ಮೈಸೂರು ಮುಡಾ ನಿವೇಶನ ಹಂಚಿಕೆ ವಿವಾದ: ಸ್ನೇಹಮಯಿ ಕೃಷ್ಣಅರ್ಜಿ ವಿಚಾರಣೆ ಡಿಸೆಂಬರ್ 10ಕ್ಕೆ ಮುಂದೂಡಿದ ಹೈಕೋರ್ಟ್
Nov 27, 2024 11:28 AM IST
ಮೈಸೂರು ಮುಡಾ ನಿವೇಶನ ಹಂಚಿಕೆ ವಿವಾದವನ್ನು ಸಿಬಿಐಗೆ ವರ್ಗಾಯಿಸುವಂತೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
Muda Scam: ಮೈಸೂರು ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿ. 10ಕ್ಕೆ ಮುಂದೂಡಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮೈಸೂರು ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 10ಕ್ಕೆ ಮುಂದೂಡಿದೆ. ಲೋಕಾಯುಕ್ತ ತನಿಖೆಯಲ್ಲಿ ನ್ಯಾಯ ಸಿಗಲಾರದು. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.
ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಮನವಿ
ಈ ಹಿಂದಿನ ವಿಚಾರಣೆಯಲ್ಲಿ ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆಜಿ ರಾಘವನ್, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿದ್ದೇವೆ. ಲೋಕಾಯುಕ್ತ ತನಿಖೆಯನ್ನು ನಂಬುವಂತಿಲ್ಲ. ಈ ಪ್ರಕರಣದ ಫಲಿತಾಂಶ ಏನೇ ಬಂದರೂ ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಂಡು ತನಿಖೆ ನಡೆಸುವ ಅಗತ್ಯವಿದೆ. ಆದ್ದರಿಂದ ಸಾರ್ವಜನಿಕರ ನಂಬಿಕೆ ಉಳಿಯುವಂತೆ ಮಾಡಲು ಸಿಬಿಐಗೆ ವಹಿಸಲು ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು.
ರಾಜ್ಯ ಅಭಿಯೋಜಕ ಜಗದೀಶ್ ಎರಡು ವಾರ ಕಾಲಾವಕಾಶ ಕೋರಿದ್ದರಿಂದ ನ್ಯಾಯಮೂರ್ತಿಗಳು ನವೆಂಬರ್ 26ಕ್ಕೆ ವಿಚಾರಣೆಯನ್ನು ಮುಂದೂಡಿದ್ದರು. ಪ್ರಕರಣದ ಪ್ರತಿವಾದಿಗಳಾದ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ, ಸಿಬಿಐ ನಿರ್ದೇಶಕ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ವಿಜಯನಗರ ಪೊಲೀಸ್ ಠಾಣಾಧಿಕಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ಜೆ.ದೇವರಾಜು ಅವರಿಗೆ ನೋಟಿಸ್ ಜಾರಿಗೊಳಿಸಲು ಕೂಡಾ ನ್ಯಾಯಾಲಯ ಆದೇಶ ಹೊರಡಿಸಿತ್ತು. ಸೆಪ್ಟಂಬರ್‌ರ್ 24ರಂದು ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 17 ಎ ಅಡಿಯಲ್ಲಿ ಅನುಮತಿ ನೀಡಿದ್ದರು.
ತಮ್ಮ ಪ್ರಭಾವ ಬಳಿಸಿ ಸಿಎಂ, ಪತ್ನಿ ಹೆಸರಿಗೆ ಸೈಟ್ ಹಂಚಿಕೆ ಮಾಡಲು ಪ್ರಭಾವ ಬೀರಿದ್ದರೆಂಬ ಆರೋಪ
ತಮ್ಮ ಪ್ರಭಾವ ಬಳಸಿ ತಮ್ಮ ಪತ್ನಿ ಪಾರ್ವತಿ ಅವರಿಗೆ ಬೆಳೆ ಬಾಳುವ 14 ನಿವೇಶನಗಳನ್ನು ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಮೇಲೆ ಪ್ರಭಾವ ಬೀರಿದ್ದಾರೆ. ಮುಡಾ ವಶಪಡಿಸಿಕೊಂಡಿರುವ 3.16 ಎಕರೆ ಜಮೀನಿನ ಬೆಲೆಗೂ ಪಾರ್ವತಿ ಅವರಿಗೆ ಹಂಚಿಕೆ ಮಾಡಿರುವ ನಿವೇಶನಗಳ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. 50:50 ಆಧಾರದಲ್ಲಿ ಮೈಸೂರಿನ ಪ್ರಮುಖ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಶೇ.50 ರಷ್ಟು ಆಧಾರವೂ ವಿವಾದಾಸ್ಪದವಾಗಿದೆ. ಮೇಲಾಗಿ ಪಾರ್ವತಿ ಅವರ 3.16 ಎಕರೆ ಜಮೀನಿನ ಮೇಲೆ ಕಾನೂನುಬದ್ಧ ಹಕ್ಕು ಹೊಂದಿಲ್ಲ ಎಂದೂ ಹೇಳಲಾಗುತ್ತಿದೆ. ಸಿದ್ದರಾಮಯ್ಯ, ತಮ್ಮ ಪತ್ನಿಗೆ ಮುಡಾದಿಂದ 14 ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಲೋಕಾಯುಕ್ತ ಹಾಗೂ ಇಡಿ ತನಿಖೆ ಎದುರಿಸುತ್ತಿದ್ದಾರೆ.
2021ರಲ್ಲಿ ಮುಡಾದಿಂದ ಅಕ್ರಮವಾಗಿ 14 ನಿವೇಶನಗಳನ್ನು ಹಂಚಿಕೆ ಮಾಡಿರುವ ಹಗರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 27ರಂದು ಲೋಕಾಯುಕ್ತ ಎಫ್‌ಐಆರ್ ದಾಖಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂ ಮಾಲೀಕ ದೇವರಾಜು ವಿರುದ್ಧ ಎಫ್ ಆರ್ ದಾಖಲಾಗಿದೆ. 1988ರ ಭ್ರಷ್ಟಾಚಾರ ನಿಗ್ರಹ ಕಾಯಿದೆ 17ಎ ಮತ್ತು ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 218ರ ಅಡಿಯಲ್ಲಿ ರಾಜ್ಯಪಾಲರು ಆಗಸ್ಟ್ 16 ರಂದು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ದೇವರಾಜು ಪರ ಹಿರಿಯ ವಕೀಲ ದುಷ್ಯಂತ್ ದವೆ ವಾದ ಮಂಡಿಸಿದರು. ಈ ಸಂದರ್ಭದಲ್ಲಿ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಹಾಜರಿದ್ದರು.