲ್ಲಿ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಅಗತ್ಯ ಸಿದ್ದತೆ ನಡೆದಿದೆ. ಸಿಬಿಐಗೆ ವಹಿಸುವಾಗ ಅವರು ಕೇಳಬಹುದಾದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ಸಚಿವ ಸೋಮಶೇಖರ್‌ ವಿವರಿಸಿದರು.

ವಂಚನೆ ಎಸಗಿದವರು ಯಾರು? ಪತ್ತೆ ಕಷ್ಟವಾಗಿದೆ ಎಂದ ಸಚಿವರು

ಸತತ ಮೂರು ವರ್ಷ ಸಹಕಾರ ಇಲಾಖೆ, ಸಿಒಡಿ ಮತ್ತು ಜಾರಿ ನಿರ್ದೇಶನಾಲಯವು ಈ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣದ ತನಿಖೆ ನಡೆಸಿವೆ. ಆದರೆ, ವಂಚನೆ ಎಸಗಿದವರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ಹಣ ಎಲ್ಲಿಂದ ಎಲ್ಲಿಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿ ಕಲೆಹಾಕುವ ಪ್ರಯತ್ನ ನಡೆದಿದೆ. ಲಭ್ಯ ಮಾಹಿತಿಗಳನ್ನೆಲ್ಲ ಒಟ್ಟು ಸೇರಿಸಿದ ಕಡತ ಇನ್ನೆರಡು ಮೂರು ದಿನಗಳಲ್ಲಿ ಗೃಹ ಇಲಾಖೆಗೆ ರವಾನೆ ಆಗಲಿದೆ. ನಂತರ ಸಿಬಿಐ ತನಿಖೆಗೆ ಶಿಫಾರಸು ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ವಿವರ ನೀಡಿದರು.

ಜಿಲ್ಲಾ ಸಹಕಾರ ಬ್ಯಾಂಕುಗಳಲ್ಲಿ ಸಾಲ ನೀಡುವಲ್ಲಿ ಅವ್ಯವಹಾರದ ಆರೋಪ

ಸದಸ್ಯ ಟಿ.ಎ.ಶರವಣ ಅವರು ಜಿಲ್ಲಾ ಸಹಕಾರ ಬ್ಯಾಂಕುಗಳಲ್ಲಿ ಸಾಲ ನೀಡುವ ವಿಚಾರದಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಅಲ್ಲಿ ನೋಟಿಸ್‌ ನೀಡಿದರೆ ಸಾಲದು, ಅಕ್ರಮ ಎಸಗಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಅದಕ್ಕೆ ಉತ್ತರಿಸಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಆರೋಪದ ಹಿನ್ನೆಲೆಯಲ್ಲಿ ಕೋಲಾರದ ವ್ಯವಸ್ಥಾಪಕರಿಗೆ ನೋಟಿಸ್ ನೀಡಲಾಗಿದೆ. ರಾಜ್ಯದ ಐದು ಜಿಲ್ಲಾ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ನೀಡುವ ವಿಷಯದಲ್ಲಿ ಕೇಳಿ ಬಂದಿದ್ದ, ಆರೋಪಗಳ ಕುರಿತು ಇಲಾಖೆ ಅಕಾರಿಗಳು ತನಿಖೆ ನಡೆಸಿದ್ದಾರೆ. ಧಾರವಾಡ,ವಿಜಯಪುರ, ಶಿವಮೊಗ್ಗ, ಕೋಲಾರ ಬ್ಯಾಂಕ್‍ಗಳಲ್ಲಿ ಆರೋಪ ಕೇಳಿ ಬಂದಿತ್ತು. ನಬಾರ್ಡ್ ನಿಯಮದ ಪ್ರಕಾರ ಸಾಲ ನೀಡಲಾಗಿದೆ. ಅವ್ಯವಹಾರದ ಸಾಧ್ಯತೆ ಕಡಿಮೆ. ಉಳಿದೆಡೆ ನಬಾರ್ಡ್ ಮತ್ತು ನಮ್ಮ ಇಲಾಖೆ ನಿಯಮದ ಅನುಸಾರವೇ ಸಾಲ ನೀಡಲಾಗುತ್ತಿದೆ. ಸಾಫ್ಟವೇರ್ ಬದಲಾವಣೆ ಮಾಡಲಾಗಿದೆ. ಹೊಸ ವ್ಯವಸ್ಥೆಯಲ್ಲಿ ವಂಚನೆ ಮಾಡಲು ಸಾಧ್ಯವಿಲ್ಲ ಎಂದು ಸಮಜಾಯಿಷಿ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