ಯಕ್ಷಗಾನ ಪ್ರದರ್ಶನಗಳಲ್ಲೂ ಸದ್ದು ಮಾಡಿದ ರೇವಣ್ಣ ಪ್ರಸಂಗ, ಸಮಕಾಲೀನ ವಿಚಾರಗಳು ಬರುವುದು ಇದೇ ಮೊದಲಲ್ಲ
May 29, 2024 03:07 PM IST
ಯಕ್ಷಗಾನ ಪ್ರದರ್ಶನಗಳಲ್ಲೂ ಸದ್ದು ಮಾಡಿದ ರೇವಣ್ಣ ಪ್ರಸಂಗ ಗಮನಸೆಳೆದಿದೆ. ಆದಾಗ್ಯೂ, ಸಮಕಾಲೀನ ವಿಚಾರಗಳು ಬರುವುದು ಇದೇ ಮೊದಲಲ್ಲ.
ಹಾಸನ ಲೈಂಗಿಕ ಹಗರಣ; ಯಕ್ಷಗಾನ ಪ್ರದರ್ಶನಗಳಲ್ಲೂ ಸದ್ದು ಮಾಡಿದ ರೇವಣ್ಣ ಪ್ರಸಂಗದ ವಿಡಿಯೋ ತುಣಕು ಬಹುಬೇಗ ಜನಮನಸೆಳೆದಿದೆ. ಈ ರೀತಿ ಸಮಕಾಲೀನ ವಿಚಾರಗಳು ಬರುವುದು ಇದೇ ಮೊದಲಲ್ಲ. ಆದರೂ, ಸದ್ಯದ ಸನ್ನಿವೇಶದ ಕಾರಣ ಈ ವಿಡಿಯೋ ವೈರಲ್ ಆಗಿದ್ದು, ವಿವರ ವರದಿ ಇಲ್ಲಿದೆ.
(ವರದಿ- ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಜಾಗತಿಕ ವಿದ್ಯಮಾನಗಳು, ಬದಲಾವಣೆಗಳು ಆದಾಗ ಸಮಕಾಲೀನ ಸಾಹಿತ್ಯಗಳಲ್ಲಿ ಅದು ಪ್ರತಿಫಲಿಸುವುದು ಸಹಜ. ಸ್ಕ್ರಿಪ್ಟ್ ಇಲ್ಲದೇ ಮಾತನಾಡುವ ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನದಲ್ಲಂತೂ ಹೊಸ ವಿಷಯಗಳಿದ್ದರೆ ಅವು ನುಸುಳುತ್ತವೆ. ಕೆಲ ತಿಂಗಳ ಹಿಂದೆ ಕರಿಮಣಿ ಮಾಲಿಕ ನೀನಲ್ಲ ಎಂಬ ಹಾಡು ಮತ್ತೆ ಜನಪ್ರಿಯವಾದದ್ದು, ನಾನು ನಂದಿನಿ ಎಂಬ ಹಾಡು ಹಾಗೆಯೇ ಪ್ರಚಲಿತ ಸನ್ನಿವೇಶದಲ್ಲಿ ನಡೆದ ಘಟನೆಗಳ ಉಲ್ಲೇಖವನ್ನು ಯಕ್ಷಗಾನದಲ್ಲಿ ವಿಡಂಬನಾತ್ಮಕವಾಗಿ ಹೇಳಲಾಗಿದೆ.
ಹಾಗೆಯೇ ಇತ್ತೀಚೆಗೆ ಸದ್ದು ಮಾಡಿದ್ದ ಪೆನ್ ಡ್ರೈವ್ ಕೇಸ್ ಹಾಗೂ ಅದಕ್ಕೆ ಸಂಬಂಧಿಸಿದ ಘಟನಾವಳಿಗಳೂ ಸಹಜವಾಗಿಯೇ ರಂಗಸ್ಥಳದಲ್ಲಿ ಕಲಾವಿದರು ಅಭಿನಯಿಸುವಾಗ ಪ್ರಸ್ತಾಪಿಸಿದ್ದಾರೆ. ಅದನ್ನು ಹಾಸ್ಯವಾಗಿಯೇ ತೆಗೆದುಕೊಳ್ಳಿ ಎಂದು ಕಲಾಪ್ರೇಮಿಗಳು ಹೇಳುತ್ತಿದ್ದರೆ, ಇಂಥವೆಲ್ಲಾ ಯಕ್ಷಗಾನರಂಗದಲ್ಲಿ ಬೇಕಿತ್ತಾ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
ರೇವಣ್ಣ ಕುರಿತು ಯಕ್ಷಗಾನದಲ್ಲಿ ಏನು ಉಲ್ಲೇಖ
