Belur Politics: ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ತ್ರಿಕೋನ ಸ್ಪರ್ಧೆ; ಅಭ್ಯರ್ಥಿಗಳಿಗೆ ಒಳೇಟಿನದ್ದೇ ಚಿಂತೆ
May 09, 2023 04:40 PM IST
ಕೆ.ಎಸ್.ಲಿಂಗೇಶ್ (ಜೆಡಿಎಸ್), ಬಿ.ಶಿವರಾಮು (ಕಾಂಗ್ರೆಸ್), ಎಚ್.ಕೆ.ಸುರೇಶ್ (ಬಿಜೆಪಿ),
- Karnataka Assembly Elections 2023: ಮೂರೂ ಪಕ್ಷಗಳ ಹುರಿಯಾಳುಗಳ ಜಿದ್ದಾಜಿದ್ದಿ ಪೈಪೋಟಿಯಿಂದ ಬೇಲೂರು ವಿಧಾನಸಭಾ ಕ್ಷೇತ್ರ ರಾಜಕೀಯಾಸಕ್ತರ ಗಮನ ಸೆಳೆದಿದೆ.
ಹಾಸನ: ವಿಶ್ವಪ್ರಸಿದ್ಧ ಪ್ರವಾಸಿತಾಣ, ಶಿಲ್ಪಕಲೆಗಳ ತವರೂರು ಬೇಲೂರು ವಿಧಾನಸಭಾ ಕ್ಷೇತ್ರದ (Belur Assembly Constitiency) ಈ ಬಾರಿಯ ಚುನಾವಣೆ ಹಲವು ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ. ಜೆಡಿಎಸ್ ಶಾಸಕ ಕೆ.ಎಸ್. ಲಿಂಗೇಶ್ ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಮತ್ತೊಮ್ಮೆ ಕಣಕ್ಕಿಳಿದ್ದಾರೆ. ಕಳೆದ ಚುನಾವಣೆಯಲ್ಲಿ ಲಿಂಗೇಶ್‌ಗೆ ಅಚ್ಚರಿಯ ಪೈಪೋಟಿ ನೀಡಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಇನ್ನೂ ಹೆಚ್ಚಿನ ಹುಮ್ಮಸ್ಸಿನಿಂದ ಮುನ್ನುಗ್ಗಿ ಪ್ರಚಾರ ನಡೆಸುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸಿ ವಿಫಲರಾಗಿದ್ದ ಮಾಜಿ ಸಚಿವ ಬಿ. ಶಿವರಾಮು ಈ ಬಾರಿ ಟಿಕೆಟ್ ಪಡೆದು ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಬೇಕೆಂಬ ಕೊನೆಯ ಹೋರಾಟಕ್ಕಿಳಿದಿದ್ದಾರೆ. ಹೀಗಾಗಿ ಬೇಲೂರು ವಿಧಾನಸಭಾ ಕ್ಷೇತ್ರ ರಾಜಕೀಯಾಸಕ್ತರ ಗಮನ ಸೆಳೆದಿದೆ.
ಬೇಲೂರು ಪಟ್ಟಣ, ಕಸಬಾ, ಅರೇಹಳ್ಳಿ, ಬಿಕ್ಕೋಡು, ಮಾದಿಹಳ್ಳಿ ಮತ್ತು ಹಳೇಬೀಡು ಹಾಗೂ ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯನ್ನು ಒಳಗೊಂಡ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದವರು ಸಮಬಲದಲ್ಲಿದ್ದಾರೆ. ವೀರಶೈವ ಲಿಂಗಾಯತ ಮತದಾರರು ಸುಮಾರು 50 ಸಾವಿರ ಇದ್ದು, ಅಷ್ಟೇ ಸಂಖ್ಯೆಯ ಪರಿಶಿಷ್ಟ ಸಮುದಾಯದ ಮತದಾರರಿದ್ದಾರೆ. ಉಳಿದಂತೆ ಹಿಂದುಳಿದ ವರ್ಗಗಳ 28 ಸಾವಿರ ಮತದಾರರು, ಮುಸ್ಲಿಂ ಸಮುದಾಯದ 25 ಸಾವಿರ, ಒಕ್ಕಲಿಗ 24 ಸಾವಿರ ಮತ್ತು ಕುರುಬ ಸಮುದಾಯದ 18 ಸಾವಿರ ಮತದಾರರು ಇದ್ದಾರೆ.
