KSRTC Bus Shortage: 'ರಾಜ' ರ 'ಕಾರಣ'ಕ್ಕೆ ಮೀಸಲಾಗಲಿವೆ ಸರ್ಕಾರಿ ಬಸ್‌ಗಳು: ಪ್ರಯಾಣಿಕರ ಪರದಾಟ ತಪ್ಪಿಸಲು ಸಾರಿಗೆ ನಿಗಮಗಳ ಪ್ಲ್ಯಾನ್
Mar 31, 2023 09:37 AM IST
ಸಾಂದರ್ಭಿಕ ಚಿತ್ರ
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ರಾಜಕೀಯ ರ‍್ಯಾಲಿಗಳಿಗೆ ಮತ್ತು ಚುನಾವಣಾ ಕರ್ತವ್ಯಕ್ಕೆ ಸರ್ಕಾರಿ ಬಸ್‌ಗಳನ್ನು ಬಾಡಿಗೆ ಪಡೆಯಲಾಗುತ್ತಿದ್ದು, ದೈನಂದಿನ ಸಾರಿಗೆ ಮೇಲೆ ಕೊಂಚ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕುರಿತು ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿಗಳು ಹೇಳುವುದೇನು? ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೇಗೆ ನೋಡಿಕೊಳ್ಳಲಾಗುವುದು? ಇಲ್ಲಿದೆ ಮಾಹಿತಿ.
ಬೆಂಗಳೂರು: ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆಯ ಸದ್ದು. ರಾಜ್ಯದ ಮೂಲೆ ಮೂಲೆಯಲ್ಲೂ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಕೇಳಿಬರುತ್ತಿದೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಸಾಗರದಷ್ಟು ಜನರನ್ನು ಸೇರಿಸಿ ಭಾಷಣ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.
ಆದರೆ ಇಷ್ಟೊಂದು ಪ್ರಮಾಣದಲ್ಲಿ ಜನರನ್ನು ಸೇರಿಸಲು ಸಾರಿಗೆ ವ್ಯವಸ್ಥೆಯ ಅವಶ್ಯಕತೆ ಇದ್ದು, ಇದಕ್ಕಾಗಿ ರಾಜಕೀಯ ಪಕ್ಷಗಳು ಸರ್ಕಾರಿ ಬಸ್‌ಗಳ ಮೊರೆ ಹೋಗಿದ್ದಾರೆ. ಇದರಿಂದಾಗಿ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಹೈಡಿಮ್ಯಾಂಡ್ ಬಂದಿದೆ.
ಕೇವಲ ಚುನಾವಣಾ ರ‍್ಯಾಲಿಗಳಿಗೆ ಮಾತ್ರವಲ್ಲದೇ, ಚುನಾವಣೆ ಸಂದರ್ಭದಲ್ಲಿ ಸಿಬ್ಬಂದಿಗಳನ್ನು ಒಂದು ಸ್ಥಳದಿಂದ ಮತ್ತೊಂದಯ ಸ್ಥಳಕ್ಕೆ ಕೊಂಡೊಯ್ಯಲೂ ಸರ್ಕಾರಿ ಬಸ್‌ಗಳನ್ನು ಎರವಲಾಗಿ ಪಡೆಯಲಾಗುತ್ತದೆ. ಇದರಿಂದ ರಾಜ್ಯದ ದೈನಂದಿನ ಸಾರಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದೆ.
ರಾಜ್ಯ ಸರ್ಕಾರ ಬಸ್‌ಗಳನ್ನು ಬಾಡಿಗೆ ಪಡೆಯುವುದಕ್ಕಾಗಿ ಕೆಲವು ನಿಯಮಗಳನ್ನು ಅನುಷ್ಠಾನಗೊಳಿಸಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳನ್ನು ಬಾಡಿಗೆ ಪಡೆಯಲು ಪ್ರತಿ ಕಿ.ಮೀ.ಗೆ 57.5 ರೂ. ಅಥವಾ ದಿನಕ್ಕೆ 11,500 ರೂ. ಪಾವತಿಸಬೇಕಾಗುತ್ತದೆ.
ಅದೇ ರೀತಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳನ್ನು ಬಾಡಿಗೆ ಪಡೆಯಲು, ಪ್ರತಿ ಕಿ.ಮೀ.ಗೆ 43.5 ರೂ. ಅಥವಾ 8,700 ರೂ. ಪಾವತಿಸಬೇಕು. ಬೆಂಗಳೂರು ಹೊರತುಪಡಿಸಿ ಅನ್ಯ ನಗರಗಳಲ್ಲಿ ಈ ದರ ಪ್ರತಿ ಕಿ.ಮೀ.ಗೆ 42.5 ರೂ. ಅಥವಾ ದಿನಕ್ಕೆ 8,200 ರೂ. ಇದೆ.
