HD Deve Gowda: ಭಾರತ್ ಜೋಡೋ ಸಮಾರೋಪ ಸಮಾರಂಭಕ್ಕೆ ಹೆಚ್‌ಡಿ ದೇವೇಗೌಡರಿಗೆ ಆಹ್ವಾನ: ಮಾಜಿ ಪ್ರಧಾನಿ ಪ್ರತಿಕ್ರಿಯೆ ಏನು?
Jan 24, 2023 09:00 PM IST
ಸಂಗ್ರಹ ಚಿತ್ರ
- ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್‌ಡಿ ದೇವೇಗೌಡ ಅವರಿಗೂ, ಭಾರತ್ ಜೋಡೋ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಆಹ್ವಾನ ನೀಡಿದೆ. ಆದರೆ ವೈಯಕ್ತಿಕವಾಗಿ ಈ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೆಚ್‌ಡಿ ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ರಾಹುಲ್ ಅವರ ಉದ್ದೇಶಕ್ಕೆ ದೇವೇಗೌಡ ಬೆಂಬಲ ಸೂಚಿಸಿದ್ದಾರೆ.
ಬೆಂಗಳೂರು: ದೇಶದ ಕೋಮು ಸೌಹಾರ್ದತೆ ಕಾಪಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಮಾಪ್ತಿಗೊಳ್ಳಿದೆ. ಇದೇ ಜ.30ರಂದು ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮೃಂಭದಲ್ಲಿ ಭಾಗವಹಿಸುವಂತೆ 21 ಸಮಾನ ಮನಸ್ಕ ರಾಜಕೂಯ ಪಕ್ಷಗಳಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ.
ಅದರಂತೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್‌ಡಿ ದೇವೇಗೌಡ ಅವರಿಗೂ, ಭಾರತ್ ಜೋಡೋ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಆಹ್ವಾನ ನೀಡಿದೆ.ಕಳೆದ ಜನವರಿ 10 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರಿಗೆ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತ ಪತ್ರ ಬರೆದಿದ್ದಾರೆ.
ಈ ಪತ್ರಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಹೆಚ್‌ಡಿ ದೇವೇಗೌಡ, ವೈಯಕ್ತಿಕವಾಗಿ ಈ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಅವರ ಉದ್ದೇಶಕ್ಕೆ ತಮ್ಮ ಬೆಂಬಲ ಇದೆ ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.
''ನಾನು ವೈಯಕ್ತಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗದಿದ್ದರೂ, ರಾಹುಲ್ ಗಾಂಧಿ ಅವರಿಗೆ ನನ್ನ ಬೆಂಬಲ ಇದೆ. ಅವರು ದ್ವೇಷ ಮತ್ತು ಹಿಂಸೆಯ ವಿರುದ್ಧ ಹೋರಾಡುತ್ತಿದ್ದಾರೆ. ಜನರಲ್ಲಿ ಕೋಮು ಸೌಹಾರ್ದತೆಯ ಸಂದೇಶ ಬಿತ್ತಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಮೀ ನಡೆದಿದ್ದಾರೆ. ಅವರಿಗೆ ನನ್ನ ಮೆಚ್ಚುಗೆಯನ್ನು ತಿಳಿಸಿ..'' ಎಂದು ಖರ್ಗೆ ಅವರ ಪತ್ರಕ್ಕೆ ಹೆಚ್‌ಡಿ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
''ರಾಹುಲ್ ಗಾಂಧಿ ಈ ದೇಶದ ನೈಜ ಸಿದ್ಧಾಂತದ ಉಳಿವಿಗಾಗಿ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆ. ಅವರ ಉದ್ದೇಶ ಮತ್ತು ಬದ್ಧತೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ ವೈಯಕ್ತಿಕವಾಗಿ ಭನನಗೆ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ..'' ಎಂಧು ಹೆಚ್‌ಡಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.
ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತವಾಗಿವೆ. ಕಾಂಗ್ರೆಸ್ ನಾಯಕರು ಜೆಡಿಎಸ್‌ನ್ನು ಬಿಜೆಪಿಯ ಬಿ ಟೀಮ್ ಎಂದು ಟೀಕಿಸುತ್ತಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ಕರ್ಮಕಾಂಡ ಬಿಚ್ಚಿಡುವುದಾಗಿ ಅಬ್ಬರಿಸುತ್ತಿದ್ದಾರೆ.
ಈ ಮಧ್ಯೆ ಹೆಚ್‌ಡಿ ದೇವೇಗೌಡ ಅವರು ರಾಹುಲ್ ಗಾಂಧಿ ಅವರ ಪ್ರಯತ್ನವನ್ನು ಶ್ಲಾಘಿಸಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ. ಆದರೆ ಮಾಜಿ ಪ್ರಧಾನಿಗಳು ಕೇವಲ ರಾಹುಲ್ ಅವರ ಉದ್ದೇಶವನ್ನು ಮಾತ್ರ ಬೆಂಬಲಿಸಿದ್ದು, ಜಾತ್ಯಾತೀತ ಭಾರತ ನಿರ್ಮಾಣ ಗುರಿಯ ರಾಹುಲ್ ಅವರ ಉದ್ದೇಶಕ್ಕಷ್ಟೇ ಬೆಂಬಲ ಸೂಚಿಸಿರುವುದು ಅವರ ಟ್ವೀಟ್‌ನಿಂದ ಸ್ಪಷ್ಟವಾಗಿದೆ.
ಅನ್ಯ ಪಕ್ಷಗಳ ಕಥೆ ಏನು?
ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ 21 ಸಮಾನ ಮನಸ್ಕ ರಾಜಕೀಯ ಪಕ್ಷಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಆದರೆ ಈ ಸಮಾರಂಭದಲ್ಲಿ ಸಮಾಜವಾದಿ ಪಕ್ಷ, ಸಿಪಿಎಂ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ನಾಯಕರು ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು, ಜನವರಿ 30ರಂದು ಶ್ರೀನಗರದಲ್ಲಿ ಸಮಾಪ್ತಿಗೊಳ್ಳಲಿದೆ. ಇದಾದ ಬಳಿಕ ಕಾಂಗ್ರೆಸ್ 'ಹಾಥ್ ಸೇ ಹಾಥ್ ಜೋಡೋ' ಅಭಿಯಾನವನ್ನು ಆರಂಭಿಸಲಿದೆ.