ಜೆಡಿಎಸ್ ಅಭ್ಯರ್ಥಿ ಕೆ.ಎಸ್. ಲಿಂಗೇಶ್ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಬಿಜೆಪಿಯ ಎಚ್.ಕೆ. ಸುರೇಶ್ ಮತ್ತು ಕಾಂಗ್ರೆಸ್‌ನ ಬಿ. ಶಿವರಾಮು ಒಕ್ಕಲಿಗ ಸಮದಾಯಕ್ಕೆ ಸೇರಿದವರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಸಹ ಇದೇ ಪರಿಸ್ಥಿತಿ ಇತ್ತು. ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯಕ್ಕೆ ಸೇರಿದ ದಿವಂಗತ ಶಾಸಕ ವೈ.ಎನ್. ರುದ್ರೇಶಗೌಡರ ಪತ್ನಿ ಕೀರ್ತನಾ ಅವರು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಕಣದಲ್ಲಿದ್ದ ಮೂವರು ಪ್ರಮುಖ ಅಭ್ಯರ್ಥಿಗಳಲ್ಲಿ ಜೆಡಿಎಸ್‌ನ ಕೆ.ಎಸ್. ಲಿಂಗೇಶ್ ಅವರೊಬ್ಬರೇ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದ ಕಾರಣ ಆ ಸಮುದಾಯದ ಹೆಚ್ಚಿನ ಮತಗಳು ಅವರ ಪಾಲಾಗಿದ್ದವು. ಅಲ್ಲದೆ, ಕಳೆದ ಬಾರಿ ಬಹುಜನ ಸಮಾಜ ಪಕ್ಷವು ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಅದರ ಲಾಭವೂ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿತ್ತು. ಆದರೆ ಈ ಬಾರಿ ಅಂತಹ ಸನ್ನಿವೇಶ ಇಲ್ಲ ಎನ್ನಲಾಗುತ್ತಿದೆ. ಕೆ.ಎಸ್. ಲಿಂಗೇಶ್ ವೀರಶೈವ ಲಿಂಗಾಯತ ಸಮುದಾಯದ ಏಕೈಕ ಅಭ್ಯರ್ಥಿ ಆಗಿದ್ದರೂ ಸಮುದಾಯದ ಬಹುತೇಕ ಪ್ರಮುಖರು ಲಿಂಗೇಶ್ ಕುರಿತು ಅಸಮಾಧಾನ ಹೊಂದಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.
ಹಣ ಮತ್ತು ಪ್ರಧಾನಿ ಮೋದಿ ಮೋಡಿಯ ಕಾರಣದಿಂದ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಕೆ. ಸುರೇಶ್ ಪರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಪ್ರಚಾರ ಕಾರ್ಯದಲ್ಲಿ ಯುವಜನರ ಅಬ್ಬರವೇ ಹೆಚ್ಚಿದೆ. ಶಾಸಕ ಕೆ.ಎಸ್. ಲಿಂಗೇಶ್ ಸಹ ಕ್ಷೇತ್ರದಲ್ಲಿ ತಾವು ನಡೆಸಿರುವ ರಣಘಟ್ಟ ಯೋಜನೆ ಸೇರಿದಂತೆ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳ ಹೆಸರೇಳಿಕೊಂಡು ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಗಂಡಸಿ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದ ಜಾವಗಲ್ ಹೋಬಳಿಯ ಮೇಲೆ ತನ್ನದೇ ಆದ ಹಿಡಿತ ಹೊಂದಿರುವ ಕಾಂಗ್ರೆಸ್‌ನ ಬಿ.ಶಿವರಾಮು ಸಹ ಅಹಿಂದ ಮತಗಳನ್ನು ಪಡೆಯುವ ವಿಶ್ವಾಸದಲ್ಲಿ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ ವೀರಶೈವ ಲಿಂಗಾಯತ ಮತಗಳನ್ನೂ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಬಹುಜನ ಸಮಾಜ ಪಕ್ಷದಿಂದ ಗಂಗಾಧರ್ ಬಹುಜನ್ ಸಹ ಕಣಕ್ಕಿಳಿದಿದ್ದು ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕುವುದರಿಂದ ಶಿವರಾಮು ಗೆಲುವಿನ ಹಾದಿಗೆ ಮುಳ್ಳಾಗಲಿದ್ದಾರೆ ಎನ್ನಲಾಗುತ್ತಿದೆ.
