logo
ಕನ್ನಡ ಸುದ್ದಿ  /  ಕರ್ನಾಟಕ  /  Hasanamba Temple: ಹಾಸನಾಂಬೆಯ ದರ್ಶನಕ್ಕಾಗಿ ಧರ್ಮದರ್ಶನ ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್ ಶಾಕ್, ಗೊಂದಲದ ವಾತಾವರಣ

Hasanamba Temple: ಹಾಸನಾಂಬೆಯ ದರ್ಶನಕ್ಕಾಗಿ ಧರ್ಮದರ್ಶನ ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್ ಶಾಕ್, ಗೊಂದಲದ ವಾತಾವರಣ

HT Kannada Desk HT Kannada

Nov 10, 2023 09:31 PM IST

google News

ಹಾಸನಾಂಬೆಯ ದರ್ಶನಕ್ಕಾಗಿ ಧರ್ಮದರ್ಶನ ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್ ಶಾಕ್ ತಗುಲಿದ ಕಾರಣ ಸ್ಥಳದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಯಿತು. (ಸಾಂಕೇತಿಕ ಚಿತ್ರ)

  • ಹಾಸನಾಂಬೆ ದೇವಾಲಯದಲ್ಲಿ ಧರ್ಮದರ್ಶನ ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ವಿದ್ಯುತ್ ಶಾಕ್ ತಗುಲಿದೆ. ಶುಕ್ರವಾರ ಪೂರ್ವಾಹ್ನ ಈ ಘಟನೆ ನಡೆದಿದ್ದು, ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

 ಹಾಸನಾಂಬೆಯ ದರ್ಶನಕ್ಕಾಗಿ ಧರ್ಮದರ್ಶನ ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್ ಶಾಕ್ ತಗುಲಿದ ಕಾರಣ ಸ್ಥಳದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಯಿತು. (ಸಾಂಕೇತಿಕ ಚಿತ್ರ)
ಹಾಸನಾಂಬೆಯ ದರ್ಶನಕ್ಕಾಗಿ ಧರ್ಮದರ್ಶನ ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ಕರೆಂಟ್ ಶಾಕ್ ತಗುಲಿದ ಕಾರಣ ಸ್ಥಳದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಯಿತು. (ಸಾಂಕೇತಿಕ ಚಿತ್ರ)

ಹಾಸನ: ಪ್ರಸಿದ್ದ ಹಾಸನಾಂಬೆ ದೇವಾಲಯ (Hasanamba Temple) ದಲ್ಲಿ ಧರ್ಮದರ್ಶನ ಸರದಿಯಲ್ಲಿ ನಿಂತಿದ್ದ ಭಕ್ತರಿಗೆ ವಿದ್ಯುತ್ ಶಾಕ್ ತಗುಲಿ ಉಂಟಾದ ಗೊಂದಲದ ಸನ್ನಿವೇಶದಲ್ಲಿ ಹಲವರಿಗೆ ಗಾಯಗಳಾದ ಘಟನೆ ಶುಕ್ರವಾರ (ನ.10) ವರದಿಯಾಗಿದೆ.

ಸಂತೆಪೇಟೆ ಭಾಗದಿಂದ ಧರ್ಮದರ್ಶನಕ್ಕೆ ನಿಂತಿದ್ದ ಸರದಿಯಲ್ಲಿದ್ದ ಭಕ್ತರಿಗೆ ಕರೆಂಟ್ ಶಾಕ್‌ ಹೊಡೆದ ಅನುಭವ ಆಗಿತ್ತು. ಇದರಿಂದಾಗಿ ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗಿ ನೂಕು ನುಗ್ಗಲು ಸಂಭವಿಸಿತ್ತು. ಇದರಿಂದಾಗಿ ಅನೇಕರು ಗಾಯಗೊಂಡರು ಎಂದು ಪ್ರತ್ಯಕ್ಷ ದರ್ಶಿಗಳು ಟಿವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಧರ್ಮದರ್ಶನ ಸರದಿ ನಿರ್ವಹಿಸುವುದಕ್ಕಾಗಿ ಹಾಕಲಾಗಿದ್ದ ಬ್ಯಾರಿಕೇಡ್ ಮೂಲಕ ವಿದ್ಯುತ್ ಪ್ರವಹಿಸಿದ ಕಾರಣ ಭಕ್ತರಿಗೆ ಶಾಕ್ ತಗುಲಿತ್ತು. ಇದರಿಂದಾಗಿ 15-20 ಭಕ್ತರು ದೂರ ಎಸೆಯಲ್ಪಟ್ಟಿದ್ದರು. ಈ ದುರಂತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಜಿಲ್ಲಾಡಳಿತ ಮಂಡಳಿ ವಿರುದ್ಧ ಭಕ್ತರ ಆಕ್ರೋಶ