ಯಕ್ಷಗಾನದಲ್ಲಿ ತೆಂಕು ಮತ್ತು ಬಡಗು ತಿಟ್ಟು ಎಂಬ ಎರಡು ವಿಭಾಗಗಳಿವೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡಗು ತಿಟ್ಟಿನ ಮೇಳಗಳು ಹಾಗೂ ದಕ್ಷಿಣ ಕನ್ನಡ ಕಡೆಗಳಲ್ಲೆಲ್ಲಾ ತೆಂಕು ತಿಟ್ಟಿನ ಮೇಳಗಳು ಜನಪ್ರಿಯ. ಎರಡೂ ಕಡೆಯೂ ಧಾರಾಳವಾಗಿ ಕಥೆಯ ಚೌಕಟ್ಟನ್ನೂ ಮೀರಿ, ವೈಯಕ್ತಿಕ ಸಮಸ್ಯೆಗಳು, ಲೋಕದಲ್ಲಿ ನಡೆಯುವ ಘಟನಾವಳಿಗಳು ಉಲ್ಲೇಖವಾಗುತ್ತವೆ. ಕಲಾವಿದರು ಅನೇಕರು ಕೆಲವು ರಾಜಕೀಯ ಪಕ್ಷಗಳ ಒಲವುಳ್ಳವರಾಗಿರುತ್ತಾರೆ. ಹೀಗಾಗಿಯೇ ಹಿಂದೆಯೇ ತುರ್ತುಪರಿಸ್ಥಿತಿ ಸಂದರ್ಭ ಇಂದ್ರ ಎಂಬ ಬದಲು ಇಂದಿರ ಎಂದು ಹೇಳಿ ದೇವೇಂದ್ರನನ್ನು ಎದುರಿಸುವ ವೇಷಧಾರಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದರೆ, ಬಳಿಕ ನರೇಂದ್ರ ಮೋದಿ ಪ್ರಧಾನಿಯಾದಾಗ ನರೇಂದ್ರನನ್ನು ಹೊಗಳಿ ಡಯಲಾಗ್ ಗಳು ಬಂದಿದ್ದವು.
ಇದೀಗ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅವರ ತಂದೆ ರೇವಣ್ಣ ಕೂಡ ಪ್ರಕರಣವೊಂದರಲ್ಲಿ ಬಂಧಿತರಾಗಿರುವ ಹಿನ್ನೆಲೆಯಲ್ಲಿ ಬಪ್ಪನಾಡು ಮೇಳದಲ್ಲಿ ಪಾತ್ರಧಾರಿಗಳು ರೇವಣ್ಣ ಹೆಸರು ಪ್ರಸ್ತಾಪಿಸಿದ್ದಾರೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರು ಪ್ರದರ್ಶಿಸಿದ ಯಕ್ಷಗಾನವೊಂದರಲ್ಲಿ ‘ಹೆಣ್ಣುಮಕ್ಕಳ ವಿಷಯಕ್ಕೆ ಹೋದರೆ ಏನಾಗುತ್ತದೆ ಎಂದು ಪುರಾಣದಲ್ಲೇ ತಿಳಿಸಲಾಗಿದೆ. ಸೀತೆಯನ್ನು ಅಪಹರಿಸಿದ ರೇವಣ್ಣನ ಕತೆ ಏನಾಗಿದೆ ಎಂದು ನಿನಗೆ ಗೊತ್ತಿಲ್ಲವೇ?’ ಎಂದು ಓರ್ವ ಪಾತ್ರಧಾರಿ ಕೇಳುತ್ತಾನೆ. ಅದಕ್ಕೆ ಮತ್ತೋರ್ವ ಪಾತ್ರಧಾರಿ ‘ರೇವಣ್ಣ ಅಲ್ಲ ಸೀತೆಯನ್ನು ಅಪಹರಿಸಿದ್ದು. ಅವರು ಬೇರೆಯವಳನ್ನು ಅಪಹರಿಸಿದ್ದು’ ಎಂದು ಹೇಳಿದಾಗ ಅಲ್ಲಿ ಕುಳಿತಿದ್ದ ಪ್ರೇಕ್ಷಕರು ನಗುವುದನ್ನು ಇದೀಗ ವೈರಲ್ ಆಗಿದೆ.
ಹಾಗೆಯೇ ಹನುಮಗಿರಿ ಮೇಳದಲ್ಲೂ ಎರಡು ಪಾತ್ರಗಳ ನಡುವಿನ ಸಂಭಾಷಣೆಯಲ್ಲಿ ರೇವಣ್ಣ ಶಬ್ದ ನುಸುಳುತ್ತದೆ. ಶೃಂಗಾರರಾವಣ ತನ್ನ ದೂತರೊಂದಿಗೆ ಅಶೋಕವನದಲ್ಲಿ ಸೀತೆಯನ್ನು ಭೇಟಿ ಮಾಡಲು ಬರುವ ಪ್ರಸಂಗದಲ್ಲಿ ಹಾಸ್ಯದ ಧಾಟಿಯಲ್ಲಿ ರಾವಣನನ್ನು ಹೊಗಳುವ ಸನ್ನಿವೇಶದಲ್ಲಿ ಇಬ್ಬರು ಕಲಾವಿದರು ಮಾತನಾಡುತ್ತಾ, ರಾವಣ ಎಂಬ ಶಬ್ದವನ್ನು ರೇವಣ ಎಂದು ಹೇಳುವ ಮೂಲಕ ಪ್ರಚಲಿತ ಸನ್ನಿವೇಶವನ್ನು ನೆನಪಿಸುತ್ತಾರೆ. ಈ ಸಂದರ್ಭದಲ್ಲಿ ಅದು ರಾವಣ ಎಂದು ಹೇಳುವ ಮೂಲಕ ಮಾತು ಬೇರೆಯ ಕಡೆ ಹೊರಳುತ್ತದೆ.