ಮುಂದಿನ ಆರು ವಾರಗಳಲ್ಲಿ ಕರ್ನಾಟಕದಲ್ಲಿ ಸುಮಾರು 50ಕ್ಕೂ ಹೆಚ್ಚು ರಾಜಕೀಯ ರ‍್ಯಾಲಿಗಳು ನಡೆಯಲಿವೆ. ಇದಕ್ಕಾಗಿ ಸರ್ಕಾರಿ ಬಸ್‌ಗಳನ್ನು ಬಾಡಿಗೆ ಪಡೆಯಲು ನಿರ್ಧರಿಸಲಾಗಿದ್ದು, ದೈನಂದಿನ ಪ್ರಯಾಣದಲ್ಲಿ ಬಸ್‌ಗಳ ವ್ಯತ್ಯಯ ಕಂಡುಬರಲಿದೆ.
ಅಲ್ಲದೇ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದುಕೊಂಡು ಹೋಗಲು, ಸರ್ಕಾರಿ ಬಸ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸಾರಿಗೆ ನಿಗಮಗಳು ಈಗಿನಿಂದಲೇ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲು ಆರಂಭಿಸಿವೆ. ಆದರೆ ಭಾರೀ ಪ್ರಮಾಣದಲ್ಲಿ ಬಸ್‌ಗಳನ್ನು ಬಾಡಿಗೆ ನೀಡುವುದರಿಂದ, ಪ್ರಯಾಣಿಕರಿಗೆ ತುಸು ತೊಂದರೆಯಾಗಲಿದೆ ಎಂಬುದನ್ನು ಸಾರಿಗೆ ನಿಗಮಗಳು ಒಪ್ಪಿಕೊಳ್ಳುತ್ತವೆ.
ಕಳೆದ ಮಾ. 26ರಂದು ಬೆಂಗಳೂರಿನಲ್ಲಿ ನಡೆದ ರಾಜಕೀಯ ರ‍್ಯಾಲಿಗೆ, 1,350 ಬಿಎಂಟಿಸಿ ಬಸ್‌ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಅದೇ ದಿನ ಮೈಸೂರಿನಲ್ಲಿ ನಡೆದ ಮತ್ತೊಂದು ರಾಜಕೀಯ ರ‍್ಯಾಲಿಗಾಗಿ. 2,000 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬುಕ್ ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿ ಒಟ್ಟು 8,100 ಬಸ್‌ಗಳನ್ನು ಹೊಂದಿದ್ದರೆ, ಬಿಎಂಟಿಸಿ 6,758 ಬಸ್‌ಗಳನ್ನು ಹೊಂದಿದೆ.
ಈ ಕುರಿತು ಮಾತನಾಡಿರುವ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು, ಚುನಾವಣಾ ರ‍್ಯಾಲಿಗಳಿಗೆ ಮತ್ತು ಚುನಾವಣಾ ಕರ್ತವ್ಯಕ್ಕೆ ಬಸ್‌ಗಳನ್ನು ಬಾಡಿಗೆ ನೀಡಲಾಗುವುದು. ಆದರೆ ದೈನಂದಿನ ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಡಿಮೆ ಬೇಡಿಕೆ ಇರುವ ಡಿಪೋಗಳಿಂದ ಹೆಚ್ಚು ಬೇಡಿಕೆ ಇರುವ ಡಿಪೋಗಳಿಗೆ ಬಸ್‌ಗಳನ್ನು ವರ್ಗಾಯಿಸಲಾಗುವುದು. ಆದರೆ 2,000ಕ್ಕೂ ಹೆಚ್ಚು ಬಸ್‌ಗಳ ಬಾಡಿಗೆ ಬೇಡಿಕೆ ಬಂದರೆ, ಬಸ್ ಸೇವೆಯನ್ನು ನಿರ್ವಹಿಸುವುದು ತುಸು ಕಷ್ಟವಾಗಲಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ನೀತಿಯನ್ನು ಇತರ ಸಾರಿಗೆ ನಿಗಮಗಳಾದ ಎನ್‌ಡಬ್ಲೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಗೂ ಕೂಡ ಜಾರಿಗೆ ತರಲಿವೆ. ದೂರದ ಊರಿಗೆ ಪ್ರಯಾಣ ಮಾಡುವ ಮತ್ತು ಗ್ರಾಮಾಂತರ ಪ್ರದೇಶಗಳ ಸಾರಿಗೆ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.