ಜಾವಗಲ್ ಮತ್ತು ಅರೇಹಳ್ಳಿ ಹೋಬಳಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ, ಉಳಿದ ಬೇಲೂರು ನಗರ, ಕಸಬಾ, ಹಳೇಬೀಡು, ಮಾದಿಹಳಿ, ಬಿಕ್ಕೋಡು ಮತ್ತು ಅಡಗೂರು ಹೋಬಳಗಳಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಕಂಡು ಬರುತ್ತಿದೆ. ಒಟ್ಟಾರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರೂ ಪಕ್ಷದ ಅಭ್ಯರ್ಥಿಗಳಿಗೂ ಗೆಲ್ಲುವ ಸಮಾನ ಅವಕಾಶಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜೆಡಿಎಸ್‌ನ ಕೆ.ಎಸ್. ಲಿಂಗೇಶ್ ಪರವಾದ ಅಂಶಗಳು:
1. ರಣಘಟ್ಟ ನೀರಾವರಿ ಯೋಜನೆ
2. ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿರುವುದು
3. ರಸ್ತೆ, ಚರಂಡಿ ಮತ್ತಿತರ ಮೂಲಸೌಕರ್ಯಗಳ ಅಭಿವೃದ್ಧಿ
4. ಸೌಮ್ಯ ನಡವಳಿಕೆಯ ವ್ಯಕ್ತಿತ್ವ.
5. ಕಣದಲ್ಲಿರುವ ಏಕೈಕ ವೀರಶೈವ ಲಿಂಗಾಯತ ಸಮುದಾದಯ ಅಭ್ಯರ್ಥಿ.
ವಿರುದ್ಧ ಇರುವ ಅಂಶಗಳು:
1. ಬಗರ್‌ಹುಕುಂ ಸಾಗುವಳಿ ಮಂಜೂರಾತಿಯಲ್ಲಿ ಅಕ್ರಮ ಆರೋಪ.
2. ವಸತಿ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಾಗ ತಲಾ ಹತ್ತು ಸಾವಿರ ರೂ. ಲಂಚ ವಸೂಲಿ ಆರೋಪ.
3. ಜಿಲ್ಲೆಯ ಜೆಡಿಎಸ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಸ್ಥಳೀಯ ಶಾಸಕರಿಗೇ ಅಧಿಕಾರ ಇಲ್ಲದಂತೆ ಮಾಡಿರುವ ಮಾಜಿ ಸಚಿವೆ ಎಚ್.ಡಿ. ರೇವಣ್ಣ ಕುಟುಂಬದ ವಿರುದ್ಧ ಕ್ಷೇತ್ರದ ಮತದಾರರಲ್ಲಿ ಇರುವ ಅಸಮಾಧಾನ.
ಬಿಜೆಪಿಯ ಎಚ್.ಕೆ. ಸುರೇಶ್ ಪರವಾದ ಅಂಶಗಳು:
1. ಕಳೆದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿ ಪರಾಭವಗೊಂಡಿರುವ ಅನುಕಂಪ.