ಲಕ್ಷಾಂತರ ಭಕ್ತರು ಹಾಸನಾಂಬೆಯ ದರ್ಶನಕ್ಕೆ ಬರುವ ನಿರೀಕ್ಷೆ ಇದ್ದರೂ, ಸೂಕ್ತ ವ್ಯವಸ್ಥೆಯನ್ನು ಮಾಡಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಶಾಕ್‌ ಆದ ಬಳಿಕ ಉಂಟಾದ ಗೊಂದಲ ಪರಿಸ್ಥಿತಿಯಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು ಸ್ಥಳೀಯರು. ದೇವಸ್ಥಾನದ ಸಿಬ್ಬಂದಿ, ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಮಹಿಳೆಯೊಬ್ಬರು ಆರೋಪಿಸಿರುವುದು ಟಿವಿ ಮಾಧ್ಯಮದಲ್ಲಿ ವರದಿಯಾಗಿದೆ.

ಪ್ರಾಣಾಪಾಯ ಆಗಿಲ್ಲ, ಸಣ್ಣಪುಟ್ಟ ಗಾಯಗಳಾದವರಿಗೆ ಚಿಕಿತ್ಸೆ

ಕರೆಂಟ್ ಶಾಕ್ ಆಗಿರುವ ಸುದ್ದಿ ಹರಡುತ್ತಿರುವಂತೆ ಅಲ್ಲಿ ಗೊಂದಲ ಉಂಟಾಯಿತು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಇಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಕರೆಂಟ್ ಶಾಕ್‌ಗೆ ಏನು ಕಾರಣ ಎಂಬುದನ್ನು ಪರಿಶೀಲಿಸಲಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯ ಆಗಿಲ್ಲ. ಸಣ್ಣಪುಟ್ಟ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ ವೇಳೆ ಇನ್ನಷ್ಟು ಭಕ್ತರ ಆಗಮನ ಇರುವ ಕಾರಣ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್‌ಪಿ ಎಂ ಸುಜಿತಾ ಟಿವಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ಧಾರೆ.

ಕರೆಂಟ್ ಶಾಕ್‌ ಮತ್ತು ಗೊಂದಲ ನಿರ್ಮಾಣವಾಗಿದ್ದು ಯಾಕೆ?

ಸಂತೆಪೇಟೆ ಭಾಗದ ಧರ್ಮದರ್ಶನ ಸರದಿಯಲ್ಲಿ ಒಂದು ಕಡೆಗೆ ಹೆಚ್ಚು ಭಕ್ತರು ಸೇರಿದ್ದರು. ಅಲ್ಲಿ ನೂಕುನುಗ್ಗಲು ಉಂಟಾದಾಗ ಬ್ಯಾರಿಕೇಡ್ ಮುರಿದುಬಿದ್ದಿತ್ತು. ಅಲ್ಲೇ ಪಕ್ಕದಲ್ಲಿದ್ದ ಲೈಟಿಂಗ್‌ ಬಳಸಿದ್ದ ವಿದ್ಯುತ್ ತಂತಿಗೆ ಬ್ಯಾರಿಕೇಡ್ ಬಿದ್ದು ಅದರ ಮೂಲಕ ವಿದ್ಯುತ್ ಪ್ರವಹಿಸಿತ್ತು. ಹೀಗಾಗಿ ಅಲ್ಲಿದ್ದವರಿಗೆ ಕರೆಂಟ್ ಶಾಕ್ ಹೊಡೆಯಿತು ಎಂದು ಎಸ್‌ಪಿ ಸುಜಿತಾ ಹೇಳಿದ್ದಾಗಿ ಟಿವಿ9 ವರದಿ ಮಾಡಿದೆ.

ಈ ಕರೆಂಟ್ ಶಾಕ್ ಸುದ್ದಿ ಅಲ್ಲಿ ಕೂಡಲೇ ಹರಡಿದ್ದು, ಆ ಸ್ಥಳದಿಂದ ದೂರ ಹೋಗಲು ಎಲ್ಲರೂ ಒಮ್ಮೆಲೇ ಪ್ರಯತ್ನಿಸಿದ ಕಾರಣ ನೂಕು ನುಗ್ಗಲು ಇನ್ನಷ್ಟು ಹೆಚ್ಚಾಯಿತು. ಹೀಗಾಗಿ ಗೊಂದಲ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಜತೆಗೆ ಬಂದವರು ಅನೇಕರು ತಮ್ಮ ಜತೆಗಾರರಿಂದ ಪ್ರತ್ಯೇಕಿಸಲ್ಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