ಯಕ್ಷಗಾನ ಕಲಾವಿದರು ನೋಟ್ ಬ್ಯಾನ್ ಸಂದರ್ಭದಲ್ಲೂ ರಂಗಸ್ಥಳದಲ್ಲಿ ಅದನ್ನು ಮಾರ್ಮಿಕವಾಗಿ ಉಲ್ಲೇಖಿಸಿದ್ದರು. ಆಧಾರ್ ಕಾರ್ಡ್ ಪರಿಚಯವಾಗುತ್ತಿದ್ದ ವೇಳೆ, ನೀನು ರಾಜ ಎನ್ನಲು ಏನು ಆಧಾರ, ಆಧಾರವಿಲ್ಲದೆ ಏನೂ ಆಗುವುದಿಲ್ಲ ಎಂಬ ಡಯಲಾಗ್ ಗಳನ್ನು ಹೇಳುತ್ತಾ, ವರ್ತಮಾನ ಕಾಲದಲ್ಲಿ ನಡೆಯುವ ವಿಚಾರಗಳನ್ನು ರಂಗಸ್ಥಳದಲ್ಲಿ ಪ್ರಸ್ತಾಪಿಸುತ್ತಿದ್ದರು.
ಯಕ್ಷಗಾನಕ್ಕೆ ನಿರ್ದಿಷ್ಟ ಡಯಲಾಗ್ ಗಳಿಲ್ಲ
ಯಕ್ಷಗಾನ ಪ್ರದರ್ಶನ ಹೀಗಿರುತ್ತದೆ. ಒಂದು ಕಥಾವಸ್ತುವನ್ನು ಆಯ್ಕೆ ಮಾಡಿ ಅದನ್ನು ಪ್ರದರ್ಶನ ಮಾಡಲಾಗುತ್ತದೆ. ಮೂಲತಃ ಮಹಾಭಾರತ, ಭಾಗವತ ಅಥವಾ ಪೌರಾಣಿಕ ಕಥೆಗಳಿಗೆ ಪದ್ಯಗಳನ್ನು ಜೋಡಿಸಿ ಅವನ್ನು ಪ್ರದರ್ಶನಕ್ಕೆ ತಯಾರು ಮಾಡಲಾಗುತ್ತದೆ. ಭಾಗವತ ಪದ್ಯಗಳನ್ನು ರಾಗಸಂಯೋಜಿಸಿ ಹಾಡಿದರೆ, ಮದ್ದಳೆ, ಚೆಂಡೆ ವಾದಕರು ಸಹಕರಿಸುತ್ತಾರೆ. ವೇಷಧಾರಿಗಳು ಭಾಗವತ ಹಾಡಿದ ಪದ್ಯಗಳಿಗೆ ಅರ್ಥವನ್ನು ಹೇಳುತ್ತಾರೆ. ಒಂದು ಪದ್ಯವನ್ನು ಗದ್ಯಕ್ಕೆ ಮಾರ್ಪಡಿಸುವ ವೇಳೆ ಪ್ರೇಕ್ಷಕರಿಗೆ ಮನದಟ್ಟಾಗುವಂತೆ ಕಥೆಯನ್ನು ಕಟ್ಟಿಕೊಡುತ್ತಾರೆ. ತನ್ನ ಮಾತಿನ ಜಾಣ್ಮೆಯನ್ನು ಇದರಲ್ಲಿ ಪ್ರದರ್ಶಿಸುತ್ತಾರೆ. ಹೀಗಾಗಿ ಒಂದು ಪದ್ಯದ ಅರ್ಥವನ್ನು ಯಾವ ರೀತಿ ಬೇಕಾದರೂ ಪ್ರಸ್ತುತಪಡಿಸಬಹುದು. ನಿರ್ದಿಷ್ಟವಾಗಿ ಇಂಥದ್ದೇ ಡಯಲಾಗ್ ಗಳಿಲ್ಲ. ಹಾಸ್ಯಗಾರನಿಗೆ ಮಾತನ್ನು ಬದಲಾಯಿಸಿ ಹೇಳುವುದು, ತಪ್ಪುತಪ್ಪಾಗಿ ಉಚ್ಚರಿಸುವ ಅವಕಾಶವಿರುತ್ತದೆ. ಇಂಥ ಸನ್ನಿವೇಶದಲ್ಲಿ ಪ್ರಚಲಿತ ಸಮಾಚಾರಗಳೆಲ್ಲವೂ ಮಾತಿನಲ್ಲಿ ಬರುತ್ತದೆ.
(ವರದಿ- ಹರೀಶ ಮಾಂಬಾಡಿ, ಮಂಗಳೂರು)