2. ಹಣ ಮತ್ತು ಪ್ರಧಾನಿ ಮೋದಿ ಮೇಲಿನ ಆಕರ್ಷಣೆಯಿಂದ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪರ ವಾಲಿರುವುದು.
3. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತ ಅವರ ಪುತ್ರ ಬಿ.ವೈ. ವಿಜಯೇಂದ್ರ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಹೋಗಿರುವುದು.
ವಿರುದ್ಧ ಇರುವ ಅಂಶಗಳು:
1. ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಕೊರಟಿಕೆರೆ ಪ್ರಕಾಶ್, ಸಿದೇಶ್ ನಾಗೇಂದ್ರ ಮತ್ತಿತರ ಬಿಜೆಪಿ ಮುಖಂಡರು ಮೇಲ್ನೋಟಕಷ್ಟೇ ಜೊತೆಯಲ್ಲಿ ಕಾಣಿಸಿಕೊಂಡು ವ್ಯವಸ್ಥಿತ ಪ್ರಚಾರದಿಂದ ದೂರ ಉಳಿದಿರುವುದು.
2. ಕ್ಷೇತ್ರದ ಹೊರಗಿನ ಅಭ್ಯರ್ಥಿ.
ಕಾಂಗ್ರೆಸ್‌ನ ಬಿ. ಶಿವರಾಮು ಪರ ಇರುವ ಅಂಶಗಳು:
1. ಅನುಭವಿ ರಾಜಕಾರಣಿ, ಜೊತೆಗೆ ಕಳೆದ ಐದು ವರ್ಷಗಳಿಂದ ನಿತ್ಯ ಕ್ಷೇತ್ರದ ಜನರೊಡನೆ ಒಡನಾಡುತ್ತಾ ಅವರ ಕಷ್ಟ, ಸುಖಗಳಲ್ಲಿ ಭಾಗಿ ಆಗಿರುವುದು.
2. ಬೇಲೂರು ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ತಂದು ಯಶಸ್ಸು ಕಂಡಿರುವುದು.
3. ಗೆದ್ದರೆ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಆಗುತ್ತಾರೆ ಎಂಬ ನಿರೀಕ್ಷೆ.
ವಿರುದ್ಧ ಇರುವ ಅಂಶಗಳು:
1. ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದ ಜಿಪಂ ಮಾಜಿ ಸದಸ್ಯ ವೈ.ಎನ್. ಕೃಷ್ಣೇಗೌಡ ಮತ್ತು ಉದ್ಯಮಿ ಗ್ರಾನೈಟ್ ರಾಜಶೇಖರ್ ಒಳಗೊಳಗೇ ವಿರುದ್ಧ ಕೆಲಸ ಮಾಡುವ ಸಾಧ್ಯತೆ.
2. ಬಿಎಸ್‌ಪಿ ಅಭ್ಯರ್ಥಿ ಪರಿಶಿಷ್ಟ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ಅಪಾಯ.
3. ಕ್ಷೇತ್ರದ ಹೊರಗಿನ ಅಭ್ಯರ್ಥಿ.
2018ರ ಫಲಿತಾಂಶ
* ಕೆ.ಎಸ್. ಲಿಂಗೇಶ್ (ಜೆಡಿಎಸ್), ಪಡೆದ ಮತಗಳು 64,268 (ಶೇ 42.2)
* ಎಚ್.ಕೆ. ಸುರೇಶ್ (ಬಿಜೆಪಿ), ಪಡೆದ ಮತಗಳು 44,578 (ಶೇ 29.27)
* ಕೀರ್ತನಾ ರುದ್ರೇಶಗೌಡ (ಕಾಂಗ್ರೆಸ್), ಪಡೆದ ಮತಗಳು 39,519 (ಶೇ 25.95)
ವರದಿ: ಎ.ಆರ್. ವೆಂಕಟೇಶ್, ಹಾಸನ